ಮಂಗಳೂರು : ತುಳುನಾಡಿನಲ್ಲಿ ಪ್ರೇತಾತ್ಮಗಳಿಗೆ ವಿಶೇಷವಾದ ಆದರವನ್ನು ನೀಡಲಾಗುತ್ತದೆ. ಬದುಕಿರುವವರನ್ನು ಹುಡುಕಿ ನೋಟೀಸು ಕೊಡಲು ವಿಫಲವಾದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ, ಐಎಸ್.ಪಿ.ಆರ್.ಎಲ್ ಇವರು ಈ ನಾಡಿನ ಆದರಣೀಯ ಪ್ರೇತಾತ್ಮಗಳೊಂದಿಗೆ ಪತ್ರವ್ಯವಹಾರವನ್ನು ಮುಂದುವರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸದ ಸುಮಾರು ನಲುವತ್ತು, ಐವತ್ತು ವರ್ಷಗಳ ಹಿಂದೆ ಮೃತರಾದವರ ಅರ್ಜಿಯನ್ನು ಪರಿಶೀಲಿಸಿ ಹಿಂಬರಹವನ್ನು ನೀಡಲಾದ ಸೋಜಿಗ ಈ ಕಚೇರಿಯಲ್ಲಿ ನಡೆದಿದೆ. ಇಂತಹಾ ಹಲವಾರು ಮೃತಾತ್ಮಗಳೊಂದಿಗೆ ಇವರು ಪತ್ರ ವ್ಯವಹಾರ ನಡೆಸಿದ್ದಾರೆ!
ಐಎಸ್.ಪಿ.ಆರ್.ಎಲ್ ಕೊಳವೆ ಮಾರ್ಗವು ದ.ಕ – ಉಡುಪಿ ಜಿಲ್ಲೆಗಳ 24 ಗ್ರಾಮಗಳಲ್ಲಿ ಹಾದು ಹೋಗುತ್ತಿದ್ದು ಈ ಬಗ್ಗೆ ನಡೆಸಿದ ಎಲ್ಲಾ ಪ್ರಕ್ರಿಯೆಗಳು ಬೋಗಸ್ ಆಗಿದೆ ಎಂದು ಈ ಭಾಗದ ರೈತರು ವ್ಯಾಪಕ ಪ್ರತಿಭಟನೆ ಮಾಡುತ್ತಿದ್ದಂತೆ ಈ ಎರಡು ಸಂಸ್ಥೆಗಳ ಅಧಿಕಾರಿಗಳು ಮತ್ತೆ ತಮ್ಮ ನಿರ್ಲಕ್ಷ್ಯವನ್ನು ಮೆರೆದಿದ್ದಾರೆ. ರೈತರು ಮತ್ತು ಸಂಸ್ಥೆಯ ಸರ್ವೆಯರ್ ಸೇರಿದಂತೆ ನಡೆಸುವ ಜೆಎಂಸಿ (ಜಾಯಿಂಟ್ ಮೆಷರ್ಮೆಂಟ್ ಸರ್ಟಿಫಿಕೇಟ್) ಅಂದರೆ ಬಾಧಿತ ರೈತರ ಜತೆ ಜಂಟಿ ಸರ್ವೆ ಮಾಡಿ ಪಂಚನಾಮೆ ಮಾಡದೆ ಬೇಕಾಬಿಟ್ಟಿಯಾಗಿ ಕಚೇರಿಯಲ್ಲೇ ಕುಳಿತುಕೊಂಡು ರೈತರ ಭೂಮಿಯ ಮೇಲೆ ಗೆರೆ ಎಳೆದಿದ್ದಾರೆ ಎಂದು ಆಪಾದಿಸಿದ್ದರು. ಈ ಬಗ್ಗೆ ಕೇಂದ್ರ ಸರಕಾರದ ಅಂತಿಮ ಪ್ರಕಟಣೆಯನ್ನು ಆಕ್ಷೇಪಿಸಿ ರೈತರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಈ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಆದುದರಿಂದ ಅಂತಿಮ ಅವಾರ್ಡನಲ್ಲಿ ನಮೂದಿಸಿದ ಪರಿಹಾರ ಮೊತ್ತವನ್ನು ಪಡೆಯಲು ಕೋರಲಾಗಿದೆ, ಈ ಮೊತ್ತದ ಬಗ್ಗೆ ಒಪ್ಪಿಗೆ ಇಲ್ಲದೇ ಇದ್ದಲ್ಲಿ ಜಿಲ್ಲಾ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿರುತ್ತದೆ ಎಂದು ಅರ್ಜಿ ಸಲ್ಲಿಸಿದ ರೈತರಿಗೆ ಹಿಂಬರ ಬರುವುದರ ಜೊತೆಗೆ ಅರ್ಜಿಯನ್ನೇ ಸಲ್ಲಿಸದ ಮೃತ ಪ್ರೇತಾತ್ಮಗಳಿಗೂ ಹಿಂಬರಹವನ್ನು ಕಳುಹಿಸಿಕೊಡಲಾಗಿದೆ!
ಇವರು ನೋಟೀಸು ನೀಡಿದ ನಾಗಮ್ಮ ಶೆಡ್ತಿ ಎಂಬವರು ಐದಾರು ದಶಕಗಳ ಹಿಂದೆ ಭೂಮಿಯನ್ನು ಅಡವು ಪಡೆದವರಾಗಿದ್ದು, ಆನಂತರ ಅಡವು ಮುಕ್ತವಾಗಿ ಒಂದೆರಡು ತಲೆಮಾರುಗಳನ್ನು ದಾಟಿ ಜಮೀನು ಅನುಭೋಗವು ಮುಂದುವರಿದುಕೊಂಡು ಬಂದಿತ್ತು. ಈಗ ಇರುವ ಕುಟುಂಬದಲ್ಲಿ ಈ ಜಮೀನು ಹಂಚಿಕೆಯಾಗಿದೆ. ಕಾನೂನು ಬದ್ಧವಾಗಿ ಜಂಟಿ ಸರ್ವೆಯನ್ನು ಮಾಡಿ, ಪಂಚನಾಮೆ ಮಾಡಿದ್ದಿದ್ದರೆ ಮೃತರಿಗೆ ನೊಟೀಸು ನೀಡುವ ಅಪದ್ಧಕ್ಕೆ ಅವಕಾಶವಾಗುತ್ತಿರಲಿಲ್ಲ. ಜಮೀನಿನ ದಾಖಲೆಗಳು ಯಾರ ಹೆಸರಿನಲ್ಲಿ ಇದೆ ಮತ್ತು ಯಾರಿಗೆ ನೋಟೀಸು ನೀಡಬೇಕು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಇಷ್ಟೆಲ್ಲಾ ಪ್ರತಿಭಟನೆ ನಡೆದ ನಂತರವೂ ಈ ಅಧಿಕಾರಿಗಳು ಮತ್ತೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಉದಾಸೀನತೆಯಿಂದ ಕೆಲಸ ಮಾಡಿ ಅತ್ತ ಕಡೆ ಸರಕಾರವನ್ನು ಮತ್ತು ಇತ್ತ ಕಡೆ ರೈತರನ್ನೂ ತಪ್ಪು ದಾರಿಗೆ ಎಳೆದು ಬಾಧಿತ ರೈತರ ಸಂಪರ್ಕಕ್ಕೆ ಸಿಗದೆ, ಕಾನೂನು ಬದ್ಧವಾಗಿ ಮಾಹಿತಿ ಹಕ್ಕಿನಿಂದ ಕೇಳಲಾದ ದಾಖಲೆಗಳನ್ನೂ ಸಮಯಕ್ಕೆ ಸರಿಯಾಗಿ ನೀಡದೆ ಸರಿಯಾಗಿ ಕೆಲಸ ಮಾಡದೆ ಐಎಸ್ ಅರ್ ಪಿ ಎಲ್ ಮತ್ತಿತರ ಬೃಹತ್ ಕಂಪೆನಿಗಳ ಏಜೆಂಟನಂತೆ ವರ್ತಿಸುವ ದಾಸೇಗೌಡನಂತಹ ಭೂ ಸ್ವಾಧೀನಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವಿದೆಯೇ? ಜನರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯತನವನ್ನು ಮೆರೆಯುವ ಇಂತಹಾ ಅಧಿಕಾರಿಗಳ ಬದಲಿಗೆ ಬೇರೊಬ್ಬ ಸಮರ್ಥ ಅಧಿಕಾರಿಯನ್ನು ನೇಮಿಸಬೇಕು ಎಂಬುದು ಪೈಪ್ ಲೈನ್ ಬಾಧಿತ 24 ಗ್ರಾಮಗಳ ರೈತರ ಒಕ್ಕೊರಲಿನ ಬೇಡಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.