ಮಂಗಳೂರು: ಎಂ.ಆರ್.ಪಿ.ಎಲ್ ಮೂರನೇ ವಿಸ್ತರಣಾ ಹಂತದ ಕೋಕ್ ಮತ್ತು ಸಲ್ಫರ್ ಘಟಕ ಮುಚ್ಚಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಜೂನ್ ತಿಂಗಳಿಗೆ ಅಂತ್ಯಗೊಳ್ಳುವ ಕೋಕ್, ಸಲ್ಫರ್ ಘಟಕದ ಪರವಾನಿಗೆಯನ್ನು ನವೀಕರಿಸಬಾರದು ಎಂದು ಒತ್ತಾಯಿಸಿ ಮೇ.6 ರಂದು ಬೆಳಿಗ್ಗೆ 10 ಘಂಟೆಗೆ ನಾಗರಿಕ ಹೋರಾಟ ಸಮಿತಿ ಜೋಕಟ್ಟೆಯು, ಜೋಕಟ್ಟೆಯಿಂದ ಎಂ.ಆರ್.ಪಿ.ಎಲ್ ಮುಖ್ಯ ದ್ವಾರದವರೆಗೆ ಎಂ.ಆರ್.ಪಿ.ಎಲ್ ಚಲೋ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ನಾಗರಿಕ ಹೋರಾಟ ಸಮಿತಿ ಪ್ರಮುಖರಾದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಎಂ.ಆರ್.ಪಿ.ಎಲ್ ನ ಕೋಕ್, ಸಲ್ಫರ್ ಘಟಕದಿಂದಾಗಿ ಪರಿಸರದ ಗ್ರಾಮಗಳ ಜನರ ಮೇಲಾಗುತ್ತಿರುವ ಗಂಭೀರ ಪರಿಣಾಮಗಳನ್ನು ವಿರೋಧಿಸಿ, ಘಟಕವನ್ನು ಮುಚ್ಚುವಂತೆ ಒತ್ತಾಯಿಸಿ ಕಳೆದ ಏಳೆಂಟು ತಿಂಗಳುಗಳಿನಿಂದ ನಿರಂತರ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಆದರೆ, ರಾಜ್ಯ, ಕೇಂದ್ರ ಸರ್ಕಾರಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಯಾವುದೇ ದೃಢವಾದ ಕ್ರಮಗಳನ್ನು ಕೈಗೊಳ್ಳದೆ ಜನತೆಯ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಕಂಪೆನಿ ತನ್ನ ಉತ್ಪಾದನೆಗಳನ್ನು ಇನ್ನಷ್ಟು ಹೆಚ್ಚುಸುತ್ತಿದೆ. ಇದರಿಂದಾಗಿ ಹೋರಾಟಗಳನ್ನು ಇನ್ನಷ್ಟು ತೀವೃಗೊಳಿಸಲು ನಾಗರಿಕ ಹೋರಾಟ ಸಮಿತಿ ನಿರ್ಧರಿಸಿದೆ. ಅದರಂತ್ತೆ ಸರಕಾರ ತಕ್ಷಣ ಕೋಕ್, ಸಲ್ಫರ್ ಘಟಕವನ್ನು ಮುಚ್ಚಬೇಕು. ಜೊತೆಗೆ ಜೂನ್ 30ಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಕೋಕ್ ಘಟಕಕ್ಕೆ ನೀಡಿರುವ ಪರವಾನಿಗೆ ಅವಧಿ ಮುಗಿಯುತ್ತದೆ. ಇಷ್ಟೆಲ್ಲಾ ಮಾಲಿನ್ಯಕ್ಕೆ ಕಾರಣವಾಗಿರುವ ಕೋಕ್ ಸಲ್ಫರ್ ಘಟಕದ ಪರವಾನಿಗೆಯನ್ನು ಯಾವುದೇ ಕಾರಣಕ್ಕೂ ನವೀಕರಿಸಬಾರದು ಎಂದು ಒತ್ತಾಯಿಸಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಪಾದಯಾತ್ರೆಯು ಜೋಕಟ್ಟೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಆರಂಭಗೊಂಡು ಜೋಕಟ್ಟೆ, ಕೆ.ಬಿ.ಎಸ್ ಜಂಕ್ಷನ್, ಕೋಡಿಕೆರೆ, ಮೈಂದ ಗುರಿ, ಕುಳಾಯಿ, ಕಾನ, ಬಾಳ ದಾರಿಯಾಗಿ ಸಂಚರಿಸಿ ಎಂ.ಆರ್.ಪಿ.ಎಲ್ ಪ್ರಧಾನ ದ್ವಾರದ ಮುಂಭಾಗ ಮಧ್ಯಾಹ್ಮ 1 ಗಂಟೆಗೆ ಬೃಹತ್ ಸಾರ್ವಜನಿಕ ಸಭೆಯ ಮೂಲಕ ಅಂತ್ಯಗೊಳ್ಳಲಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.