ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಬಿಎಂಎಸ್, ಎಚ್ಎಂಎಸ್, ಇನ್ಟಕ್ ಹಾಗೂ ಇತರ ಸಾರಿಗೆ ನೌಕರರ ಅಖಿಲ ಭಾರತ ಫೆಡರೇಶನ್ಗಳು ರಂದು ಕೇಂದ್ರ ಸರಕಾರದ ರಸ್ತೆ ಸುರಕ್ಷತಾ ಕಾಯಿದೆಗೆ ತಿದ್ದುಪಡಿಗಳನ್ನು ತಂದಿರುವುದರ ವಿರುದ್ಧ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು, ಮೋಟಾರ್ ಟ್ರಾನ್ಸ್ಪೋರ್ಟ್ ಆಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಕರಾವಳಿ ಜಿಲ್ಲೆಯ ಖಾಸಗಿ ಬಸ್ಸುಗಳಲ್ಲಿ ದುಡಿಯುತ್ತಿರುವ ಚಾಲಕರು ಹಾಗೂ ನಿರ್ವಾಹಕರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದು ಯೂನಿಯನ್ನ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹಾಗೂ ಸಿಐಟಿಯು ಬಸ್ಸ್ ನೌಕರರ ಸಂಘದ ಅಧ್ಯಕ್ಷರಾದ ಅಶೋಕ್, ಕಾರ್ಯದರ್ಶಿ ವಿಶ್ವನಾಥ ಕುಲಾಲ್ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಸುರಕ್ಷತಾ ಕಾಯಿದೆ ದೇಶದ ದೊಡ್ಡ ಕೊರ್ಪರೇಟ್ ಸಂಸ್ಥೆಗಳಿಗೆ ಸಾರಿಗೆ ರಂಗವನ್ನು ನೀಡುವುದರ ಮುಖಾಂತರ ಲಕ್ಷಾಂತರ ದುಡಿಯುವ ಜನತೆಯನ್ನು ಬೀದಿಪಾಲು ಮಾಡಲಿದೆ. ಮಾತ್ರವಲ್ಲದೆ ಸಾರಿಗೆ ರಂಗದಿಂದ ಬರಲಿರುವ ತೆರಿಗೆ, ಸುಂಕದ ಆರ್ಥಿಕ ಮೊತ್ತ ಕೇಂದ್ರ ಸರಕಾರದ ಪಾಲಾಗಲಿದೆ. ರಾಜ್ಯ ಸರಕಾರಕ್ಕೆ ಸಲ್ಲಬೇಕಾದ ಪಾಲನ್ನು ಕೂಡ ಕೇಂದ್ರವೇ ನುಂಗಲಿದೆ. ಮಾತ್ರವಲ್ಲದೆ ಸಾರಿಗೆ ರಂಗದಲ್ಲಿ ದುಡಿಯುವ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಅಪಘಾತ ಹಾಗೂ ಇನ್ನಿತರ ಸಣ್ಣ ಪುಟ್ಟ ಘಟನೆಗಳು ನಡೆದ ಸಂದರ್ಭದಲ್ಲಿ ಜೈಲು ಶಿಕ್ಷೆಯನ್ನು ಖಾತರಿ ಮಾಡಿರುವ ಈ ರಸ್ತೆ ಸುರಕ್ಷತಾ ಕಾಯಿದೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಈ ಮುಷ್ಕರ ನಡೆಯಲಿದೆ.
ಮಾತ್ರವಲ್ಲದೆ ಕರಾವಳಿ ಜಿಲ್ಲೆಯ ಖಾಸಗಿ ಬಸ್ಸು ಮಾಲಕರು ಬಸ್ಸುಗಳಲ್ಲಿ ದುಡಿಯುವ ಚಾಲಕರು ಮತ್ತು ನಿರ್ವಾಹಕರಿಗೆ ನೀಡಲು ಒಪ್ಪಿರುವ ದಿನ ವೇತನವನ್ನು ಜಾರಿ ಮಾಡಲು ಮೀನಮೇಷ ಮಾಡುತ್ತಿರುವುದನ್ನು ವಿರೋಧಿಸಿ ಈ ಮುಷ್ಕರ ನಡೆಯಲಿರುವುದು ಎಂದ ಅವರು ಏ.೩೦ ರಂದು ಜಿಲ್ಲೆಯ ಖಾಸಗಿ ಬಸ್ಸುಗಳಲ್ಲಿ ದುಡಿಯುವ ಚಾಲಕರು ಹಾಗೂ ನಿರ್ವಾಹಕರು ಮುಷ್ಕರದಲ್ಲಿ ಭಾಗವಹಿಸಲಿರುವುದರಿಂದ ಅಂದು ಬಸ್ಸು ಸಂಚಾರ ಇರುವುದಿಲ್ಲವೆಂದು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಆದರೆ ಆಶ್ಚರ್ಯವಾಗುತ್ತಿರುವುದು ಬಸ್ ನೌಕರರ ಈ ಹೋರಾಟಕ್ಕೆ ಕರಾವಳಿಯಲ್ಲಿ ಬಸ್ ಮಾಲೀಕರ ಸಂಘದ ಬೆಂಬಲ ಇಲ್ಲದೆ ಇರುವುದು. ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹಾಗೂ ಉಡುಪಿ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಅವರ ಪ್ರಕಾರ ಕೇಂದ್ರ ಸರ್ಕಾರ ತರಲಿರುವ ಮಸೂದೆ ಪ್ರಯಾಣಿಕರ ಪರವಾಗಿದೆ.
ಹಿಂದೆ ಮೋಟಾರು ವಾಹನ ಕಾಯಿದೆ ಇದ್ದರೆ ಈಗ ರಸ್ತೆ ಸುರಕ್ಷಾ ಮಸೂದೆಯಾಗಿದೆ. ಹೀಗಾಗಿ ಮುಷ್ಕರಕ್ಕೆ ಬಸ್ ಮಾಲೀಕರ ಬೆಂಬಲ ಇಲ್ಲ ಎಂದಿದ್ದಾರೆ. ಹೊಸ ಮಸೂದೆಯಲ್ಲಿ ದಂಡ ಶುಲ್ಕ ಹೆಚ್ಚಿಗೆ ಇದೆ. ಆದರೆ ಇದು ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿದೆ. ಬಸ್ ಚಾಲಕರು ಜಾಗರೂಕತೆಯಿಂದ ಇರಲು ಎಚ್ಚರಿಕೆಯಾಗಲಿದೆ. ಹೊಸ ಮಸೂದೆಯಲ್ಲಿ ಯಾವುದೇ ವಾಹನವನ್ನು ಯಾವುದೇ ರಾಜ್ಯದಲ್ಲಿ ನೋಂದಣಿ ಮಾಡಬಹುದು. ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಎಲ್ಲಿಯೂ ಅಡೆತಡೆ ಇಲ್ಲದೆ ಬಸ್ ಚಲಾಯಿಸಬಹುದು. ತೆರಿಗೆಗಳು ಕೇಂದ್ರಕ್ಕೆ ಹೋಗಿ ಅಲ್ಲಿಂದ ರಾಜ್ಯಗಳಿಗೆ ಅವರವರ ಪಾಲು ಸಂದಾಯವಾಗಲಿದೆ.
ಸರಕಾರಿ ಬಸ್ಗಳ ಏಕಸ್ವಾಮ್ಯದ ಬದಲು ಖಾಸಗಿಯವರಿಗೂ ಅವಕಾಶ ನೀಡಲಾಗಿದೆ. ಇದರಲ್ಲಿ ಖಾಸಗಿ ಬಸ್ ಎಂಬುದು ಮುಖ್ಯವಲ್ಲ. ಪ್ರಯಾಣಿಕನ ಆಯ್ಕೆ ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಇದು ಪ್ರಯಾಣಿಕ ಕೇಂದ್ರಿತ ಮಸೂದೆ ಎನ್ನುವುದು ಎಲ್ಲರ ಅನಿಸಿಕೆ. ಆದರೆ ಕಾಂಗ್ರೆಸ್ ಸಹಿತ ಎಡಪಕ್ಷಗಳು ಈ ಮಸೂದೆಯನ್ನು ಸುಮ್ಮನೆ ಹಾಗೆ ಬಿಡಲು ತಯಾರಿಲ್ಲ. ಭೂ ಸ್ವಾಧೀನ ತಿದ್ದುಪಡಿ ಮಸೂದೆಯಂತೆ ಇದನ್ನು ಕೂಡ ಅಸ್ತ್ರವಾಗಿ ಬಳಸಲು ನಿರ್ಧರಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.