ಡಾಕ್ಟರ್ಜೀ, ಗುರೂಜಿ ಪ್ರಚಾರಕರು ಹೇಗೆ ಬದುಕಬೇಕು ಎಂಬ ಬಗ್ಗೆ ನಿರ್ಬಂಧಗಳನ್ನೇನಾದರೂ ಹಾಕಿದ್ದರಾ?
– ಅಂಥದೇನಿಲ್ಲ. ಒಬ್ಬ ಪ್ರಚಾರಕ ಹೇಗಿರಬೇಕೆಂದರೆ ಆತ ಹಗಲೂರಾತ್ರಿ ನಿರಂತರ ಕೆಲಸಮಾಡಿ ರಾತ್ರಿ ದಿಂಬಿಗೆ ತಲೆಕೊಟ್ಟರೆ ತಕ್ಷಣ ನಿದ್ದೆ ಆವರಿಸಿಕೊಳ್ಳಬೇಕು. ಆ ರೀತಿ ಶ್ರಮಪಡಬೇಕು ಎಂದು ಗುರೂಜಿಯವರು ಹೇಳುತ್ತಿದ್ದುದುಂಟು. ಪ್ರಚಾರಕ ಹಲವು ಬಗೆಯ ಕಷ್ಟಗಳನ್ನು ಸಹಿಸಬೇಕಾಗುತ್ತದೆ. ಮೋಹಗಳನ್ನು ಗೆಲ್ಲಬೇಕಾಗುತ್ತದೆ. ಏಕೆಂದರೆ ಆತ ಕೆಲಸಮಾಡುವುದು ಜನರ ಮಧ್ಯದಲ್ಲಿ, ಕಾಡಿನಲ್ಲಲ್ಲ. ಅಲ್ಲಿ ಆತನ ಸ್ನೇಹಿತರು, ಬಂಧುಬಳಗ ಎಲ್ಲರೂ ಇರುತ್ತಾರೆ. ಸ್ನೇಹಿತರು ಒಳ್ಳೆಯ ಉದ್ಯೋಗದಲ್ಲಿದ್ದು ಮದುವೆ ಮಾಡಿಕೊಂಡು ಸುಖಸಂಸಾರ ನಡೆಸುತ್ತಿರುವುದು ಇವನಿಗೂ ಕಾಣುತ್ತಿರುತ್ತದೆ. ಆಗ ಈ ಪ್ರಚಾರಕನಲ್ಲೂ ಭಾವನೆಗಳ ಹೊಯ್ದಾಟ ಆಗುವುದು ಸಹಜ. ಆದರೆ ಅಂತಹ ಸ್ಥಿತಿಯಿಂದ ಆತ ಮೇಲೆದ್ದು ನಿಂತು ಕಾರ್ಯನಿರ್ವಹಿಸಬೇಕು. ಮನಸ್ಸು ಗಟ್ಟಿಮಾಡಿಕೊಳ್ಳಬೇಕು. ಸ್ವಾಮಿ ವಿವೇಕಾನಂದರಂಥವರಿಗೂ ಇಂಥ ಪ್ರಶ್ನೆಗಳು ಕಾಡಿದ್ದವು. ಸನ್ಯಾಸಿಯಾಗಿದ್ದರೂ ಅವರಿಗೆ ಮನೆಯ ಮೇಲಿನ ಮೋಹ ಒಂದು ಬಾರಿ ಕಾಡಿತ್ತು. ಒಮ್ಮೆ ತಮ್ಮ ತಾಯಿಯವರ ನೆನಪಾಗಿ ಅವರನ್ನು ನೋಡಲು ಹೋಗಿದ್ದಾಗ ಮನೆಯಲ್ಲಿದ್ದ ಕಡುಬಡತನ, ಊಟಕ್ಕೇ ತತ್ವಾರದ ಸ್ಥಿತಿಕಂಡು ಅವರ ಮನಸ್ಸು ವಿಹ್ವಲಗೊಂಡಿತ್ತು. ಆದರೆ ಇನ್ನೊಂದೆಡೆ ಪರಮಹಂಸರು ನಿರ್ಧರಿಸಿದ ತನ್ನ ಬದುಕಿನ ಗುರಿ ಸಾಸಬೇಕೆಂಬ ತುಡಿತವೂ ತೀವ್ರವಾಗಿತ್ತು. ಅದಕ್ಕೇ ಅವರು ತಮ್ಮ ಕೃತಿಯಲ್ಲಿ ಒಂದೆಡೆ ಹೇಳಿದ್ದಾರೆ : nothing great can be achieved without great sacrifices….
– ಈ ಮೇಲಿನ ಪ್ರಶ್ನೋತ್ತರ 2011 ರ ’ವಿಕ್ರಮ’ ವಿಜಯದಶಮಿ ಸಂಚಿಕೆಗೆ ಆರೆಸ್ಸೆಸ್ನ ಜೇಷ್ಠ ಪ್ರಚಾರಕ ಕೃ. ಸೂರ್ಯನಾರಾಯಣ ರಾವ್ ನೀಡಿದ ಸಂದರ್ಶನದ ಭಾಗ. ಮೊನ್ನೆ ನ. 18 ರಂದು ತಮ್ಮ ಬದುಕಿಗೆ ವಿದಾಯ ಹೇಳಿದ ಕೃ. ಸೂರ್ಯನಾರಾಯಣ ರಾವ್ (ಸೂರೂಜೀ ಎಂದೇ ಎಲ್ಲರಿಗೂ ಚಿರಪರಿಚಿತರು) ಅವರನ್ನು ನೆನೆಪಿಸಿಕೊಂಡಾಗಲೆಲ್ಲ ಈ ಸಂದರ್ಶನ ಮತ್ತೆಮತ್ತೆ ನನ್ನ ನೆನಪಿಗೆ ಬರುತ್ತಿದೆ. ಆ ಸಂದರ್ಶನದಲ್ಲಿ ಅವರು ಹೇಳಿದ್ದಂತೆ, ಅವರು ಒಬ್ಬ ಆದರ್ಶ ಪ್ರಚಾರಕನಾಗಿಯೇ ತಮ್ಮ ಅಂತಿಮ ಉಸಿರಿನವರೆಗೂ ನಡೆದುಕೊಂಡರು. ಬದುಕಿನ 93 ವರ್ಷಗಳ ಕಾಲ (ಜನನ : 20-08-1924) ಅವರು ವ್ಯರ್ಥವಾಗಿ ಕಳೆದ ಒಂದೇಒಂದು ಕ್ಷಣ ಬಹುಶಃ ಇರಲಿಕ್ಕಿಲ್ಲ. ಕಟ್ಟುಮಸ್ತಾದ ಎತ್ತರದ ಶರೀರ. ವಯಸ್ಸು 93 ದಾಟಿದ್ದರೂ ಪೂರ್ತಿ ಬಿಳಿಯಾಗದ ಮೀಸೆ, ತಲೆಗೂದಲು. ಬಲಿಷ್ಠ ಶರೀರದಲ್ಲಿ ಅಷ್ಟೇ ಬಲಿಷ್ಠ ದೃಢ ಮನಸ್ಸು. ಕೆಲವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಸೊಂಟ, ಕಾಲುಗಳಿಗೆ ಪೆಟ್ಟಾಗಿದ್ದರಿಂದ ನಡೆಯುವಾಗ ಊರುಗೋಲಿನ ನೆರವು. ಅದು ಬಿಟ್ಟರೆ, ಕಳೆದ ಮೂರು ತಿಂಗಳ ಹಿಂದಿನವರೆಗೂ ಅವರದು ಆರೋಗ್ಯವಂತ ಶರೀರ. ಬಿಳಿಯ ಧೋತಿಯ ಕಚ್ಚೆಪಂಚೆ, ತುಂಬುದೋಳಿನ ಬಿಳಿಯ ಜುಬ್ಬಾ, ಹಣೆಯಮೇಲೆ ವಿಭೂತಿ, ಕುಂಕುಮ ಧರಿಸಿ ಅವರು ನಡೆದಾಡುತ್ತಾ ಬಂದರೆ ತಕ್ಷಣ ಅವರ ಕಾಲಿಗೆರಗಬೇಕೆಂದೆನಿಸುವ ಗೌರವದ ನೋಟ. ಅವರದೇ ವಿಶಿಷ್ಟ ಧ್ವನಿಯಲ್ಲಿ, ಅಸ್ಖಲಿತ ವಾಣಿಯಲ್ಲಿ ವಿಷಯಗಳ ಸಮರ್ಥ ಮಂಡನೆ. ಪ್ರಚಂಡ ವಾಗ್ಮಿ. ಅದು ಕೇಳುಗರ ಮನಗಳನ್ನು ಕೆರಳಿಸುವಂಥದ್ದಲ್ಲ. ಆದರೆ ಆ ಮನಗಳನ್ನರಳಿಸಿ ಆ ವಿಚಾರಧಾರೆಗೆ ಮನಸೋಲುವಂತೆ ಮಾಡುವ ಮೋಡಿ ಅವರ ವಾಣಿಯಲ್ಲಿ .
ತಮ್ಮ ಬಿಎಸ್ಸಿ (ಆನರ್ಸ್) ಪದವಿ ಮುಗಿದ ಬಳಿಕ 1946 ರಿಂದ ಸಂಘದ ಪ್ರಚಾರಕರಾಗಿದ್ದ ಸೂರೂಜಿ ಅವರದು ಸಂಪೂರ್ಣ ಸಂಘಸಮರ್ಪಿತ ಬದುಕು. ಸಂಘದಲ್ಲಿ ಹತ್ತುಹಲವು ಗುರುತರ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ. ವಿದ್ಯಾರ್ಥಿ ದೆಸೆಯಿಂದಲೇ ಅವರಿಗೆ ಸಂಘದ ಸಂಪರ್ಕ. ಬೆಂಗಳೂರು ವಿಭಾಗ ಪ್ರಚಾರಕ, ಕರ್ನಾಟಕ ಉತ್ತರ (ಇಂದಿನ ಉತ್ತರ ಕರ್ನಾಟಕ ಪ್ರಾಂತ) ಸಂಭಾಗ ಪ್ರಚಾರಕ, ದಕ್ಷಿಣ ಸಹಕ್ಷೇತ್ರ ಪ್ರಚಾರಕ, ಅನಂತರ ಶ್ರೀಗುರೂಜಿಯವರ ಆದೇಶದಂತೆ ಸಂಘಕಾರ್ಯದ ದೃಷ್ಟಿಯಿಂದ hard nut to crack ಎನಿಸಿದ್ದ ತಮಿಳುನಾಡು ಪ್ರಾಂತ ಪ್ರಚಾರಕರಾಗಿ 1970 ರಿಂದ 1984 ರವರೆಗೆ ಕಾರ್ಯನಿರ್ವಹಣೆ. 1984 ರಿಂದ 1990 ರವರೆಗೆ ದಕ್ಷಿಣ ಕ್ಷೇತ್ರ ಪ್ರಚಾರಕ. 1990 ರಿಂದ 2000 ಇಸವಿವರೆಗೆ ಸಂಘದ ಆ. ಭಾ. ಸೇವಾಪ್ರಮುಖ್. ಅದೇ ವೇಳೆ ಅಮೆರಿಕ, ಟ್ರಿನಿಡಾಡ್, ಕೆನಡಾ, ಇಂಗ್ಲೆಂಡ್, ಜರ್ಮನಿ, ಹಾಲೆಂಡ್, ನಾರ್ವೆ, ಪೂರ್ವ ಆಫ್ರಿಕಾ, ಮಲೇಷಿಯಾ, ಸಿಂಗಪೂರ್ ಮುಂತಾದ ದೇಶಗಳಲ್ಲಿ ನಡೆದಿರುವ ಹಿಂದು ಚಟುವಟಿಕೆಗಳನ್ನು ಗಮನಿಸಲು ಅಲ್ಲಿಗೆ ಪ್ರವಾಸ. ಅನಂತರ ಅ.ಭಾ. ಕಾರ್ಯಕಾರಿಣಿ ಸದಸ್ಯ…. ಹೀಗೆ ಸೂರೂಜಿ ನಿರ್ವಹಿಸಿದ ಗುರುತರ ಹೊಣೆಗಾರಿಕೆಗಳು ಹತ್ತು ಹಲವು.
ತಮಿಳುನಾಡು ಪ್ರಾಂತಪ್ರಚಾರಕರಾಗಿದ್ದಾಗ ತಮಿಳು ಕಲಿತು ತಮಿಳಿನಲ್ಲೂ ನಿರರ್ಗಳ ಭಾಷಣಮಾಡಿ ತಮಿಳರ ಮನಗೆದ್ದ ಸಂಘಟನಾ ಚತುರ. ಸಂಘದ ದ್ವಿತೀಯ ಸರಸಂಘಚಾಲಕರಾಗಿದ್ದ ಶ್ರೀಗುರೂಜಿ ಅವರೊಂದಿಗೆ ಅತ್ಯಂತ ನಿಕಟ ಸಂಪರ್ಕ ಸೂರೂಜಿ ಅವರಿಗಿತ್ತು. ಬಹುಶಃ ಗುರೂಜಿ ಜೊತೆಗೆ ಕರ್ನಾಟಕದಲ್ಲಿ ಸೂರೂಜಿಯವರಿಗಿದ್ದಷ್ಟು ನಿಕಟ ಸಂಪರ್ಕ ಇನ್ನಾರಿಗೂ ಇರಲಿಕ್ಕಿಲ್ಲ. ಶ್ರೀ ಗುರೂಜಿ ಅವರ ಕುರಿತು ಸೂರೂಜಿ ದೊಡ್ಡದೊಂದು ಇಂಗ್ಲಿಷ್ ಕೃತಿಯನ್ನೇ ರಚಿಸಿದ್ದಾರೆ. ಗುರೂಜಿಯವರ ಜೊತೆಗಿನ ಒಡನಾಟ, ಅನೇಕ ಸ್ವಾರಸ್ಯಪೂರ್ಣ ಪ್ರಸಂಗಗಳು ಆ ಕೃತಿಯಲ್ಲಿವೆ. ಈ ಕೃತಿಗೆ ಖ್ಯಾತ ಅಂಕಣಕಾರ ಎಸ್. ಗುರುಮೂರ್ತಿ 120 ಪುಟಗಳಿಗೂ ಹೆಚ್ಚಿನ ಮುನ್ನುಡಿ ಬರೆದುಕೊಟ್ಟಿರುವುದು ಸೂರೂಜಿಯವರ ಭವ್ಯವ್ಯಕ್ತಿತ್ವಕ್ಕೊಂದು ನಿದರ್ಶನ.
ಸ್ವಾಮಿ ವಿವೇಕಾನಂದರ ಸಮಗ್ರ ಬದುಕಿನ ಬಗ್ಗೆ ಆಳವಾದ ಅಧ್ಯಯನ ಮಾಡಿದ ಇನ್ನೊಬ್ಬ ಸ್ವಯಂಸೇವಕ ಸೂರೂಜಿಯವರೇ. (ಕನ್ಯಾಕುಮಾರಿಯಲ್ಲಿ ವಿವೇಕಾನಂದ ಶಿಲಾಸ್ಮಾರಕ ನಿರ್ಮಾಣದ ಹರಿಕಾರ ಏಕನಾಥ ರಾನಡೆ ವಿವೇಕಾನಂದರ ಕುರಿತು ಆಳವಾಗಿ ಅಧ್ಯಯನ ಮಾಡಿದ ಮೊಟ್ಟಮೊದಲ ಸ್ವಯಂಸೇವಕ). ವಿವೇಕಾನಂದರ ಕುರಿತು ಸೂರೂಜಿ ಭಾಷಣ ಆರಂಭಿಸಿದರೆಂದರೆ ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಸ್ವಾಮೀಜಿಯವರ ಭವ್ಯ ಬದುಕಿನ ಸ್ಮರಣೀಯ ಪ್ರಸಂಗಗಳು, ಸಿಡಿಲ ಸನ್ಯಾಸಿಯ ಅದ್ಭುತ, ಪ್ರೇರಣಾಪ್ರದ ಹೇಳಿಕೆಗಳು ಸೂರೂಜಿಯವರ ಬಾಯಲ್ಲಿ ನಿರರ್ಗಳವಾಗಿ ಹರಿದಾಡುತ್ತಿತ್ತು. ಅಂತಹ ಅದ್ಭುತ ಸ್ಮರಣಶಕ್ತಿ, ಮಾಹಿತಿಸಂಗ್ರಹ ಸಾಮರ್ಥ್ಯ ಅವರದಾಗಿತ್ತು. 1983 ರ ಉಜಿರೆಯ ವಿಶ್ವಹಿಂದು ಪರಿಷತ್ನ ಸಮ್ಮೇಳನ ಸಂದರ್ಭದಲ್ಲಿ ಸೂರೂಜಿ ತಮ್ಮ ಎಂದಿನ ಬಿಳಿಯ ಜುಬ್ಬಾ, ಕಚ್ಚೆಪಂಚೆ ಧರಿಸಿ ಪ್ರತಿನಿಧಿಗಳನ್ನು ಮಾತನಾಡಿಸುತ್ತಾ ಬರುವ ದೃಶ್ಯ ಕಂಡರೆ ಸ್ವತಃ ವಿವೇಕಾನಂದರನ್ನೇ ಕಂಡಂತಾಗುತ್ತಿತ್ತು ಎಂದು ಆ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಗೋಪಾಲ ಕಣ್ಣನ್ ಅವರ ಮಡದಿ ಅಂಬುಜಮ್ಮ ಒಮ್ಮೆ ನನ್ನ ಬಳಿ ಭಾವುಕರಾಗಿ ಹೇಳಿಕೊಂಡಿದ್ದರು. ರಾಮಕೃಷ್ಣಾಶ್ರಮ ಏರ್ಪಡಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ವಿವೇಕಾನಂದರ ಕುರಿತು ಸುದೀರ್ಘ ಉಪನ್ಯಾಸ ನೀಡಿದ್ದರು. ಅವರ ವಾಗ್ಝರಿ, ವಿವೇಕಾನಂದರ ಬಗೆಗಿನ ವ್ಯಾಪಕ ಅಧ್ಯಯನ ಕಂಡು ಸ್ವತಃ ರಾಮಕೃಷ್ಣಾಶ್ರಮದ ಹಲವು ಹಿರಿಯ ಸನ್ಯಾಸಿಗಳೇ ಆಶ್ಚರ್ಯಚಕಿತರಾಗಿದ್ದುಂಟು.
ಸೂರೂಜಿ ಒಬ್ಬ ಅತ್ಯುತ್ತಮ ಕುಶಲ ಸಂಘಟಕ ಎಂಬುದಕ್ಕೆ 1969 ರಲ್ಲಿ ಉಡುಪಿಯಲ್ಲಿ ಯಶಸ್ವಿಯಾಗಿ ಜರುಗಿದ ವಿಶ್ವಹಿಂದು ಪರಿಷತ್ ಸಮ್ಮೇಳನವೇ ದಿವ್ಯಸಾಕ್ಷಿ. ಆ ಸಮ್ಮೇಳನಕ್ಕೆ ನಿರೀಕ್ಷೆಯ ದುಪ್ಪಟ್ಟು ಪ್ರತಿನಿಗಳು ಆಗಮಿಸಿದಾಗ ಸ್ಥಳೀಯ ಪ್ರಮುಖರು ಕಂಗಾಲಾಗಿದ್ದರು. ಆದರೆ ಇಡೀ ಸಮ್ಮೇಳನದ ಹೊಣೆಹೊತ್ತ ಸೂರೂಜಿ, ಉಡುಪಿಯ ಮನೆಮನೆಗಳ ಬಾಗಿಲುತೆರೆದು ಪ್ರತಿನಿಗಳಿಗೆ ಆತಿಥ್ಯ ನೀಡಬೇಕೆಂದು ಮನವಿ ಮಾಡಿಕೊಂಡು, ಸಮ್ಮೇಳನದಲ್ಲಿ ಯಾವುದೇ ಅವ್ಯವಸ್ಥೆಯಾಗದಂತೆ ನೋಡಿಕೊಂಡಿದ್ದನ್ನು ಯಾರೂ ಮರೆಯಲಾರರು. ಮೊದಲಬಾರಿಗೆ ಆ ಸಮ್ಮೇಳನದ ವೇದಿಕೆಯಲ್ಲಿ ವಿವಿಧ ಜಾತಿ, ಮತ, ಪಂಥಗಳ ನೂರಕ್ಕೂ ಹೆಚ್ಚು ಮಠಾಧೀಶರು, ಸಂತರನ್ನು ಒಟ್ಟಿಗೆ ಸೇರಿಸಿದ ಯಶಸ್ಸಿನಲ್ಲೂ ಅವರದೇ ಪ್ರಮುಖ ಪಾತ್ರ. ಸಂಘವಿರೋ ವಾತಾವರಣ ಹೊಂದಿದ್ದ, ಹಿಂದು ಸಂಘಟನೆಯ ಕಾರ್ಯಕ್ಕೆ ಕಬ್ಬಿಣದ ಕಡಲೆಯಂತಿದ್ದ ತಮಿಳುನಾಡಿನಲ್ಲಿ ಹಿಂದುತ್ವದ ಹೂವರಳಿಸಿದ ಸಾಹಸ ಸೂರೂಜಿಯವರದು.
ವಿಕ್ರಮ ಕನ್ನಡ ವಾರಪತ್ರಿಕೆಯ ಹುಟ್ಟು, ಬೆಳವಣಿಗೆಯಲ್ಲಿ ಸೂರುಜಿಯವರ ಪಾತ್ರವನ್ನು ಮರೆಯುವಂತೆಯೇ ಇಲ್ಲ. ವಿಕ್ರಮ ಟ್ರಸ್ಟ್ನ ಕಾಯಂ ವಿಶ್ವಸ್ಥರಲ್ಲಿ ಅವರೂ ಒಬ್ಬರು. ಬೆಂಗಳೂರಿಗೆ ಬಂದಾಗಲೆಲ್ಲ ವಿಕ್ರಮದ ಸ್ಥಿತಿಗತಿ ಕುರಿತು ವಿಚಾರಿಸುತ್ತಿದ್ದರು. ಸಂಘ, ಹಿಂದುಸಮಾಜ, ಸಾಮಾಜಿಕ ಪರಿಸ್ಥಿತಿಗಳ ಕುರಿತು ವಿಜಯದಶಮಿ ವಿಶೇಷಾಂಕಗಳಲ್ಲಿ ಅವರದೊಂದು ಬೆಳುಕು ಚೆಲ್ಲುವ ಲೇಖನ ಪ್ರತಿವರ್ಷ ಇದ್ದೇ ಇರುತ್ತಿತ್ತು. ಇತ್ತೀಚೆಗೆ ಸಂಘ-90ರ ವಿಶೇಷಾಂಕದಲ್ಲೂ ಸೂರೂಜಿ ’ನೆನಪಿನ ಸುರುಳಿಯಿಂದ… ’ ಎಂಬ ದೀರ್ಘ ಲೇಖನವೊಂದನ್ನು ಬರೆದಿದ್ದರು.
ಸೂರೂಜಿಯವರದು ಅದ್ಭುತವಾದ ಸ್ಮರಣಶಕ್ತಿ. 50 ವರ್ಷಗಳ ಹಿಂದಿನ ಸಣ್ಣ ಘಟನೆಯೂ ಅವರ ನೆನಪಿನ ಬುತ್ತಿಯಿಂದ ನುಣುಚಿಕೊಂಡು ಹೊರಹೋಗಲು ಸಾಧ್ಯವಿರಲಿಲ್ಲ. ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಕೆಲವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಗಳಾಗಿ ಬಂದಿದ್ದ ಖ್ಯಾತ ವೈದ್ಯ ಡಾ. ನಾಗಲೋಟಿ ಮಠ ಅವರು ಸೂರು ಅವರ ಇಂತಹ ಅದ್ಭುತ ಸ್ಮರಣಶಕ್ತಿ ಹಾಗೂ ಬಲಿಷ್ಠ ಶರೀರಕ್ಕೆ ಅವರು ಬಾಲ್ಯದಿಂದ ಸಾಕಷ್ಟು ಹಸುವಿನ ತುಪ್ಪ ಸೇವಿಸಿರುವುದೇ ಕಾರಣವಿರಬಹುದು ಎಂದು ತಮಾಷೆ ಮಾಡಿದ್ದರು.
ಕೆಲವು ವರ್ಷಗಳ ಹಿಂದೆ ಅವರಿಗೆ ಪ್ರವಾಸದ ಸಂದರ್ಭದಲ್ಲಿ ಅಪಘಾತವೊಂದು ಸಂಭವಿಸಿ, ಅವರು ಆಸ್ಪತ್ರೆ ಸೇರಿದಾಗ ಇಡೀ ಕರ್ನಾಟಕದ ಸಾವಿರಾರು ಸ್ವಯಂಸೇವಕರು, ತಾಯಂದಿರು, ಕಾರ್ಯಕರ್ತರು ಕಣ್ಣೀರು ಮಿಡಿದಿದ್ದರು. ಸೂರೂಜಿ ಶೀಘ್ರ ಗುಣಮುಖರಾಗಲೆಂದು ದೇವರಿಗೆ ಮೊರೆ ಇಟ್ಟಿದ್ದರು. ಮೊನ್ನೆ ಶನಿವಾರ ಕೇಶವಕೃಪಾದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಯುವಕರು, ಯುವತಿಯರು, ವಯಸ್ಕರು, ಗಣ್ಯರು… ಬೆಳಿಗ್ಗೆ 9 ರಿಂದ ಸಂಜೆ 3 ರವರೆಗೂ ದೂರದ ಊರುಗಳಿಂದ ಬರುತ್ತಲೇ ಇದ್ದರು. ಶರಣರ ಗುಣವನ್ನು ಮರಣದಲ್ಲಿ ನೋಡು ಎಂಬಂತೆ, ಸೂರೂಜಿಯವರು ಅದೆಷ್ಟು ಅಗಣಿತ ಮಂದಿಯ ಮನಗಳಲ್ಲಿ ಪ್ರೀತಿ, ವಿಶ್ವಾಸ, ಆತ್ಮೀಯತೆಯ ಅಮೃತಧಾರೆ ಹರಿಸಿದ್ದರು ಎಂಬುದಕ್ಕೆ ಆ ದೃಶ್ಯ ದಿವ್ಯಸಾಕ್ಷಿಯಾಗಿತ್ತು.
ಸೂರೂಜಿ ಇನ್ನು ಕೇವಲ ನೆನಪು. ಆದರೆ ಅವರ ದಿವ್ಯ ನೆನಪುಗಳಿಗೆ ಸಾವಿಲ್ಲ ಎಂಬುದಂತೂ ಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.