ಬಂಟ್ವಾಳ : ಗುರುವಾರ ನಡೆದ ಮಿನಿ ವಿಧಾನ ಸೌಧ ಹಾಗ ನಿರೀಕ್ಷಣಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಪುರಸಭೆಯ ಸ್ಥಳೀಯ ಸದಸ್ಯರನ್ನು ಆಹ್ವಾನಿಸದೆ ಅವಮಾನಿಸಿರುವುದಲ್ಲದೆ ಸೌಜನ್ಯಕ್ಕಾದರೂ ಆಹ್ವಾನ ಪತ್ರವನ್ನು ನೀಡದೆ ಕಡೆಗಣಿಸಿರುವ ಅಧಿಕಾರಿಗಳ ನೀತಿಯನ್ನು ಖಂಡಿಸಿ ಪುರಸಭೆಯ ಬಿಜೆಪಿ ಸದಸ್ಯರು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ರವರ ಮುಂದೆ ಕೈತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಗೈದರು.
ಪುರಸಭೆಯ ವಿಪಕ್ಷನಾಯಕ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಭಾಸ್ಕರ ಟೈಲರ್, ಸುಗುಣ ಕಿಣಿಯವರು ತೋಳಿಗೆ ಕಪ್ಪು ಪಟ್ಟಿ ಧರಿಸಿ ವೇದಿಕೆಯ ಮುಂಭಾಗ ಧರಣಿ ಕುಳಿತುಕೊಳ್ಳಲು ಧಾವಿಸುತ್ತಿದ್ದಂತೆ ಸಬ್ ಇನ್ಸ್ಪೆಕ್ಟರ್ಗಳಾದ ನಂದಕುಮಾರ್, ರಕ್ಷಿತ್ ಮತ್ತಿತರ ಸಿಬ್ಬಂದಿಗಳು ತಡೆಹಿಡಿದು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಧಮ್ಮಯ್ಯ ಹಾಕಿದ ಎಸ್.ಐ, ತಹಶೀಲ್ದಾರ್ : ಸಮಾರಂಭದ ಸಭಾಂಗಣದ ಮುಂದೆ ಪ್ರತಿಭಟನೆ ನಡೆಸುವ ಬಗ್ಗೆ ಬುಧವಾರ ರಾತ್ರಿಯೇ ಬಿಜೆಪಿ ಸದಸ್ಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಈ ಸುದ್ದಿ ಬಂಟ್ವಾಳ ತಹಶೀಲ್ದಾರರಿಗೂ ತಲುಪಿತ್ತು. ಬಳಿಕ ಎಚ್ಚೆತ್ತುಕೊಂಡ ಎಸ್.ಐ ನಂದಕುಮಾರ್, ತಹಶೀಲ್ದಾರ್ ಪುರಂದರ ಹೆಗ್ಡೆಯವರು ಬಿಜೆಪಿ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಸದಸ್ಯರು ಇದಕ್ಕೆ ಸೊಪ್ಪು ಹಾಕಿಲ. ಗುರುವಾರ ಪ್ರತಿಭಟನೆ ಆರಂಭಿಸಿದಾಗಲೂ ಎಸ್.ಐ ನಂದ ಕುಮಾರ್, ಪ್ರತಿಭಟನಾನಿರತ ಸದಸ್ಯರನ್ನು ಪರಿಪರಿಯಾಗಿ ಮನವಿ ಮಾಡಿಕೊಂಡರು ಈ ಸಂಧರ್ಭದಲ್ಲಿ ಶಿಷ್ಟಾಚಾರಾಧಿಕಾರಿಯ ವಿರುದ್ಧ ಸೂಕ್ತ ಕ್ರಮಕ್ಕಾಗಿ ವರದಿ ನೀಡುವ ಭರವಸೆಯಿತ್ತ್ತ ನಂತರ ಬಂಧನಕ್ಕೊಳಗಾದರು.
ಯಾಕಾಗಿ ಧರಣಿ : ಇತ್ತೀಚೆಗೆ ನಡೆದ ಕೆಪಿಟಿ ವಿದ್ಯಾರ್ಥಿನಿ ನಿಲಯ, ಅಗ್ನಿಶಾಮಕ ಠಾಣೆ ಉದ್ಘಾಟನೆ, ಸಮಗ್ರ ಕುಡಿಯುವ ನೀರಿನ ಯೋಜನೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ, ಸಮಾರಂಭಕ್ಕೆ ಬಿಜೆಪಿ ಸದಸ್ಯರನ್ನು ಉದ್ದೇಶ ಪೂರ್ವಕ ಎಂಬಂತೆ ಕಾರ್ಯಕ್ರಮಕ್ಕೆ ಕಡೆಗಣಿಸಲಾಗಿತ್ತು ಹಾಗೆಯೇ ವಿವಿಧ ಗ್ರಾ. ಪಂ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಉದ್ಘಾಟನಾ ಸಮಾರಂಭಕ್ಕೂ ಬಿಜೆಪಿ ಬೆಂಬಲಿತ ಸದಸ್ಯರನ್ನು ಕಡೆಗಣಿಸಲಾಗುತ್ತಿದ್ದು ಪ್ರಸ್ತುತ ಕಾಂಗ್ರೇಸ್ ಕಾರ್ಯಕ್ರಮದಂತೆ ರೂಪಿಸಲಾಗುತ್ತಿದೆ. ಅಧಿಕಾರಿಗಳು ಕೂಡ ಇದಕ್ಕೆ ಸಾಥ್ ನೀಡಿ ಬಿಜೆಪಿಯಿಂದ ಚುನಾಯಿತರಾದ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುವ ಪರಿಪಾಠದಲ್ಲಿ ತೊಡಗಿದ್ದಾರೆ. ವೇದಿಕೆಯಲ್ಲಿ ಸಚಿವರಾಗಿ ಎಲ್ಲರೂ ಅಭಿವೃದ್ಧಿಯ ದೃಷ್ಟಿಯಿಂದ ರಾಜಕಾರಣ ಮಾಡಬಾರದೆಂದು ಬೋಧನೆ ಮಾಡುತ್ತಾರೆ. ಆದರೆ ಸಮಾರಂಭದ ವೇಳೆ ಕನಿಷ್ಟ ಆಮಂತ್ರಣ ಪತ್ರವನ್ನು ನೀಡದೆ ಕಡೆಗಣಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿವಾರ್ಯವಾಯಿತೆಂದು ಪುರಸಭಾ ಸದಸ್ಯರಾದ ಗೋವಿಂದ ಪ್ರಭು ಹಾಗೂ ದೇವದಾಸ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಿಷ್ಟಾಚಾರಾಧಿಕಾರಿ ವಿರುದ್ಧ ಕ್ರಮಕ್ಕೆ :ಯಾವ್ಯಾವ ಸರಕಾರಿ ಕಾರ್ಯಕ್ರಮಕ್ಕೆ ಯಾವ್ಯಾವ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಸರಕಾರದ ಶಿಷ್ಟಾಚಾರದಂತೆ ಆಹ್ವಾನ ಪತ್ರದಲ್ಲಿ ಜನಪ್ರತಿನಿಧಿಗಳ ಹೆಸರನ್ನು ಹೇಗೆ ಮುದ್ರಿಸಬೇಕೆಂಬ ನಿಯಮವಿದ್ದರೂ ಇದನ್ನೆಲ್ಲಾ ಜಿಲ್ಲೆಯ ಶಿಷ್ಟಾಚಾರಾಧಿಕಾರಿ ಗಾಳಿಗೆ ತೂರಿದ ಸಾಕಷ್ಟು ಉದಾಹರಣೆಗಳಿವೆ. ವಿಶೇಷ ಎಂಬಂತೆ ಬಂಟ್ವಾಳ ಕ್ಷೇತ್ರದಲ್ಲಾಗುವ ಪ್ರತಿ ಸರಕಾರಿ ಕಾರ್ಯಕ್ರಮದಲ್ಲೂ ಶಿಷ್ಟಾಚಾರವನ್ನು ಉಲ್ಲಂಘಿಸಲಾಗುತ್ತಿದೆ. ಅವರು ಉದ್ದೇಶ ಪೂರ್ವಕವಾಗಿ ಮಾಡುತ್ತಾರೋ ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿ ನಡೆದುಕೊಳ್ಳುತ್ತಾರೆಯೋ ಎಂಬುದು ನಮಗೆ ಯಕ್ಷ ಪ್ರಶ್ನೆಯಾಗಿದೆ ಎಂದು ತಿಳಿಸಿದಕ್ಕೆ ಸದಸ್ಯ ದೇವದಾಸ ಶೆಟ್ಟಿ ಗುರುವಾರದ ಎರಡು ಸರಕಾರಿ ಕಾರ್ಯಕ್ರಮದಲ್ಲೂ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದ್ದು ಈ ಹಿನ್ನಲೆಯಲ್ಲಿ ಶಿಷ್ಟಾಚಾರಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೇಂದು ಒತ್ತಾಯಿಸಿದ್ದಾರೆ.
ಸರಕಾರಿ ಕ್ರಮದಲ್ಲಿ ಕಾಂಗ್ರೆಸ್ ಮುಖಂಡ : ಒಂದೆಡೆ ಸರಕಾರಿ ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿರುವ ಆರೋಪವಿರುವಾಗಲೇ ಆದೇ ಕಾರ್ಯಕ್ರಮದ ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರಿಗೆ ಮಣೆ ಹಾಕಿರುವುದು ಈಗ ಚರ್ಚಿತ ವಿಷಯವಾಗಿದೆ. ಯಾವುದೇ ನಿಗಮ – ಮಂಡಳಿಯಲ್ಲಿ ಗುರುತಿಸದ, ಸದ್ಯ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡ ಬಿ.ಎಚ್. ಖಾದರ್ ಬಂಟ್ವಾಳ ಸರಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತು ಪೋಟೋ ಪೋಸು ಕೋಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಇದು ವಿಪಕ್ಷ ಮಾತ್ರವಲ್ಲ ಅವರದೆ ಆದ ಪಕ್ಷದ ಕೆಲ ಮುಖಂಡರಿಗೂ ಇರಿಸು ಮುರಿಸು ತಂದಿದೆ. ಅಧಿಕಾರಿಗಳು ಕೂಡ ಖಾಸಗಿ ವ್ಯಕ್ತಿಯೊಬ್ಬರಿಗೆ ಸರಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕುರ್ಚಿಕೊಟ್ಟು ಸತ್ಕರಿಸುತ್ತಿರುವುದು ವಿಪರ್ಯಾಸವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಇತ್ತೀಚಿನ ಎಲ್ಲಾ ಸರಕಾರಿ ಕಾರ್ಯಕ್ರಮದಲ್ಲೂ ಬಿ. ಎಚ್ ಖಾದರ್ರವರು ವೇದಿಕೆಯಲ್ಲಿ ಕಾಣಿಸಿಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.