ಪುತ್ತೂರು: ಎಪಿಎಂಸಿಯಲ್ಲಿ ಭದ್ರತಾ ಏಜೆನ್ಸಿ ಅಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ ಮತ್ತು ವಾಸು ಅವರನ್ನು ಎಪಿಎಂಸಿ ಸರ್ವ ಸದಸ್ಯರ ಒಪ್ಪಿಗೆಯಂತೆ ಮೇ.1 ರಿಂದ ಕರ್ತವ್ಯಕ್ಕೆ ನಿಯೋಜನೆ ಮಾಡಲು ಎಪಿಎಂಸಿ ಸಾಮಾನ್ಯ ಸಭೆ ಮಂಗಳವಾರ ನಿರ್ಧರಿಸಿದೆ.
ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ ಮಂಗಳವಾರ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಪ್ರಮೋದ್ ಕೆ.ಎಸ್, ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಬೆಲೆ ಇಲ್ಲ ಎಂದ ಮೇಲೆ ಸಭೆ ಯಾಕಾಗಿ ಎಂದು ತರಾಟೆಗೆ ತೆಗೆದುಕೊಂಡರು. ಕಳೆದ ಬಾರಿಯ ಸಭೆಯಲ್ಲಿ ವಜಾಗೊಳಿಸಿದ ಚಾಲಕರನ್ನು ಪುನರ್ ನೇಮಕಗೊಳಿಸುವಂತೆ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಚಾಲಕರಿಗಾದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಸಭೆ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು. ಆದರೆ ಇಂದಿಗೂ ನಿರ್ಣಯ ಅನುಷ್ಠಾನಗೊಂಡಿಲ್ಲ ಎಂದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಮಹೇಶ್ ರೈ ಅಂಕೋತ್ತಿಮಾರ್, ಎಪಿಎಂಸಿ ಆಕ್ಟ್ ಪ್ರಕಾರ ೧೫ ದಿನದ ಒಳಗೆ ಸಭೆಯ ಅಭಿಪ್ರಾಯವನ್ನು ಮಂಡಳಿಗೆ ಕಳುಹಿಸಿಕೊಡಬೇಕು. ಆದರೆ ಕಳೆದ ಮಾ.31ಕ್ಕೆ ನಡೆದ ಸಭೆಯ ವಿಚಾರವನ್ನು ಎ.20ಕ್ಕೆ ಕಳುಹಿಸಿಕೊಡಲಾಗಿದೆ. ಕಾರ್ಯದರ್ಶಿ ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಸರ್ವಾಧಿಕಾರಿ ಧೋರಣೆ ತೋರಿದ್ದಾರೆ ಎಂದರು.
ಮಧ್ಯಪ್ರವೇಶಿಸಿದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಎಪಿಎಂಸಿ ಸದಸ್ಯರ ಗಮನಕ್ಕೆ ಏಕಾಏಕಿಯಾಗಿ ಕೆಲಸದಿಂದ ಕೈ ಬಿಟ್ಟಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಕಳೆದ ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರೂ, ಈ ಕುರಿತು ಪ್ರಸ್ತಾವನೆಯನ್ನು ಸಾಮಾನ್ಯ ಸಭೆ ನಡೆದು 20 ದಿನಗಳ ಬಳಿಕ ಕಾರ್ಯದರ್ಶಿ ರಾಮಚಂದ್ರ ರೆಡ್ಡಿ, ಕೃಷಿ ಮಾರಾಟ ಮಂಡಳಿಗೆ ಕಳುಹಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಹಾಗೂ ವಜಾಗೊಂಡಿರುವ ಇಬ್ಬರು ಚಾಲಕರನ್ನು ಮರು ನೇಮಕ ಮಾಡುವ ಕುರಿತು ಅಧ್ಯಕ್ಷರು ಸೂಚಿಸಿದರು. ಅಲ್ಲದೇ ಪ್ರಭಾರ ಕಾರ್ಯದರ್ಶಿ ಬದಲಿಗೆ ಪೂರ್ಣಕಾಲಿಕ ಕಾರ್ಯದರ್ಶಿಯ ಅಗತ್ಯವಿದೆ. ಇದನ್ನು ನಿರ್ದೇಶಕರ ಗಮನಕ್ಕೆ ತರಲಾಗುವುದು ಎಂದರು. ಸರ್ವ ಸದಸ್ಯರು ಒಪ್ಪಿಗೆ ನೀಡಿದರು.
ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ ಮಾತನಾಡಿ, ಎಪಿಎಂಸಿ ಆವರಣದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಸಿಸಿ ಕ್ಯಾಮೆರಾದ ಅಗತ್ಯವಿದೆ. ಇತ್ತೀಚೆಗೆ ಎಪಿಎಂಸಿ ಆವರಣದೊಳಗೆ ಇತರ ವ್ಯಕ್ತಿಗಳು ಕಂಡುಬರುತ್ತಿದ್ದಾರೆ. ಆದ್ದರಿಂದ ಗೇಟ್ ಬಳಿಯೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮನವಿ ಮಾಡಿದರು.
ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಸ್ಕೀಂ ವರ್ತಕ ರಾಜೇಶ್ ಪ್ರಭು ಎಂಬುವರು, ಅಡಿಕೆ ಬೆಳೆಗಾರರಿಗೆ ಕೋಟ್ಯಾಂತರ ರೂ. ವಂಚನೆ ಮಾಡಿರುವ ಕುರಿತಂತೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕಳೆದ ನಾಲ್ಕು ತಿಂಗಳಿನಿಂದ ಮನೆ ಭೇಟಿ ಮಾಡಿ ಅಡಿಕೆ ಖರೀದಿಸುವವರ ಕುರಿತು ಎಚ್ಚರಿಕೆ ವಹಿಸುವಂತೆ ಮಾಧ್ಯಮದ ಮೂಲಕ ವಿನಂತಿಸಲಾಗಿದೆ. ಆದರೂ ವಂಚನೆಯ ಪ್ರಕರಣ ವರದಿಯಾಗುತ್ತಿದೆ. ಎಪಿಎಂಸಿ ವ್ಯವಹಾರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶ ಇದ್ದರೆ ಪರಿಶೀಲಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ಸಭೆಯಲ್ಲಿ ತ್ರಿವೇಣಿ ಪೆರ್ವೋಡಿ, ಶೀನಪ್ಪ ಗೌಡ.ಯು, ಕೃಷ್ಣ ನಾಯ್ಕ, ಎ.ಮಾಣಿಕ್ಯರಾಜ್ ಪಡಿವಾಳ್, ಯಶೋಧರ ಗೌಡ, ಜ್ಯೋತಿ ಡಿ,ಕೋಲ್ಪೆ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.