ಬೆಂಗಳೂರು: ತಡವಾಗಿಯಾದರೂ ಕಾವೇರಿ ನೀರು ವಿಚಾರವಾಗಿ ವಿಧಾನಮಂಡಲ ವಿಶೇಷ ಅಧಿವೇಶನ ಶುಕ್ರವಾರ ಆರಂಭಗೊಂಡಿದೆ. ಈ ಸಂದರ್ಭ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ ಎಂಬ ಪ್ರಸ್ತಾಪ ಮಂಡಿಸಿದರು. ಇದಕ್ಕೆ ಕಡೂರು ಶಾಸಕ ವೈ.ಎಸ್.ವಿ.ದತ್ತಾ ಅನುಮೋದಿಸಿದರು. ಬಳಿಕ ಎಲ್ಲರೂ ಇದನ್ನು ಬೆಂಬಲಿಸಿ ಮಾತನಾಡಿದರು.
ನಾಲ್ಕು ಜಲಾಶಯಗಳಲ್ಲಿ ಕೇವಲ 27.6 ಟಿಎಂಸಿ ನೀರಷ್ಟೇ ಇದೆ ಎಂದು ಸದಸ್ಯರು ಕಳವಳ ವ್ಯಕ್ತಪಡಿಸಿದರು. ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ನಗರಗಳ ಕುಡಿಯುವ ಉದ್ದೇಶಕ್ಕೆ ಮಾತ್ರ ನಾಲ್ಕು ಜಲಾಶಯಗಳ ನೀರನ್ನು ಬಳಸುವುದಕ್ಕೆ ನಿರ್ಧರಿಸಲಾದ ಕುರಿತು ಕಡೂರು ಶಾಸಕ ವೈಎಸ್ ವಿ ದತ್ತಾ ಸ್ಪಷ್ಟನೆಗೆ ಒತ್ತಾಯಿಸಿದರು.
ಕಾವೇರಿ ವಿವಾದಕ್ಕೆ ಸಂಬಂಧಿಸಿ ಕನಿಷ್ಠ 40 ಸಾವಿರ ಕೋಟಿ ನಷ್ಟ ರಾಜ್ಯಕ್ಕೆ ಆಗಿದೆ ಎಂದು ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜತೆ ಮಾತನಾಡಿದ್ದೀವಿ, ಕೇಂದ್ರ ನೀರಾವರಿ ಸಚಿವರ ಜತೆಗೂ ಮಾತನಾಡಿದ್ದೀವಿ. ಇಂದಿನ ತೀರ್ಮಾನ ಏನು ಬರುತ್ತದೆ ಎಂದು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಕಚೇರಿಗಳನ್ನು ಮುಚ್ಚುವುದು ಸಾಧ್ಯವಿಲ್ಲ. ಈಗಾಗಲೇ ಮಂಡ್ಯದ ಶಾಲೆಗಳಿಗೆ ಹದಿನೈದು ದಿನ ರಜೆ ನೀಡಲಾಗಿದೆ. ಬಸ್ ಪ್ರಯಾಣಕ್ಕೆ ದುಡ್ಡು ಕೊಡದಿರುವುದು, ವಿದ್ಯುತ್ ಬಿಲ್ ಕಟ್ಟದಿರುವಂಥದ್ದನ್ನು ಮಾಡಬಾರದು ಎಂದು ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಜನರ ಪರ ನಿಲ್ತೀವಿ:
ಕರ್ನಾಟಕ ಕೋರ್ಟ್ ಆದೇಶ ಉಲ್ಲಂಘನೆ ಮಾಡಿಲ್ಲ. ಉಲ್ಲಂಘನೆ ಮಾಡುವ ಉದ್ದೇಶ ಇಲ್ಲ. ನೀರಾವರಿಗಿಂತ ನಮಗೆ ಕುಡಿಯುವ ನೀರಿಲ್ಲ. 2017ಕ್ಕೆ 97 ಟಿಎಂಸಿ ನೀರು ಬೇಕು. ಮೇಲುಸ್ತುವಾರಿ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದೆ. ಅದು ಮೂರು ಸಾವಿರ ಕ್ಯೂಸೆಕ್ಸ್ ನೀಡಬೇಕು ಅಂದರೆ, ಕೋರ್ಟ್ ಆರು ಸಾವಿರ ಕ್ಯೂಸೆಕ್ಸ್ ಬಿಡಬೇಕು ಎಂದಿದೆ. ನನಗೆ ಕೋರ್ಟ್ ಬಗ್ಗೆ ಗೌರವ ಇದೆ. ಆದರೆ ಇದು ಅನುಸರಿಸಲು ಸಾಧ್ಯವಿಲ್ಲದ ಆದೇಶ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ತಪ್ಪು ಮುಚ್ಚಿಕೊಳ್ಳಲು ಪ್ರಧಾನಿ ಹೆಸರು:
ಸಿಎಂ ಮಾಡಿದ ತಪ್ಪು ಮುಚ್ಚಿಕೊಳ್ಳಲು ಪ್ರಧಾನಮಂತ್ರಿ ಹೆಸರು ಹೇಳುತ್ತಿದ್ದಾರೆ. ರಾಜ್ಯ ಸರಕಾರವೇ ತಪ್ಪು ಮಾಡಿದ್ದು, ಅದನ್ನು ಮುಚ್ಚಿಕೊಳ್ಳುವುದಕ್ಕೆ ಪ್ರಧಾನಿಗಳ ಹೆಸರು ತರುತ್ತಿದ್ದಾರೆ. ಒಮ್ಮೆ ಕೋರ್ಟ್ ತೀರ್ಪು ಬಂದ ಮೇಲೆ ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಅಂತ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ ಎಂದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ರೈತರಿಗೆ ಪರಿಹಾರ:
ಶಾಸಕ ರೇವಣ್ಣ ಮಾತನಾಡಿ, ಕಾವೇರಿ ಕೊಳ್ಳದ ರೈತರಿಗೆ ಪರಿಹಾರ ನೀಡಬೇಕು. ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸುತ್ತೇವೆ. ಒಟ್ಟಿನಲ್ಲಿ ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು ಎಂಬುದು ನಮ್ಮ ನಿಲುವು ಎಂದರು.
ಸುಪ್ರೀಂ ಕೋರ್ಟ್ ನಿರ್ಣಯ ಬಂದ ನಂತರ ಯಾವುದೇ ಪ್ರಧಾನಿ ಮಧ್ಯ ಪ್ರವೇಶಿಸಿದ ಉದಾಹರಣೆ ಇಲ್ಲ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರು ಪ್ರಧಾನಿ ನಿಲುವನ್ನು ಸಮರ್ಥಿಸಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.