ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎಂಬುದೊಂದು ಗಾದೆ ಮಾತು. ಸಿದ್ಧರಾಮಯ್ಯ ಸರ್ಕಾರದ ಆಡಳಿತ ವೈಖರಿ ಗಮನಿಸಿದಾಗ ಈ ಗಾದೆ ಮಾತು ನೆನಪಾಗದೆ ಇರದು. ತೆರಿಗೆದಾರರ ಹಣವನ್ನು ಖರ್ಚು ಮಾಡುವಾಗ ಸಾಕಷ್ಟು ಯೋಚಿಸಿ ನಿರ್ಧಾರ ಮಾಡಬೇಕಾಗುತ್ತದೆ. ಆ ಹಣ ಸಾರ್ವಜನಿಕ ಹಿತಕ್ಕೇ ಬಳಕೆಯಾಗಬೇಕೆಂಬುದು ಆಶಯ. ಸಿದ್ಧರಾಮಯ್ಯ ಸರ್ಕಾರ ಮಾತ್ರ ಈ ಆಶಯಕ್ಕೆ ವ್ಯತಿರಿಕ್ತವಾಗಿಯೇ ವರ್ತಿಸುತ್ತಾ ಬಂದಿದೆ. ಹಾಗಲ್ಲದಿದ್ದರೆ ಇದೀಗ ಬೆಂಗಳೂರು ಮಹಾನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲು ಸೇತುವೆವರೆಗೆ 1899 ಕೋಟಿ ರೂ. ಬೃಹತ್ ಮೊತ್ತದ ಉಕ್ಕಿನ ಸೇತುವೆ ನಿರ್ಮಿಸುವ ಅಗತ್ಯವೇನಿತ್ತು? ಈ ಉಕ್ಕಿನ ಸೇತುವೆ ನಿರ್ಮಾಣದಿಂದ ಜನದಟ್ಟಣೆ ನಿಯಂತ್ರಣವಾಗಲೀ, ಸುಗಮಸಂಚಾರವಾಗಲೀ ಖಂಡಿತ ಸಾಧ್ಯವಿಲ್ಲ. ವಾಹನ ಸವಾರರಿಗೆ ಇದರಿಂದ ಏನೇನೂ ಪ್ರಯೋಜನವಿಲ್ಲ. ಹಾಗೇನಾದರೂ ಪ್ರಯೋಜನವಾಗುವುದಿದ್ದರೆ ಅದು 30 ಸಾವಿರ ಕಾರು ಮಾಲಿಕರಿಗೆ ಮಾತ್ರ! 30 ಸಾವಿರ ಕಾರು ಮಾಲಿಕರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ 1899 ಕೋಟಿ ರೂ. ವೆಚ್ಚದ ಸೇತುವೆಯ ಅಗತ್ಯವಿದೆಯೆ?
ಈ ಉಕ್ಕಿನ ಸೇತುವೆ ನಿಜಕ್ಕೂ ಬೇಕಿರುವುದು ಸರ್ಕಾರಕ್ಕೋ ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಕಾರಕ್ಕೋ ? ಇಂತಹದೊಂದು ಪ್ರಶ್ನೆಯನ್ನು ಇದೀಗ ಬೆಂಗಳೂರಿನ ಜನರು, ಸಂಚಾರತಜ್ಞರು, ಪರಿಸರ ಪ್ರೇಮಿಗಳು, ಪಾರಂಪರಿಕ ಕಟ್ಟಡಗಳ ಉಳಿವಿಗಾಗಿ ಹೋರಾಡುತ್ತಿರುವವರು, ವೃಕ್ಷಪ್ರೇಮಿಗಳು… ಹೀಗೆ ಹಲವರು ಸರ್ಕಾರದ ಮುಂದಿಟ್ಟಿದ್ದಾರೆ. ಸುಗಮಸಂಚಾರಕ್ಕೆ ಒಂದಿನಿತೂ ಪ್ರಯೋಜನವಾಗದ ಈ ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ನೆನ್ನೆ ಭಾನುವಾರ ಜಾಗೃತ ಜನರು, ಸಂಘಸಂಸ್ಥೆಗಳು ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲು ಸೇತುವೆವರೆಗೆ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದ್ದಾರೆ. ಸರ್ಕಾರದ ನಿರ್ಧಾರ ಮಾತ್ರ ಅಚಲವಾಗಿರುವುದು ಆಶ್ಚರ್ಯಕರ ಹಾಗೂ ಹಲವು ಗುಮಾನಿಗಳಿಗೆ ಆಸ್ಪದ ಮಾಡಿಕೊಟ್ಟಿದೆ.
ಉಕ್ಕಿನ ಸೇತುವೆ ಯೋಜನೆಯನ್ನು ಕೈಗೊಂಡಿರುವುದು ಬೆಂಗಳೂರು ಅಭಿವೃದ್ಧಿ ಪ್ರಾಕಾರ. ಇದಕ್ಕೆ ಸಿದ್ಧರಾಮಯ್ಯ ಸರ್ಕಾರದ ಸಂಪೂರ್ಣ ಬೆಂಬಲ ಇರುವುದು ಗುಟ್ಟೇನಲ್ಲ. ಮೊದಲು 2014-15 ರಲ್ಲಿ ಈ ಸೇತುವೆ ನಿರ್ಮಾಣಕ್ಕೆ 1350 ಕೋಟಿ ರೂ. ಅಂದಾಜು ಮೊತ್ತದ ಯೋಜನೆ ರೂಪಿಸಲಾಗಿತ್ತು. ಆದರೆ ಅನಂತರ ಉಕ್ಕಿನ ಬೆಲೆಯಲ್ಲಿ ಕುಸಿತವಾಗಿದ್ದರೂ ಕಾಮಗಾರಿಯ ಮೊತ್ತ 1899 ಕೊಟಿ ರೂ.ಗೆ ಏರಿಕೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದೊಂದು ಆತುರದ ನಿರ್ಧಾರ. ಇದರ ಹಿಂದೆ ಯಾರದೋ ಸ್ವಾರ್ಥದ ಕೈವಾಡವಿದೆ. ಶೇ. 73 ರಷ್ಟು ಜನ ವಿರೋಧಿಸುತ್ತಿರುವ ಈ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂಬುದು ಪ್ರತಿಪಕ್ಷ ಮುಖಂಡರ ಆಗ್ರಹ.
ಬೆಂಗಳೂರು ಅಭಿವೃದ್ಧಿ ಪ್ರಾಕಾರ ಕೈಗೊಂಡಿರುವ ಹಲವು ಯೋಜನೆಗಳು ಭೂಸ್ವಾನವಾಗದೆ ಸ್ಥಗಿತಗೊಂಡ ಉದಾಹರಣೆಗಳು ಸಾಕಷ್ಟಿವೆ. ಹಾಗಿದ್ದರೂ ಬಿಡಿಎ ಈಗ ಅನಗತ್ಯವಾಗಿರುವ ಈ ಉಕ್ಕಿನ ಸೇತುವೆ ಯೋಜನೆಗೆ ಭೂಸ್ವಾನಕ್ಕೆ ನೋಟೀಸ್ ನೀಡದೆ ಯೋಜನೆ ಘೋಷಿಸುವುದು ಎಷ್ಟು ಸೂಕ್ತ? ಉದ್ದೇಶಿತ ಉಕ್ಕಿನ ಸೇತುವೆ ಹಾದುಹೋಗುವ ಮಾರ್ಗದಲ್ಲಿ ಸರ್ಕಾರಿ ಮತ್ತು ಖಾಸಗಿ ಜಾಗವನ್ನು ಗುರುತಿಸದೆಯೇ ಸ್ವಾನಪಡಿಸಿಕೊಳ್ಳುವ ಬಗ್ಗೆ ಬಿಡಿಎ ನೋಟೀಸ್ ಕೂಡ ನೀಡಿಲ್ಲ. ಜನರ ಅಭಿಪ್ರಾಯವನ್ನು ಸಂಗ್ರಹಿಸದೆ, ಅದಕ್ಕೆ ಮುನ್ನವೆ ಕಾಮಗಾರಿಯ ಗುತ್ತಿಗೆಯನ್ನು ನೀಡಿರುವುದು ಎಷ್ಟು ಸಮಂಜಸ? ಇಂತಹ ದೊಡ್ಡ ಮೊತ್ತದ ಯೋಜನೆ ಹಮ್ಮಿಕೊಳ್ಳುವಾಗ ಅದರ ವಿವರಗಳನ್ನು ಗೌಪ್ಯವಾಗಿಟ್ಟಿರುವುದರ ಉದ್ದೇಶವೇನು? ಯೋಜನೆಯ ಪೂರ್ಣ ವಿವರವನ್ನು ಬಹಿರಂಗಗೊಳಿಸಿದ್ದರೆ ಯೋಜನೆಯ ಸತ್ಯಾಸತ್ಯತೆ ತಿಳಿಯುತ್ತಿತ್ತು. ಅದೂ ಅಲ್ಲದೆ ಯೋಜನಾ ವೆಚ್ಚ ಶೇ. 30 ರಿಂದ ಶೇ. 40 ರಷ್ಟು ಹೆಚ್ಚಳವಾಗಿದ್ದರೂ ಮರುಮಾತನಾಡದೆ ಗುತ್ತಿಗೆ ನೀಡಿರುವುದು ಯಾರ ಪುರುಷಾರ್ಥಕ್ಕಾಗಿ? ತೆರಿಗೆದಾರರ ಬೃಹತ್ ಪ್ರಮಾಣದ ಹಣವನ್ನು ವಿನಿಯೋಗಿಸುವ ವೇಳೆ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ಸುಪ್ರೀಂಕೋರ್ಟ್ನ ನಿರ್ದೇಶನವೇ ಇದೆ. ಅದನ್ನೂ ಪಾಲಿಸಿಲ್ಲ. ಜೊತೆಗೆ ಈ ಉಕ್ಕಿನ ಸೇತುವೆ ನಿರ್ಮಾಣವಾದರೆ 812 ಮರಗಳು ಧರಾಶಾಯಿಯಾಗಬೇಕಾಗುತ್ತದೆ. ಪ್ರತಿಮರಕ್ಕೆ 10 ಸಸಿಗಳನ್ನು ನೆಡುತ್ತೇವೆ ಎಂದು ಬಿಡಿಎ ಪ್ರತಿಬಾರಿ ಬೊಗಳೆ ಬಿಡುತ್ತಲೇ ಇದೆ. ಈ ಹಿಂದೆ ಬೆಂಗಳೂರು-ಮೈಸೂರು ರಸ್ತೆ ವಿಸ್ತರಣೆಗಾಗಿ ಅಲ್ಲಿನ ಮರಗಳನ್ನು ಕಡಿಯುವ ಸಂದರ್ಭದಲ್ಲೂ ಸರ್ಕಾರ ಇದೇ ಭರವಸೆ ನೀಡಿತ್ತು. ಆದರೆ ಆ ಭರವಸೆ ಈವರೆಗೂ ಈಡೇರಿಲ್ಲ.
ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಕುರಿತಂತೆ ಬಿಡಿಎ ಸಾರ್ವಜನಿಕರಿಂದ ಆಕ್ಷೇಪಣೆ, ಅಭಿಪ್ರಾಯ ಆಹ್ವಾನಿಸಿರುವುದೇನೋ ನಿಜ. ಆದರೆ ಈಗಾಗಲೇ 1791 ಕೋಟಿ ರೂ. ಕಾಮಗಾರಿ ಮೊತ್ತಕ್ಕೆ ಎಲ್ಎಂಡ್ಟಿ ಮುಂಬೈ ಮತ್ತು ಹೈದರಾಬಾದ್ನ ಎನ್ಸಿಸಿಎಲ್ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಸಾರ್ವಜನಿಕರ ಆಕ್ಷೇಪಣೆ, ಅಭಿಪ್ರಾಯಗಳು ಬಿಡಿಎಗೆ ಮುಖ್ಯವೆನಿಸಿದ್ದರೆ ಅದು ಹೀಗೆ ಗುತ್ತಿಗೆ ನೀಡುವ ಸಾಹಸಕ್ಕೆ ಹೋಗುತ್ತಿತ್ತೆ? ನಿಜವಾಗಿಯೂ ಬಿಡಿಎ ಆಕ್ಷೇಪಣೆ, ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುತ್ತದೆಯೇ ಅಥವಾ ಇದು ಕೇವಲ ನಾಮ್ಕೇ ವಾಸ್ತೆಯೇ ಎಂಬ ಅನುಮಾನ ಹುಟ್ಟಿಕೊಂಡಿರುವುದು ನಿಜ. ಬಿಡಿಎ ನೀಡಿರುವ ಇ-ಮೇಲ್ಗೆ 300 ಆಕ್ಷೇಪ, ಸಲಹೆಗಳು ಸಲ್ಲಿಕೆಯಾಗಿವೆ. ಅದರಲ್ಲಿ ಶೇ. 73 ರಷ್ಟು ಅಭಿಪ್ರಾಯಗಳು, ಸಲಹೆಗಳು ಯೋಜನೆ ಪರವಾಗಿವೆ ಎಂದು ಬಿಡಿಎ ಹೇಳುತ್ತಿರುವುದು ಇನ್ನಷ್ಟು ಸೋಜಿಗವೇ ಸರಿ. ಬಹುಶಃ ಈ 300 ಆಕ್ಷೇಪಗಳಲ್ಲಿ ಶೇ.73 ರಷ್ಟು ಯೋಜನೆ ಪರವಾಗಿರುವುದಕ್ಕೆ ಕಾಣದ ಕೈಗಳು ಕೈವಾಡ ನಡೆಸಿರಲೇಬೇಕು ! ಈಗಾಗಲೇ ಟೆಂಡರ್ ನೀಡಿರುವುದರಿಂದ ಕಾಮಗಾರಿ ಪ್ರಾರಂಭವಾಗುವುದಷ್ಟೇ ಬಾಕಿಯಿದೆ. ಯಾವುದೇ ಕಾರಣಕ್ಕೂ ಯೋಜನೆ ಕೈಬಿಡುವುದಿಲ್ಲ ಎನ್ನುವ ನಗರಾಭಿವೃದ್ಧಿ ಸಚಿವರ ಮತ್ತು ಬಿಡಿಎ ಅಕಾರಿಗಳ ಅಭಿಪ್ರಾಯಗಳು ಮೊದಲೇ ನಿರ್ಧಾರವಾದಂತಿವೆ.
ಯೋಜನೆಗೆ ಟೆಂಡರ್ ನೀಡಿರಬಹುದು, ಆ ಮಾತು ಬೇರೆ. ಆದರೆ ಇಂತಹದೊಂದು ಬೃಹತ್ ಮೊತ್ತದ ಯೋಜನೆ ಹಮ್ಮಿಕೊಳ್ಳುವ ಮೊದಲು ಅದಕ್ಕೆ ಸಂಬಂಸಿದ ಪ್ರಕ್ರಿಯೆಗಳು ನಡೆಯಬೇಡವೆ? ಪಾರದರ್ಶಕತೆ ಅಗತ್ಯವಿಲ್ಲವೆ? ಸಾರ್ವಜನಿಕರ ಅಭಿಪ್ರಾಯವನ್ನು ಕಡೆಗಣಿಸಿ ಬೆಂಗಳೂರಿನಲ್ಲಿ ಬಿಡಿಎ ನಿರ್ಮಿಸಿದ ಒಂದೆರಡು ಅಂಡರ್ಪಾಸ್ ಹಾಗೂ ಮೇಲ್ಸೇತುವೆ ಅತ್ಯಂತ ಅನುಪಯುಕ್ತವಾಗಿರುವುದಕ್ಕೆ ನಿದರ್ಶನಗಳೇ ಕಣ್ಮುಂದಿವೆ. ಬಸವನಗುಡಿ ಪೊಲೀಸ್ಠಾಣೆಯ ಸಮೀಪದ ಟ್ಯಾಗೋರ್ ವೃತ್ತದ ಅಂಡರ್ಪಾಸ್ ಹಾಗೂ ನ್ಯಾಷನಲ್ ಕಾಲೇಜು ಜಂಕ್ಷನ್ಬಳಿ ನಿರ್ಮಿಸಿದ ಮೇಲ್ಸೇತುವೆಗಳಿಂದ ಜನರಿಗೆ ಯಾವ ಪ್ರಯೋಜನವೂ ಆಗಿಲ್ಲ. ಈ ಎರಡು ಸ್ಥಳಗಳಲ್ಲೂ ಅಂತಹ ಸಂಚಾರದಟ್ಟಣೆ ಇರಲಿಲ್ಲ. ಆದರೆ ಯಾರದೋ ಪ್ರತಿಷ್ಠೆಗೆ, ಇನ್ನಾರದೋ ಜೇಬು ಭರ್ತಿಯಾಗುವುದಕ್ಕೆ ಈ ಕಾಮಗಾರಿಗಳನ್ನು ಬಲವಂತವಾಗಿ ಜನರ ವಿರೋಧದ ನಡುವೆಯೂ ಹಮ್ಮಿಕೊಳ್ಳಲಾಗಿತ್ತು. ಈ ಕಾಮಗಾರಿ ಪೂರ್ತಿಯಾದ ಬಳಿಕ ಜನರಿಗಂತೂ ಯಾವ ಪ್ರಯೋಜನವೂ ಆಗಿಲ್ಲ. ಪೋಲಾಗಿದ್ದು ಮಾತ್ರ ತೆರಿಗೆದಾರರ ಹಣ ಹಾಗೂ ಕಾಮಗಾರಿ ಸಂದರ್ಭದಲ್ಲಿ ನಾಗರಿಕರಿಗೆ ಉಂಟಾದ ಕಿರಿಕಿರಿ. ಈ ಎರಡೂ ಯೋಜನೆಗಳಿಗೆ ಪರಿಸರ ಪ್ರೇಮಿಗಳು, ಸ್ಥಳೀಯ ನಿವಾಸಿಗಳು, ಸಂಘಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಕ್ಯಾರೇ ಅನ್ನಲಿಲ್ಲ.
ಇದೇ ರೀತಿ ಬಸವನಗುಡಿಯ ರಾಮಕೃಷ್ಣ ಆಶ್ರಮ ವೃತ್ತ ಹಾಗೂ ವಿದ್ಯಾಪೀಠ ವೃತ್ತಗಳಲ್ಲೂ ಮೇಲ್ಸೇತುವೆ, ಅಂಡರ್ಪಾಸ್ ನಿರ್ಮಾಣಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿತ್ತು. ಜನರ ತೀವ್ರ ವಿರೋಧದಿಂದಾಗಿ ಕೊನೆಯ ಕ್ಷಣದಲ್ಲಿ ಯೋಜನೆಗಳನ್ನು ಕೈಬಿಡಲಾಗಿತ್ತು. ಈ ಎರಡೂ ಪ್ರದೇಶಗಳಲ್ಲಿ ಸಂಚಾರದಟ್ಟಣೆ ಈಗಲೂ ಇಲ್ಲ.
ಪ್ರಸ್ತಾಪಿತ ಈ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಅನಗತ್ಯವಾಗಿ ಖರ್ಚುಮಾಡಲಾಗುವ 1800 ಕೋಟಿ ಹಣದಲ್ಲಿ ಸರ್ಕಾರ ಒಂದಿಷ್ಟು ಉಪಯುಕ್ತ ಯೋಜನೆಗಳನ್ನು ಹಮ್ಮಿಕೊಳ್ಳಬಹುದಿತ್ತು ಎನ್ನುವುದು ಸಿವಿಕ್ಸ್ ಸಂಸ್ಥೆ ಕಾರ್ಯಕಾರಿ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಅವರ ಅಭಿಮತ. ರಾಜ್ಯದಲ್ಲಿ 12ವರ್ಷದೊಳಗಿನ 18 ಲಕ್ಷಕ್ಕೂ ಹೆಚ್ಚು ಮಕ್ಕಳಿದ್ದು, ಅವರ ಹೆಸರಲ್ಲಿ 10 ಸಾವಿರ ರೂ. ಬ್ಯಾಂಕಿನಲ್ಲಿಟ್ಟರೆ ಅವರಿಗೆ 18 ವರ್ಷ ತುಂಬುವುದರೊಳಗೆ 1 ಲಕ್ಷ ರೂ. ಆಗಿ ಪರಿವರ್ತಿತವಾಗುತ್ತಿತ್ತು. ನಗರದ ಪ್ರತಿ ವಾರ್ಡ್ನಲ್ಲಿರುವ ಒಟ್ಟು 1800 ಕ್ಕೂ ಹೆಚ್ಚಿನ ಡೇ ಕೇರ್ ಸೆಂಟರ್ಗಳಿಗೆ ನಿವೇಶನ, ಕಟ್ಟಡಕ್ಕಾಗಿ ಒಂದು ಕೋಟಿ ಖರ್ಚುಮಾಡಿದ್ದರೂ ಅದೊಂದು ಉಪಯುಕ್ತ ಯೋಜನೆ ಆಗುತ್ತಿತ್ತು. ಬೆಂಗಳೂರಿಗೆ ವಲಸೆ ಬಂದಿರುವ ಬಡವರಿಗಾಗಿ 18 ಸಾವಿರ ಫ್ಲ್ಯಾಟ್ ನಿರ್ಮಿಸಿ ಅದನ್ನು ಒಂದು ಲಕ್ಷದಂತೆ ನೀಡಿದ್ದರೆ ಬಡವರಿಗೊಂದು ಸೂರು ಕಲ್ಪಿಸಿದಂತಾಗುತ್ತಿತ್ತು. ಮಾರುಕಟ್ಟೆಯಲ್ಲಿ ಜೀವನ ಸಾಗಿಸುತ್ತಿರುವ ಬಡ ವ್ಯಾಪಾರಿಗಳಿಗೆ 10×10 ಅಳತೆಯ ಮಳಿಗೆಗಳನ್ನು ನಿರ್ಮಿಸಿಕೊಟ್ಟಿದ್ದರೆ ಜೀವನೋಪಾಯಕ್ಕೆ ಅನುಕೂಲವಾಗುತ್ತಿತ್ತು. ಆದರೆ ಇಂತಹ ಜನಪರ ಯೋಜನೆಗಳು ಸಿದ್ಧರಾಮಯ್ಯ ಸರ್ಕಾರಕ್ಕೆ ಹೊಳೆದರೆ ತಾನೆ?
ಬಿಡಿಎ ನಿರ್ಮಿಸಲಿರುವ ಈ ಉಕ್ಕಿನ ಸೇತುವೆಯ ಮೇಲೆ ಉಚಿತವಾಗಿ ವಾಹನ ಚಲಾಯಿಸುವಂತಿಲ್ಲ. ಅಲ್ಲಿ ಸುಂಕ ಪಾವತಿಸಿ ಸಂಚರಿಸುವ ಟೋಲ್ ವ್ಯವಸ್ಥೆ ಬರಲಿದೆ! ನಗರದ ಹೃದಯ ಭಾಗದಲ್ಲೇ ಟೋಲ್ ಪಾವತಿಸುವ ಭಾಗ್ಯ ಬೆಂಗಳೂರು ನಾಗರಿಕರದು ! ಸಿದ್ಧರಾಮಯ್ಯ ಸರ್ಕಾರದ ಹಲವು ’ಭಾಗ್ಯ’ ಯೋಜನೆಗಳ ಸಾಲಿಗೆ ಈ ’ಟೋಲ್ ಭಾಗ್ಯ’ ಹೊಸ ಸೇರ್ಪಡೆ ! ಟೋಲ್ನ್ನು ಎಷ್ಟು ವರ್ಷ ಸಂಗ್ರಹಿಸಬೇಕು, ಯಾವ ಪ್ರಮಾಣದಲ್ಲಿ ಸಂಗ್ರಹಿಸಬೇಕು, ಇದರ ಹೊಣೆಗಾರಿಕೆಯನ್ನು ಬಿಡಿಎ ಅಥವಾ ಸರ್ಕಾರ ವಹಿಸಿಕೊಳ್ಳಬೇಕೆ ಇತ್ಯಾದಿ ಯಾವ ಸಂಗತಿಗಳ ಬಗ್ಗೆಯೂ ಸ್ಪಷ್ಟತೆ ಇಲ್ಲ. ಒಟ್ಟಾರೆ ಇದೊಂದು ಸರ್ಕಾರದ ಸರ್ವಾಕಾರಿ ಧೋರಣೆಯ, ಸ್ವಜನಪಕ್ಷಪಾತದ ಯೋಜನೆ ಎನ್ನುವುದು ಗುಟ್ಟಲ್ಲ.
ಬೆಂಗಳೂರು ಈಗಾಗಲೇ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊತ್ತುಕೊಂಡು ಏದುಸಿರು ಬಿಡುತ್ತಿದೆ. ವಿವಿಧ ಕಾಮಗಾರಿಗಳಿಗಾಗಿ ಸಾವಿರಾರು ಮರಗಳನ್ನು ಕಡಿದುಹಾಕಿ, ಉಷ್ಣಾಂಶದಲ್ಲಿ ವಿಪರೀತ ಏರುಪೇರಾಗಿದೆ. ವಾತಾವರಣದಲ್ಲಿ ಕಾರ್ಬನ್ಡೈ ಆಕ್ಸೈಡ್ ಪ್ರಮಾಣದ ಹೆಚ್ಚಳವಾಗಿ ಮಧುಮೇಹಿಗಳ ಸಂಖ್ಯೆಯೂ ಹೆಚ್ಚಲಿದೆ ಎನ್ನುವುದು ತಜ್ಞರ ಅಭಿಮತ. ಜೆಡಿಎಸ್ಜೊತೆಗೆ ಅನೈತಿಕ ಮೈತ್ರಿ ಮಾಡಿಕೊಂಡು ಬೆಂಗಳೂರು ಮಹಾನಗರ ಪಾಲಿಕೆಯನ್ನು ಕೈವಶಮಾಡಿಕೊಂಡಿರುವ ಸಿದ್ಧರಾಮಯ್ಯ ಸರ್ಕಾರಕ್ಕೆ ನೆಟ್ಟಗೆ ನಗರದ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸುವುದಕ್ಕೇ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ನ ಮೇಯರ್ ಜಿ. ಪದ್ಮಾವತಿ ಪ್ರತಿನಿತ್ಯ ತಮ್ಮ ನಗರ ಸಂಚಾರದ ವೇಳೆ ಕಸದ ರಾಶಿರಾಶಿ ಕಂಡು ಅಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇವೆ. ಹೀಗಿರುವಾಗ, ಅಮೆರಿಕದ ನ್ಯೂಯಾರ್ಕ್, ವಾಷಿಂಗ್ಟನ್ನಂತಹ ದೊಡ್ಡದೊಡ್ಡ ನಗರಗಳಲ್ಲೂ ಇಲ್ಲದ ಉಕ್ಕಿನ ಮೇಲ್ಸೇತುವೆ ಬೆಂಗಳೂರಿಗೆ ಅಗತ್ಯವೆ? ಈ ಸೇತುವೆ ಯಾರ ಪುರುಷಾರ್ಥಕ್ಕಾಗಿ? ಯಾರ ಜೇಬುಗಳನ್ನು ತುಂಬುವುದಕ್ಕಾಗಿ ? ಬೆಂಗಳೂರಿನ ನಾಗರಿಕರ ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.