ಅಮೆರಿಕದಲ್ಲಿ ಈಗ ಮೊದಲಿನಂತಿಲ್ಲ. ಎಲ್ಲವೂ ಅಯೋಮಯ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ವಿದೇಶಿ ಉದ್ಯೋಗಿಗಳನ್ನು ದೇಶದಿಂದ ಹೊರಕ್ಕೆ ಕಳುಹಿಸಲು ಹಲವು ಬಗೆಯ ಕಾನೂನು ರೂಪಿಸುತ್ತಿರುವ ಬೆನ್ನಲ್ಲೇ, ಅಲ್ಲಿನ ಕನ್ಸಾಸ್ ಸಿಟಿಯಲ್ಲಿ ಭಾರತೀಯ ಸಾಫ್ಟ್ವೇರ್ ತಂತ್ರಜ್ಞ ಶ್ರೀನಿವಾಸ್ ಎಂಬುವವರನ್ನು ಗುಂಡಿಟ್ಟು ಹತ್ಯೆಮಾಡಿದ ಆಘಾತಕಾರಿ ಸುದ್ದಿ ಭಾರತೀಯ ಉದ್ಯೋಗಿಗಳನ್ನು ಬೆಚ್ಚಿಬೀಳಿಸಿದೆ. ’ನೀನು ಉಗ್ರಗಾಮಿ. ದೇಶಬಿಟ್ಟು ತೊಲಗು’ ಎಂದು ಶ್ರೀನಿವಾಸ್ ಅವರನ್ನು ಗುಂಡಿಟ್ಟು ಕೊಂದ ಅಮೆರಿಕ ನೌಕಾಪಡೆಯ ಮಾಜಿ ಸಿಬ್ಬಂದಿ ಆಡಂ ಪ್ಯುರಿನ್ಟನ್ ಆಕ್ರೋಶ ವ್ಯಕ್ತಪಡಿಸಿರುವುದು ಜನಾಂಗೀಯ ದೇಶದ ಪರಾಕಾಷ್ಠೆಗೆ ಸಂಕೇತ. ಶ್ರೀನಿವಾಸ್ ಅಲ್ಲದೆ, ಆತನನ್ನು ರಕ್ಷಿಸಲು ಮುಂದಾದ ಸ್ನೇಹಿತ ಅಲೋಕ್ ಮದಸಾನಿ ಮತ್ತು ಅಮೆರಿಕದವರೇ ಆದ ಇಯಾನ್ ಗ್ರಿಲ್ಲೋಟ್ ಮೇಲೂ ದಾಳಿ ನಡೆದು, ಅವರಿಬ್ಬರ ಸ್ಥಿತಿ ಗಂಭೀರವಾಗಿದೆ. ಆಡಂನನ್ನು ಈಗಾಗಲೇ ಬಂಧಿಸಲಾಗಿದ್ದು , ಬಾರ್ನಲ್ಲಿ ಕುಳಿತವರು ಮಧ್ಯಪ್ರಾಚ್ಯದವರು ಎಂದು ಭಾವಿಸಿ ಅವರೊಂದಿಗೆ ಜಗಳವಾಡಿ ಗುಂಡು ಹಾರಿಸಿದೆ ಎಂದು ಹೇಳಿಕೊಂಡಿದ್ದಾನೆ. ಇದೇ ವೇಳೆ ಟ್ರಂಪ್ ಆಡಳಿತ ಈ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದು , ’ನಮ್ಮ ಸರ್ಕಾರ ವಲಸಿಗ ವಿರೋಧಿ ಅಲ್ಲ’ ಎಂದಿದೆ.
ಟ್ರಂಪ್ ಅಧ್ಯಕ್ಷರಾಗಿ ಬಂದ ಬಳಿಕ ಅಮೆರಿಕದಲ್ಲಿ ಭಾರತೀಯರನ್ನು ಕಾಣುವ ದೃಷ್ಟಿಯೇ ಬದಲಾಗಿದೆ. ಅಮೆರಿಕದಲ್ಲಿ ಇಷ್ಟು ವರ್ಷಗಳಲ್ಲಿ ಅನೇಕ ಭಾರತೀಯ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದರೂ ಜನಾಂಗೀಯ ದ್ವೇಷದ ಒಂದೇ ಒಂದು ಘಟನೆ ನಡೆದಿರಲಿಲ್ಲ. ಆದರೆ ಈಗ ಕಟ್ಟರ್ವಾದಿ ಟ್ರಂಪ್ ಅಧಿಕಾರಕ್ಕೇರಿದ ಬಳಿಕ ಜನಾಂಗೀಯ ದ್ವೇಷ ಹೆಪ್ಪುಗಟ್ಟತೊಡಗಿದೆ. ಭಾರತೀಯ ಸಮುದಾಯ ಆತಂಕಕ್ಕೆ ಒಳಗಾಗಿರುವುದು ಸಹಜವೇ.
ಭಾರತ, ಶ್ರೀಲಂಕಾ, ಪಾಕಿಸ್ಥಾನ ಮತ್ತು ಇತರ ಇಸ್ಲಾಮಿಕ್ ದೇಶದ ಜನರ ಮುಖ ಚಹರೆ ಒಂದೇ ಆಗಿರುವುದು ಅಮೆರಿಕದಲ್ಲಿ ಭಾರತೀಯರ ಮೇಲಿನ ಜನಾಂಗೀಯ ಹಲ್ಲೆ ಹೆಚ್ಚಳಕ್ಕೆ ಕಾರಣ ಎಂಬುದು ಒಂದು ಅಭಿಪ್ರಾಯ. ಕೆಲವು ಮೂಲ ಅಮೆರಿಕನ್ನರಲ್ಲಿ ಮಧ್ಯಪ್ರಾಚ್ಯ (ಇಸ್ಲಾಮಿಕ್) ದೇಶಗಳ ವಿರುದ್ಧ ದ್ವೇಷಭಾವನೆ ಹುದುಗಿದೆ. ಚರ್ಮದ ಬಣ್ಣವನ್ನು ಗಮನಿಸಿ ಭಾರತೀಯರನ್ನೂ ಮಧ್ಯಪ್ರಾಚ್ಯದವರೇ ಎಂದು ಭಾವಿಸುವುದುಂಟು. ಟ್ರಂಪ್ ಆಳ್ವಿಕೆ ಬಂದ ಬಳಿಕವಂತೂ ಇಂತಹ ದ್ವೇಷ ಹೆಚ್ಚಿದೆ. ಈಗ ಆಗಿದ್ದೂ ಅದೇ. ಟ್ರಂಪ್ ಆಳ್ವಿಕೆ ಬಂದ ನಂತರ ನಡೆದ ಭಾರತೀಯರ ಮೇಲಿನ ಮೊದಲ ಜನಾಂಗೀಯ ದಾಳಿ ಇದು. ಇದಕ್ಕಿಂತ ಮೊದಲು, 9/11 ದಾಳಿಯ ನಂತರ ಗಡ್ಡಧಾರಿಯಾದ ಕಾರಣ ಮುಸ್ಲಿಮರೆಂದು ಭಾವಿಸಿ ಸಿಖ್ಖರ ಮೇಲೆ ಹಲವು ದಾಳಿಗಳು ನಡೆದಿದ್ದವು.
ಆಸ್ಪ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳು, ಉದ್ಯೋಗಿಗಳ ಮೇಲೆ ಅಲ್ಲಿನ ಪುಂಡರು ಇದೇ ಬಗೆಯ ಜನಾಂಗೀಯ ದಾಳಿಯನ್ನು ಈ ಹಿಂದೆ ನಡೆಸಿದ್ದರು. 2010 ರ ಡಿ. 29 ರಂದು ಆಸ್ಟ್ರೇಲಿಯಾದ ನ್ಯೂಸೌತ್ವೇಲ್ಸ್ನಲ್ಲಿ ಅರೆಬೆಂದ ಶವವೊಂದು ಪತ್ತೆಯಾಗಿದ್ದು ಅದು ಭಾರತೀಯ ವಿದ್ಯಾರ್ಥಿಯೊಬ್ಬನದು ಎಂದು ಅನಂತರ ಗೊತ್ತಾಗಿತ್ತು. ಅದೇ ವರ್ಷದ ಜ. 3 ರಂದು ಮೆಲ್ಬೋರ್ನ್ನ ಹೊರವಲಯದಲ್ಲಿ ಭಾರತೀಯ ಯುವಕ ನಿತಿನ್ ಗರ್ಗ್ ಎಂಬಾತನನ್ನು ಇರಿದು ಕೊಲೆಮಾಡಲಾಗಿತ್ತು. ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಈ ಘಟನೆಯನ್ನು ಖಂಡಿಸಿತ್ತಾದರೂ ಉಗ್ರ ಪ್ರತಿಭಟನೆಯನ್ನೇನೂ ಮಾಡಿರಲಿಲ್ಲ. ಆಸ್ಟ್ರೇಲಿಯಾದ ಪೊಲೀಸರೇ ಅಲ್ಲಿನ ಜನರಿಗೆ ಜನಾಂಗೀಯ ನಿಂದನೆಗೆ ಕುಮ್ಮಕ್ಕು ಕೊಡುತ್ತಿದ್ದಾರೆಂಬ ಆರೋಪವೂ ಆ ಸಂದರ್ಭದಲ್ಲಿ ಕೇಳಿಬಂದಿತ್ತು. ತಮ್ಮ ಉದ್ಯೋಗವನ್ನು ಭಾರತೀಯರು ಕಸಿದುಕೊಳ್ಳುತ್ತಿದ್ದಾರೆ. ಹೊರಗುತ್ತಿಗೆ (Outsourcing) ಭಾರತದ ಪಾಲಾಗುತ್ತಿದೆ ಎಂಬ ಆಕ್ರೋಶದಿಂದ ಕೆಂಡಾಮಂಡಲಾಗಿರುವ ಕೆಲವು ಆಸೀಸ್ ಪುಂಡರು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು.
ಕಳೆದ ವರ್ಷ ಪ್ರಭಾ ಅರುಣ್ ಕುಮಾರ್ ಎಂಬ ಐಟಿ ಸಮಾಲೋಚಕಿ ಸಿಡ್ನಿಯಲ್ಲಿ ತನ್ನ ವಸತಿ ಗೃಹದ ಸಮೀಪದಲ್ಲೇ ಕೊಲೆಯಾಗಿದ್ದರು. ಕರ್ನಾಟಕ ಮೂಲದ ಆಕೆ ಮೈಂಡ್ಟ್ರೀ ಕಂಪೆನಿಯಿಂದ ಅಲ್ಲಿಗೆ ತೆರಳಿದ್ದರು. ಆಕೆಯನ್ನು ಕೊಲೆಮಾಡಿದವರು ಯಾರು ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಆಕೆಯನ್ನು ಕಂಡರಾಗದ ಕುಟುಂಬಸ್ಥರೇ ಕೊಲೆಮಾಡಿರಬಹುದು ಎಂಬ ವಾದವೂ ತೇಲಿಬಂದಿತ್ತು. ಈ ಪ್ರಕರಣದಲ್ಲೂ ಜನಾಂಗೀಯ ದ್ವೇಷದ ಎಳೆ ಹುದುಗಿರುವುದು ಸುಳ್ಳಲ್ಲ.
ಆಸ್ಟ್ರೇಲಿಯಾದಲ್ಲಿ ನಡೆದಂತೆ ಇದೀಗ ಅಮೆರಿಕದಲ್ಲೂ ಜನಾಂಗೀಯ ದ್ವೇಷದ ಕೆನ್ನಾಲಿಗೆ ಚಾಚಿದೆಯೇ? ಈ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ. ಕನ್ಸಾಸ್ ಸಿಟಿಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅಲೋಕ್ ರೆಡ್ಡಿ ಅವರ ತಂದೆಯಂತೂ ’ಅಮೆರಿಕ ಈಗ ಸುರಕ್ಷಿತವಾಗಿ ಉಳಿದಿಲ್ಲ. ಅಲ್ಲಿಗೆ ನಿಮ್ಮ ಮಕ್ಕಳನ್ನು ಕಳುಹಿಸಬೇಡಿ’ ಎಂದು ಕಳಕಳಿಯಿಂದ ಮನವಿ ಮಾಡಿದ್ದಾರೆ. ಅಮೆರಿಕದಲ್ಲಿ ನೆಲೆನಿಂತಿರುವ ಅನೇಕ ಭಾರತೀಯ ಯವಕ-ಯುವತಿಯರ ತಂದೆ-ತಾಯಿ, ಪೋಷಕರಿಗೂ ಈಗ ಹೀಗೆಯೇ ಆತಂಕ ಮನೆಮಾಡಿರಬಹುದು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅಮೆರಿಕ ದೇಶದಲ್ಲಿ ಭಾರತದ ಬಗ್ಗೆ ಇದ್ದ ಭಾವನೆ ಅತ್ಯಂತ ಹೀನಾಯ ಹಾಗೂ ತುಚ್ಛ. ಭಾರತವೆಂದರೆ ಭಿಕ್ಷುಕರ ದೇಶ. ಹಾವು ಚೇಳುಗಳ ನಾಡು. ಗಡ್ಡಬಿಟ್ಟ ಸಂನ್ಯಾಸಿಗಳು, ರಸ್ತೆಯಲ್ಲಿ ಅಂಡಲೆಯುವ ದನಕರುಗಳು, ಕಿತ್ತುತಿನ್ನುವ ದಾರಿದ್ರ್ಯ… ಅಮೆರಿಕನ್ನರ ಕಣ್ಣಲ್ಲಿ ಭಾರತದ ಕುರಿತು ಮೂಡಿದ್ದ ಚಿತ್ರಣ ಇದೊಂದೇ ಆಗಿತ್ತು. ಭಾರತವನ್ನು ತುಚ್ಛವಾಗಿ ಹೀಯಾಳಿಸಿ ಅಮೆರಿಕದ ಹಲವು ಲೇಖಕರು ಪುಸ್ತಕಗಳನ್ನೇ ಬರೆದಿದ್ದರು. ಸ್ವತಃ ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡುವುದಕ್ಕೆ ಮುನ್ನ ಅವರ ಬಗ್ಗೆಯೂ ಅಲ್ಲೆಲ್ಲ ತಾತ್ಸಾರ ಭಾವನೆಯೇ ಹೆಪ್ಪುಗಟ್ಟಿತ್ತು. ಕಾವಿ ಬಟ್ಟೆಯ ಈ ದರಿದ್ರ ಸಂನ್ಯಾಸಿ ಅದೇನು ತಾನೆ ಧಾರ್ಮಿಕ ಉಪನ್ಯಾಸ ನೀಡಿಯಾನು? ಹಿಂದೂ ಧರ್ಮದಲ್ಲಿ ಕ್ರೈಸ್ತ ಧರ್ಮಕ್ಕಿಂತ ಶ್ರೇಷ್ಠವಾಗಿದ್ದು ಇರಲು ಸಾಧ್ಯವೆ ಇತ್ಯಾದಿ ಟೀಕೆಗಳು ಅಮೆರಿಕದ ಪತ್ರಿಕೆಗಳಲ್ಲಿ ವ್ಯಕ್ತವಾಗಿತ್ತು. ಆದರೆ ವಿವೇಕಾನಂದರ ಮೊದಲನೆಯ ದಿನದ ಭಾಷಣವೇ ಅಮೆರಿಕವನ್ನು ದಂಗಾಗುವಂತೆ ಮಾಡಿದ್ದು ಈಗ ಇತಿಹಾಸ.
70 ರ ದಶಕದ ಬಳಿಕ ಭಾರತದಿಂದ ಯುವ ವಿಜ್ಞಾನಿಗಳು, ತಂತ್ರಜ್ಞರು, ವೈದ್ಯರು, ಶಿಕ್ಷಣ ತಜ್ಞರು, ಉಪನ್ಯಾಸಕರು ಪ್ರವಾಹದೋಪಾದಿಯಲ್ಲಿ ಅಮೆರಿಕದತ್ತ ವಲಸೆ ಹೊರಟು, ಅಲ್ಲಿನ ನಾಗರಿಕರಾಗಿ ಗ್ರೀನ್ ಕಾರ್ಡ್ ಪಡೆದ ಬಳಿಕ ಭಾರತದ ಬಗೆಗಿನ ಅಮೆರಿಕ ದೃಷ್ಟಿಕೋನವೇ ಸಂಪೂರ್ಣ ಬದಲಾಯಿತು. 60ರ ದಶಕದಲ್ಲಿ ವಾಷಿಂಗ್ಟನ್ನಲ್ಲಿ ಭಾರತದ ರಾಯಭಾರಿಯಾಗಿದ್ದ ವಿಜಯಲಕ್ಷ್ಮಿ ಪಂಡಿತ್ (ಜವಹರ ಲಾಲ್ ನೆಹರೂರವರ ಸೋದರಿ) ಅವರಿಗೆ ಆಗಿನ ಅಮೆರಿಕ ಸರ್ಕಾರದ ಕಾರ್ಯದರ್ಶಿ ಜಾನ್ಫಾಸ್ಟರ್ ಡಲಸ್ ಅಲಿಪ್ತ ನೀತಿಯನ್ನು ಪ್ರತಿಪಾದಿಸಿದ್ದಕ್ಕೆ ನೋಟೀಸು ನೀಡಿದ್ದರು. ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಆಗಿನ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ರ ಚಾಡಿಮಾತುಗಳನ್ನು ನಂಬಿ ನಮ್ಮ ಇಂದಿರಾಗಾಂಧಿಯವರನ್ನು ’Bitch’ ಎಂದು ಹೀಯಾಳಿಸಿದ್ದರು. ನಮ್ಮ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ವಿಮಾನ ನಿಲ್ದಾಣದಲ್ಲಿ ಶರೀರ ತಪಾಸಣೆ ನಡೆಸಿ ಅವಮಾನಿಸಿದ್ದರು. ಮಾಜಿ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೂ ಇಂತಹದೇ ಅವಮಾನಕರ ತಪಾಸಣೆ ನಡೆಸಲಾಗಿತ್ತು. ಜನಪ್ರಿಯ ನಟ ಶಾರುಖ್ಖಾನ್ಗೂ ಇಂತಹದೇ ’ಟ್ರೀಟ್ಮೆಂಟ್’ ಅಮೆರಿಕದ ವಿಮಾನ ನಿಲ್ದಾಣದಲ್ಲಿ ದೊರಕಿದ್ದುದು ನಿಮಗೆ ಗೊತ್ತೇ ಇದೆ.
ಇಷ್ಟೆಲ್ಲ ಅವಮಾನಕರ ಘಟನೆಗಳು ನಡೆಯುತ್ತಿದ್ದರೂ ಭಾರತೀಯರ ’ಅಮೆರಿಕ ವ್ಯಾಮೋಹ’ ಇನ್ನೂ ತಗ್ಗದಿರುವುದು ದುರದೃಷ್ಟಕರ. ನಮ್ಮ ಮಗ ಅಮೆರಿಕದಲ್ಲಿದ್ದಾನೆ ಎಂದೋ, ನಮ್ಮ ಮಗಳನ್ನು ಎಂ.ಎಸ್. ವ್ಯಾಸಂಗಕ್ಕೆ ಅಮೆರಿಕಕ್ಕೇ ಕಳಿಸುತ್ತೇವೆ ಎಂದೋ ಹೆಮ್ಮೆಯಿಂದ ಹೇಳುವ ತಂದೆ-ತಾಯಂದಿರ ಸಂಖ್ಯೆ ನಮ್ಮ ದೇಶದಲ್ಲಿ ಸಾಕಷ್ಟಿದೆ. ಭಾರತದಲ್ಲಿ ಅಮೆರಿಕೆಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತಿದ್ದರೂ ಅಮೆರಿಕಕ್ಕೆ ತಮ್ಮ ಮಕ್ಕಳನ್ನು ಅಟ್ಟುವ ಧಾವಂತ ಈಗಲೂ ಮುಂದುವರೆದಿದೆ. ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ ಮುಗಿಸಿದ ಬಳಿಕ ಹಲವರು ಹಿಂದಿರುಗುವುದೇ ಇಲ್ಲ. ಅಲ್ಲೇ ನೆಲೆಸಿ, ತಂದೆ-ತಾಯಿ ಜೊತೆಗೆ ಹುಟ್ಟಿದ ದೇಶವನ್ನೂ ಮರೆತುಬಿಡುತ್ತಾರೆ.
ಘಟನೆಯೊಂದು ನೆನಪಾಗುತ್ತಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಏಕಮೇವ ಪುತ್ರನನ್ನು ಬಹಳ ಕಕ್ಕುಲತೆಯಿಂದ ಬೆಳೆಸಿದ್ದರು. ಆತನನ್ನು ಕಷ್ಟಪಟ್ಟು ಇಂಜಿನಿಯರಿಂಗ್ ಪದವಿತನಕ ಓದಿಸಿ, ಅನಂತರ ಆತನಿಗೊಂದು ಕೈತುಂಬಾ ಸಂಪಾದನೆಯ ಉತ್ತಮ ಉದ್ಯೋಗ ದೊರಕಿಸಿಕೊಡುವಲ್ಲೂ ಶ್ರಮಿಸಿದ್ದರು. ಆತ ತನ್ನ ತಂದೆಯ ಈ ಪರಿಯ ಶ್ರಮದ ಫಲವಾಗಿ ಉತ್ತಮ ಉದ್ಯೋಗ ಹಿಡಿದು ಅಮೆರಿಕದಲ್ಲಿ ನೆಲೆಸಿದ್ದ. ಇತ್ತ ಮಗನ ಬದುಕು ಹಸನಾಗಲೆಂದು ಜೀವಮಾನವಿಡೀ ಶ್ರಮಿಸಿದ ತಂದೆಯ ಆರೋಗ್ಯ ಕುಸಿದಾಗ, ಬಂಧುಗಳ ಮೂಲಕ ಅಮೆರಿಕದಲ್ಲಿ ನೆಲೆಸಿದ್ದ ತನ್ನ ಮಗನಿಗೆ ಕರೆಮಾಡಿ, ಒಮ್ಮೆ ಬಂದುಹೋಗುವಂತೆ ವಿನಂತಿಸಿಕೊಂಡರು. ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಅವರ ಸುಪುತ್ರ ಮಾತ್ರ ಮರಣಶಯ್ಯೆಯಲ್ಲಿದ್ದ ತನ್ನ ತಂದೆಯನ್ನು ನೋಡಲು ಬರಲೇ ಇಲ್ಲ. ತನಗೀಗ ಸಮಯವಿಲ್ಲ. ರಜೆ ಕೂಡ ಇಲ್ಲ. ಹಾಗಾಗಿ ಮನೆಗೆ ಬರಲಾರೆ ಎಂದು ಫೋನ್ ಮೂಲಕ ತಿಳಿಸಿದ. ಮರಣಶಯ್ಯೆಯಲ್ಲಿದ್ದ ತಂದೆಗೆ ಇದರಿಂದ ಆಘಾತವಾಗಿ ಒಂದೆರಡು ದಿನಗಳಲ್ಲೇ ಕೊನೆಯುಸಿರೆಳೆದರು. ಮತ್ತೊಮ್ಮೆ ಬಂಧುಗಳು ಆತನಿಗೆ ಕರೆಮಾಡಿ, ಆತನ ತಂದೆಯ ಸಾವಿನ ಸುದ್ದಿ ತಿಳಿಸಿದಾಗ ಆತನ ಪ್ರತಿಕ್ರಿಯೆ ಹೀಗಿತ್ತು : ’ನನಗೀಗ ತಕ್ಷಣ ರಜೆ ಸಿಗುವುದಿಲ್ಲ. ಅಲ್ಲದೆ ತಂದೆಯವರ ಅಂತಿಮ ದರ್ಶನ ಮಾಡಲೇಬೇಕೆಂಬ ತವಕವೂ ನನಗಿಲ್ಲ. ನೀವೇ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿಬಿಡಿ. ಅದಕ್ಕೆ ತಗಲುವ ಮೊತ್ತವನ್ನು ತಿಳಿಸಿದರೆ ನಾನು ಇಲ್ಲಿಂದ ಕಳುಹಿಸುವೆ.’ ಕೊನೆಗೆ ಬಂಧುಗಳೇ ಮಗನ ಅನುಪಸ್ಥಿತಿಯಲ್ಲಿ ತಂದೆಯ ಶವಸಂಸ್ಕಾರ ನೆರವೇರಿಸಬೇಕಾಯಿತು.
ಎಲ್ಲರೂ ಹೀಗೇ ಇರುತ್ತಾರೆಂದಲ್ಲ. ಆದರೆ ಅಮೆರಿಕಕ್ಕೆ ಒಮ್ಮೆ ಹೊಂದಿಕೊಂಡವರು ಭಾರತಕ್ಕೆ ಮತ್ತೆ ಮರಳಿ ಬರಲಾರರು. ಈಗ ಮಾತ್ರ ಟ್ರಂಪ್ ಆಳ್ವಿಕೆ ತರುತ್ತಿರುವ ಹೊಸ ನೀತಿಯಿಂದಾಗಿ ಭಾರತದತ್ತ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ಟ್ರಂಪ್ ಆಳ್ವಿಕೆಯ ವಲಸೆ ನೀತಿಯ ದುಷ್ಪರಿಣಾಮ ಎಲ್ಲಿಗೆ ಮುಟ್ಟುತ್ತದೋ, ಯಾರ್ಯಾರನ್ನು ಆಹುತಿ ತೆಗೆದುಕೊಳ್ಳುತ್ತದೋ ಈಗಲೇ ಹೇಳುವಂತಿಲ್ಲ. ವರಂಗಲ್ ಮೂಲದ ಸಾಫ್ಟ್ವೇರ್ ತಂತ್ರಜ್ಞ ಶ್ರೀನಿವಾಸ್ ಮೊದಲ ಆಹುತಿಯಾಗಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ಸಂಖ್ಯೆಯ ಭಾರತೀಯ ಐಟಿ ಉದ್ಯೋಗಿಗಳ ಮನೋಸ್ಥೈರ್ಯವನ್ನೇ ಈ ಘಟನೆ ನಡುಗಿಸಿಬಿಟ್ಟಿದೆ. ಉದ್ಯೋಗಿಗಳ ಮನಸ್ಸನ್ನು ಆವರಿಸಿರುವ ಇಂಥ ಭೀತಿಯನ್ನು ತೊಡೆದುಹಾಕುವವರಾರು ? ಇದೇ ಈಗಿನ ಜ್ವಲಂತ ಪ್ರಶ್ನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.