ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು? ಭಯೋತ್ಪಾದಕರಿಗೆ ಬೆಂಬಲ ನೀಡಬೇಡಿ, ಸೈನಿಕರ ಕಾರ್ಯಾಚರಣೆಗೆ ಅಡ್ಡಿಯಾಗಬೇಡಿ, ಕೈಯಲ್ಲಿ ಅನವಶ್ಯಕವಾಗಿ ಗನ್ ಹಿಡಿಯಬೇಡಿ, ತಪ್ಪುದಾರಿಯಲ್ಲಿರುವ ಯುವಕರು ಮುಖ್ಯವಾಹಿನಿಗೆ ಬರಲಿ, ಇಲ್ಲದಿದ್ದಲ್ಲಿ ದೇಶ ವಿರೋಧಿಗಳು ಎಂದೇ ಪರಿಗಣಿಸಬೇಕಾಗುತ್ತದೆ’.
ಸೇನಾ ಮುಖ್ಯಸ್ಥರು ದೇಶದ ಹಿತಾಸಕ್ತಿ ದೃಷ್ಟಿಯಿಂದ ನೀಡಿರುವ ಕಠಿಣ ಸಂದೇಶದಲ್ಲಿ ಇರುವ ತಪ್ಪುಗಳಾದರೂ ಏನು? ಅವರು ಬೇಜವಾಬ್ದಾರಿಯೋ, ಅಪ್ರಬುದ್ಧರೋ, ಕೇಂದ್ರ ಸರ್ಕಾರ ಈ ಕುರಿತು ಮಾತನಾಡಬೇಕಿತ್ತೋ ಎಲ್ಲವನ್ನೂ ನಂತರ ಚಿಂತಿಸೋಣ. ಬಿಪಿನ್ ಅವರ ಮಾತಿನಲ್ಲಿ ಟೀಕಿಸುವ, ರಾಜಕೀಯಕರಣಗೊಳಿಸುವ ಭಾವವಾದರೂ ಎಲ್ಲಿದೆ?
ಬಿಪಿನ್ ಅವರು ಹೇಳಿಕೆ ಕೊಟ್ಟ ಮರುದಿನವೇ ಪಾಕಿಸ್ಥಾನದ ಧ್ವಜಗಳು ಅಲ್ಲಿ ರಾರಾಜಿಸಿವೆ. ದೇಶವಿರೋಧಿ ಘೋಷಣೆಗಳು ಮೊಳಗಿವೆ. ಮನೆ, ಮಠ, ತೊರೆದು ಉಗ್ರವಾದಿಗಳಿಂದ ನಮ್ಮನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತ ಸೈನಿಕರ ಮೇಲೆ ಕಲ್ಲು ತೂರಾಟವೂ ನಡೆದಿದೆ. ಬಿಪಿನ್ ಅವರ ಹೇಳಿಕೆಯನ್ನು ಟೀಕಿಸುವವರು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.
ಕಾಶ್ಮೀರ ಸಮಸ್ಯೆಯ ಕೊಡುಗೆದಾರರ ಗೊಡವೆಗೆ ನಾವು ಹೋಗುವುದು ಬೇಡ. ಆದರೆ, ನಮ್ಮ ಭಾರತದ ಅಂತಃಸತ್ವಕ್ಕೇ ಕೊಳ್ಳಿ ಇಡುವ ಭಯೋತ್ಪಾದಕ ಕೃತ್ಯಗಳು ಅದೇ ಕಾಶ್ಮೀರದಲ್ಲಿ ನಡೆಯುತ್ತಿವೆಯಲ್ಲ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಬಹುಶಃ ಕಾಂಗ್ರೆಸ್ ಕೂಡಾ ಒಪ್ಪಿಕೊಳ್ಳುತ್ತದೆ ಎಂದು ಭಾವಿಸೋಣ. ಅಂದ ಮೇಲೆ ನಮ್ಮ ನೆಲದಲ್ಲಿ ಘಾತುಕ ಶಕ್ತಿಗಳ ಅಟ್ಟಹಾಸ ಎಲ್ಲೆ ಮೀರಿದಾಗ, ಅದರ ಹುಟ್ಟಡಗಿಸುವ ಒಂದು ದಿಟ್ಟ ಮಾತು ಆಡುವುದೂ ತಪ್ಪೇ? ಮಾತೇನು ನಮ್ಮ ಹೆಮ್ಮೆಯ ಸೇನೆ ಬಂದೂಕಿನಿಂದಲೂ ಉತ್ತರಿಸಿಯಾಗಿದೆ.
ನ್ಯಾಶನಲ್ ಕಾನ್ಫರನ್ಸ್, ಕಾಂಗ್ರೆಸ್ ಇತ್ಯಾದಿ ಪಕ್ಷಗಳು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತವೆ. ರಾವತ್ ಅವರು ಈ ಹೇಳಿಕೆಯನ್ನು ನೀಡುವ ಅವಶ್ಯಕತೆ ಇರಲಿಲ್ಲ ಎಂದು ಸಲಹೆ ನೀಡುತ್ತವೆ. ಎಲ್ಲವೂ ಸರಿ. ಆದರೆ ಬಿಜೆಪಿಯೇತರ ಯಾವೊಂದು ಪಕ್ಷವೂ ಕಾಶ್ಮೀರದಲ್ಲಿ ರಾರಾಜಿಸಿದ ಪಾಕ್ ಧ್ವಜದ ಬಗ್ಗೆ ಮಾತನಾಡುವುದಿಲ್ಲ. ಅಲ್ಲಿ ದೇಶ ವಿರೋಧಿ ಹೇಳಿಕೆ ಮೊಳಗಿದ ಬಗ್ಗೆ ಚಕಾರ ಎತ್ತುವುದಿಲ್ಲ. ನಮ್ಮ ಹೆಮ್ಮೆಯ ಸೈನಿಕರ ಮೇಲೆ ದಾಳಿಯಾದ ಕುರಿತು ಖಂಡನೆಯನ್ನೂ ವ್ಯಕ್ತಪಡಿಸುವುದಿಲ್ಲವಲ್ಲ ಯಾಕೆ?
ದಿನಬೆಳಗಾದರೆ ಕಾಶ್ಮೀರದಲ್ಲಿ ನೆತ್ತರ ಕೋಡಿ ಹರಿಸುವ ಉಗ್ರರ ಕೃತ್ಯಗಳಿಗೆ ಸಾಥ್ ನೀಡುವ ದಾರಿತಪ್ಪಿದ ಮಹಾನ್ ಯುವಕರಿಗೆ ಕಠಿಣ ಸಂದೇಶ ನೀಡದೇ ಇನ್ನೇನು ಸನ್ಮಾನಿಸಬೇಕೇ? ಅಲ್ಲಿ ಹಾರಾಡಿದ್ದು ಬಟ್ಟೆಗಳ ಬಾವುಟವಲ್ಲ, ದುಷ್ಟಶಕ್ತಿಯ ಪ್ರತೀಕ. ಅಲ್ಲಿ ಮೊಳಗಿದ್ದು ಯುವಕರಲ್ಲಿನ ನ್ಯಾಯಯುತ ಆಕ್ರೋಶವಲ್ಲ, ದೇಶದ ಅಂತಃಸತ್ವಕ್ಕೇ ಕೊಳ್ಳಿ ಇಡುವ ಕೆಟ್ಟ ರಣಕೇಕೆ. ಸೇನೆ ಬಿಜೆಪಿಯದಲ್ಲ ಭಾರತದ್ದು. ವಿರೋಧಿಸುವ ಮುನ್ನ ಅರಿಯಬೇಕಿದೆ.
ಬೇರಿನ್ನಾವುದೇ ವಿಷಯದಲ್ಲಿ ಎಲ್ಲ ಪಕ್ಷಗಳು ಕೂಡಿ ಕುಸ್ತಿ ಹಿಡಿಯಲಿ. ಆದರೆ, ದೇಶದ ಸಮಗ್ರತೆ, ಭದ್ರತೆ, ಶಾಂತಿ, ಸುರಕ್ಷೆ ವಿಷಯ ಬಂದಾಗ ಒಂದಾಗಿರಬೇಕೆಂಬ ಕನಿಷ್ಟ ಪರಿಜ್ಞಾನವೂ ಇಲ್ಲವಾದರೆ ಹೇಗೆ? ಕಾಂಗ್ರೆಸ್ ಪಕ್ಷವಂತೂ ಇತ್ತೀಚೆಗೆ ಅದ್ಯಾಕೋ ಸೇನೆಯ ಆದರ್ಶವನ್ನೇ ಅಣಕಿಸುವಂತೆ ವರ್ತಿಸುತ್ತಿದೆ. ದೇಶದ ಹಿರಿಯ ಪಕ್ಷ ಈ ನಿಟ್ಟಿನಲ್ಲಿ ಸುಧಾರಿಸದಿದ್ದರೆ ಅದಕ್ಕೇ ಹಾನಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.