ಪುತ್ತೂರು: ಸವಣೂರು ಗ್ರಾಮಸಭೆಯಲ್ಲಿ ವಿದ್ಯುತ್ ಗುತ್ತಿಗೆದಾರರಿಂದ ಸಾರ್ವಜನಿಕರಿಗಾಗುವ ಸಮಸ್ಯೆಯ ಕುರಿತು ಗ್ರಾಮಸ್ಥರೋರ್ವರು ಸಭೆಯಲ್ಲಿ ಪ್ರಸ್ತಾಪ ಮಾಡಿದ ಕಾರಣಕ್ಕೆ ಈಗ ಆ ಗುತ್ತಿಗೆದಾರ ಗ್ರಾಮಸ್ಥರಿಗೆ ವಕೀಲರ ಮೂಲಕ ನೋಟಿಸ್ ನೀಡಿದ ವಿಷಯ ಸವಣೂರು ಗ್ರಾ.ಪಂ ವಿಶೇಷ ಸಭೆಯಲ್ಲಿ ಪ್ರಸ್ತಾಪವಾಯಿತು.
ಸವಣೂರು ಗ್ರಾ.ಪಂ ವಿಶೇಷ ಸಭೆಯು ಗ್ರಾ.ಪಂ.ಸದಸ್ಯ ಸುದರ್ಶನ್ ನಾಯ್ಕ ಕಂಪ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಬ್ದುಲ್ ರಝಾಕ್, ಈ ಹಿಂದೆ ನಡೆದ ಗ್ರಾಮಸಭೆಯಲ್ಲಿ ವಿದ್ಯುತ್ ಗುತ್ತಿಗೆದಾರರಿಂದ ಸಾರ್ವಜನಿಕರಿಗಾಗುವ ಸಮಸ್ಯೆಯ ಕುರಿತು ಗ್ರಾಮಸ್ಥರೋರ್ವರು ಸಭೆಯಲ್ಲಿ ಪ್ರಸ್ತಾಪ ಮಾಡಿದ ಕಾರಣಕ್ಕೆ ಈಗ ಆ ಗುತ್ತಿಗೆದಾರ ಗ್ರಾಮಸ್ಥರಿಗೆ ವಕೀಲರ ಮೂಲಕ ನೋಟಿಸ್ ಬಂದಿದೆ ಎಂದು ಸಭೆಯ ಗಮನಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಗ್ರಾಮಸಭೆಯೆಂದರೆ ಅದು ಹಳ್ಳಿಯ ವಿಧಾನಸಭೆ, ಗ್ರಾಮಸಭೆಯಲ್ಲಿ ಗ್ರಾಮಸ್ಥರಿಗೆ ಸಮಸ್ಯೆಯ ಕುರಿತು ಮಾತನಾಡಿದರೆ ವಕೀಲರಿಂದ ನೋಟಿಸ್ ಕಳುಹಿಸಿದರೆ ಮುಂದೆ ಸಮಸ್ಯೆ ಹೇಳಿಕೊಳ್ಳಲು ಸಾರ್ವಜನಿಕರು ಹಿಂಜರಿಯಬಹುದು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸದಸ್ಯ ಸುದರ್ಶನ್ ಕಂಪ, ಸಮಸ್ಯೆಯ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಬಹುದು. ಖಾಸಗಿ ವ್ಯಕ್ತಿಯನ್ನು ಪ್ರಸ್ತಾಪಿಸಿದ್ದರಿಂದ ಈ ಸಮಸ್ಯೆಯಾಗಿರಬಹುದು. ಕಾನೂನು ಪ್ರಕಾರ ಮುಂದುವರೆಯಲಾಗುವುದು ಎಂದರು.
ಗ್ರಾ.ಪಂ.ಗೆ ಸಂದಾಯವಾಗಬೇಕಾದ ತೆರಿಗೆ ಪಾವತಿಸುವಂತೆ ಪಂ.ನಿಂದ ಎಲ್ಲಾ ಗ್ರಾಮಸ್ಥರಿಗೂ ತಿಳುವಳಿಕೆ ಪತ್ರ ನೀಡಿ ಗ್ರಾ.ಪಂ.ಸಿಬ್ಬಂದಿಯಿಂದ ಮನವರಿಕೆ ಮಾಡಿದರೂ ಕೆಲ ಗ್ರಾಮಸ್ಥರು ತೆರಿಗೆ ಪಾವತಿಸಿಲ್ಲ. ಈ ಕುರಿತು ಕೂಡಲೇ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ತೆರಿಗೆ ಸರಿಯಾಗಿ ಪಾವತಿ ಮಾಡಿದರೆ ಮಾತ್ರ ಗ್ರಾಮಾಭಿವೃದ್ದಿಗೆ ಸಹಕಾರಿಯಾಗಲಿದೆ. ಇದನ್ನು ಗ್ರಾಮಸ್ಥರು ಅರಿತುಕೊಳ್ಳಬೇಕಾಗಿದೆ ಎಂದು ಸದಸ್ಯರು ಅಭಿಪ್ರಾಯಿಸಿದರು.
ಪಣೆಮಜಲು ಅಂಗನವಾಡಿ ಕೇಂದ್ರ ದುಸ್ಥಿತಿಯಲ್ಲಿರುವುದರಿಂದ ಪುಟಾಣಿಗಳಿಗೆ ಸಮಸ್ಯೆಯಾಗುತ್ತಿದೆ. ಇದರ ದುರಸ್ತಿ ಕಾರ್ಯ ಮಾಡುವವರೆಗೆ ಮಾಂತೂರುನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅವಕಾಶ ಕಲ್ಪಿಸುವಂತೆ ಅಂಗನವಾಡಿ ಕೇಂದ್ರ, ಬಾಲವಿಕಾಸ ಸಮಿತಿಯಿಂದ ಪಂ.ಗೆ ನೀಡಿರುವ ಮನವಿ ಪತ್ರವನ್ನು ಸಭೆಯಲ್ಲಿ ಓದಿ ಹೇಳಲಾಯಿತು.ಇದಕ್ಕೆ ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ಭವನದಲ್ಲಿ ಅಂಗನವಾಡಿ ಕೇಂದ್ರ ತೆರೆಯಲು ಆಕ್ಷೇಪ ಪತ್ರ ಕೂಡ ಪಂ.ಗೆ ಬಂದಿರುವ ಕಾರಣ ಗ್ರಾ.ಪಂ.ನಿಂದ ಅವಕಾಶ ನೀಡಲು ಅಸಾಧ್ಯ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷ ವಸಂತ ಪೂಜಾರಿ, ಸದಸ್ಯರಾದ ಕೃಷ್ಣಪ್ಪ ಸುಣ್ಣಾಜೆ, ಬಾಬು ಅಟ್ಟೋಳೆ, ಸುಧಾಮ ಮಣಿಯಾಣಿ, ನಾರಾಯಣ ಮಡಿವಾಳ, ಗೀತಾ ಮಡಕೆ, ವಿಜಯ ಬಾಲಕೃಷ್ಣ ಕೊಡತ್ತೋಡಿ, ಸುಧಾ ಎಸ್ ರೈ, ಕುಸುಮಾ ಹಾಗೂ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.
ಲೆಕ್ಕ ಸಹಾಯಕ ಎ.ಮನ್ಮಥ ಸ್ವಾಗತಿಸಿ, ದಯಾನಂದ ಮಾಲೆತ್ತಾರು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.