
ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಕನಸನ್ನು ನಾವು ಖಂಡಿತವಾಗಿಯೂ ನನಸಾಗಿಸುತ್ತೇವೆ, ದೂರದೃಷ್ಟಿಯ ನೀತಿಗಳು ಮತ್ತು ಕಠಿಣ ಪರಿಶ್ರಮದ ಮೂಲಕ ಈ ಗುರಿಯನ್ನು ಸಾಧಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ‘ವಿಕಸಿತ ಭಾರತ ಸಂಕಲ್ಪ ಸಭೆ’ಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮತಗಳ ಆಧಾರದ ಮೇಲೆ ಸಮಾಜದಲ್ಲಿ ಉಂಟಾಗುವ ವಿಭಜನೆಯು ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
“ಆದರೆ ರೈತನ ಹೊಲದಲ್ಲಿ ನೀರಿನ ಕೊರತೆಯಾದಾಗ, ಆ ಸಮಸ್ಯೆ ಕೇವಲ ಒಂದು ಜಾತಿಯ ಮೇಲೆ ಪರಿಣಾಮ ಬೀರುತ್ತದೆಯೇ? ವಿದ್ಯುತ್ ಇಲ್ಲದಿದ್ದಾಗ, ಕತ್ತಲೆಯು ಕೇವಲ ಒಂದು ಸಮುದಾಯದ ಮೇಲೆ ಮಾತ್ರ ಆವರಿಸುತ್ತದೆಯೇ? ಇಲ್ಲ. ಸಮಸ್ಯೆ ಎಲ್ಲರಿಗೂ ಸಂಬಂಧಿಸಿದ್ದಾಗ, ಪರಿಹಾರವೂ ಎಲ್ಲರಿಗೂ ಇರಬೇಕು” ಎಂದಿದ್ದಾರೆ.
“ಭಾರತ ನಿಲ್ಲಲು ಯಾವುದೇ ಕಾರಣವಿಲ್ಲ. ನೂರು ವರ್ಷಗಳ ಹಿಂದೆ ನಮ್ಮ ಜನಸಂಖ್ಯೆ 40 ಕೋಟಿಗಿಂತ ಕಡಿಮೆಯಿತ್ತು; ಇಂದು ನಾವು 140 ಕೋಟಿಗೂ ಹೆಚ್ಚು ಇದ್ದೇವೆ. 140 ಕೋಟಿ ನಾಗರಿಕರು ಒಗ್ಗೂಡಿ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲಿದ್ದಾರೆ ಮತ್ತು ನಾವು ಖಂಡಿತವಾಗಿಯೂ ಅದನ್ನು ಸಾಧಿಸುತ್ತೇವೆ. ನಾವು ಇದನ್ನು ಸಾಧಿಸುತ್ತೇವೆ” ಎಂದಿದ್ದಾರೆ.
ಒಂದು ಕಾಲದಲ್ಲಿ ಅಸಾಧ್ಯವೆಂದು ತೋರುತ್ತಿದ್ದ ಸಂಗತಿಗಳು ಈಗ ಸಾಧ್ಯವಾಗುತ್ತಿವೆ. ಕೇವಲ ಒಂದು ದಶಕದ ಅವಧಿಯಲ್ಲಿ 25 ಕೋಟಿ ಜನರು ಬಡತನದಿಂದ ಹೊರಬರುತ್ತಾರೆ ಎಂದು ಯಾರು ತಾನೇ ಊಹಿಸಿದ್ದರು? ಆದರೂ, ಭಾರತ ಇದನ್ನು ಸಾಧಿಸಿ ತೋರಿಸಿದೆ. ಅದಕ್ಕಾಗಿಯೇ ನಾನು 140 ಕೋಟಿ ಭಾರತೀಯರ ಸಾಮರ್ಥ್ಯ ಮತ್ತು ಸಂಭಾವ್ಯತೆಯ ಮೇಲೆ ನಂಬಿಕೆ ಇಟ್ಟಿದ್ದೇನೆ. 25 ವರ್ಷಗಳ ಅನುಭವದ ನಂತರ, ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ: ನಾವು ಭಾರತದ ಪರಿವರ್ತನೆಯನ್ನು ನಮ್ಮ ಕಣ್ಣ ಮುಂದೆಯೇ ಕಾಣುತ್ತಿದ್ದೇವೆ ಎಂದಿದ್ದಾರೆ.
“ರಾಷ್ಟ್ರದ ವಿಷಯಕ್ಕೆ ಬಂದಾಗ ಹುದ್ದೆ, ಪ್ರತಿಷ್ಠೆ ಮತ್ತು ಅಧಿಕಾರಗಳಿಗೆ ಯಾವುದೇ ಮಹತ್ವವಿರುವುದಿಲ್ಲ.ಈ ಅಜರಾಮರ ರಾಷ್ಟ್ರದಲ್ಲಿ ನಾವು ಜನಿಸಿದ್ದೇವೆ ಎಂಬ ಅರಿವೇ ಅಮೃತಸಮಾನವಾದುದು. ಅದರ ಸನ್ನಿಧಿಯಲ್ಲಿ ಅಧಿಕಾರದ ಸುಖಭೋಗಗಳು ಅತ್ಯಲ್ಪವೆನಿಸುತ್ತವೆ. ಹುದ್ದೆ ಮತ್ತು ಪ್ರತಿಷ್ಠೆಗಳು ಜಗತ್ತಿನ ಎಲ್ಲಿಯಾದರೂ ಸಿಗಬಹುದು. ಆದರೆ ಭಾರತದಂತಹ ಪವಿತ್ರ ಭೂಮಿ ಬೇರೆಲ್ಲೂ ಸಿಗಲಾರದು. ಅಂಧಕಾರದ ಯುಗದಲ್ಲೂ ಮಾನವಕುಲಕ್ಕೆ ಜ್ಞಾನವನ್ನು ನೀಡಿ, ಮೌಲ್ಯಗಳ ಬೆಳಕನ್ನು ಬೆಳಗಿದ ದೇಶವಿದು. ಅಂತಹ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅವಕಾಶವೇ ಅತ್ಯಮೂಲ್ಯವಾದುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



