ಮೂಡುದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆಯು ನಡೆಸುವರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ’ಆಳ್ವಾಸ್ ವಿರಾಸತ್’ಗೆಇದು೨೩ರ ಹರೆಯ. ’ಆಳ್ವಾಸ್ ವಿರಾಸತ್ 2017’ ಜನವರಿ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿದೆ. ದಿನಂಪ್ರತಿ ಮುಸ್ಸಂಜೆ ಪ್ರಾರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ಅವಧಿಗಳದ್ದಾಗಿದ್ದು ಮೊದಲ ಅವಧಿಯಲ್ಲಿ ವೈವಿಧ್ಯಪೂರ್ಣ ಸಂಗೀತವೂ ಎರಡನೇ ಅವಧಿಯಲ್ಲಿ ವಿವಿಧ ನೃತ್ಯಪ್ರಕಾರಗಳು ಇಲ್ಲಿ ಮೇಳೈಸಲಿವೆ.
ಆಳ್ವಾಸ್ ವಿರಾಸತ್ ಉತ್ಸವಕ್ಕೆ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ
ಮೂಡುಬಿದಿರೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಈ ವರ್ಷದ ಆಳ್ವಾಸ್ ವಿರಾಸತ್ ರಂಗೇರಲಿದೆ. 150 ಅಡಿ ಉದ್ದ 60 ಅಡಿ ಅಗಲದ ಈ ಬೃಹತ್ ವೇದಿಕೆಯು 80 ರಿಂದ 100 ಕಲಾವಿದರಿರುವ ತಂಡದ ಪ್ರದರ್ಶನಕ್ಕೆ ಹೇಳಿಮಾಡಿಸಿದಂತಿದೆ. ಮಾತ್ರವಲ್ಲ ಇದೊಂದು ಬಯಲುರಂಗ ವೇದಿಕೆಯಾಗಿದ್ದು, ಇದರ ಮೂರು ಭಾಗಗಳೂ ಸಂಪೂರ್ಣ ತೆರೆದುಕೊಂಡಿದ್ದು ವೇದಿಕೆಯಲ್ಲಿರುವ ಕಲಾವಿದರಿಗೂ ಎದುರಿಗಿರುವ 40,000 ಪ್ರೇಕ್ಷಕರಿಗೂ ಅನುಸಂಧಾನ ನಡೆಸುವುದಕ್ಕೆ ಅನುಕೂಲವಾಗಿದೆ.
ಮೊದಲ ದಿನ ಮಾತ್ರ ಸಭಾಕಾರ್ಯಕ್ರಮ.
ಆಳ್ವಾಸ್ ವಿರಾಸತ್ 2017 ರ ಪ್ರಥಮ ದಿನ 13-01-2017 ರ ಶುಕ್ರವಾರದಂದು ಮಾತ್ರ ಸಭಾಕಾರ್ಯಕ್ರಮವಿದ್ದು ಉಳಿದ ಎರಡು ದಿನಗಳು ಯಾವುದೇ ಸಭಾಕಾರ್ಯಕ್ರಮಗಳಿರುವುದಿಲ್ಲ.
ಕಾರ್ಯಕ್ರಮದ ಮೊದಲ ದಿನ ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಸಭಾಕಾರ್ಯಕ್ರಮವು ತೆರೆದುಕೊಳ್ಳುತ್ತಿದ್ದು, ಸಂಜೆ 5.30 ರಿಂದ 6.45 ೫ರವರೆಗೆ ಕೇವಲ 1.15 ಗಂಟೆಗೆ ಸೀಮಿತವಾಗಿದೆ. ’ಆಳ್ವಾಸ್ ವಿರಾಸತ್ 2017’ನ್ನು ದೀಪ ಬೆಳಗಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿರುವರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ, ಪರಿಸರ ಮತ್ತು ವನ್ಯಜೀವಿ ಇಲಾಖಾ ಸಚಿವರಾದ ಶ್ರೀ ಬಿ.ರಮಾನಾಥರೈಯವರು ವಹಿಸಿಕೊಳ್ಳಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ಡಾ.ಕೆ.ಜಗದೀಶ್, ಜಿಲ್ಲಾಧಿಕಾರಿಗಳು, ದ.ಕ.ಜಿಲ್ಲೆ, ಅಲ್ಲದೆಸಂಸದರು, ಅಧಿಕಾರಿಗಳು, ಗಣ್ಯಮಾನ್ಯರಗೌರವ ಉಪಸ್ಥಿತಿಯ ಮೂಲಕ ಈ ಸಭಾಕಾರ್ಯಕ್ರಮವು ನಡೆಯಲಿದೆ. ’ಆಳ್ವಾಸ್ ವಿರಾಸತ್ 2017’ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು.
ಪದ್ಮಭೂಷಣ ವಿ.ಪಿ.ಧನಂಜಯನ್ರವರಿಗೆ ಆಳ್ವಾಸ್ ವಿರಾಸತ್ 2017 ರ ಗೌರವ.
ಭಾರತೀಯ ನೃತ್ಯ ಪರಂಪರೆಯಲ್ಲಿ ಕಥಕ್ಕಳಿ ಹಾಗೂ ಭರತನಾಟ್ಯಕ್ಷೇತ್ರದ ಅಗ್ರಮಾನ್ಯ ಹೆಸರು ಪದ್ಮಭೂಷಣ ವಿ.ಪಿ.ಧನಂಜಯನ್ಅವರು. ಕೇರಳದ ಪಯ್ಯನ್ನೂರಿವನರಾದ ಇವರು ಮದ್ರಾಸಿನ ಕಲಾಕ್ಷೇತ್ರದಲ್ಲಿ ಶ್ರೀಮತಿ ರುಕ್ಮಿಣೀದೇವಿಯವರ ಮಾರ್ಗದರ್ಶನದಲ್ಲಿ ಈ ಎರಡೂ ನೃತ್ಯಪ್ರಕಾರಗಳಲ್ಲಿ ಪಳಗಿದ ಅದ್ವಿತೀಯ ನೃತ್ಯ ಸಾಧಕರು. ಖ್ಯಾತ ನೃತ್ಯಕಲಾವಿದೆ ಶಾಂತಾಅವರನ್ನು ವರಿಸಿ ನೃತ್ಯಕ್ಷೇತ್ರದಲ್ಲಿ ’ಧನಂಜಯನ್ಸ್’ರೆಂದೇ ಹೆಸರು ವಾಸಿಯಾಗಿರುವವರು ಈ ದಂಪತಿಗಳು. ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವೂ ಸೇರಿದಂತೆ ಸರಕಾರಗಳ, ಸಂಘಸಂಸ್ಥೆಗಳ, ಹಲವು ಪ್ರಶಸ್ತಿ ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ. ಮೇರು ನೃತ್ಯಕಲಾವಿದರಾದ ಪದ್ಮಭೂಷಣ ವಿ.ಪಿ.ಧನಂಜಯನ್ರನ್ನು ರೂ.1,00,000 (ಒಂದು ಲಕ್ಷ) ನಗದಿನೊಂದಿಗೆ ಪ್ರಶಸ್ತಿ ಪತ್ರವನ್ನಿತ್ತು ಪುರಸ್ಕರಿಸಲಾಗುವುದು.
ಆಳ್ವಾಸ್ ವಿರಾಸತ್ 2017 ೭ರ ಸಂಗೀತ ವೈವಿಧ್ಯಗಳು
ಆಳ್ವಾಸ್ ವಿರಾಸತ್ 2017 ರ ಮೊದಲನೆಯ ದಿನ ಕರ್ನಾಟಕ ಹಾಗೂ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತಗಳ ಮೇರುಕಲಾವಿದರಿಬ್ಬರು ಕೊಳಲು-ಬಾನ್ಸುರಿಜುಗಲ್ ಬಂದಿಯ ಮೂಲಕ ಪ್ರಥಮ ಬಾರಿಗೆಒಂದೇ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಖ್ಯಾತ ಪಕ್ಕವಾದ್ಯ ಕಲಾವಿದರ ಒಗ್ಗೂಡುವಿಕೆಯಿಂದ ಈ ಸಂಗೀತಕಾರ್ಯಕ್ರಮವು ಸಂಗೀತ ಪ್ರಿಯರಿಗೆ ಅಪೂರ್ವ ಅನುಭೂತಿಯನ್ನು ಉಂಟುಮಾಡಲಿದೆ. ದಿನಾಂಕ 14 ರಂದು ’ನಾದಮಾಧುರ್ಯ’ದಲ್ಲಿ ದೇಶದ ಅತ್ಯುನ್ನತ ವಾದ್ಯ ಕಲಾವಿದರು ಒಟ್ಟಾಗಲಿದ್ದಾರೆ. ವಾದ್ಯ ಪ್ರ್ರಕಾರಗಳಲ್ಲಿ ಮಾಂತ್ರಿಕ ಹಿಡಿತವಿರುವ ಈ ಕಲಾವಿದರ ಒಟ್ಟುಗೂಡುವಿಕೆಯಿಂದ ಅತ್ಯದ್ಭುತ ನಾದವೈವಿಧ್ಯವು ವಿರಾಸತ್ನಲ್ಲಿ ಮೈತಳೆಯಲಿದೆ.
ಬೆಂಗಳೂರಿನ ಮಾಸ್ಟರ್ ರಾಹುಲ್ ವೆಲ್ಲಾಲ್ ಒಂಬತ್ತು ವರ್ಷದ ಪೋರ. ದೇವರ ನಾಮದಅತ್ಯಂತ ಶುಶ್ರಾವ್ಯ ಹಾಗೂ ಮಾಧುರ್ಯದ ಹಾಡುಗಾರಿಕೆಗೆ ಹೆಸರುವಾಸಿಯಾಗಿರುವ ಈ ಬಾಲಪ್ರತಿಭೆ ಆಳ್ವಾಸ್ ವಿರಾಸತ್ನಲ್ಲಿ ಮೊತ್ತಮೊದಲ ಬಾರಿ ತನ್ನ ಹಾಡುಗಾರಿಕೆಯನ್ನು ಪ್ರಸ್ತುತಪಡಿಸುತ್ತಿದ್ದಾನೆ.
ದಿನಾಂಕ 15 ರಂದು ಹಿಂದಿ ಚಿತ್ರರಂಗದ ಖ್ಯಾತ ಹಿನ್ನಲೆಗಾಯಕರುಗಳಾದ ಮುಂಬೈಯ ಶಾನ್ ಹಾಗೂ ಪಾಯಲ್ದೇವ್ ಅವರು ಸಂಗೀತ ರಸಸಂಜೆಯ ಮೂಲಕ ಸಂಗೀತಾಸಕ್ತರ ಮನಸ್ಸನ್ನು ಸೂರೆಗೊಳ್ಳಲಿದ್ದಾರೆ. ಅವರನ್ನು ಅನುಸರಿಸಿಕೊಂಡು ಉಡುಪಿಯ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್ನ ಗಾಯನಕಲಾವಿದೆಯರಿಂದ ’ಗಾನಾರ್ಚನ’ ನಡೆಯಲಿದ್ದು ಸಂಗೀತ ರಸಿಕರ ಮನಸ್ಸನ್ನು ಮುದಗೊಳಿಸಲಿದೆ.
ಆಳ್ವಾಸ್ ವಿರಾಸತ್ 2017 ರ ನೃತ್ಯವೈವಿಧ್ಯಗಳು
ದಿನಾಂಕ 14 ರಂದು ಶನಿವಾರ ’ಅಂಗರಾಗ’ದ ಮೂಲಕ ಶಾಸ್ತ್ರೀಯ ಮತ್ತುಜನಪದ ನೃತ್ಯಗಳ ಮಿಶ್ರ ನೃತ್ಯರೂಪಕವು ನಡೆಯಲಿದೆ. ಭುವನೇಶ್ವರದ ಆರಾಧನಾ ಡ್ಯಾನ್ಸ್ಅಕಾಡೆಮಿಯ ಶಾಸ್ತ್ರೀಯ ಮತ್ತು ಜಾನಪದದ 55 ಕಲಾವಿದರು ಒಡಿಸ್ಸಿ ಮತ್ತು ಗೋಟಿಪುವಾ ನೃತ್ಯರೂಪಕದ ಮೂಲಕ ನೃತ್ಯಾಸಕ್ತರಿಗೆ ಅತ್ಯಪೂರ್ವ ಮನರಂಜನೆಯನ್ನು ನೀಡಲಿದ್ದಾರೆ. ಉಳಿದಂತೆ ಮೂರು ದಿನಗಳ ಕಾಲವೂ ಆಳ್ವಾಸ್ನ ಬಹುಸಂಖ್ಯೆಯ ಕಲಾವಿದರಿಂದ ದೇಶೀಯ, ಅಂತಾರಾಷ್ಟ್ರೀಯ ನೃತ್ಯ-ಸಾಹಸ ಕಲೆಗಳ ವೈವಿಧ್ಯಪೂರ್ಣ ಪ್ರದರ್ಶನವು ನಡೆಯಲಿವೆ.
ಆಳ್ವಾಸ್ ವಿರಾಸತ್ಗೆ ವಿಲಾಸ್ ನಾಯಕ್ರಚಿತ್ರದ ಮೆರುಗು
ಆಳ್ವಾಸ್ ವಿರಾಸತ್ 2017 ರ ಎರಡನೆಯ ದಿನ 14-1-2017 ನೆ ಶನಿವಾರ ಅಂತರಾಷ್ಟ್ರೀಯಖ್ಯಾತಿಯ ಚಿತ್ರಕಲಾವಿದ ವಿಲಾಸ್ ನಾಯಕ್ ಅವರ ಕೈಚಳಕದಿಂದ ವೈವಿಧ್ಯಮಯ ಚಿತ್ರಗಳು ಮೂಡಿಬರಲಿವೆ.
ಆಳ್ವಾಸ್ ಶಿಲ್ಪ-ವರ್ಣ ವಿರಾಸತ್.
ಜನವರಿ 6 ರಿಂದ 15ರವರೆಗೆ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಆಳ್ವಾಸ್ ಶಿಲ್ಪವಿರಾಸತ್ ಮತ್ತು ರಾಷ್ಟ್ರಮಟ್ಟದಖ್ಯಾತ ಆದಿವಾಸಿ ಕಲಾವಿದರಿಂದ ಚಿತ್ರಕಲಾ ಶಿಬಿರವು ನಡೆಯಲಿವೆ. ಬುಡಕಟ್ಟು ಜನಾಂಗವಾದ ಬಸ್ತರ್ನ ಐವರು ಕಲಾವಿದರು ಲೋಹಶಿಲ್ಪದಲ್ಲಿ ಸ್ಥಳೀಯ ದೈವಗಳ ಕಂಚಿನ ಮುಖವಾಡಗಳನ್ನು ರಚಿಸಲಿದ್ದಾರೆ. ನಾಡಿನ ಹತ್ತು ಕಲಾವಿದರು ಮರದಕೆತ್ತನೆಯಲ್ಲಿ 4 ರಿಂದ 6 ಅಡಿ ಎತ್ತರದಕೋಟಿ-ಚೆನ್ನಯ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚಿಸಲಿದ್ದಾರೆ.
ಜನವರಿ 11 ರಿಂದ 15ರವರೆಗೆ ರಾಷ್ಟ್ರಮಟ್ಟದ ಸಮಕಾಲೀನ ಕಲಾವಿದರಚಿತ್ರಕಲಾ ಶಿಬಿರವು ನಡೆಯಲಿದೆ. ದೇಶದ 20ಕ್ಕಿಂತಲೂ ಹೆಚ್ಚು ಚಿತ್ರಕಲಾವಿದರು ಭಾಗವಹಿಸುವ ಆಳ್ವಾಸ್ ವರ್ಣವಿರಾಸತ್ನಲ್ಲಿ ಕಲಾವಿದರ ಕಲ್ಪನೆಯಲ್ಲಿ ಹಲವು ಕಲಾಕೃತಿಗಳು ಮೂಡಿಬಂದು ಕಲಾಪ್ರಿಯರ ಮನತಣಿಸಲಿವೆ. ಜನವರಿ 11 ರಿಂದ 15ರವರೆಗೆ ನುಡಿಸಿರಿ ಸಭಾಂಗಣದಲ್ಲಿ ರಚನೆಗೊಂಡ ಕಲಾಕೃತಿಗಳ ವೀಕ್ಷಣೆಗೆ ಸಾರ್ವಜನಿಕರಿಗೆಮುಕ್ತ ಅವಕಾಶ ನೀಡಲಾಗಿದೆ.
ರೇವ ಶಂಕರ್ ಶರ್ಮಾಅವರಿಗೆ ಆಳ್ವಾಸ್ ವರ್ಣವಿರಾಸತ್ 2017 ರ ಗೌರವ.
ರಾಜಸ್ಥಾನದ ಖ್ಯಾತಚಿತ್ರಕಲಾವಿದ ರೇವ ಶಂಕರ್ ಶರ್ಮಾ ಅವರಿಗೆ ಆಳ್ವಾಸ್ ವರ್ಣವಿರಾಸತ್ 2017 ರ ಗೌರವವನ್ನು ಜನವರಿ 15 ರಂದು ವಿರಾಸತ್ ವೇದಿಕೆಯಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ.25,000/- ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ದೀಪಾಲಂಕಾರದ ವೈಭವ ಹಾಗೂ ತಿಂಡಿ-ತಿನಿಸುಗಳ ಮಳಿಗೆ.
ಆಳ್ವಾಸ್ ವಿರಾಸತ್ನ ಮೂರು ದಿನಗಳ ಕಾಲವೂ ಅತ್ಯದ್ಭುತವಾದ ದೀಪಾಲಂಕಾರದ ಮೂಲಕ ಈ ಉತ್ಸವಕ್ಕೆ ರಮ್ಯತೆಯನ್ನು, ಭವ್ಯತೆಯನ್ನು ನೀಡಲಾಗುವುದು. ಶುಚಿ-ರುಚಿಯಾದ ವಿವಿಧ ತಿಂಡಿ ತಿನಿಸುಗಳ ಮಳಿಗೆಗಳು ಆಹಾರ ಪ್ರಿಯರ ಮನಸ್ಸನ್ನೂಉದರವನ್ನೂತಣಿಸುವಲ್ಲಿ ಯಶಸ್ಸಿಯಾಗಲಿವೆ.
ವಿಶಾಲ ಪಾರ್ಕಿಂಗ್ ಹಾಗೂ ಉಚಿತ ಬಸ್ಸಿನ ವ್ಯವಸ್ಥೆ.
ದಿನವೊಂದಕ್ಕೆ 40,000 ಕ್ಕಿಂತಲೂ ಹೆಚ್ಚಿನ ಕಲಾಪ್ರಿಯರು ಸೇರುವ ಈ ಮಹಾ ಉತ್ಸವಕ್ಕೆ ತಮ್ಮತಮ್ಮ ವಾಹನಗಳಲ್ಲಿ ಆಗಮಿಸುವವರಿಗೆ ವಿಶಾಲವಾದ ಹಾಗೂ ವ್ಯವಸ್ಥಿತವಾದ ವಾಹನ ನಿಲುಗಡೆಯ ಸ್ಥಳಾವಕಾಶವನ್ನು ಮಾಡಲಾಗಿದೆ. ಪೇಟೆಯಿಂದ ಪುತ್ತಿಗೆಗೆ ಮತ್ತು ಪುತ್ತಿಗೆಯಿಂದ ಪೇಟೆಯವರೆಗೆ ಉಚಿತ ಬಸ್ಸಿನ ವ್ಯವಸ್ಥೆಯನ್ನು ಉತ್ಸವದ ಸಂದರ್ಭದಲ್ಲಿ ಮಾಡಲಾಗುತ್ತದೆ. ಪುತ್ತಿಗೆಗೆ ಹೋಗುವ ಉಚಿತ ಸೇವೆಯ ಬಸ್ಸುಗಳ ನಿಲ್ದಾಣವು ಮೂಡುಬಿದಿರೆಯ ನಿಶ್ಮಿತಾ ಟವರ್ಸ್ನ ಬಳಿ ಇರುತ್ತದೆ.
ಆಳ್ವಾಸ್ ವಿರಾಸತ್ 2017 ಮೂರುದಿನಗಳ ಕಾಲ ನಡೆಯುತ್ತಿದ್ದು ಸಂಗೀತ ಮತ್ತು ನೃತ್ಯಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ. ಮೂರು ದಿನಗಳ ಕಾಲದ ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ ಈ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಡಾ| ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.