ಹುಬ್ಬಳ್ಳಿ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಣ್ಣ ಉದ್ದಿಮೆಗಳೇ ಪ್ರಧಾನ ಪಾತ್ರವಹಿಸುತ್ತಿದ್ದು ಅವುಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಬೆಂಗಳೂರಿನ ಐಐಎಂನ ಉಪನ್ಯಾಸಕ ಪ್ರೊ.ಆರ್.ವೈದ್ಯನಾಥನ್ ಹೇಳಿದರು.
ನಗರದ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಭಾನುವಾರ ಸಮುತ್ಕರ್ಷ ಟ್ರಸ್ಟ್ನ ಸಹಯೋಗದೊಂದಿಗೆ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿದ್ದ ’ಇಂಜಿನ್ಸ್ ಆಫ್ ಗ್ರೋಥ್, ಸ್ಮಾಲ್ ಎಂಟರ್ಪ್ರೈಜಿಸ್’ ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ವಿವಿಧ ಭಾಗಗಳಲ್ಲಿ ಸ್ವಂತ ಉದ್ದಿಮೆ ನಂಬಿ ಬದುಕು ನಡೆಸುವ ಸಮುದಾಯಗಳು ಅನೇಕ. ಗುಜರಾತ್ನಲ್ಲಿ ಪಟೇಲರು, ಬೆಲ್ಜಿಯಂನಲ್ಲಿರುವ ವಜ್ರದ ವ್ಯಾಪಾರಿಗಳಾದ ಜೈನರ ಸಮುದಾಯ ಹೀಗೇ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಉದ್ದಿಮೆಗಳಲ್ಲಿ ಜನ ತಮ್ಮನ್ನು ತೊಡಗಿಸಿಕೊಂಡ ಉದಾಹರಣೆ ಉಂಟು ಎಂದು ಅವರು ಹೇಳಿದರು.
ಇಂದಿನ ಶಿಕ್ಷಣ, ವೈದ್ಯಕೀಯ ಖರ್ಚು ವೆಚ್ಚಗಳು ದುಬಾರಿಯಾಗಿದ್ದಲ್ಲದೇ, ಜನರನ್ನು ಅನಾರೋಗ್ಯ ಸಮಸ್ಯೆಗಳು ಇನ್ನಿಲ್ಲದಂತೆ ಭಾದಿಸುತ್ತಿವೆ. ಸಂಸ್ಕೃತಿ ಸಂಪ್ರದಾಯಗಳಿಗಾಗಿ ಮಾಡಬೇಕಾದ ಖರ್ಚುಗಳು ಅನೇಕ. ಹೀಗೇ ಬದುಕು ದಿನದಿಂದ ದಿನಕ್ಕೆ ದುಬಾರಿಯಾಗುತ್ತ ಸಾಗಿದ್ದು ಉಳಿತಾಯ ಮನೋಭಾವ ವೃದ್ಧಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
800 ಕ್ಕೂ ಹೆಚ್ಚು ಸಮೂಹಗಳು ಸಣ್ಣ ಉದ್ಯಮ ನಡೆಸುತ್ತಿದ್ದು, ಅವು ಲಂಚ ಹಾಗೂ ತೆರಿಗೆ ತುಂಬಿಯೇ ಸುಸ್ತಾಗಿವೆ. ವ್ಯವಸ್ಥೆಯ ಕಪಿಮುಷ್ಠಿಗೆ ಸಿಲುಕಿ ಅವು ನಲುಗುತ್ತಿವೆ ಎಂದ ಅವರು, ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡುವ ಕೆಲಸವಾಗಬೇಕಿದೆ. ಇದರಿಂದ ದೇಶದ ಆರ್ಥಿಕ ಸುಧಾರಣೆಯೂ ಸಾಧ್ಯ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದಲ್ಲಿ ಅವೆಷ್ಟೋ ಇಲಾಖೆಗಳಿಗೆ ಮಂತ್ರಿಗಳ ಅವಶ್ಯಕತೆಯೇ ಇಲ್ಲ, ಆದರೂ ಇರುವುದು ಆರ್ಥಿಕ ಹೊರೆಗೆ ಮೂಲವಾಗುತ್ತಿದೆ ಎಂದ ಅವರು, ಲಂಚಬಾಕತನದ ವಿರುದ್ಧ ಹರಿಹಾಯ್ದರು.
ರಾಜಕೀಯ ಇಚ್ಛಾಶಕ್ತಿ
ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ತರಲು ಸಾಧ್ಯವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತ ಸಾಧ್ಯ. ಆದರೆ ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಅವಶ್ಯಕ ಎಂದು ಹೇಳಿದರು.
ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಮೇಶ ಪಾಟೀಲ್, ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ, ಜಂಟಿ ಕಾರ್ಯದರ್ಶಿ ವಿನಯ ಜವಳಿ ಹಾಗೂ ಇತರರು ಇದ್ದರು.
ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಮೇಶ ಪಾಟೀಲ್ ಸ್ವಾಗತಿಸಿದರು. ಸಮುತ್ಕರ್ಷ ಟ್ರಸ್ಟ್ನ ಗೌರವ ಕಾರ್ಯದರ್ಶಿ ಜಿತೇಂದ್ರ ನಾಯಕ ಟ್ರಸ್ಟ್ನ ಕಾರ್ಯಚಟುವಟಿಕೆ, ಧ್ಯೇಯೋದ್ದೇಶ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಸಮುತ್ಕರ್ಷ ಟ್ರಸ್ಟ್ನ ಅಧ್ಯಕ್ಷ ಡಾ.ಕ್ರಾಂತಿಕಿರಣ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.