ನಾಲಿಗೆ ಕುಲವನ್ನು ಹೇಳಿತು ಎಂಬುದೊಂದು ಗಾದೆ. ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂಬುದು ಪುರಂದರ ದಾಸರ ಕೀರ್ತನೆಯೊಂದರ ಸಾಲು. ಕಳೆದ ವಾರ ಪಾರ್ಲಿಮೆಂಟಿನ ಬಜೆಟ್ ಅವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ನಾಲಿಗೆಯ ಮೂಲಕ ಕಾಂಗ್ರೆಸ್ ಜಾತಕವನ್ನೇ ಬಿಚ್ಚಿಟ್ಟಿದ್ದಾರೆ. ’ಕಾಂಗ್ರೆಸ್ನಲ್ಲಿ ದೇಶಕ್ಕಾಗಿ ಗಾಂಧೀಜಿ, ಇಂದಿರಾ ಮತ್ತು ರಾಜೀವ್ಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ. ನಿಮ್ಮಲ್ಲಿ (ಬಿಜೆಪಿಯ) ಒಂದು ನಾಯಿಯೂ ಸತ್ತಿಲ್ಲ ’ ಎಂದು ಹರಿಹಾಯ್ದಿದ್ದರು. ಸಮಚಿತ್ತದ ಮಾತಿಗೆ ಹೆಸರಾದ ಹಿರಿಯ ಕಾಂಗ್ರೆಸ್ ನಾಯಕ ಖರ್ಗೆ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಇಂತಹದೊಂದು ಕೀಳು ಹೇಳಿಕೆಯನ್ನು ಏಕೆ ನೀಡಿದರೋ, ಅವರಿಗೆ ಮಾತನಾಡುವುದಕ್ಕೆ ಬೇರೆ ವಿಷಯವೇ ತೋಚಲಿಲ್ಲವೋ ಅಥವಾ ಮೋದಿ ಸರ್ಕಾರದ ವಿರುದ್ಧ ಟೀಕಿಸಲು ಯಾವುದೇ ಪ್ರಬಲ ಕಾರಣಗಳು ತೋಚದೆ ಹತಾಶೆ ಕಾಡಿತೋ ಗೊತ್ತಿಲ್ಲ. ಖರ್ಗೆಯವರ ನಾಲಿಗೆ ಉಲಿದ ಇಂತಹ ಅಸಂಸದೀಯ ಪದಕ್ಕೆ ಇಡೀ ಪಾರ್ಲಿಮೆಂಟ್ ವಿರೋಧ ಪ್ರಕಟಿಸಿದ್ದಂತೂ ನಿಜ. ಕೊನೆಗೆ ಸ್ಪೀಕರ್, ಖರ್ಗೆ ಆಡಿದ ಈ ಅಸಂಸದೀಯ ಪದವನ್ನು ಕಡತದಿಂದ ಕಿತ್ತುಹಾಕಬೇಕಾಯಿತು.
ಬಳಿಕ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ, ನಾವು ನಾಯಿ ಸಂಸ್ಕೃತಿಯಲ್ಲಿ ಬೆಳೆದು ಬಂದವರಲ್ಲ. ಆದರೆ ನಾವು ಆ ಸ್ವಾತಂತ್ರ್ಯ ಹೋರಾಟದ ವೇಳೆ ಜನಿಸಿರಲಿಲ್ಲ ಹಾಗಾಗಿ ಆ ಹೋರಾಟದಲ್ಲಿ ತೊಡಗುವ ಭಾಗ್ಯ ನಮಗಿರಲಿಲ್ಲ, ಆದರೀಗ ದೇಶಕ್ಕಾಗಿ ನಾವು ಕೆಲಸಮಾಡುತ್ತಿದ್ದೇವೆ ಎಂದು ಖರ್ಗೆಗೆ ತಿರುಗೇಟು ನೀಡಿದ್ದರು.
ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೊರತುಪಡಿಸಿ ಅನ್ಯರಾರೂ ಹೋರಾಡಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕೀರ್ತಿ ಏನಿದ್ದರೂ ಕಾಂಗ್ರೆಸ್ಸಿಗೇ ಸಲ್ಲಬೇಕು ಎನ್ನುವುದು ಖರ್ಗೆಯಂತಹ ಅನೇಕ ಕಾಂಗ್ರೆಸ್ ನಾಯಕರ ವಾದ. ಸಂದರ್ಭ ಸಿಕ್ಕಿದಾಗಲೆಲ್ಲ ಇದೇ ಮಾತನ್ನು ನಾಚಿಕೆಯಿಲ್ಲದೆ ಅವರು ಹೇಳುತ್ತಲೇ ಇರುತ್ತಾರೆ. ಚಂದ್ರಶೇಖರ ಅಜಾದ್, ಭಗತ್ ಸಿಂಗ್, ಖುದಿರಾಮ್ ಬೋಸ್, ರಾಮ್ಪ್ರಸಾದ್ ಬಿಸ್ಮಿಲ್ಲಾ, ಮದನ್ಲಾಲ್ ಧಿಂಗ್ರಾ, ವಾಸುದೇವ ಫಡ್ಕೆ, ಸಾವರ್ಕರ್… ಮೊದಲಾದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಮಾಡಿದ ಕ್ರಾಂತಿಕಾರಿಗಳ ನೆನಪು ಈಗಿನ ಕಾಂಗ್ರೆಸ್ ನಾಯಕರಿಗೆ ಆಗುವುದೇ ಇಲ್ಲ. ಆ ಕ್ರಾಂತಿಕಾರಿಗಳು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡದಿದ್ದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತೆ? ಕ್ರಾಂತಿಕಾರಿಗಳ ತ್ಯಾಗ, ಬಲಿದಾನಗಳಿಂದಾಗಿ ದೊರಕಿದ ಸ್ವಾತಂತ್ರ್ಯಕ್ಕೆ ತಾವೇ ಕಾರಣ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಕೇಳಿ ಕೇಳಿ ಪ್ರಜ್ಞಾವಂತ ಭಾರತೀಯರಿಗೆ ಸುಸ್ತಾಗಿಹೋಗಿದೆ. ಅಷ್ಟಕ್ಕೂ ಇಂದಿರಾಗಾಂಧಿ, ರಾಜೀವ್ಗಾಂಧಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಯಾವಾಗ? ಅದಕ್ಕೇನಾದರೂ ದಾಖಲೆ ಇದೆಯೆ? ಅವರಿಬ್ಬರೂ ಪ್ರಾಣತ್ಯಾಗ ಮಾಡಿದ್ದು ಮಾತ್ರ ನಿಜ. ಆದರೆ ಅದು ದೇಶದ ಸ್ವಾತಂತ್ರ್ಯಕ್ಕಾಗಿ ಖಂಡಿತ ಅಲ್ಲ. ಇಂದಿರಾಗಾಂಧಿ ಸಿಖ್ ಸಮುದಾಯದ ಆಕ್ರೋಶಕ್ಕೆ ಪ್ರಾಣ ಕಳೆದುಕೊಂಡರೆ, ರಾಜೀವ್ಗಾಂಧಿ ಎಲ್ಟಿಟಿಇ ಉಗ್ರರ ಸಿಟ್ಟಿಗೆ ಬಲಿಯಾದರು ಎನ್ನುವುದು ಇತಿಹಾಸದ ಸತ್ಯ. ಅವರಿಬ್ಬರ ಪ್ರಾಣತ್ಯಾಗಕ್ಕೂ ದೇಶದ ಸ್ವಾತಂತ್ರ್ಯಕ್ಕೂ ಏನೇನೂ ಸಂಬಂಧವಿಲ್ಲ.
ಅದು ಹಾಗಿರಲಿ, ಬಿಜೆಪಿಯ ನಾಯಿಯೂ ಕೂಡ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ ಎಂದು ಹೀಗಳೆಯುವ ಖರ್ಗೆಯವರಿಗೆ ಬಿಜೆಪಿಯ ಪೂರ್ವಾಶ್ರಮವಾಗಿರುವ ಜನಸಂಘ ಜನಿಸಿದ್ದೇ 1951 ರಲ್ಲಿ ಎಂಬ ಸಂಗತಿ ಗೊತ್ತಿಲ್ಲವೆ? ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಜನಸಂಘ ಹುಟ್ಟಿಯೇ ಇರಲಿಲ್ಲ. ಹಾಗಿರುವಾಗ ಜನಸಂಘದ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಪ್ರಶ್ನೆಯಾದರೂ ಎಲ್ಲಿ?
ಆದರೆ ಜನಸಂಘ, ಅನಂತರ ಬಿಜೆಪಿಗೆ ಪ್ರೇರಕಶಕ್ತಿಯಾಗಿ ಹಿನ್ನೆಲೆಯಲ್ಲಿ ನಿಂತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪಿಸಿದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಷ್ಟೇ ಅಲ್ಲ, ಸತ್ಯಾಗ್ರಹ ಮಾಡಿ ಜೈಲಿಗೂ ಹೋಗಿಬಂದಿದ್ದರು. ಅದು 1930 ನೇ ಇಸವಿಯ ದಿನಗಳು. ಗಾಂಧೀಜಿಯವರ ಸತ್ಯಾಗ್ರಹ ಚಳುವಳಿ ನಡೆದಿತ್ತು. ಸರ್ಕಾರದ ಕಾನೂನುಗಳನ್ನು ಮುರಿಯುವ ಕರೆಯನ್ನು ಗಾಂಧೀಜಿ ಜನತೆಗೆ ನೀಡಿದ್ದರು. ಆಗ ಡಾ. ಹೆಡಗೇವಾರ್ ಸ್ವತಃ ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಅದಕ್ಕಾಗಿ ತಮ್ಮ ’ಸರಸಂಘಚಾಲಕ’ ಹುದ್ದೆಯನ್ನು ಕೆಲಕಾಲ ಲ. ವಾ. ಪರಾಂಜಪೆ ಎಂಬ ಮಹನೀಯರಿಗೆ ಒಪ್ಪಿಸಿದ್ದರು. 1930ರ ಜುಲೈ 1 ರಂದು ಯವತಮಾಳ್ ಎಂಬಲ್ಲಿ ಜಂಗಲ್ ಸತ್ಯಾಗ್ರಹವನ್ನು ನಡೆಸಿದ್ದರು. ಡಾ. ಹೆಡಗೇವಾರ್ರವರಿಗೆ 9 ತಿಂಗಳ ಶಿಕ್ಷೆಯಾಗಿತ್ತು. ಬ್ರಿಟಿಷ್ ಸರ್ಕಾರ ಅವರನ್ನು ಅಕೋಲಾ ಸೆರೆಮನೆಯಲ್ಲಿಟ್ಟಿತ್ತು. ಹೆಡಗೇವಾರ್ ಸ್ವತಃ ನಾಗಪುರ ಕಾಂಗ್ರೆಸ್ನ ಕಾರ್ಯದರ್ಶಿ ಕೂಡ ಆಗಿದ್ದರು.
ಕಲ್ಕತ್ತೆಯಲ್ಲಿ ಡಾ. ಹೆಡಗೇವಾರ್ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದ ವೇಳೆ ’ಅನುಶೀಲನ ಸಮಿತಿ’ ಎಂಬ ಕ್ರಾಂತಿಕಾರಿಗಳ ಸಂಘಟನೆಯೊಂದಿಗೆ ಆಳವಾದ ಸಂಬಂಧವಿತ್ತು. ಕ್ರಾಂತಿಕಾರಿ ಗುಂಪುಗಳ ನಿಕಟ ಪರಿಚಯ ಅವರಿಗಿತ್ತು. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿಗಳು ಬಳಸಬೇಕಾದ ಬಂದೂಕು, ಮದ್ದುಗುಂಡು, ಪಿಸ್ತೂಲು ಮುಂತಾದ ಶಸ್ತ್ರಾಸ್ತ್ರಗಳನ್ನು ಸುಳಿವು ಸಿಗದಂತೆ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಅವಶ್ಯಕವಾದ ಎಚ್ಚರಿಕೆ, ಸಂಯಮ, ಯೋಜನಾಶೀಲತೆ ಮುಂತಾದುವನ್ನು ಅರಿತಿದ್ದರು. ಸ್ವಾತಂತ್ರ್ಯ ಆಂದೋಲನದಲ್ಲಿ ತಾವು ಗಳಿಸಿದ್ದ ಅನುಭವಗಳಿಂದಾಗಿ ಅವರಿಗೆ ಈ ದೇಶದ ಸಮಸ್ತ ಜನರನ್ನೂ ಒಗ್ಗೂಡಿಸಲು ಪ್ರತ್ಯೇಕ ಸಂಘಟನೆಯೊಂದರ ಅಗತ್ಯ ಕಂಡುಬಂದಿದ್ದರಿಂದಾಗಿ ಡಾ.ಹೆಡಗೇವಾರ್ 1925 ರಲ್ಲಿ ಆರೆಸ್ಸೆಸ್ನ್ನು ಸ್ಥಾಪಿಸಿದರು. ಪ್ರತ್ಯೇಕತಾವಾದಿಗಳನ್ನು ಮತ್ತು ಅವರನ್ನು ಕೆರಳಿಸುತ್ತಿದ್ದ ಇಂಗ್ಲಿಷರನ್ನು ಯಶಸ್ವಿಯಾಗಿ ಎದುರಿಸಲು ಇಲ್ಲಿನ ನಿಜವಾದ ರಾಷ್ಟ್ರೀಯ ಸಮಾಜ ಅಥವಾ ಹಿಂದುಸಮಾಜವನ್ನು ಸಂಘಟಿಸುವುದೇ ಸರಿಯಾದ ಮಾರ್ಗ ಎಂಬುದು ಅವರ ಖಚಿತ ನಿರ್ಧಾರವಾಗಿತ್ತು.
ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಬಾಲಗಂಗಾಧರ ತಿಲಕ್, ನೇತಾಜಿ ಸುಭಾಷ್ಚಂದ್ರ ಬೋಸ್ ಅವರೆಲ್ಲರ ನಿಕಟ ಸಂಪರ್ಕವೂ ಹೆಡಗೇವಾರ್ ಅವರಿಗಿತ್ತು. 1928 ರಲ್ಲಿ ಕಲ್ಕತ್ತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ನೇತಾಜಿಯವರನ್ನು ಹೆಡಗೇವಾರ್ ಭೇಟಿಮಾಡಿದ್ದರು. ಹೆಡಗೇವಾರ್ರವರ ಹಿಂದು ಸಂಘಟನೆಯ ಕಲ್ಪನೆ ನೇತಾಜಿಯವರಿಗೆ ಮೆಚ್ಚುಗೆಯೂ ಆಗಿತ್ತು. ಹೆಡಗೇವಾರ್ ಮೃತ್ಯುವಿನ ಹಿಂದಿನ ದಿನ ತಾನೇ ಹುತಾತ್ಮ ಭಗತ್ಸಿಂಗ್ ಅವರನ್ನು ಭೇಟಿಯಾಗಿದ್ದ. ಅವನ ಸಹಕಾರಿ ರಾಜಗುರು ಒಮ್ಮೆ ಅಜ್ಞಾತವಾಸದಲ್ಲಿರಬೇಕಾದಾಗ ಹೆಡಗೇವಾರ್ ಅವರೇ ಹೊಣೆಹೊತ್ತು ಉಮರೇಡಿನ ಬೈಯ್ಯಾಜಿ ದಾಣಿಯವರ ಮನೆಯಲ್ಲಿ ವ್ಯವಸ್ಥೆ ಮಾಡಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಇತರ ದೇಶಭಕ್ತರ ಬಗ್ಗೆ ಹೆಡಗೇವಾರ್ ಅವರಿಗಿದ್ದ ಆಸ್ಥೆ ಎಂತಹದೆಂಬುದಕ್ಕೆ ಈ ಪ್ರಸಂಗಗಳೇ ಸಾಕ್ಷಿ.
ಇವೆಲ್ಲ ಇತಿಹಾಸದಲ್ಲಿ ದಾಖಲಾಗಿರುವ ಸತ್ಯಸಂಗತಿಗಳು. ಈಗಿನ ಕಾಂಗ್ರೆಸ್ ನಾಯಕರಿಗೆ ಮಾತ್ರ ಇಂತಹ ಸತ್ಯಸಂಗತಿಗಳ ಉಸಾಬರಿ ಬೇಕಿಲ್ಲ. ತಿರುಚಿದ ಇತಿಹಾಸದ ಸಂಗತಿಗಳನ್ನೇ ಮತ್ತೆ ಮತ್ತೆ ಒದರಿ ಯುವಜನಾಂಗವನ್ನು ದಾರಿತಪ್ಪಿಸುವ ಹುನ್ನಾರ ಮಾಡುತ್ತಿರುವುದು ವಿಷಾದಕರ. ದೇಶದ ಸ್ವಾತಂತ್ರ್ಯ ಪ್ರಾಪ್ತಿಗೆ ಕಾಂಗ್ರೆಸ್ ಮಾತ್ರ ಹಕ್ಕುದಾರ ಎನ್ನುವುದು ಎಂತಹ ಹಾಸ್ಯಾಸ್ಪದ ಹಾಗೂ ಬಾಲಿಶ ಸಂಗತಿ !
ದೇಶದಲ್ಲಿ ಕಲ್ಲಿದ್ದಲು ಹಗರಣ, 2ಜಿ ತರಂಗಾಂತರ ಹಗರಣ, ಕಾಮನ್ವೆಲ್ತ್ ಕ್ರೀಡೆ ಹಗರಣ… ಇತ್ಯಾದಿ ಬಹಳಷ್ಟು ಬಹುಕೋಟಿ ಮೊತ್ತದ ಹಗರಣಗಳು ನಡೆದಿದ್ದು ಇದೇ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ. ಕಾಂಗ್ರೆಸ್ ಸಚಿವರೇ ಈ ಹಗರಣಗಳ ಮುಖ್ಯ ರೂವಾರಿಯಾಗಿದ್ದರು. ಆದರೆ ಆಗ ಪ್ರಧಾನಿಯಾಗಿದ್ದ ಡಾ| ಮನಮೋಹನಸಿಂಗ್ ಮಾತ್ರ ಮೌನವಾಗಿದ್ದರು. ಹಗರಣಗಳ ಕೆಸರು ಅವರ ಮೈಗೆ ಅಂಟಲೇ ಇಲ್ಲ ! ಅದಕ್ಕೇ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ’ಅನೇಕ ಹಗರಣಗಳು ನಡೆದವು. ಆದರೆ ರಾಜಕಾರಣಿಗಳಾದ ನಾವು ಡಾ. ಸಾಹಬ್ ಅವರಿಂದ ಕಲಿಯಬೇಕು. ರೇನ್ಕೋಟ್ ಹಾಕಿಕೊಂಡು ಬಚ್ಚಲು ಕೋಣೆಯಲ್ಲಿ ಸ್ನಾನಮಾಡುವ ಕಲೆ ಡಾಕ್ಟರ್ ಸಾಹಬ್ ಅವರಿಗೆ ಮಾತ್ರ ಗೊತ್ತು. ಎಲ್ಲ ಹಗರಣಗಳ ಹೊರತಾಗಿಯೂ ಅವರೊಬ್ಬರ ಮೇಲಷ್ಟೇ ಯಾವುದೇ ಹಗರಣಗಳ ಕಲೆಗಳಿಲ್ಲ’ ಎಂದು ಛೇಡಿಸಿದ್ದು ! ಮೋದಿಯವರ ಇಂತಹ ಛೇಡನೆಗೆ ಕಾಂಗ್ರೆಸ್, ಟಿಎಂಸಿ, ಎಡರಂಗ ತೀವ್ರ ವಿರೋಧ ವ್ಯಕ್ತಪಡಿಸಿ, ’ಪ್ರಧಾನಿಗಳಿಂದ ನಾವು ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. ಹಿಂದಿನ ಯಾವ ಪ್ರಧಾನಿಯೂ ಈ ಥರದ ಟೀಕೆಮಾಡಿಲ್ಲ’ ಎಂದು ಗದ್ದಲ ಎಬ್ಬಿಸಿದ್ದರು. ಆದರೆ ನೋಟು ಅಪನಗದೀಕರಣ ನೀತಿ ಜಾರಿಗೆ ತಂದಾಗ ಇದೇ ಮನಮೋಹನ್ ಸಿಂಗ್ ’ಇದೊಂದು ಸಂಘಟಿತ ಲೂಟಿ ಹಾಗೂ ಕಾನೂನಾತ್ಮಕ ಸುಲಿಗೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದನ್ನು ಕಾಂಗ್ರೆಸ್ಸಿಗರು ಮರೆತೇಬಿಟ್ಟಿದ್ದಾರೆ. ನೋಟು ಅಮಾನ್ಯೀಕರಣವಾದರೆ ಅದು ಸಂಘಟಿತ ಲೂಟಿ ಆಗುವುದು ಹೇಗೆ? ಅದು ಕಾನೂನಾತ್ಮಕ ಸುಲಿಗೆ ಎಂಬ ಡಾ.ಸಿಂಗ್ರಂತಹ ಅರ್ಥಶಾಸ್ತ್ರಜ್ಞರ ಮಾತಿಗೆ ಅರ್ಥವಿದೆಯೆ? ನೋಟುರದ್ದತಿ ಕ್ರಮ ಯಾವುದೇ ರಾಜಕೀಯ ಪಕ್ಷದ ವಿರುದ್ಧವಾಗಿರಲಿಲ್ಲ ಅಥವಾ ಯಾವುದೇ ರಾಜಕೀಯ ಉದ್ದೇಶ ಇದರ ಹಿಂದಿರಲಿಲ್ಲ. ದೇಶಕ್ಕೆ ದೇಶವೇ ಕೇಂದ್ರಸರ್ಕಾರದ ಅಪನಗದೀಕರಣವನ್ನು ಒಪ್ಪಿಕೊಂಡಿದ್ದರೂ ಕಾಂಗ್ರೆಸ್ಪಕ್ಷದ ಕೆಲವು ಹತಾಶ ಮನಸ್ಸುಗಳು ಈಗಲೂ ಅದನ್ನೇ ಬಡಬಡಿಸುತ್ತಿರುವುದೇಕೆ?
ಮೂಲಭೂತ ಸೌಕರ್ಯಗಳು ಜನರ ಬಳಿಗೆ ಇನ್ನೂ ತಲುಪಿಲ್ಲ ಎಂಬ ಕಾಂಗ್ರೆಸ್ ನಾಯಕರ ಟೀಕೆಗೂ ಮೋದಿ ಸಮರ್ಥ ಉತ್ತರವನ್ನೇ ಲೋಕಸಭೆಯಲ್ಲಿ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಅತಿಹೆಚ್ಚು ಕಾಲ ದೇಶವನ್ನಾಳಿದ್ದು ಇದೇ ಕಾಂಗ್ರೆಸ್ಪಕ್ಷ. ಮೂಲಭೂತ ಸೌಕರ್ಯಗಳನ್ನು ಕೃತಿರೂಪಕ್ಕಿಳಿಸಲು ಇಷ್ಟು ದೀರ್ಘಾವಧಿಯ ಆಡಳಿತವಿದ್ದರೂ ಕಾಂಗ್ರೆಸ್ಗೇಕೆ ಸಾಧ್ಯವಾಗಿಲ್ಲ? ಅಧಿಕಾರವಿದ್ದಾಗ ಅವರೇನು ಮಾಡುತ್ತಿದ್ದರು? ಸ್ವಂತದ ಹಿತಚಿಂತನೆ ಬಿಟ್ಟು ಬೇರೆ ಆಸಕ್ತಿಗಳೇ ಅವರಿಗಿರಲಿಲ್ಲವೆ? ಜನಮನವನ್ನು ಕಾಡುತ್ತಿರುವ ಇಂತಹ ಪ್ರಶ್ನೆಗಳನ್ನೇ ಮೋದಿ ಕಾಂಗ್ರೆಸ್ ನಾಯಕರಿಗೆ ಕೇಳಿರುವುದರಲ್ಲಿ ತಪ್ಪೇನಿದೆ ?
ಮೊನ್ನೆ ಮಂಡಿಸಲಾದ ಕೇಂದ್ರ ಬಜೆಟ್ನಲ್ಲಿ ಯಾವುದೇ ರಾಜಕೀಯಪಕ್ಷ 2 ಸಾವಿರಕ್ಕಿಂತ ಹೆಚ್ಚಿನ ನಗದನ್ನು ದೇಣಿಗೆಯಾಗಿ ಪಡೆಯುವಂತಿಲ್ಲ. ಹೆಚ್ಚಿನ ಮೊತ್ತವನ್ನು ಚೆಕ್, ಡಿಡಿ ಮೂಲಕವೇ ಪಡೆಯಬೇಕೆಂದು ಹೇಳಲಾಗಿದೆ. ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕಲು ಇದೊಂದು ಉತ್ತಮಕ್ರಮವಲ್ಲವೆ? ಇಂತಹದೊಂದು ಕ್ರಮ ಬಿಜೆಪಿ ಪಾಲಿಗೂ ಕಹಿಯಾಗಬಹುದು. ಆದರೆ ಚುನಾವಣೆ ಪಾರದರ್ಶಕ ಹಾಗೂ ನ್ಯಾಯಯುತವಾಗಿ ನಡೆಯುವಂತಾಗಲು ಈ ಕ್ರಮ ಸ್ವಾಗತಾರ್ಹ. ಕಾಂಗ್ರೆಸ್ಗೆ ಈ ಕ್ರಮ ಕಹಿಯಾಗಿರಲೂಬಹುದು! ಯಾರಿಗೆ ಗೊತ್ತು?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.