ಬ್ರಾಹ್ಮಣ ಧರ್ಮ ನಿಜಕ್ಕೂ ಹಿಂದು ಧರ್ಮ ಅಲ್ಲವೇ ಅಲ್ಲ, ಹಿಂದುತ್ವಕ್ಕೂ ಬ್ರಾಹ್ಮಣರಿಗೂ ಸಂಬಂಧವೇ ಇಲ್ಲ. ಇಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ, ಆಹಾರ ಸಂಕರ, ಕರ್ಮಠತನಗಳು ಜೀವಂತವಾಗಿರುವುದೇ ಬ್ರಾಹ್ಮಣರಿಂದ ಎಂದು ಷರಾ ಬರೆದವರು ಮಾನ್ಯ ಅರವಿಂದ ಮಾಲಗತ್ತಿಯವರು.
ಮಂಗಳೂರು ನಗರದ ಶಾಂತಿಕಿರಣದಲ್ಲಿ ಅಭಿಮತ ಮಂಗಳೂರು ವತಿಯಿಂದ ಆಯೋಜಿಸಿರುವ ಎರಡು ದಿನಗಳ (ಡಿ. 24 ಮತ್ತು 25) ’ಜನನುಡಿ 2016’ (ಸಮತೆ ಎಂಬುದು ಅರಿವು) ಸಮಾವೇಶದಲ್ಲಿ ಮಾತನಾಡಿದ ಅವರು, ಬ್ರಾಹ್ಮಣರಲ್ಲಿಯೂ ಮನುಷ್ಯತ್ವ ಇದ್ದವರು ಇದ್ದಾರೆ ಎಂಬ ಸರ್ಟಿಫಿಕೇಟ್ ಬೇರೆ ನೀಡಿದ್ದಾರೆ.
ದಲಿತ ಸಮಾವೇಶದಲ್ಲಿ ದೇವರ ಬಗ್ಗೆ ಮಾತನಾಡಿದರೆ ಪಾಪ ಅವರಿಗೆ ಕಾದ ಹೆಂಚಿನ ಮೇಲೆ ನೀರು ಸುರಿದಂತೆ ಆಗುತ್ತದೆ ಎಂದು ಅದೇ ಹಳಸಲು ಪುರಾಣ ಬಿಗಿದ ಮಾಲಗತ್ತಿ ಅವರು, ತಮ್ಮ ತಾಯಿ ಕದ್ದು ಪೂಜೆ ಮಾಡುತ್ತಿದ್ದುದು, ಅದು ಗೊತ್ತಾದಾಗ ದೇವರ ಪೆಟ್ಟಿಗೆಗೆ ತಾವೇ ಬೀಗ ಜಡಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹೋಗಲಿ, ದೇವರು ಅನುಭವ ವೇದ್ಯ. ಆದರೆ, ದಲಿತರೆಲ್ಲ ದೇವರ ವಿರೋಧಿಗಳು ಯಾವಾಗಾದರು? ಅಥವಾ ಅವರೆಲ್ಲರ ಮನೆಯ ಜಗಲಿಯಲ್ಲಿ ವಿರಾಜಮಾನವಾಗಿರುವ ದೇವರ ಪೆಟ್ಟಿಗೆಗೆ ಬೀಗ ಜಡಿಯುವ ಭ್ರಮೆ ಮಾಲಗತ್ತಿಯವರಿಗ್ಯಾಕೆ ? ಆ ಪೆಟ್ಟಿಗೆಯೊಳಗಿನ ದೇವರೇ ಬಲ್ಲ.
ಹಿಂದುತ್ವದ ಪ್ರಸ್ತಾಪ
ಹಿಂದುತ್ವವಾದಿಗಳದು ಒನ್ ವೇ ಚಿಂತನೆ. ವಿದೇಶಗಳಲ್ಲಿಯೂ ಹಿಂದುಗಳು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ, ಆದರೆ ನಮ್ಮಲ್ಲಿ ಪ್ರಗತಿಪರ ದಲಿತರು, ಸಾಂಪ್ರದಾಯಿಕ ದಲಿತರು ಎಂಬ ಎರಡು ದಾರಿ (ದ್ವಂದ್ವಗಳಲ್ಲದೇ ಇನ್ನೇನು ? ) ಗಳಿವೆ. ಇದರ ಪರಿಣಾಮ ನಮ್ಮ ಹಿಂದೆ ಅದ್ಯಾವ ಜನಬೆಂಬಲವೂ ಇಲ್ಲ. ನಾವು ಒಂಟಿಯಾಗಿದ್ದೇವೆ, ನಾವು ತಬ್ಬಲಿಯಾಗಿದ್ದೇವೆ ಎಂದು ಮಾಲಗತ್ತಿ ಅವರು ಗೋಳಿಟ್ಟುಕೊಂಡ ಪರಿ ವರ್ಣಿಸಲಸದಳ. ಕಂಡ ಕಂಡವರ, ದ್ವಂದ್ವಿಗಳ ಹಿಂದೆ ಹೋಗಲು ಜನರೇನು ಹುಚ್ಚರೇ..? ಆ.. ಪೆಟ್ಟಿಗೆಯೊಳಗಿನ ದೇವರೇ ಬಲ್ಲ.
ಪ್ರಧಾನಿಗೆ ಪರೋಕ್ಷ ಸವಾಲು ?
ನೋಟು ನಿಷೇಧವನ್ನು ಮೋದಿ ಸರ್ಜಿಕಲ್ ದಾಳಿಗೆ ಹೋಲಿಸಿದರು. ಮೋದಿಜೀಯವರೆ ಭಾರತದ ಜಾತಿ ವ್ಯವಸ್ಥೆಯ ಮೇಲೆ ಸರ್ಜಿಕಲ್ ದಾಳಿ ಮಾಡಿ. ಆಗ ಭವ್ಯ ಭಾರತದ ನಿರ್ಮಾಣವಾಗುತ್ತದೆ ಎಂದು ವಿನಂತಿಸಿದ ಮಾಲಗತ್ತಿಯವರು, ಮೋದಿ ಈ ಕೆಲಸ ಮಾಡಲ್ಲ, ಮೀಸಲಾತಿ ಟಚ್ ಮಾಡಿದರೆ, ಭಾರತಕ್ಕೆ ಬೆಂಕಿ ಬೀಳುತ್ತದೆ. ದೇಶ ಹೊತ್ತಿ ಉರಿಯುತ್ತದೆ ಎಂದು ಭವಿಷ್ಯ ನುಡಿದರು.
ಮೋದಿ ಅವರ್ಯಾಕೆ ? ಮೀಸಲಾತಿ ಹೋಗಲಾಡಿಸಿ, ಜಾತಿ ಸಂಕರವನ್ನು ಇಲ್ಲವಾಗಿಸುವುದೇ ಮಾಲಗತ್ತಿ ಆಂಡ್ ಕಂಪನಿಯ ನೈಜ ಅಜೆಂಡಾ ಆಗಿದ್ದರೆ, ಅದರ ನೇತೃತ್ವ ಅವರೇ ವಹಿಸಬಹುದಲ್ಲ ? ಜಾತ್ಯತೀತ ರಾಷ್ಟ್ರ ನೈಜ ಸ್ಥಾಪಕ ಅವರೇ ಆಗಲಿ.
ಆರ್ಎಸ್ಎಸ್ ವಿರುದ್ಧ ಬಂಜಗೆರೆ ವ್ಯಂಗ್ಯ
ಸ್ವಾತಂತ್ರ್ಯಾನಂತರ 60 ವರ್ಷಗಳ ಕಾಲ ಆರ್ಎಸ್ಎಸ್ ತಾಳಿದ ಸಮಾಧಾನ ನಮಗೆ ಆದರ್ಶ. ಅವರ ಪೈಕಿ ಒಬ್ಬನೇ ಒಬ್ಬ ಎಂ.ಎಲ್.ಎ ಇಲ್ಲದಿದ್ದಾಗಲೂ ಆರ್ಎಸ್ಎಸ್ನವರು ಇದ್ದರು, ಕೇವಲ ಐದು ಮಂದಿ ಎಂ.ಎಲ್.ಎ ಗಳು ಇದ್ದಾಗಲೂ ಅವರಿದ್ದರು, ಇದೀಗ ರಾಷ್ಟ್ರದ ಚುಕ್ಕಾಣಿ ಹಿಡಿದಾಗಲೂ ಅವರಿದ್ದಾರೆ. ಆರ್ಎಸ್ಎಸ್ನ ಎಲ್ಲರೂ ಎಂಎಲ್ಎಗಳು ಆಗಲಿಲ್ಲ, ಆದರೆ, ಸಾಂಸ್ಕೃತಿಕವಾದದ ಮೌಢ್ಯಕ್ಕೆ ಸಮಾಜವನ್ನು ಸಿಲುಕಿಸುವ ಅವರ ಹಟ ಮೆಚ್ಚಬೇಕು ಎಂದ ಬಂಜಗೆರೆ ಜಯಪ್ರಕಾಶ ಅವರು, ಮುಸ್ಲಿಂರನ್ನು ಬಹುಸಂಖ್ಯಾತರಿಂದ ಬೇರ್ಪಡಿಸಿದ್ದೂ ಆರ್ಎಸ್ಎಸ್ ಎಂದು ಆರೋಪಿಸಿದರು.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ರಹಮತ್ ತರೀಕೆರೆ ಅವರು, ಮುಸ್ಲಿಂ ಸಮಾಜಕ್ಕೊಬ್ಬ ಅಂಬೇಡ್ಕರ್ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದೆ. (ಅದು ನಿಜವೇ ಆಗಿದ್ದರೆ) ಅಂಬೇಡ್ಕರ್ ಬರೆದ ಸಂವಿಧಾನವೇ ಸರ್ವೋಚ್ಛ ಇರುವಾಗ, ಇನ್ನೊಬ್ಬ ಅಂಬೇಡ್ಕರ್ ಯಾಕೆ? ಸಂವಿಧಾನ ಒಪ್ಪಿಕೊಳ್ಳಲು ಮುಸ್ಲಿಂರಿಗೆ ತರೀಕೆರೆ ಅವರು ತಿಳಿಸುವುದು ಉಚಿತ.
ಹೀಗೇ ಬ್ರಾಹ್ಮಣ, ಪುರೋಹಿತಶಾಹಿ, ಮೇಲ್ಜಾತಿ, ಕೆಳವರ್ಗ, ಜೀತ, ಕಾದ ಹೆಂಚಿನ ಮೇಲೆ ನೀರು ಬಿದ್ದ ಹಾಗೆ, ಕಿವಿಯಲ್ಲಿ ಸೀಸ ಹಾಕುವುದು, ಗುಡಿ ಗುಂಡಾರಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ ಎನ್ನುವುದು, ಮಡಿವಂತಿಕೆಯ ಕುರಿತು ಅವಹೇಳನ ಮಾಡುವುದು, ದೇವರ ಕುರಿತು ಹಗುರವಾಗಿ ಮಾತನಾಡಿ, ಬಹುಸಂಖ್ಯಾತರ ಅಂತಃಸತ್ವಕ್ಕೆ ಕೊಳ್ಳಿ ಇಡಲು ಪ್ರಯತ್ನಿಸುವುದು ಪ್ರೊ.ಮಾಲಗತ್ತಿ, ಬಂಜೆಗರೆ ಜಯಪ್ರಕಾಶ್, ರಾಜೇಂದ್ರ ಚೆನ್ನಿ, ತರೀಕೆರೆ ಅವರ ಈ ಜನ್ಮ ಸಿದ್ಧ ಹಕ್ಕಾಗಿದೆ. ಪರೋಕ್ಷವಾಗಿ ಜಾತಿ, ಅಸ್ಪೃಶ್ಯತೆ, ಮೇಲು, ಕೀಳು ಮುಂತಾದ ಅನಿಷ್ಟಗಳನ್ನು ಜೀವಂತವಾಗಿ ಇಡುವುದೇ ಅವರ ಹಿಡನ್ ಅಜೆಂಡಾ ಎಂದರೂ ತಪ್ಪಿಲ್ಲ. ಏಕೆಂದರೆ, ಎಲ್ಲವೂ ಸಮವಾಗಿ ಬಿಟ್ಟರೆ ಇವರ ಅಸ್ತಿತ್ವ ? ಅಷ್ಟರ ಮಟ್ಟಿಗೆ ಬಹುಶಃ ಜನನುಡಿಯ ಉದ್ದೇಶವೂ ಈಡೇರಿದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.