`ನಿಮ್ಮಲ್ಲಿನ ಸ್ವಾಭಿಮಾನ, ಆತ್ಮಗೌರವ ಬಡಿದೆಬ್ಬಿಸಿ’: ಬ್ರಿಗೇಡಿಯರ್ ಐ.ಎನ್.ರೈ
ಮೂಡುಬಿದಿರೆ : ಪುತ್ತಿಗೆಯ ವಿಶಾಲ ಬಯಲು ರಂಗಮಂದಿರದಲ್ಲಿ ನೆರೆದ ಬೃಹತ್ ವಿದ್ಯಾರ್ಥಿ ಸಮೂಹ…. ಸೇರಿದ್ದ ವಿದ್ಯಾರ್ಥಿಗಳ ಕಂಠದಿಂದ ಹೊರಹೊಮ್ಮುತ್ತಿದ್ದ ‘ವಂದೇ ಮಾತರಂ’ ನಿನಾದ….ಸಾಗರೋಪಾದಿಯಲ್ಲಿ ಹಾರಾಡಿದ ತ್ರಿವರ್ಣ ಧ್ವಜಗಳು…..ಇದೆಲ್ಲಕ್ಕೂ ಕಲಶವಿಟ್ಟಂತಿದ್ದ ಎನ್ಸಿಸಿಯ ಶಿಸ್ತುಬದ್ಧ ಕೆಡೆಟ್ಗಳು…..
ಇದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ 68ನೇ ಗಣರಾಜ್ಯೋತ್ಸವದ ಝಲಕ್. ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಆಳ್ವಾಸ್ನ ವಿದ್ಯಾರ್ಥಿಗಳು ಸೇರಿದಂತೆ 30,000 ಜನ ಸಾಕ್ಷಿಯಾದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತ ಸೇನೆಯ ಬ್ರಿಗೇಡಿಯರ್ ಐ.ಎನ್.ರೈ ಪಾಲ್ಗೊಂಡಿದ್ದರು. ಇಂತಹ ಬೃಹತ್ ವಿದ್ಯಾರ್ಥಿ ಸಮೂಹದೊಂದಿಗೆ ಒಂದು ಶಿಕ್ಷಣ ಸಂಸ್ಥೆ ಗಣರಾಜ್ಯೋತ್ಸವವನ್ನು ಇಷ್ಟು ಅದ್ಭುತವಾಗಿ ಆಚರಿಸುವುದು ಅಪರೂಪ ಎಂದ ಅವರು ನೆರೆದಿದ್ದ ವಿದ್ಯಾರ್ಥಿಗಳಿಗೆ ಸದೃಢ ದೇಶ ಕಟ್ಟಬೇಕಾದ ಅವಶ್ಯಕತೆಯ ಬಗ್ಗೆ ತಿಳಿಸಿದರು. `ನಮ್ಮ ದೇಶ ಬಡರಾಷ್ಟ್ರ ಎನಿಸಿಕೊಳ್ಳುತ್ತಿದೆಯೆಂದರೆ ಅದಕ್ಕೆ ಕಾರಣ ಸಂಪತ್ತಿನ ಕೊರತೆಯಲ್ಲ; ಬದಲಿಗೆ ನಮ್ಮಲ್ಲಿ ಕಡಿಮೆಯಾಗುತ್ತಿರುವ ಧನಾತ್ಮಕ ಚಿಂತನೆಗಳು, ಕುಗ್ಗುತ್ತಿರುವ ಸ್ವಾಭಿಮಾನ. ಇಂದಿನ ಯುವಶಕ್ತಿಯೇ ನಮ್ಮ ದೇಶದ ಶಕ್ತಿ, ಆಸ್ತಿ. ಭಾರತದ ಉಜ್ವಲ ಭವಿಷ್ಯ ಇಂದಿನ ಯುವಶಕ್ತಿಯ ಕೈಯಲ್ಲಿದೆ. ನಿಮ್ಮಲ್ಲಿರುವ ಸ್ವಾಭಿಮಾನ, ಆತ್ಮಗೌರವವನ್ನು ಬಡಿದೆಬ್ಬಿಸಿ. ಇದರಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ’ ಎಂದರು.
ಕಾರ್ಯಕ್ರಮದ ಗೌರವ ಉಪಸ್ಥಿತಿ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, 70 ವರ್ಷಗಳ ಹಿಂದೆ ಬಡತನ, ಅನಕ್ಷರತೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಿ ನಮ್ಮ ದೇಶ ಹೈರಾಣಾಗುತ್ತಿದ್ದ ಸನ್ನಿವೇಶವಿತ್ತು. ಆದರೆ ಇಂದು ಭಾರತ ಎಲ್ಲವನ್ನೂ ಮೆಟ್ಟಿ ನಿಲ್ಲುವ ತಾಕತ್ತು ಹೊಂದುತ್ತಿದೆ. ಜಾಗತಿಕ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುತ್ತಿದೆ. ಇದು ಇಂದಿನ ಯುವಶಕ್ತಿಗೆ ಧನಾತ್ಮಕ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ ಎಂದರು.
ನಮ್ಮ ದೇಶವನ್ನು ಕಾಯುತ್ತಿರುವ ಸೈನಿಕರಂತೆ ನಮ್ಮ ಯುವಜನತೆಯೂ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಅವರಲ್ಲಿರುವ ಅದಮ್ಯ ಉತ್ಸಾಹ, ಚೇತನಗಳು ವಿದ್ಯಾರ್ಥಿಗಳಲ್ಲೂ ಮೂಡಬೇಕು. `ಇದು ನನ್ನ ಕೆಲಸವಲ್ಲ’ ಎಂದು ಬೇಜವಾಬ್ದಾರಿತನ ತೋರಿಸುವ ಬದಲು ದೇಶದ ಒಳಿತು, ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಆಗ ಮಾತ್ರ ಸುಂದರ ಭಾರತವನ್ನು ಕಟ್ಟಲು ಸಾಧ್ಯ ಎಂದು ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ, ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಶೇಷತೆಗಳು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಯೋಜನೆಗೊಂಡ ಗಣರಾಜ್ಯೋತ್ಸವ ಕಾರ್ಯಕ್ರಮ ಈ ಬಾರಿಯೂ ಹಲವು ವಿಶೇಷತೆಗಳನ್ನು ಹೊಂದಿತ್ತು. ಭಾರತ ಸೇನೆಯ ಸೇವೆಯಿಂದ ನಿವೃತ್ತರಾದ 250ಕ್ಕೂ ಹೆಚ್ಚು ಎಕ್ಸ್ಸರ್ವೀಸ್ಮೆನ್ ಹಾಗೂ ಅವರ ಕುಟುಂಬಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವಿವಿಧ ವಿದ್ಯಾಸಂಸ್ಥೆಗಳ 18 ಎನ್ಸಿಸಿ ತಂಡಗಳು ಆಕರ್ಷಕ ಪಥಸಂಚಲನ ನಡೆಸಿಕೊಟ್ಟವು. 4000ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಟಿ-ಶರ್ಟ್ಗಳನ್ನು ಹಾಕಿ ಗಮನಸೆಳೆದರು. ಇದರ ಜೊತೆಗೆ 100 ತ್ರಿವರ್ಣದ ಕೊಡೆಗಳು ಹಾಗೂ ತ್ರಿವರ್ಣ ಧ್ವಜಗಳು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದ್ದವು. ವಿದ್ಯಾರ್ಥಿ ಸಮೂಹದ ನಡುವೆ ತ್ರಿವರ್ಣ ಉಡುಗೆ ತೊಟ್ಟ ವಿದ್ಯಾರ್ಥಿಗಳು `ಇಂಡಿಯಾ’ ಬರಹದಲ್ಲಿ ನಿಂತಿದ್ದು ಆಕರ್ಷಕವೆನಿಸಿತ್ತು. ಗಾಯಕ ರಮೇಶ್ಚಂದ್ರ ಹಾಗೂ ಅವರ ತಂಡ ಕಾರ್ಯಕ್ರಮದಲ್ಲಿ ಸಂಗೀತ ನಿರ್ವಹಣೆ ನೀಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.