ಬೈಂದೂರು: ಶಾರ್ಜಾದ ದೆಹಲಿ ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಂಡ್ಯಾ ಪ್ರೇರಣಾ ಪೈ ಇವರು 2014-15ನೇ ಸಾಲಿನ 21ನೇ ಶೈಕ್ಷಣಿಕ ಮಹತ್ಸಾಧನೆಯ ಬಿರುದು ಪಡೆದುಕೊಂಡಿದ್ದಾರೆ.
ಶಾರ್ಜಾ ನಗರದ ಶಾರ್ಜಾ ವಿಶ್ವವಿದ್ಯಾನಿಲಯದ ಸಿಟಿ ಹಾಲ್ನಲ್ಲಿ ಇತ್ತೀಚಿಗೆ ಜರುಗಿದ ಸಮಾರಂಭದಲ್ಲಿ ಶಾರ್ಜಾದ ಯುವರಾಜ ಜನಾಬ್ ಶೇಖ್ ಸುಲ್ತಾನ್ ಬಿನ್ ಮೊಹಮ್ಮದ್ ಬಿನ್ ಸುಲ್ತಾನ್ ಅಲ್ ಕಾಸಿಮಿ ಇವರು ಪ್ರೇರಣಾ ಪೈ ಇವರಿಗೆ ಬಿರುದು ಪ್ರದಾನ ಮಾಡಿದರು.
ಈಕೆ ಮೂಲತಃ ಗಂಗೊಳ್ಳಿಯವರಾದ ಮಣಿಪಾಲದ ನಿವಾಸಿ ಬಾಂಡ್ಯ ಸಂಜೀವ ಪೈ ಹಾಗೂ ಶಾರದಾ ಎಸ್.ಪೈ ಅವರ ಮೊಮ್ಮಗಳಾಗಿದ್ದು, ಬಾಂಡ್ಯ ಹರೀಶ್ ಪೈ ಮತ್ತು ರಾಗಿಣಿ ಹರೀಶ್ ಪೈ ಅವರ ಪುತ್ರಿಯಾಗಿದ್ದಾಳೆ.
ಪ್ರತಿಷ್ಠಿತ ಶೈಕ್ಷಣಿಕ ಶ್ರೇಷ್ಠತೆಗಾಗಿ 2012-13ನೇ ಆವೃತ್ತಿ 15ರ ’ಶೇಕ್ ಹಮ್ದಾನ್ ಬಿನ್ ರಾಶಿದ್ ಅಲ್ ಮಕ್ತೂಮ್ ಬಿರುದನ್ನು ಪಡೆದುಕೊಂಡಿರುವ ಪ್ರೇರಣಾ, ತನ್ನ ಸಂಪೂರ್ಣ ಶೈಕ್ಷಣಿಕ ಪಯಣದಲ್ಲಿ ತನ್ನ ನೆಚ್ಚಿನ ವಿಷಯಗಳಾದ ವಿಜ್ಞಾನ ಮತ್ತು ಗಣಿತದಲ್ಲಿ ಸರ್ವಶ್ರೇಷ್ಠ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ. ತಾನು ಕೈಗೆತ್ತಿಕೊಂಡಿರುವ ಕಾಯಕವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಾ ಬಂದಿರುವ ಇವರು, ನಿರಂತರ ಅಭ್ಯಾಸವು ನಮ್ಮನ್ನು ಪಾರಂಗತರನ್ನಾಗಿಸುತ್ತದೆ ಮತ್ತು ನಿಖರ ಗುರಿಯು ಉತ್ತಮ ನಿರ್ವಹಣೆಗೆ ಪ್ರೇರಕ ಎಂದು ಬಲವಾಗಿ ನಂಬಿದ್ದಾರೆ. ವಿಜ್ಞಾನದಲ್ಲಿನ ಆಕೆಯ ಆಸಕ್ತಿ ಆಂತರಿಕ್ಷದ ಬಗ್ಗೆ ಪ್ರಯೋಗ ನಡೆಸಲು ಪ್ರೇರೆಪಿಸಿದೆ. ಆಕೆಯ ಎರಡು ಆ ರೀತಿಯ ಪ್ರಯೋಗಗಳು 2014ರಲ್ಲಿ ಮತ್ತು 2015ರಲ್ಲಿ ಆಯ್ಕೆಯಾಗಿ ’ಕ್ಯೂಬ್ಸ್ ಇನ್ ಸ್ಪೇಸ್’ ಎಂಬ ಮಾದರಿಯಲ್ಲಿ ಆಂತರಿಕ್ಷದಲ್ಲಿ ತೇಲಿ ಬಿಡಲಾಗಿದ್ದು ಇದೊಂದು ಶೈಕ್ಷಣಿಕ ಉತ್ತೇಜಕವಾಗಿ ’ನಾಸಾ’ದ ಸೌಂಡಿಂಗ್ ರಾಕೆಟ್ಗೆ ಇತರ ವಿದ್ಯಾರ್ಥಿಗಳು ರವಾನಿಸಲು ಪ್ರೇರಕವಾಗಿದೆ.
ಪ್ರೇರಣಾರದ್ದು ಕೇವಲ ಶೈಕ್ಷಣಿಕ ಸಾಧನೆ ಮಾತ್ರವಲ್ಲ, 5 ವರ್ಷ ಕಿರಿಯ ವಯಸ್ಸಿನಿಂದಲೇ ಭರತನಾಟ್ಯ ಅಭ್ಯಾಸಕ್ಕೆ ತೊಡಗಿದ ಆಕೆ ಪ್ರಖ್ಯಾತ ಚಂಡಿಗಢದ ಪ್ರಾಚೀನ ಕಲಾ ಕೇಂದ್ರದಿಂದ ’ಸೀನಿಯರ್ ಭರತನಾಟ್ಯ ಡಿಪ್ಲೊಮಾ’ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿ ’ನೃತ್ಯಭೂಷಣ’ ಪದವಿ ಪಡೆದಿರುತ್ತಾರೆ. ಇದೀಗ ಆಕೆ ವಿದುಷಿ ರೋಹಿಣಿ ಅನಮತ್ ಎಂಬ ಶ್ರೇಷ್ಠ ನೃತ್ಯ ಗುರುವಿನ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಈಕೆ ’ಡ್ರಮ್’ ಬಾರಿಸುವುದರಲ್ಲಿಯೂ ಪ್ರವೀಣೆಯಾಗಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸುತ್ತಿದ್ದಾರೆ. ಆಕೆಯ ಅಚ್ಚುಮೆಚ್ಚಿನ ಹವ್ಯಾಸವೆಂದರೆ ಪುಸ್ತಕ ಓದುವುದು. ಪುಸ್ತಕ ಓದದೆ ನಾನು ಬದುಕಲು ಸಾಧ್ಯವಿಲ್ಲ ಎಂಬುದು ಇವರ ಅಂಬೋಣ. ಇವರು ಚಿಕ್ಕ ವಯಸ್ಸಿನಿಂದ ಅತೀವ ಓದಿನ ಲಾಲಸೆ ಉಳ್ಳವರಾಗಿದ್ದಾರೆ. ಇವರ ಹೆತ್ತವರು ಹೇಳುವಂತೆ ಈಕೆ ಬರೇ ಪುಸ್ತಕ ಕಬಳಿಸುವವಳಾಗಿದ್ದು ಒಮ್ಮೆ ಓದಲು ಕೈಗೆತ್ತಿಕೊಂಡ ಪುಸ್ತಕವನ್ನು ಸಂಪೂರ್ಣ ಮುಗಿಸಿದ ಬಳಿಕವೇ ವಿಶ್ರಾಂತಿ ಪಡೆಯುವ ಸ್ವಭಾವದವರಾಗಿದ್ದಾರೆ.
ಈಕೆ ಪ್ರಕೃತಿ ಆರಾಧಕಿಯಾಗಿದ್ದು ಪ್ರಾಣಿಗಳ ರಕ್ಷಣಾ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಈ ನಿಟ್ಟಿನ ಪ್ರಚಾರಾಂದೋಲನದಲ್ಲಿಯೂ ಈಕೆ ಸಕ್ರಿಯರಾಗಿದ್ದಾರೆ. ಪ್ರಾಣಿಗಳ ಬಗೆಗಿನ ಅನುಕಂಪವೇ ಈಕೆಯನ್ನು ಮಾಂಸಹಾರ ತ್ಯಜಿಸಿ ಶುದ್ಧ ಸಸ್ಯಾಹಾರ ಸೇವನೆಯತ್ತ ಪರಿವರ್ತಿಸಿತು. ಈ ಬಗ್ಗೆ ಈಕೆ ವೀಡಿಯೋ ಒಂದನ್ನು ರಚಿಸಿ ಇತರರನ್ನು ಸಸ್ಯಾಹಾರ ಸೇವನೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಈ ವೀಡಿಯೋವನ್ನು ವೀಕ್ಷಿಸಿದ ’ಅಮೆರಿಕನ್ ವೆಜಿಟೇರಿಯನ್ ಗ್ರೂಪ್’ ನವರು ಈಕೆಗೆ 250 ಡಾಲರ್ ಸ್ಕಾಲರ್ಶಿಪ್ನ್ನು ನೀಡಿ ಗೌರವಿಸಿದ್ದಾರೆ. ಈಕೆಯ ಈ ಬಗೆಯ ವೀಡಿಯೋ ಒಂದು ಯೂರೋಪಿನ ಪ್ರಕೃತಿ ಸಂರಕ್ಷಣಾ ಕಿರು ಚಿತ್ರ ’ಗ್ರೀನ್ ಗೋ’ ದವರಿಂದ ಸ್ವೀಕರಿಸಲ್ಪಟ್ಟಿದ್ದು ಪ್ರತಿಯೊಬ್ಬರಿಂದ ಅಪಾರ ಮೆಚ್ಚಿಗೆಯೂ ಪ್ರಾಪ್ತವಾಗಿದೆ. ಮಹಾನ್ ಧರ್ಮ ಶ್ರದ್ಧೆ ಮತ್ತು ದೈವ ಭಕ್ತೆಯೂ ಆಗಿರುವ ಈಕೆ ತನ್ನೆಲ್ಲಾ ಸಾಧನೆಗೆ ಪರಮಾತ್ಮ, ಹೆತ್ತವರು ಮತ್ತು ಶಿಕ್ಷಕರೇ ಕಾರಣ ಎಂದು ವಿನೀತಳಾಗಿ ನುಡಿಯುತ್ತಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.