ಮಂಗಳೂರು : ಕಳೆದ 129 ವರ್ಷಗಳಿಂದ ಜಗತ್ತಿನಾದ್ಯಂತ ಮೇ ದಿನ ಆಚರಿಸಲ್ಪಡುತ್ತಿದ್ದು, ಅದರ ಭಾಗವಾಗಿಯೇ ಕಾರ್ಮಿಕ ವರ್ಗಕ್ಕೆ ಅನೇಕ ಸವಲತ್ತುಗಳು ಒದಗಿ ಬಂದಿದೆ. ಇಂದಿನ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕ ವರ್ಗವು ಹೋರಾಟಗಳ ಮೂಲಕ ಪಡೆದ ಕಾನೂನುಗಳನ್ನು ಒಂದೊಂದೇ ತಿದ್ದುಪಡಿಗೊಳಿಸಿ ಸಡಿಲಗೊಳಿಸುತ್ತಿದೆ.
ಇಂದು ಮೇ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ, ತಾವು ಪಡೆದ ಕಾರ್ಮಿಕ ಹಕ್ಕುಗಳನ್ನು ಉಳಿಸಿಕೊಳ್ಳಲು ಪ್ರತಿಜ್ಞೆಯನ್ನು ಕೈಗೊಳ್ಳಬೇಕಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ಕೆ. ಮಹಾಂತೇಶ್ರವರು ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.ಅವರು ಇಂದು ನಗರದ ಜಿಲ್ಲಾಧಿಕಾರಿಗಳ ಕಛೇರಿಯೆದುರು ಸಿಐಟಿಯು ಮಂಗಳೂರು ನಗರ ಸಮಿತಿ ಆಶ್ರಯದಲ್ಲಿ ಜರುಗಿದ ಮೇ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಮಾತುಗಳನ್ನು ಹೇಳಿದರು.
ಮುಂದುವರಿಸುತ್ತಾ ಅವರು, ೮ ಗಂಟೆಗಳ ದುಡಿಮೆಗಾಗಿ ಅಮೇರಿಕಾದ ಕಾರ್ಮಿಕರು ೧೮೬೦ರ ಕಾಲಘಟ್ಟದಲ್ಲಿ ನಡೆಸಿದ ಸಮರಧೀರ ಹೋರಾಟದ ಪ್ರತಿಫಲವಾಗಿ ೧೮೮೬ರಲ್ಲಿ ಪ್ರಪ್ರಥಮ ಬಾರಿಗೆ ಮೇ ದಿನವನ್ನು ಆಚರಿಸಲಾಯಿತು. ಮಾಲಕ ವರ್ಗದ ಕ್ರೂರ ದಬ್ಬಾಳಿಕೆಗಳ ನಡುವೆಯೂ ತ್ಯಾಗ ಬಲಿದಾನದ ಪರಂಪರೆಯನ್ನು ಮುಂದುವರಿಸಿದ ಪರಿಣಾಮವಾಗಿ ೧೮೯೦ರಲ್ಲಿ ಜಗತ್ತಿನಾದ್ಯಂತ ಮೇ ದಿನವನ್ನು ಆಚರಿಸಲು ಅಧಿಕೃತವಾಗಿ ಕರೆ ನೀಡಲಾಯಿತು. ಇಂತಹ ಮಹಾನ್ ಉದ್ದೇಶ ಹೊಂದಿದ ಮೇ ದಿನದ ಆಶಯವನ್ನು ಜಗತ್ತಿನ ಆಳುವ ವರ್ಗಗಳು ತಿರುಚಲು ಯತ್ನಿಸುತ್ತಿದೆ. ನಮ್ಮ ದೇಶದಲ್ಲಿಯೂ ಕೇಂದ್ರ ಸರಕಾರವು ಕಾರ್ಮಿಕರಿಗೆ ನೀಡಬೇಕಾದ ಪಿಂಚಣಿಯನ್ನು ಮೂರು ತಿಂಗಳು ನೀಡಿ ಕಳೆದ ಎಪ್ರಿಲ್ನಲ್ಲಿ ನಿಲ್ಲಿಸಿದ್ದಾರೆ. ಕಾರ್ಮಿಕ ಕಾನೂನುಗಳನ್ನು ಕೋರ್ಪರೇಟ್ ಕಂಪನಿಗಳ ಪರವಾಗಿ ತಿದ್ದುಪಡಿ ಮಾಡಲು ಹೊರಟಿದೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಿಲ್ಲ. ಕನಿಷ್ಟ ಕೂಲಿ ನೀಡಲು ಮೀನಾ ಮೇಷ ಎಣಿಸುತ್ತಿದೆ. ಇಂತಹ ಸರಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕೆಂದು ಹೇಳಿದರು.
ಸಿಐಟಿಯು ಜಿಲ್ಲಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡುತ್ತಾ, ಇಂದು ಕಾರ್ಮಿಕ ವರ್ಗ ನೆಮ್ಮದಿಯ ಬದುಕನ್ನು ಕಾಣುತ್ತಿದ್ದರೆ ಅದಕ್ಕೆ ಕಾರಣ ಮೇ ದಿನ ಮತ್ತು ಕಾರ್ಮಿಕರ ಸಂಘಟಿತ ಹೋರಾಟಗಳು. ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ವಿದೇಶಿ ಕಂಪನಿಗಳಗಳನ್ನಿ ದೇಶಕ್ಕೆ ಆಹ್ವಾನಿಸಿ ಕಾರ್ಮಿಕ ವರ್ಗದ ಬದುಕನ್ನು ದುಸ್ಥರಗೊಳಿಸಲು ಯತ್ನಿಸುತ್ತಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ನಗರ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ರವರು ಮಾತನಾಡುತ್ತಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿರುವಂತೆ, ಒಳ್ಳೆಯ ದಿನಗಳು ಬಂದಿರುವುದು ಟಾಟಾ, ಬಿರ್ಲಾ, ಅಂಬಾನಿ, ಅಧಾನಿಯಂತಹ ಕಂಪೆನಿಗಳಿಗೆಯೇ ಹೊರತು ದೇಶದ ಜನ ಸಾಮಾನ್ಯರಿಗಲ್ಲ. ಪ್ರತೀ ಕ್ಷಣಕ್ಕೂ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಕೇಂದ್ರ ಸರಕಾರ ಬಹು ರಾಷ್ಟ್ರೀಯ ಕಂಪೆನಿಗಳ ತಾಳಕ್ಕೆ ತಕ್ಕ ಕುಣಿಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ವರ್ಗ ದೃಷ್ಟಿಕೋನ ಬೆಳೆಸುವ ಮೂಲಕ ಜನವಿರೋಧಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ ಎಂದು ಹೇಳಿದರು.
ಸಿಐಟಿಯು ಮಂಗಳೂರು ನಗರಾಧ್ಯಕ್ಷರಾದ ಜಯಂತಿ ಬಿ. ಶೆಟ್ಟಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವೇಧಿಕೆಯಲ್ಲಿ ಬ್ಯಾಂಕ್ ನೌಕರರ ಮುಖಂಡರಾದ ಬಿ. ಎಂ. ಮಾಧವ, ವಕೀಲರ ಸಂಘಟನೆಯ ಮುಖಂಡರಾದ ಯಶವಂತ ಮರೋಳಿ, ಸಿಐಟಿಯು ನಗರ ಮುಖಂಡರಾದ ಬಾಬು ದೇವಾಡಿಗ , ಭಾರತೀ ಬೋಳಾರ, ಅಹಮ್ಮದ್ ಬಾವಾ, ಸಂತೋಷ್ ಕುಮಾರ್, ವಿಲ್ಲಿವಿಲ್ಸನ್, ರವಿಚಂದ್ರ ಕೊಂಚಾಡಿ, ಸಂತೋಷ್ ಶಕ್ತಿನಗರ, ಲಿಂಗಪ್ಪ ನಂತೂರು ಉಪಸ್ಥಿತರಿದ್ದರು. ಸಭೆಯ ಪ್ರಾರಂಭದಲ್ಲಿ ಕಾರ್ಮಿಕರ ಆಕರ್ಷಕ ಮೆರವಣಿಗೆಯು ಚೆಂಡೆ ವಾದನಗಳೊಂದಿಗೆ ಜ್ಯೋತಿ ಸರ್ಕಲ್ನಿಂದ ಹೊರಟು ಜಿಲ್ಲಾಧಿಕಾರಿಗಳ ಕಛೇರಿಯತ್ತ ಸಾಗಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.