ಧಾರವಾಡ : ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ, ಮಗು ಕೇಂದ್ರಿತ ಶಿಕ್ಷಣ ಹಾಗೂ ಚಟುವಟಿಕೆ ಆಧಾರಿತ ಕಲಿಕೆಗೆ ತಿಲಾಂಜಲಿ ಇತ್ತಿದೆ. ಪಾರದರ್ಶಕತೆ ಪಾಲಿಸದೇ, ಬೋಧಿಸುವ ವಿಷಯ ಪರಿಣಿತ ಶಿಕ್ಷಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ರಾಜ್ಯದ 1 ರಿಂದ 10ನೇ ತರಗತಿ ವರೆಗೆ ವ್ಯಾಸಂಗ ನಿರತ, 1 ಕೋಟಿ 1 ಲಕ್ಷ ಮಕ್ಕಳ ಭವಿಷ್ಯವನ್ನು ಸಂಕಷ್ಟಕ್ಕೆ ನೂಕಲು, ಸರ್ಕಾರವನ್ನೇ ದಾಳವಾಗಿ ಬಳಸುತ್ತಿದೆ ಎಂದು, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಆರೋಪಿಸಿದ್ದಾರೆ.
ನಗರದ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ನ, ಸರ್ ಎಂ. ವಿಶ್ವೇಶ್ವರಯ್ಯ ಸಭಾ ಭವನದಲ್ಲಿ ಇಂದು (22ನೇ ಫೆಬ್ರವರಿ, 2017 ಬುಧವಾರ), ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ ಆಯೋಜಿಸಿದ್ದ, ‘ಪಠ್ಯ ಪರಿಷ್ಕರಣೆ ವಿವಾದ; ಏನು? ಎತ್ತ?’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು, ಮಾತನಾಡಿದರು.
ಪ್ರೊ. ಬರಗೂರು ಸಲ್ಲಿಸಿದ, ಪರಿಷ್ಕೃತ ಪಠ್ಯ ಪುಸ್ತಕಗಳ ಕರಡು ಪ್ರತಿ, ವಿಷಯ ಶಿಕ್ಷಕರ ವೇದಿಕೆ, ಡಯಟ್, ಡಿ.ಎಸ್.ಇ.ಆರ್.ಟಿಯಲ್ಲಿ ಮತ್ತು ತಜ್ಞರ ಸಮಿತಿಯಲ್ಲಿ ಪರಿಶೀಲನೆಗೆ ಒಳಪಟ್ಟು, ಅವರ ಶಿಫಾರಸು, ಬದಲಾವಣೆ ಅಳವಟ್ಟು ಮುದ್ರಣಕ್ಕೆ ಹೋಗಬೇಕಿತ್ತು. 2005ರ ರಾಷ್ಟ್ರೀಯ ಪಠ್ಯಕ್ರಮ (ಎನ್.ಸಿ.ಎಫ್) ನಿಯಮದ ಪ್ರಕಾರ, ಪಠ್ಯದ ಹೂರಣ, 1ನೇ ತರಗತಿಯ ಮಗುವಿನಲ್ಲಿ 92 ಸಾಮರ್ಥ್ಯಗಳನ್ನು ಕಡ್ಡಾಯವಾಗಿ ತುಂಬಬೇಕು. ಸದ್ಯ ಕೇಂದ್ರದಿಂದ ಜಾರಿಗೊಳಿಸಲು ಯೋಜಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಡಬ್ಲೂ)ಗೆ ಅನುಗುಣವಾಗಿ ಅಳವಡಿಸಬೇಕು. ‘ಸ್ಪೈರಲ್ ಕಂಟಿನ್ಯೂವೇಷನ್’ ಪಠ್ಯ ಹೊಂದಿರಬೇಕು. ಆದರೆ, ಸಮಿತಿ ಅಧ್ಯಕ್ಷ ಬರಗೂರು ಅವರೇ ಹೇಳಿದಂತೆ, ಪ್ರಾದೇಶಿಕ ಸಮಾನತೆ ತರಲು ಪಠ್ಯ ಪರಿಷ್ಕರಣೆ ಮಾಡಿದ್ದಾಗಿ ಹೇಳಿರುವುದು ಹಾಸ್ಯಾಸ್ಪದ ಎಂದು ಅರುಣ್ ಶಹಾಪುರ ಟೀಕಿಸಿದರು.
27 ಸಮಿತಿಗಳು, 120 ಉಪ ಸಮಿತಿಗಳು, 180ಕ್ಕೂ ಹೆಚ್ಚು ತಜ್ಞರು 2014ರಿಂದ ಸಮಿತಿಯ ಸರ್ವಾಧ್ಯಕ್ಷ ಪ್ರೊ. ಬರಗೂರು ನೇತೃತ್ವದಲ್ಲಿ ಪರಿಷ್ಕರಣೆ ನಡೆಸಿದ್ದಾರೆ. ಮಕ್ಕಳ ಸಾಮರ್ಥ್ಯ ವೃದ್ಧಿ ದೃಷ್ಟಿಯಿಂದ ಯಾವುದನ್ನು ಸೇರಿಸಿ, ಯಾವುದನ್ನು ತೆಗೆದು ಹಾಕಿ, ಪರ್ಯಾಯವಾಗಿ ಅಳವಡಿಸಿದ ಪಾಠ ಕ್ರಮದ ಸಂಗತಿಗಳ ಬಗ್ಗೆ ಸಮರ್ಥನೆ ನೀಡಬೇಕಿರುವ ಸಮಿತಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಣ ಸಚಿವರ ಕಾಳಜಿ ಬದಿಗೊತ್ತಿ, ಮುಖ್ಯಮಂತ್ರಿಗಳ ಮೇಲೆ ಅನುಚಿತ ಪ್ರಭಾವ ಬೀರಿ, 2017-18ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲು ಮುಂದಾಗಿರುವ ಹಿನ್ನೆಲೆ, ಸಂಶಯಾಸ್ಪದ. ಕಾರಣ, ಶಿಕ್ಷಣ ತಜ್ಞ ಮುಡಿಬಡಿಂತ್ತಾಯ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿ ಸಮಗ್ರವಾಗಿ ಪರಿಷ್ಕರಿಸಿದ ಪಠ್ಯಕ್ರಮವನ್ನು, ವಿಶ್ವವಿದ್ಯಾಲಯ ಹಂತದಲ್ಲಿ ಬೋಧಿಸಿರುವ ವ್ಯಕ್ತಿ ಮತ್ತು ತಂಡ ಪರಿಷ್ಕರಣೆಗೆ ಒಳಪಡಿಸುವ ಪ್ರಾಯೋಗಿಕ ಅನುಭವ, ತಜ್ಞತೆ ಹೊಂದಿದೆಯೇ ಎಂದು ಪ್ರಶ್ನಿಸಿದರು.
ಇದೇ ಮಾರ್ಚ್ 5 ರಂದು ಬೆಂಗಳೂರಿನಲ್ಲಿ ಶಿಕ್ಷಕರ ಸಭೆ ಕರೆಯಲಾಗಿದ್ದು, 175 ರಿಂದ 180 ಜನ ಪಠ್ಯ ಪರಿಷ್ಕರಣೆ ಕಾರ್ಯ ನಿರ್ವಹಿಸಿದ ತಜ್ಞರು ಭಾಗವಹಿಸಿ, ಪ್ರೊ. ಬರಗೂರು ಸಮಿತಿ ಕೈಗೊಂಡ ಪರಿಷ್ಕರಣೆ ಒಳ-ಹೊರಗುಗಳ ಬಗ್ಗೆ ವಿಶ್ಲೇಷಿಸಲಿದ್ದಾರೆ. ಎನ್ಸಿಇಆರ್ಟಿ, ಎನ್ಸಿಎಫ್ -2005 ಮತ್ತು ಕೆಸಿಎಫ್ -2007ರ ಮಾನದಂಡದ ಅಡಿ, ಪಠ್ಯ ಪರಿಷ್ಕರಣೆ ವಿಶ್ಲೇಷಿಸಿ, ಸಿಬಿಎಸ್ಇ ಪಠ್ಯಕ್ಕೆ ಪೂರಕತೆ ಮತ್ತು ವೈರುಧ್ಯದ ಅಂಶಗಳನ್ನು ಪಟ್ಟಿ ಮಾಡಲಿದ್ದಾರೆ ಎಂದು ಶಾಸಕ ಅರುಣ್ ಶಹಾಪುರ ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ, ಶಿಕ್ಷಣ ಇಲಾಖೆಯ ವಿಶ್ರಾಂತ ಅಪರ ಆಯುಕ್ತ ವೆಂಕಟೇಶ ಮಾಚಕನೂರ ಅವರು ಮಾತನಾಡಿ, ಪಠ್ಯಕ್ಕಿಂತ, 1 ರಿಂದ 4ನೇ ತರಗತಿ ಹಂತದಲ್ಲಿ, ಕಲಿಸುವ ಕ್ರಮ ಮತ್ತು ಕಲಿಯುವ ಕ್ರಮ ಅತ್ಯಂತ ಮಹತ್ವದ್ದು. ಮಕ್ಕಳ ಭಾವ-ಬುದ್ಧಿ ಅರಳಿಸುವ ಉದ್ದೇಶವೇ ಪಠ್ಯ ರಚನೆಯ ಮೂಲ ಆಶಯವಾಗಿರಬೇಕು. 6 ರಿಂದ 8ನೇ ತರಗತಿ ಹಂತದಲ್ಲಿ, ಓದು ಮತ್ತು ಬರೆಹದ ಕೌಶಲ್ಯ ಪ್ರಾಪ್ತಿಗೆ ದವಕಶ ಪಠ್ಯ ನೀಡಬೇಕು. ವಿಶೇಷವಾಗಿ, ಗ್ರಾಮೀಣ ಭಾಗದ ಮಕ್ಕಳ ಕಲಿಕಾ ಮಟ್ಟ ಮತ್ತು ಭಾಷಾ ಪ್ರೌಢಿಮೆ ಮಾನದಂಡವಾಗಿಟ್ಟುಕೊಂಡು, ಕ್ಷೇತ್ರ ಪರಿಣಿತ ಶಿಕ್ಷಕರಿಂದಲೇ ಈ ಕೆಲಸ ಮಾಡಿಸುವುದು ಶ್ರೇಯಸ್ಕರ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಗಳ ಮತ್ತು ಅಲ್ಲಿ ಕಲಿಯುತ್ತಿರುವ ಮಕ್ಕಳ ಬೋಧನೆ ಮತ್ತು ಕಲಿಕಾ ಗುಣಮಟ್ಟ ಸುಧಾರಣೆ ಪ್ರಧಾನ ಮತ್ತು ಆದ್ಯತೆಯಾಗಿಟ್ಟುಕೊಂಡು, ಪಠ್ಯ ಪರಿಷ್ಕರಣೆಯಾಗಬೇಕು. ಶೈಕ್ಷಣಿಕ ವ್ಯವಸ್ಥೆ ಮತ್ತು ಶಾಲಾ ವ್ಯವಸ್ಥೆ ಸುಧಾರಣೆಗೆ ಸಮಿತಿ ಬೇಕು. ಪ್ರತಿ ವರ್ಷ ರಾಜ್ಯದಲ್ಲಿ 2.5 ಲಕ್ಷ ಮಕ್ಕಳು ಇಂಗ್ಲಿಷ್ ಮಾಧ್ಯಮ ಕಲಿಕೆಯತ್ತ ಹೊರಳುತ್ತಿದ್ದಾರೆ. 1.5 ಲಕ್ಷ ಮಕ್ಕಳನ್ನು ಸರ್ಕಾರವೇ ಆರ್ಟಿಇ ಅಡಿ ಹಣ ಒದಗಿಸಿ, ಆಂಗ್ಲ ಮಾಧ್ಯಮ ಶಾಲೆಗಳಿಗೆ ಕನ್ನಡ ಮಾಧ್ಯಮದ ಮಕ್ಕಳನ್ನು ಸೇರಿಸುತ್ತಿದೆ. ಈ ಹಂತದಲ್ಲಿ ಪಠ್ಯ ಪರಿಷ್ಕರಣೆ ಹೆಚ್ಚು ಮುತುವರ್ಜಿ, ಕಾಳಜಿ ಮತ್ತು ಮಕ್ಕಳ ಭವಿಷ್ಯ ನಿರ್ಮಾಣದ ದೂರದೃಷ್ಟಿಯನ್ನು ಒಳಗೊಂಡಿರಬೇಕು ಎಂದು ಮಾಚಕನೂರ ಆಶಯ ವ್ಯಕ್ತ ಪಡಿಸಿದರು.
ರಕ್ಷಿತಾ ಜೋಶಿ ಪ್ರಾರ್ಥಿಸಿದರು. ಸಿಡಿಎಸ್ ಸಂಚಾಲಕ ದಿವಾಕರ ಹೆಗಡೆ, ಪ್ರಸ್ತಾವಿಕವಾಗಿ ಮಾತನಾಡಿ, ನಿರೂಪಿಸಿ, ವಂದಿಸಿದರು. ಶಿಕ್ಷಣ ತಜ್ಞರು, ಅಧ್ಯಾಪಕರು, ಶಿಕ್ಷಕರು ಹಾಗೂ ವಿಶೇಷ ಆಹ್ವಾನಿತರು ಸಂವಾದದಲ್ಲಿ ಪಾಲ್ಗೊಂಡರು.
ವಿಕೃತೀಕರಣದ ಭಯ
ಪಠ್ಯ ಪುಸ್ತಕದ ಪರಿಷ್ಕರಣೆಯಲ್ಲಿ ಕೇಸರೀಕರಣ, ಹಸರೀಕರಣ, ಕೆಂಪೀಕರಣ ಅಥವಾ ಕಾಂಗ್ರೆಸ್ಸೀಕರಣದ ಭಯವಿಲ್ಲ, ಆದರೆ ವಿಕೃತೀಕರಣದ ಭಯ ಖಂಡಿತಾ ಇದೆ. ಅದಕ್ಕೇ ವಿರೋಧಿಸುತ್ತಿದ್ದೇವೆ.
ಅರುಣ ಶಹಾಪುರ
ಶಿಕ್ಷಣ ತಜ್ಞ ಹಾಗೂ ವಿಧಾನ ಪರಿಷತ್ ಸದಸ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.