ಮುಂಬಯಿ : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದಲ್ಲಿನ 50 ನಗರಗಳನ್ನು ಅಕ್ಟೋಬರ್ 2ರೊಳಗೆ ಸ್ವಚ್ಛ ನಗರಗಳಾಗಿ ಪರಿವರ್ತನೆಗೊಳಿಸುವ ಭರವಸೆಯನ್ನು ನೀಡಿದ್ದಾರೆ.
ಎನ್ಡಿಟಿವಿ – ಡೆಟಾಲ್ ಕ್ಲೀನಥಾನ್ ಕ್ಯಾಂಪೇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸ್ವಚ್ಛ ಭಾರತಕ್ಕಾಗಿ ಅಕ್ಟೋಬರ್ 2ರೊಳಗೆ ಮಹಾರಾಷ್ಟ್ರದ ಸುಮಾರು 50 ನಗರಗಳನ್ನು ಸ್ವಚ್ಛ ನಗರಗಳನ್ನಾಗಿಸುವೆವು. ಇಷ್ಟೇ ಅಲ್ಲದೆ ಸುಮಾರು 7000 ಗ್ರಾಮಗಳು ಮಹಾರಾಷ್ಟ್ರದಲ್ಲಿ ಬಯಲುಶೌಚ ಮುಕ್ತ ಗ್ರಾಮಗಳಾಗಿವೆ ಎಂದರು.
ಕ್ಲೀನ್ ಮುಂಬೈ ಕಾರ್ಯಕ್ರಮದ ಅಂಗವಾಗಿ ಮುಂಬಯಿಯ ಜೆಜೆ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬರೀ ಮಾತಿನಲ್ಲಿ ಹೇಳುವುದಷ್ಟೇ ಆಗಬಾರದು, ಅದನ್ನು ಕೃತಿ ರೂಪಕ್ಕಿಳಿಸಬೇಕು. ಪ್ರತಿಯೊಬ್ಬರೂ ಸ್ವಚ್ಛ ಪರಿಸರವನ್ನು ಹೊಂದಲು ಶ್ರಮಿಸಬೇಕು ಎಂದರು.
ಕ್ಯಾಂಪೇನ್ ರಾಯಭಾರಿಯಾದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸ್ವಚ್ಛತಾ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಈಗಾಗಲೇ ಎಲ್ಲರಲ್ಲೂ ಸ್ವಚ್ಛತೆಯ ಅರಿವು ಮೂಡಿದ್ದು, ಸೆಲೆಬ್ರಿಟಿಗಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲೆಡೆ ಎಲ್ಲರೂ ಸ್ವಚ್ಛತೆಗಾಗಿ ಮುಂದಾಗುತ್ತಿದ್ದಾರೆ. ಇದು ಹೀಗೇ ಮುಂದುವರೆಯುತ್ತಿರಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಲಿನ ಕೇವಲ 10 ಯಾರ್ಡ್ ಜಾಗವನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರೆ, ಇಡೀ ದೇಶ ಸ್ವಚ್ಛ ಭಾರತವಾಗಿ ಕಂಗೊಳಿಸಲು ಬಹಳ ಕಾಲ ಬೇಕಾಗಿಲ್ಲ ಎಂದರು.
ದೇವೇಂದ್ರ ಫಡ್ನವಿಸ್ ಮತ್ತು ಅಮಿತಾಬ್ ಬಚ್ಚನ್ ಇಬ್ಬರೂ ಕಸಪೊರಕೆ ತೆಗೆದುಕೊಂಡು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಬಹಳಷ್ಟು ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಜೊತೆಗೂಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.