ಸುಳ್ಯ: ಕಂಪ್ರೆಸರ್ ಟ್ರಾಕ್ಟರ್ ಮಗುಚಿ ಬಿದ್ದು ಮೂವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಚೊಕ್ಕಾಡಿ ಬಳಿಯ ಶೇಣಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಕಂಪ್ರೆಸರ್ ವಾಹನದ ಚಾಲಕ ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗೋಪಾಲಕಜೆಯ ಮಾಧವ ಗೌಡ(34), ಮೂಲತಃ ಕಾಸರಗೋಡು ಮಧೂರ್ ಗ್ರಾಮದ ಕಲ್ಲಕಟ್ಟೆಯವರಾದ ಪ್ರಸ್ತುತ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಕುಳ್ಳಾಜೆಯಲ್ಲಿ ವಾಸ್ತವ್ಯವಿದ್ದ ನಾರಾಯಣ ನಾಕ್(40) ಮತ್ತು ತಮಿಳುನಾಡು ಮೂಲದ ಸುಬ್ರಹ್ಮಣ್ಯನ್ ರಾಜೇಂದ್ರನ್(49) ಮೃತಪಟ್ಟವರು. ವಾಹನದಲ್ಲಿದ್ದ ಕಳಂಜ ಗ್ರಾಮದ ಸುರೆಂಗಿಯ ದೇವಪ್ಪ ಗಾಯಗೊಂಡಿದ್ದಾರೆ.
ಕಲ್ಲು ಕೊರೆಯುವ ಕಂಪ್ರೆಸರ್ ಟ್ರಾಕ್ಟರ್ ವಾಹನವು ಗುರುವಾರ ಬೆಳಿಗ್ಗೆ ಚೊಕ್ಕಾಡಿ ಕಡೆಯಿಂದ ಬೆಳ್ಳಾರೆ ಕಡೆಗೆ ಹೋಗುತ್ತಿತ್ತು. ನಿಯಂತ್ರಣ ತಪ್ಪಿದ ವಾಹನವು ಶೇಣಿ ಬಳಿಯಲ್ಲಿ ರಸ್ತೆ ಬದಿಯ ಸುಮಾರು 25 ಅಡಿ ಆಳದ ಹೊಂಡಕ್ಕೆ ಮಗುಚಿ ಬಿದ್ದಿದೆ. ವಾಹನವು ಮಗುಚಿ ಬಿದ್ದ ಕಾರಣ ವಾಹನದಲ್ಲಿದ್ದ ನಾಲ್ಕು ಮಂದಿ ವಾಹನದ ಅಡಿಯಲ್ಲಿ ಸಿಲುಕಿದ್ದಾರೆ.
ವಿಷಯ ತಿಳಿದು ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕದಳ ಮತ್ತು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಪ್ರಯತ್ನ ನಡೆಸಿ ಹಿಟಾಚಿಯ ನೆರವಿನಿಂದ ಕಂಪ್ರೆಸರ್ ವಾಹನವನ್ನು ಮೇಲಕ್ಕೆತ್ತಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬೆಳಿಗ್ಗೆ ಸುಮಾರು ಎಂಟೂವರೆಯ ವೇಳೆಗೆ ಘಟನೆ ನಡೆದಿದ್ದು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಮೇಲಕ್ಕೆತ್ತಲಾಯಿತು.
ಗಂಭೀರ ಗಾಯಗೊಂಡಿದ್ದ ನಾರಾಯಣ ನಾಕ್ ಮತ್ತು ಮಾಧವ ಗೌಡ ಸುಳ್ಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದರು. ಸುಬ್ರಹ್ಮಣ್ಯನ್ ರಾಜೇಂದ್ರನ್ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳು ದೇವಪ್ಪ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಳಲಿಸಿ ತನಿಖೆ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.