ಮೈಸೂರು : ನಾವ್ಕಿಸ್ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೇಯಸ್ ಎನ್. ರಾವ್ ಮತ್ತು ಜಿ.ಎಂ. ಶಶಿಕುಮಾರ ಈ ಬಾರಿಯ ಹೊಯ್ಸಳ ಶೌರ್ಯ ಪ್ರಶಸ್ತಿಯನ್ನು ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಪಡೆಯಲಿದ್ದಾರೆ.
ಇದೇ ವರ್ಷ ಜೂನ್ 6 ರಂದು ನಾವ್ಕಿಸ್ ಶಾಲೆಯ ಮಕ್ಕಳು ಬಸ್ನಲ್ಲಿ ಮನೆಗೆ ಹಿಂತಿರುಗುತ್ತಿರುವಾಗ ಬಸ್ನ ಇಂಜಿನ್ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಈ ಇಬ್ಬರು ವಿದ್ಯಾರ್ಥಿಗಳು ತಕ್ಷಣವೇ ತುರ್ತು ನಿರ್ಗಮನ ಕಿಟಕಿಯಿಂದ ಪಾರಾಗಿ ಅಪಾಯದಲ್ಲಿದ್ದ ಸುಮಾರು 40 ಮಕ್ಕಳನ್ನು ತಮ್ಮ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ಕಾಪಾಡಿದ್ದರು.
ಅವರ ಈ ಸಾಧನೆ ಮಚ್ಚಿದ ಕರ್ನಾಟಕ ಸರ್ಕಾರ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಅಭಿನಂದಿಸುತ್ತಿದೆ. ಶಾಲೆಯ ವತಿಯಿಂದ ಸಹ ಇವರ ಈ ಸಾಹಸಕ್ಕೆ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ.
ತಾನು ಮತ್ತು ತನ್ನ ಸ್ನೇಹಿತ ಯಾವಾಗಲೂ ಕೊನೆಯ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದು ಆ ದಿನ ತುರ್ತು ನಿರ್ಗಮನ ಕಿಟಕಿ ಹತ್ತಿರ ಗಮನಿಸಿದಾಗ ಇಂಜಿನ್ನಿಂದ ಹೊಗೆ ಬರುವುದನ್ನು ಕಂಡೆವು. ಮರುಕ್ಷಣದಲ್ಲಿ ಏನಾಗಬಹುದೆಂದು ಊಹಿಸಿ ಅಲ್ಲಿಂದ ಪಾರಾದೆವು ಮತ್ತು ಉಳಿದವರನ್ನು ಪಾರು ಮಾಡಲು ಸಾಧ್ಯವಾಯಿತೆಂದು ಶ್ರೇಯಸ್ ಮತ್ತು ಶಶಿಕುಮಾರ ಅಭಿಪ್ರಾಯ ಹಂಚಿಕೊಂಡರು. ಪ್ರಶಸ್ತಿ ಪಡೆಯುತ್ತಿರುವುದು ತಮಗೆ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಕ್ಕಳಿಗೆ ಈ ರೀತಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವುದು ಶ್ಲಾಘನೀಯ.
ಜಿ.ಎಮ್. ಶಶಿಕುಮಾರ್ ಚಾಮರಾಜನಗರ ಜಿಲ್ಲೆಯ ಯೆಳಂದೂರು ತಾಲ್ಲೂಕಿನ ಗೂಳಿಪುರ ಎಂಬ ಹಳ್ಳಿಯ ನಿವಾಸಿಗಳಾದ ಗಾಯತ್ರಿ ಮತ್ತು ಮಂಜುನಾಥ ಸ್ವಾಮಿಯವರ ಮಗ. ಮಂಜುನಾಥ ಸ್ವಾಮಿಯವರು ಶೈಕ್ಷಣಿಕ ಸಂಯೋಜಕರು ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಮೈಸೂರಿನ ನಂದಿನಿ ಲೇಔಟ್ನಲ್ಲಿ ವಾಸವಾಗಿದ್ದಾರೆ. ಶಶಿಕುಮಾರ್ ಮುಂದೆ ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿದ್ದಾನೆ.
ಶ್ರೇಯಸ್ ಎನ್. ರಾವ್ ಜಮುನಾ ಮತ್ತು ಡಾ|| ನಾಗೇಶ್ ರಾವ್ ಅವರ ಮಗ. ನಾಗೇಶ್ ರಾವ್ ಅವರು ಟಿ. ನರಸಿಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ತಾಯಿ ಜಮುನಾ ಡೆಪ್ಯೂಟಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಮೈಸೂರಿನ ಕೆ.ಸಿ ಲೇಔಟ್ನಲ್ಲಿ ವಾಸವಾಗಿದ್ದಾರೆ. ಶ್ರೇಯಸ್ ಮುಂದೆ ಆಟೋಮೊಬೈಲ್ ಇಂಜಿನಿಯರ್ ಆಗಬೇಕೆಂಬ ಬಯಕೆ ಹೊಂದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.