ಗಾಂಧೀಜಿ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧ ಅಹಿಂಸಾ ಚಳುವಳಿ. ಮೆರವಣಿಗೆಯಲ್ಲಿ ಬ್ರಿಟೀಷರ ವಿರುದ್ಧ ಘೋಷಣೆಗಳು. ಬಾಲಕನೊಬ್ಬ ಉತ್ಸಾಹದಲ್ಲಿ ಚಳುವಳಿಯೊಳಗೆ ಸೇರಿಕೊಂಡ…
ಮೆರವಣಿಗೆ ಸೇತುವೆಯ ಮೇಲೆ ಸಾಗುತ್ತಿತ್ತು. ಅದನ್ನೇ ಕಾಯುತ್ತಿದ್ದ ಬ್ರಿಟೀಷ್ ಪೊಲೀಸರು ಎರಡೂ ಕಡೆಯಿಂದ ಚಳುವಳಿಗಾರರನ್ನು ಸುತ್ತುವರಿದರು. ಪ್ರಾರಂಭವಾಯ್ತು ದೌರ್ಜನ್ಯ. ಮುದಕರು, ಹೆಂಗಸರು, ಮಕ್ಕಳೆಂದೂ ನೋಡದೆ ಹೊಡೆದರು. ಒಬ್ಬ ಬ್ರಿಟೀಷ್ ಅಧಿಕಾರಿ ವೃದ್ಧರೋರ್ವರನ್ನು ತನ್ನ ಬೂಟಿನ ಕೆಳಗೆ ಹಾಕಿ ಅವರ ಜುಟ್ಟು ಹಿಡಿದು ತನ್ನ ಲಾಠಿಯಿಂದ ಅವರ ಮುಖಕ್ಕೆ ಬಾರಿಸುತ್ತಿದ್ದಾನೆ. ಅವನ ಲಾಠಿ ರಕ್ತದ ಬಣ್ಣದಿಂದ ಗಹಗಹಿಸುತ್ತಿತ್ತು. ಆದರೆ ಯಾರೂ ಕೈ ಎತ್ತುವ ಹಾಗಿರಲಿಲ್ಲ. ಅದು ಅಹಿಂಸಾ ಹೋರಾಟ.
ಆದರೆ ಆ ಬಾಲಕನಿಗೆ ಸುಮ್ಮನಿರಲಾಗಲಿಲ್ಲ. ರಕ್ತ ಕುದಿಯಿತು. ಈ ಬ್ರಿಟೀಷ್ ಕುನ್ನಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಯೋಚಿಸಿ ಅತ್ತಿತ್ತ ನೋಡಿದ. ಕಲ್ಲೊಂದನ್ನು ಆರಿಸಿಕೊಂಡ. ಆ ವೃದ್ಧರನ್ನು ಬೂಟು ಕಾಲಲ್ಲಿ ಒತ್ತಿ ಹಿಡಿದ ಅಧಿಕಾರಿಯ ಹಣೆಯನ್ನು ಗುರಿಯಾಗಿಸಿ ಸಂಪೂರ್ಣ ಶಕ್ತಿ ಹಾಕಿ ರಪ್ಪನೆ ಹೊಡೆದ.
ಗುರಿ ತಪ್ಪಲಿಲ್ಲ. ಕಲ್ಲು ಹಣೆಗೆ ಬಲವಾಗಿ ಹೊಡೆಯಿತು. ಚಿಲ್ಲನೆ ಚಿಮ್ಮಿತು ರಕ್ತ. ಪೆಟ್ಟು ತಿಂದ ಅಧಿಕಾರಿ ಮಾತ್ರವಲ್ಲ. ಉಳಿದ ಪೊಲೀಸರು ಮತ್ತು ಪ್ರತಿಭಟನಾಕಾರರೂ ಸ್ತಬ್ಧರಾದರು. ಯಾರು ಈ ಧೈರ್ಯವಂತ ಎಂಬುದು ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವಾಗಲಿಲ್ಲ. ಎಲ್ಲರೂ ಸ್ತಬ್ಧರಾಗಿರುವಾಗ ಆ ಹುಡುಗ ಮಾತ್ರ ಚಪ್ಪಾಳೆ ತಟ್ಟಿ ಹುಚ್ಚೆದ್ದು ಕುಣಿಯುತ್ತಿದ್ದ.
ಹಣೆಯಲ್ಲಾದ ಗಾಯದ ನೋವಿಗಿಂತ, ಹುಡುಗ ಅಣಕಿಸುತ್ತಿರುವುದೇ ಹೆಚ್ಚು ಸಿಟ್ಟು ತರಿಸಿತ್ತು ಅಧಿಕಾರಿಗೆ… ‘ಹಿಡ್ಕೊಂಡು ಬನ್ನಿ ಆ ಹುಡುಗನನ್ನು’ ಎಂದ.. ಹಿಡಿಯಲು ಹೊರಟರು. ಆದರೆ ಹುಡುಗ ಅಷ್ಟು ಸುಲಭದಲ್ಲಿ ಸಿಕ್ಕಾನೆಯೇ ?
ಓಡಿದ…. ಅವರೂ ಬೆನ್ನಟ್ಟಿದರು. ಆಡಿಸಿದ… ಓಡಿಸಿದ… ಹಿಡಿಯಲು ಬಂದವರನ್ನೇ ಬಳಲಿಸಿದ… ಅವರ ಕೈಗೆ ಸಿಗುತ್ತಿರಲಿಲ್ಲ. ಆದರೆ ಕುತೂಹಲ, ಸಿಕ್ಕರೆ ಇವರೇನು ಮಾಡಬಹುದು ? ಬೇಕೆಂದೇ ಸಿಕ್ಕಿದ.. ಎಳ್ಕೊಂಡು ಬಂದ್ರು ಬ್ರಿಟೀಷ್ ನ್ಯಾಯಾಧೀಶನ ಮುಂದೆ. ‘ ಯಾರು ನೀನು, ನಿನ್ನ ಹೆಸರೇನು?’ ಕೇಳಿದ ನ್ಯಾಯಾಧೀಶ. ತಟ್ಟನೆ ಹೇಳಿದ ಹುಡುಗ ‘ನಾನು ಸ್ವಾತಂತ್ರ್ಯ-ಮೈ ಆಜಾದ್ ಹೂಂ’. ದಂಗಾದ ನ್ಯಾಯಾಧೀಶ ‘ನಿನ್ನ ತಂದೆಯ ಹೆಸರೇನು?’ ಮರು ಪ್ರಶ್ನೆ ಹಾಕಿದ. ತಡವರಿಸಿಕೊಂಡು ಬಾಲಕ ಉತ್ತರಿಸುತ್ತಾನೆ… ‘ನಿನ್ನಂತಹ ನೂರಾರು ಬ್ರಿಟಿಷ್ ಜಡ್ಜ್ಗಳನ್ನು ಕಾಲಕೆಳಗೆ ಮೆಟ್ಟಿನಿಲ್ಲಬಲ್ಲ ‘ಸ್ವಾಧೀನತೆ’ ನನ್ನ ತಂದೆ ಅಂದ.
ಮೊದಲೇ ಕೆಂಪು ಮೂತಿ. ಮತ್ತಷ್ಟು ಕೆಂಪಡರಿತು. ‘ನಿನ್ನ ತಾಯಿ’ – ‘ಭಾರತಮಾತೆಯೇ ನನ್ನ ತಾಯಿ’ ಹುಡುಗ ಉತ್ತರವಿತ್ತ. ಮತ್ತೆ ಎದೆಗೆ ಒದ್ದ ಅನುಭವ ಅಧಿಕಾರಿಗೆ. ‘ನಿನ್ನ…’ ಜಡ್ಜ್ ಪೂರ್ಣ ಪ್ರಶ್ನೆ ಕೇಳುವ ಮೊದಲೇ ಹುಡುಗನೆಂದ.. ‘ನಿಲ್ಲಿಸಿ’ ನಿಮ್ಮ ಮುಂದಿನ ಪ್ರಶ್ನೆ ಏನೆಂದು ನನಗೆ ಗೊತ್ತು ‘ನಿನ್ನ ಮನೆಯೆಲ್ಲಿ’ ಎಂದು ಕೇಳುತ್ತೀರಿ. ನೀವು ಕೇಳುವ ಮೊದಲೇ ಹೇಳುತ್ತೇನೆ. ಇಷ್ಟೆಲ್ಲಾ ನಾನು ಹೇಳಿದ ನಂತರ ನನ್ನ ಮನೆ… ಅದು ಸೆರೆಮನೆ ಅಂದ. ಸಂಪೂರ್ಣ ನಾಯ್ಯಾಲಯ ದಂಗು ಬಡಿದು ಹೋಯಿತು ಹುಡುಗನ ಕೆಚ್ಚೆದೆಯ ಉತ್ತರಕ್ಕೆ. ಪುಟ್ಟ ಹುಡುಗನಿಗೆ ಶಿಕ್ಷೆ ಪ್ರಕಟವಾಯಿತು.
೧೬ ಛಡಿಯೇಟಿನ ಶಿಕ್ಷೆ. ಅಬ್ಬಾ… ಹುಡುಗ ವಿಚಲಿತನಾಗಲಿಲ್ಲ. ಶಿಕ್ಷೆ ಪ್ರಾರಂಭವಾಯಿತು. ಜನ ಸುತ್ತಲೂ ಸೇರಿದ್ದಾರೆ. ಮೊದಲ ಛಡಿಯೇಟು … ಹೊಡೆದ ಛಟಿ ಬಾಲಕನ ದೇಹಕ್ಕೆ ಎರಡು ಸುತ್ತು ಹಾಕಿತು. ವಾಪಾಸ್ ಎಳೆದ. ಛಡಿಯ ಬಾಲದ ತುದಿಯಲ್ಲಿರುವ ಮುಳ್ಳಿನ ರಚನೆ ಚರ್ಮ ಕಿತ್ತು ತಂದಿತು. ಪ್ರತಿ ಹೊಡೆತಕ್ಕೂ ಚರ್ಮ ಮಾಂಸ ಕಿತ್ತು ಬಂತು… ನೋಡುತ್ತಿದ್ದವರ ಕಣ್ಣಲ್ಲಿ ನೀರು. ಆದರೆ… ಆದರೆ ಹುಡುಗ ಕಣ್ಣೀರು ಹಾಕಲಿಲ್ಲ. ಆತ ಹಾಕಿದ್ದು ಜಯಘೋಷ.. ವಂದೇ ಮಾತರಂ – ವಂದೇ ಮಾತರಂ… ಬಾಲಕ ಚಂದ್ರಶೇಖರ ಅವತ್ತು ಪ್ರತಿಜ್ಞೆ ಮಾಡುತ್ತಾನೆ. ‘ಇಂದೇ ಕೊನೆ ಇನ್ನು ನಿಮ್ಮ ಕೈಗೆ ನಾನು ಸಿಗುವುದಿಲ್ಲ. ಸಾಯುವುದಿದ್ದರೂ ಸ್ವತಂತ್ರನಾಗಿಯೇ ಸಾಯುತ್ತೇನೆ. ಮೈ ಆಜಾದ್ ಹೂಂ ಆಜಾದ್ ಹೀ ರಹೂಂಗಾ’ ಚಂದ್ರಶೇಖರ… ಚಂದ್ರಶೇಖರ ಆಜಾದ್ ಎಂದೇ ಜನಜನಿತನಾದ ಮತ್ತು ತನ್ನ ಪ್ರತಿಜ್ಞೆಗೆ ಭಂಗ ಬಾರದಂತೆ ಬ್ರಿಟೀಷರ ಕೈಗೆ ಯಾವತ್ತೂ ಸಿಗದೆ ತನ್ನ ಕ್ರಾಂತಿಕಾರಿ ಚಟುವಟಿಕೆಗಳಿಂದ ಸಂಪೂರ್ಣ ಬ್ರಿಟೀಷ್ ಪಾಳಯಕ್ಕೆ ನಡುಕ ಹುಟ್ಟಿಸಿದ ಧೀರ… ಚಂದ್ರಶೇಖರ ಆಜಾದ್.
ಪ್ರಪಂಚ ಏನೆಂದು ಅರಿವಾಗುವ ವಯಸ್ಸು ಅದು.. ಆವಾಗಲೇ ತನ್ನ ಜೀವನ ರಾಷ್ಟ್ರಕ್ಕೆ ಸಮರ್ಪಿತ ಅನ್ನುವ ಸಮರ್ಪಿತ ಮನಸ್ಸುಗಳು ನಿಮಗೆ ಕಾಣಸಿಗುವುದು ಭಾರತದಲ್ಲಿ ಮಾತ್ರ… ಭಾರತದಲ್ಲಿ ಮಾತ್ರ….
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.