ಸೋಮವಾರದಿಂದ ನಮ್ಮ ರಾಜ್ಯದಲ್ಲಿ ಹತ್ತನೆ ತರಗತಿಯ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ 33600 ರಷ್ಟು ಮಕ್ಕಳು ಪರೀಕ್ಷೆಯನ್ನು ಜಿಲ್ಲೆಯ 30 ಕೇಂದ್ರಗಳಲ್ಲಿ ಬರೆಯಲಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿ ರಾಜ್ಯದಲ್ಲಿ ಶೇಕಡವಾರು ಫಲಿತಾಂಶದಲ್ಲಿ ಎಷ್ಟನೇ ಸ್ಥಾನ ಬರಲಿರುವುದು ಎನ್ನುವುದೇ ಕುತೂಹಲಕಾರಿ ಸಂಗತಿ. ಏಕೆಂದರೆ ನಾವು ಪಿಯುಸಿ ಪರೀಕ್ಷಾ ಫಲಿತಾಂಶಕ್ಕೆ ಹೋಲಿಸಿದಾಗ ಯಾವತ್ತೂ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿ ಇರುತ್ತೇವೆ. ಅದೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಂದಾಗ ಪಟ್ಟಿಯಲ್ಲಿ ನಾವು ಕೆಳಗಿನಿಂದ ಮೇಲೆ ನೋಡಬೇಕಾಗುತ್ತದೆ. ಅದು ಯಾಕೆ?
ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಬೀದರ್, ಬಾಗಲಕೋಟೆ ಯಂತಹ ಜಿಲ್ಲೆಗಳು ಈ ಹತ್ತನೇ ತರಗತಿಯ ಫಲಿತಾಂಶ ಬಂದಾಗ ಯಾಕೆ ಮುಂಚೂಣಿಯಲ್ಲಿ ಇರುತ್ತವೆ. ಇಷ್ಟು ಒಳ್ಳೆಯ ಶಿಕ್ಷಣ ಸಂಸ್ಥೆಗಳು ಇರುವ ಕರ್ನಾಟಕದ ಮಂಗಳೂರು ಅಥವಾ ಉಡುಪಿ ಯಾಕೆ ಪಿಯುಸಿ ಫಲಿತಾಂಶದಷ್ಟು ನಿರೀಕ್ಷೆಯನ್ನು ಕೊಡುವುದಿಲ್ಲ. ಉತ್ತರ ಗೊತ್ತಿದ್ದು ಕೂಡ ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆ ಯಾಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.
ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳು ಬೇರೆ ಯಾವ ಕ್ಷೇತ್ರದಲ್ಲೂ ಹೇಳುವಂತಹ ಸಾಧನೆಯನ್ನು ಮಂಗಳೂರಿನ ಲೆವೆಲ್ಲಿಗೆ ಮಾಡದಿದ್ದರೂ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶ ಬಂದಾಗ ನಮಗೆ ಸೆಡ್ಡುಹೊಡೆಯಲು ಕಾರಣ ಎನು ಎಂದು ಮಂಗಳೂರಿನಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಹಿಡಿದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ತನಕ ಗೊತ್ತಿರುವ ವಿಷಯವೇ. ಆದರೆ ಯಾರೂ ಕೂಡ ಏನೂ ಮಾಡುತ್ತಿಲ್ಲ. ಅಲ್ಲಿ ನೂರು ಶೇಕಡಾ ಫಲಿತಾಂಶವನ್ನು ಸರಿಯಾಗಿ ಮೂಲಭೂತ ಸೌಲಭ್ಯ ಇಲ್ಲದ ಶಾಲೆಗಳು ಮಾಡುತ್ತಿರುವಾಗ ಇಲ್ಲಿ ಎಲ್ಲ ರೀತಿಯ ಸೌಕರ್‍ಯಗಳು ಇದ್ದರೂ ಕೆಲವು ಶಾಲೆಗಳು ಯಾಕೆ ಮಾಡಿಲ್ಲ. ಅದಕ್ಕೆ ಎಲ್ಲರೂ ಹೇಳುವ ಉತ್ತರ ಅಲ್ಲಿನ ಶಾಲಗಳಲ್ಲಿ ಕಾಪಿ ಹೊಡೆಯಲು ಇರುವ ಅವಕಾಶ. ಎಲ್ಲಿಯ ತನಕ ಅಂದರೆ ಸ್ವತ: ಶಿಕ್ಷಕರೇ ಒಂದು ಅಂಕದ ಸುಮಾರು 35 ಉತ್ತರಗಳನ್ನು ಸ್ವತ: ಬೋರ್ಡಿನಲ್ಲಿ ಬರೆದು ಮಕ್ಕಳಿಗೆ ಪಾಸಾಗುವಷ್ಟು ಅವಕಾಶವನ್ನು ಮಾಡಿಕೊಡುತ್ತಾರೆ. ಆದ್ದರಿಂದ ಅಲ್ಲಿ ವಿದ್ಯಾರ್ಥಿಗಳು ಕನಿಷ್ಟ ಪಾಸಾಗುವಷ್ಟಾದರೂ ಅಂಕಗಳನ್ನು ಪಡೆಯುವುದರಿಂದ ಅಲ್ಲಿ ಶೇಕಡಾವಾರು ಫಲಿತಾಂಶ ಯಾವತ್ತೂ ಕಡಿಮೆ ಆಗಲೇ ಇಲ್ಲ.
ನೂರು ಶೇಕಡಾ ಫಲಿತಾಂಶ ಬರಲು ಯಾವುದೇ ಹಂತಕ್ಕೂ ಹೋಗಲು ತಯಾರಿರುವ ಉತ್ತರ ಕರ್ನಾಟಕದ ಶಾಲೆಗಳ ಎದುರು ನೈತಿಕತೆಯ ಎಲ್ಲೆ ಮೀರಿ ಹೋಗಲು ಬಯಸದ ನಮ್ಮ ಊರುಗಳ ಶಾಲೆಗಳು ಮಕ್ಕಳ ಬುದ್ಧಿಮತ್ತೆಯನ್ನು ಮಾತ್ರ ಪಣಕ್ಕಿಟ್ಟು ಸಿಕ್ಕಿದ್ದಷ್ಟು ಅಂಕಗಳನ್ನು ಪಡೆಯುತ್ತವೆ. ನಾವು ರಾಜಮಾರ್ಗದಲ್ಲಿ ಹೋಗಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸುತ್ತೇವೆ ಹೊರತು ಕಾಪಿ ಹೊಡೆಸುವ ಮೂಲಕ ಹಾಗೆ ಮಾಡಲು ನಮ್ಮ ಶಿಕ್ಷಕರು ಯಾವತ್ತೂ ಬಯಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಬಿಹಾರದ ಶಾಲೆಯಾ ಕಾಲೇಜಿನ ಒಂದು ಫೋಟೊ ಹರಿದಾಡುತ್ತಿತ್ತು. ಪರೀಕ್ಷೆಯ ಸಮಯದಲ್ಲಿ ಮಕ್ಕಳು ಶಾಲೆಯ ಗೋಡೆ ಹತ್ತಿ ಅಲ್ಲಿ ಕಿಟಕಿಯ ಮೂಲಕ ಪಠ್ಯಪುಸ್ತಕವೊ, ಉತ್ತರ ಪುಸ್ತಕವನ್ನೋ ಸರಬರಾಜು ಮಾಡುತ್ತಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ತಾನಾಗಿದ್ದರೆ ಪಠ್ಯಪುಸ್ತಕವನ್ನೇ ನೇರವಾಗಿ ಕೊಟ್ಟು ಮಕ್ಕಳಿಗೆ ಸುಲಭವಾಗಿ ಉತ್ತರ ಬರೆಯಲು ಅವಕಾಶ ಮಾಡಿಕೊಡುತ್ತಿದೆ. ಅಷ್ಟು ಕಷ್ಟಪಟ್ಟು ಏಕೆ ಕಾಪಿ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷ ನೇರವಾಗಿ ಪಠ್ಯಪುಸ್ತಕ ಕೊಟ್ಟರೂ ಉತ್ತರ ಗೊತ್ತಿಲ್ಲದವರಿಗೆ ಬರೆಯಲು ಸಾಧ್ಯವಾಗುವುದಿಲ್ಲ ಎಂದು ಮರು ಪ್ರತಿಕ್ರಿಯೆ ನೀಡಿದೆ.
ಬಿಜೆಪಿಯ ಅಭಿಪ್ರಾಯ ನಿಜ ಕೂಡ. ಏಕೆಂದರೆ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರಗಳನ್ನು ಬರೆಯಲು ಪಠ್ಯಗಳನ್ನು ಕೊಟ್ಟರೂ ಸಾಧ್ಯವಿಲ್ಲ ಎನ್ನುವುದು ಶಿಕ್ಷಣ ತಜ್ಙರ ಅಭಿಪ್ರಾಯ.ಒಟ್ಟಿನಲ್ಲಿ ಈ ಬಾರಿಯಾದರೂ ನೇರ ಮಾರ್ಗದ ಮೂಲಕ ಕರಾವಳಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯಲಿ ಎಂದು ಹಾರೈಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.