ಕಾನ್ಪುರ : ಗಂಗಾ ಸ್ವಚ್ಛತೆಯನ್ನು ಕಾಪಾಡಿ ಎಂಬ ಸಂದೇಶವನ್ನು ಸಾರಲು 11 ವರ್ಷದ ಬಾಲಕಿ ಶ್ರದ್ಧಾ ಶುಕ್ಲಾ ಕಾನ್ಪುರದ ಮಸ್ಸಾಕರ್ ಘಾಟ್ನಿಂದ ವಾರಣಾಸಿಯವರೆಗೆ ಸುಮಾರು 550 ಕಿ.ಮೀ. ದೂರ ಗಂಗಾನದಿಯಲ್ಲಿ ಈಜಲು ಮುಂದಾಗಿದ್ದಾಳೆ.
9 ನೇ ತರಗತಿಯಲ್ಲಿ ಓದುತ್ತಿರುವ ಶ್ರದ್ಧಾ ಆಕೆಗೆ ಎರಡು ವರ್ಷದವಳಿದ್ದಾಗಿನಿಂದಲೇ ಈಜು ತರಬೇತಿ ಎಂದು ಪಡೆದುಕೊಂಡಿದ್ದಾಳೆ. 9 ವರ್ಷದವಳಿದ್ದಾಗ ಕಾನ್ಪುರದಿಂದ ಅಲಹಾಬಾದ್ವರೆಗೆ ಈಜಿದ್ದಳು.
ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29 ರಂದು ಕಾನ್ಪುರದ ಮಸ್ಸಾಕರ್ ಘಾಟ್ನಿಂದ ಶ್ರದ್ಧಾ ಈಜಲು ಪ್ರಾರಂಭಿಸಿದ್ದಾರೆ. ಈಗಾಗಲೇ 150 ಕಿಮೀ. ದೂರವನ್ನು ಕ್ರಮಿಸಿದ್ದಾಳೆ ಎನ್ನಲಾಗಿದೆ.
‘ಕ್ಲೀನ್ ಗಂಗಾ’ ಅಭಿಯಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಇದಾಗಿದ್ದು, ಸುಮಾರು 10 ದಿನಗಳಲ್ಲಿ 550 ಕಿ.ಮೀ. ಈಜಿ ವಾರಣಾಸಿಯನ್ನು ತಲುಪುವವಳಿದ್ದಾಳೆ. ದಿನಕ್ಕೆ ಸುಮಾರು 60 ಕಿ.ಮೀ. ದೂರವನ್ನು ಸುಮಾರು 7 ಗಂಟೆಗಳ ಕಾಲ ಈಜಲು ನಿರ್ಧರಿಸಲಾಗಿದೆ. ಎಂಟು ಜನ ಡೈವರ್ಗಳು, ಇಬ್ಬರು ಶೂಟರ್ಗಳು ಮತ್ತು ಡಾಕ್ಟರ್ ಇರುವ ತಂಡವು ಬೋಟ್ನಲ್ಲಿ ಆಕೆಯನ್ನು ಹಿಂಬಾಲಿಸುತ್ತಿದ್ದು, ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರದ್ಧಾಳ ತರಬೇತುದಾರ ಮತ್ತು ತಂದೆಯಾಗಿರುವ ಲಲಿತ್ ಶುಕ್ಲಾ ಅವರು ಹೇಳಿದ್ದಾರೆ.
ಸಂಪೂರ್ಣವಾಗಿ 10 ದಿನಗಳ ಕಾಲ ಇದರ ವೀಡಿಯೋ ಚಿತ್ರೀಕರಣ ನಡೆಯಲಿದ್ದು ಇದನ್ನು ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದೂ ಲಲಿತ್ ಶುಕ್ಲಾ ಹೇಳಿದ್ದಾರೆ.
ಮುಂದಿನ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸನ್ನು ಹೊತ್ತಿರುವ ಶ್ರದ್ಧಾ ಶುಕ್ಲಾ, ಜನರಲ್ಲಿ ಗಂಗಾ ನದಿ ಶುದ್ಧೀಕರಣ, ಸ್ವಚ್ಛತೆಯ ಅರಿವು ಮೂಡಿಸಲು ಈ ಸಾಹಸಕ್ಕೆ ಸಂಕಲ್ಪ ತೊಟ್ಟು ಈಜಲು ಮುಂದಾಗಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.