ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯವು ದೇಶಕ್ಕೆ ಗಣನೀಯ ಸಂಖ್ಯೆಯ ಬುದ್ಧಿವಂತರನ್ನು ನೀಡಿರುವ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯ ನಡೆಸಿದ ಪಬ್ಲಿಕ್ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದ ಅಂಕ ಪಟ್ಟಿಯ ತಯಾರಿಯ ಬಗ್ಗೆ ಕಳೆದ 1 ವರ್ಷದಿಂದ ಅನೇಕರು ಸಂಶಯ ಪಡುವ ಸನ್ನಿವೇಶ ನಿರ್ಮಾಣಗೊಂಡಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. 2015-16 ಮತ್ತು 2016-17 ರಲ್ಲಿ ಪರೀಕ್ಷೆಗೆ ಕುಳಿತ ಅನೇಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಗೊಂದಲಗಳು ನಿರ್ಮಾಣವಾಗಿ ಸರಿಯಾದ ಫಲಿತಾಂಶ ಪ್ರಕಟವಾಗದಿರುವುದು, ಪರೀಕ್ಷೆಯ ಅಂಕಪಟ್ಟಿ ಒಂದು ವರ್ಷ ಕಳೆದರೂ ಸಿಗದಿರುವುದು ಮತ್ತು ಅದರ ಪರಿಣಾಮವಾಗಿ ಉದ್ಯೋಗ ಗಳಿಸಿಕೊಳ್ಳುವ ಹಾಗೂ ಉನ್ನತ ಶಿಕ್ಷಣಕ್ಕೆ ಸೇರುವಲ್ಲಿ ವಂಚಿತರಾಗಿರುವ ಅನೇಕ ಉದಾಹರಣೆಗಳು ಕಳೆದ ಒಂದೂವರೆ ವರ್ಷದಲ್ಲಿ ನಡೆದಿರುವುದು ಖೇದಕರವಾಗಿದೆ. ಈ ಎಲ್ಲಾ ಪ್ರಕರಣಗಳಿಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಹಾಗೂ ಪರೀಕ್ಷಾಂಗ ಕುಲಸಚಿವರುಗಳೆ ನೇರವಾಗಿ ಹೊಣೆಗಾರರಾಗಿದ್ದಾರೆಂಬುವುದು ಅತ್ಯಂತ ಸ್ಪಷ್ಟವಾಗಿದ್ದುಇಡೀ ಪ್ರಕರಣ ನಾಚಿಕೆಗೇಡಿನ ಸಂಗತಿಯಾಗಿದೆ.
ಈಗಾಗಲೇ ಪ್ರತಿಯೊಬ್ಬ ವಿದ್ಯಾರ್ಥಿಯ ಫಲಿತಾಂಶ ಪ್ರಕಟಿಸಲು ವಿಶ್ವವಿದ್ಯಾಲಯವು ಹೊರಗುತ್ತಿಗೆ ಸಂಸ್ಥೆಗೆ ರೂ.120/- ಹಣವನ್ನು ವಿನಿಯೋಗಿಸುತ್ತಿದೆ. ಈ ಹಿಂದೆ ರೂ.60/- ಹಣವನ್ನು ಖರ್ಚು ಮಾಡಿ ಒಳ್ಳೆಯ ಫಲಿತಾಂಶವನ್ನು ಸರಿಯಾದ ಸಮಯಕ್ಕೆ ನೀಡುತ್ತಿತ್ತು.
ಇದೀಗ ಅದರ ದುಪ್ಪಟ್ಟು ಹಣವನ್ನು ನೀಡಲಾಗುತ್ತಿದ್ದರೂ ಪರೀಕ್ಷಾ ಫಲಿತಾಂಶ ಗೊಂದಲದ ಗೂಡಾಗಿದೆ. ಹಾಗೆ ದುಪ್ಪಟ್ಟು ಹಣ ನೀಡಿ ಹೊರಗುತ್ತಿಗೆ ಸಂಸ್ಥೆಯನ್ನು ಬದಲಾಯಿಸಿದ್ದರ ಉದ್ದೇಶವೂ ಸಂಶಯಾಸ್ಪದವಾಗಿದೆ ಮತ್ತು ಇದು ಯಾರ ಲಾಭಕ್ಕಾಗಿ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ? ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸುಮಾರು 210 ಅಂಗೀಕೃತ ಕಾಲೇಜುಗಳಿದ್ದು ಇದರಲ್ಲಿ 85000 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೋಸ್ಕರ ವಿಶ್ವವಿದ್ಯಾಲಯವು ಸುಮಾರು 1,02,000 ಹಣವನ್ನು ಪ್ರತಿ ಸೆಮಿಸ್ಟರ್ನಲ್ಲಿ ಹೊರಗುತ್ತಿಗೆ ಸಂಸ್ಥೆಗೆ ನೀಡುತ್ತಿದೆ. ಆದರೂ ಪರೀಕ್ಷಾ ಫಲಿತಾಂಶದಲ್ಲಿ ಗೊಂದಲಗಳು ಉಂಟಾಗಿ ಕೆಲವರ ಫಲಿತಾಂಶ ಪ್ರಕಟವಾಗದೆ ಅಂಕಪಟ್ಟಿ ಸಿಗದಿರುವ ಉದಾಹರಣೆಗಳಿವೆ. ಇದನ್ನು ಅಭಾವಿಪ ಮಂಗಳೂರು ಶಾಖೆ ಬಲವಾಗಿ ಖಂಡಿಸುತ್ತದೆ.
ಮಂಗಳೂರು ವಿಶ್ವವಿದ್ಯಾಲಯವು ಪ್ರತಿ ವಿದ್ಯಾರ್ಥಿಯಿಂದ ಪರೀಕ್ಷಾ ಶುಲ್ಕ, ಆನ್ಲೈನ್ ಶುಲ್ಕ, ಅಂಕಪಟ್ಟಿ ಶುಲ್ಕ, ಅರ್ಜಿ ಶುಲ್ಕ ಹೀಗೆ ಒಬ್ಬ ವಿದ್ಯಾರ್ಥಿಯ ಪರೀಕ್ಷೆ ನಡೆಸಲು ಸಾವಿರಾರು ರೂ. ಶುಲ್ಕ ವಸೂಲು ಮಾಡುವ ಅವಶ್ಯಕತೆ ಇದೆಯಾ? ಇಂದು ವಿದ್ಯಾರ್ಥಿಗಳಿಂದ ಖಾಸಗಿ ಕಾಲೇಜುಗಳಿಗಿಂತಲೂ ಹೆಚ್ಚಿನ ಹಣವನ್ನು ವಿಶ್ವವಿದ್ಯಾಲಯವು ವಸೂಲು ಮಾಡುತ್ತಿದೆ. ಇದರಿಂದ ವಿಶ್ವವಿದ್ಯಾಲಯವು ವ್ಯಾಪಕ ಭ್ರಷ್ಟಾಚಾರ ತೊಡಗಿದೆ ಎಂಬ ಅನುಮಾನವು ಯಾರಿಗಾದರೂ ಮೂಡುತ್ತದೆ. ಈಗಾಗಲೇ ರಾಜ್ಯ ಉನ್ನತ ಶಿಕ್ಷಣ ಸಚಿವರು ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ ಮಾತಿಗೆ ಮಂಗಳೂರು ವಿಶ್ವವಿದ್ಯಾಲಯವೂ ಪುಷ್ಠಿ ಕೊಟ್ಟಂತೆಕಾಣಿಸುತ್ತಿದೆ.
ವಿಶ್ವವಿದ್ಯಾಲಯ ಪರೀಕ್ಷಾ ಫಲಿತಾಂಶ ಪ್ರಕಟಣೆ ಹಾಗೂ ಅಂಕ ಪಟ್ಟಿಗಳ ತಯಾರಿಕೆ ಕುರಿತಂತೆ ಇಷ್ಟೊಂದು ದೋಷಗಳು ಕಾಣಬರುತ್ತಿದ್ದರೂ, ಈ ಕುರಿತು ಸ್ಪಷ್ಟ ಸಾಕ್ಷಾಧಾರಗಳಿದ್ದರೂ ವಿ.ವಿ.ಯ ಕುಲಪತಿಗಳು ಹಾಗೂ ಪರೀಕ್ಷಾಂಗ ಕುಲಸಚಿವರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿ ಸಂಘವೊಂದರಿಂದ ಗೊಂದಲ ರಹಿತ ಫಲಿತಾಂಶಕ್ಕಾಗಿ ಅಭಿನಂದನೆ ಸ್ವೀಕರಿಸ ಹೊರಟಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ.
ಈ ಹಿನ್ನಲೆಯಲ್ಲಿ ಮಂಗಳೂರು ವಿ.ವಿಯ ಈ ಎರಡು ವರ್ಷಗಳಲ್ಲಿ ನಡೆಸಿದ ಪರೀಕ್ಷಾ ಪ್ರಕ್ರಿಯೆ, ಸಂಗ್ರಹಿಸಿದ ಮಿತಿಮೀರಿದ ಶುಲ್ಕ, ಹೊರಗುತ್ತಿಗೆ ಸಂಸ್ಥೆಯನ್ನು ಬದಲಿಸಿ ದುಪ್ಪಟ್ಟು ಶುಲ್ಕ ನೀಡಿದ್ದುದು, ಕಳೆದ ಸಾಲಿನಲ್ಲಿ ಸಾವಿರಗಟ್ಟಲೆ ಅಂಕಪಟ್ಟಿಯನ್ನು ದೋಷಪೂರಿತಗೊಳಿಸಿ ಮತ್ತು ಹಿಂಪಡೆದಿದ್ದು, ಈ ಬಾರಿ ಫಲಿತಾಂಶ ಪ್ರಕಟಿಸಿ ಅದನ್ನು 24 ಗಂಟೆಗಳಲ್ಲಿ ಹಿಂಪಡೆದಿದ್ದು, ಪುನ: ಈ ಬಾರಿಯೂ ನೂರಾರು ದೋಷಪೂರಿತ ಫಲಿತಾಂಶ ಪ್ರಕಟಿಸಿದ್ದುದು, ಇಲ್ಲವೇ ತಪ್ಪು ಅಂಕಪಟ್ಟಿ ನೀಡಿದ್ದು ಎಲ್ಲಾ ಅಂಶಗಳ ಬಗ್ಗೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರವು ಉನ್ನತ ಮಟ್ಟದ ತನಿಖೆಯನ್ನು ಕಾಲಮಿತಿ ನಿಗದಿಸಿ ನಡೆಸಲು ಅಭಾವಿಪವು ಆಗ್ರಹಿಸುತ್ತದೆ.
ಅಭಾವಿಪವು ಈ ಪ್ರತಿ ಸಂದರ್ಭದಲ್ಲಿಯೂ ವಿಶ್ವವಿದ್ಯಾಲಯಕ್ಕೆ ಸಲಹೆ ಸೂಚನೆಯನ್ನು ನೀಡುತ್ತಾ, ಎಚ್ಚರಿಸುತ್ತಾ, ಪ್ರತಿಭಟಿಸುತ್ತಾ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿತು. ಆದರೆ ವಿಶ್ವವಿದ್ಯಾಲಯವು ದಿನಾಂಕ 18-1-2017 ರಂದು ಮತ್ತೆ ತಪ್ಪು ಫಲಿತಾಂಶವನ್ನು ಪ್ರಕಟಿಸಿ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಪೇಚಿಗೆ ಸಿಲುಕಿಸಿತು. ಆದ್ದರಿಂದ ಈ ಗೊಂದಲಗಳಿಗೆ ಇತಿಶ್ರೀ ನೀಡಲೇಬೇಕೆಂದು ಇದಕ್ಕೆ ಕಾರಣಭೂತರಾದ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಹಾಗೂ ಪರೀಕ್ಷಾಂಗ ಕುಲಸಚಿವರ ರಾಜೀನಾಮೆಗೆ ಆಗ್ರಹಿಸಿ ದಿನಾಂಕ 11-2-2017 ರಿಂದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ದ.ಕ, ಉಡುಪಿ ಹಾಗೂ ಕೊಡಗು ಜಿಲ್ಲೆಯಾದ್ಯಂತವಿರುವ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಂದ ಬೃಹತ್ ಹೋರಾಟಗಳು ನಡೆಯಲಿವೆ. ನಂತರ ಸಹಿ ಸಂಗ್ರಹ ಅಭಿಯಾನ, ವಿಶ್ವವಿದ್ಯಾಲಯ ಚಲೋ ಹಾಗೂ ಸರ್ವಕಾಲೇಜ್ ಬಂದ್ ಚಳುವಳಿಯನ್ನು ನಡೆಸಲಾಗುತ್ತದೆ. ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾಲಯದ ಹಾಲಿ ಹಾಗೂ ಮಾಜಿ ಸೆನೆಟ್, ಸಿಂಡಿಕೇಟ್ ಸದಸ್ಯರು, ಶಿಕ್ಷಣ ತಜ್ಞರು, ಕಾಲೇಜು ಆಡಳಿತ ಮಂಡಳಿಗಳು ಹಾಗೂ ಶಿಕ್ಷಣ ಪ್ರೇಮಿಗಳು ನಮ್ಮ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಅಭಾವಿಪ ಮಂಗಳೂರು ವಿಭಾಗ ಕಾರ್ಯಾಲಯ ಕಾರ್ಯದರ್ಶಿ ಶೀತಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.