ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ವೀರವನಿತೆಯ ಪಾತ್ರ ಮರೆಯಲಾರದಂತಹದ್ದು. “ತೊಟ್ಟಿಲು ತೂಗುವ ಕೈಗಳು ಬಂದೂಕು ಹಿಡಿಯಬಲ್ಲವು” ಎಂದು ತೋರಿಸಿಕೊಟ್ಟ ವೀರಾಂಘನೆ ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್.
ಈಕೆಯ ಜನನ 24 ಅಕ್ಟೋಬರ್ 1914 ರಲ್ಲಾಯಿತು. ತಂದೆ ಡಾ.ಎಸ್. ವಿಶ್ವನಾಥ್ ಅಯ್ಯರ್ ಮದರಾಸಿನ ಖ್ಯಾತ ವಕೀಲರು. ತಾಯಿ ಅಮ್ಮುಕುಟ್ಟಿ. ತಾಯಿ ಸ್ವತಃ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರು ಸಾಮಾಜಿಕ ಹೋರಾಟಗಾರ್ತಿಯೂ ಆಗಿದ್ದರು. ಆದ ಕಾರಣ ಭಾರತದ ಸ್ವಾತಂತ್ರ್ಯ ಚಳವಳಿಗೆ ಲಕ್ಷ್ಮೀಯವರಿಗೆ ಮನೆಯೇ ಮೊದಲ ಪಾಠ ಶಾಲೆಯಾಯಿತು. ನೇತಾಜಿಯನ್ನು ಕಂಡರೆ ಅಪಾರ ಗೌರವ. ಅವರನ್ನು ಭೇಟಿಯಾಗಲೇಬೇಕು ಎಂಬ ಹುಮ್ಮಸ್ಸು.
1940 ರಲ್ಲಿ, 26 ರ ಹರೆಯದಲ್ಲೇ ಸಿಂಗಾಪುರಕ್ಕೆ ತೆರೆಳಿದರು. ವಿಮಾನ ಚಾಲಕ, ಶ್ರೀ ಪಿ.ಕೆ.ಎನ್. ರಾವ್ ಜೊತೆ ಮದುವೆಯ ಪ್ರಸ್ತಾಪವಿತ್ತು. ಆದರೆ ಅದು ಸರಿಹೋಗಲಿಲ್ಲ.
ಅಲ್ಲಿ ಸುಭಾಷ್ ಚಂದ್ರ ಬೋಸ್ರನ್ನು ಕಾಣುವ ಹಾಗೂ ಅವರ ಭಾಷಣಗಳನ್ನು ಕೇಳುವ ಸುಯೋಗ ದೊರೆಯಿತು. 1942 ರಲ್ಲಿ ‘ಆಝಾದ್ ಹಿಂದ್ ಫೌಜ್’ ಜೊತೆ ಸಂಬಂಧ ಬೆಳೆಯಿತು. ಜಪಾನಿಗೆ ಸಿಂಗಾಪುರವನ್ನು ಬಿಟ್ಟುಕೊಡುವ ಒಪ್ಪಿಗೆಯ ಸಮಯದಲ್ಲಿ ಜರುಗಿದ ಕದನದಲ್ಲಿ ನೂರಾರು ಸೈನಿಕರು ಅತಿ ಗಾಯಹೊಂದಿ ನರಳಿದರು. ಆ ಸಮಯದಲ್ಲಿ ವೈದ್ಯಕೀಯ ಸಹಾಯವನ್ನು ಲಕ್ಷ್ಮಿಯವರು ಪೂರೈಸಿದರು. ಆಗ ಪ್ರಜ್ಞಾವಂತ ರಾಷ್ಟ್ರ ಪ್ರೇಮಿ ಭಾರತೀಯರು ಕ್ಯಾಪ್ಟನ್ ಸುಭಾಷ್ ಚಂದ್ರ ಬೋಸ್ ಜೊತೆಗೂಡಿ ‘ಆಝಾದ್ ಹಿಂದ್ ಫೌಜ್’ ನ ಸ್ಥಾಪನೆಗೆ ಕಾರಣರಾದರು. ಹಾಗೆ ಜೊತೆಗೂಡಿದ ಭಾರತೀಯರಲ್ಲಿ ಪ್ರಮುಖರು, ಕೆ.ಪಿ.ಕೇಶವ ಮೆನನ್, ಎಸ್.ಸಿ.ಗುಹಾ, ಎನ್.ರಾಘವನ್, ಮೊದಲಾದವರು. ಜಪಾನ್ ಯೋಧರ ಜೊತೆ ಸೇರಿದರೂ ಅವರಿಗೆ ಪ್ರಾಮುಖ್ಯತೆ ಸಿಗಲಿಲ್ಲ. 2 ಜುಲೈ 1943 ರಲ್ಲಿ ಸುಭಾಷ್ ಚಂದ್ರ ಬೋಸ್ ಸಿಂಗಾಪುರಕ್ಕೆ ಬಂದರು. ಐ.ಎನ್.ಎ. ಮುಂದಾಳುಗಳು ಇಂಫಾಲ ನಗರವನ್ನು ಪ್ರವೇಶಿಸುವ ಮೊದಲು ಯುದ್ಧವಿರಾಮವನ್ನು ಘೋಷಿಸಿದರು.
ಮೇ 1945 ರಲ್ಲಿ ಅವರು ಸುಭಾಷ್ ಚಂದ್ರ ಬೋಸ್ರ ಜೊತೆ, 5 ಗಂಟೆಗಳ ಸುದೀರ್ಘ ಚರ್ಚೆಯ ನಂತರ, ಲಕ್ಷ್ಮಿಯವರ ನೇತೃತ್ವದಲ್ಲಿ ‘ಇಂಡಿಯನ್ ನ್ಯಾಷನಲ್ ಆರ್ಮಿಯ ಮಹಿಳಾ ವಿಭಾಗದ ಸ್ಥಾಪನೆಗೆ ‘ಬೋಸ್,’ ಒಪ್ಪಿಗೆ ನೀಡಿ, ಹಾಗೆ ನಿರ್ಧರಿಸಿದ ರೆಜಿಮೆಂಟಿಗೆ ’ಝಾನ್ಸಿ ರಾಣಿ ರೆಜಿಮೆಂಟ್,’ ಎಂದು ನಾಮಕರಣ ಮಾಡಿದರು. ಐ.ಎನ್.ಎ. ನಲ್ಲಿ ಅಧಿಕಾರಿಯಾಗಿ, ಆಝಾದ್ ಹಿಂದ್ ಸರಕಾರದಲ್ಲಿ ‘ಮಿನಿಸ್ಟರ್ ಫಾರ್ ವಿಮೆನ್ಸ್ ಅಫೇರ್ಸ್’, ಆಗಿ ದುಡಿದರು. ಅದಕ್ಕೆ ಲಕ್ಷ್ಮಿಯವರನ್ನು ‘ಕ್ಯಾಪ್ಟನ್’ ಆಗಿ ನೇಮಿಸಿದರು. ಅಂದಿನಿಂದ ಅವರ ಹೆಸರಿನ ಜೊತೆಯಲ್ಲಿ ಡಾಕ್ಟರ್ ಹಾಗೂ ಕ್ಯಾಪ್ಟನ್ ಪದಗಳು ಜೊತೆ-ಜೊತೆಯಾದವು.
1944 ರ ಮಾರ್ಚ್ ತಿಂಗಳಲ್ಲಿ ‘ಬರ್ಮಾ ಮಾರ್ಚ್’ ಶುರುವಾಯಿತು. 1945 ರ ಮೇ ತಿಂಗಳಿನಲ್ಲಿ ಕ್ಯಾಪ್ಟನ್ ಲಕ್ಷ್ಮಿಯವರನ್ನು ಬ್ರಿಟಿಷ್ ಸರಕಾರ ಬಂಧಿಸಿತು. ಬರ್ಮಾದ ದುರ್ಗಮ ಅಡವಿಯಲ್ಲಿ 11 ತಿಂಗಳ ಕಾಲ ಅವರನ್ನು ‘ಗೃಹಬಂಧನ’ದಲ್ಲಿ ಇರಿಸಲಾಯಿತು. ದೆಹಲಿಯಲ್ಲಿ ಐ.ಎನ್.ಎ. ನಾಯಕರ ವಿಚಾರಣೆ ನಡೆಸುವ ವೇಳೆಗೆ ಕ್ಯಾಪ್ಟನ್ ಲಕ್ಷ್ಮಿಯವರನ್ನು ಭಾರತಕ್ಕೆ ಕಳುಹಿಸಲಾಯಿತು. ಆ ಸಮಯದಲ್ಲಿ ಐ.ಎನ್.ಎ. ನಲ್ಲಿ ಕರ್ನಲ್ ಆಗಿದ್ದ ಶ್ರೀ ಪ್ರೇಮ್ ಕುಮಾರ್ ಸೆಹೆಗಲ್, ಜೊತೆ ಗೆಳೆತನ ಬೆಳೆದು, ಅವರಿಬ್ಬರೂ 1947 ರಲ್ಲಿ ಮದುವೆಯಾದರು.
ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ದಲಿತರ ದೇವಾಲಯ ಪ್ರವೇಶದ ಪರವಾಗಿ, ಬಾಲ್ಯ ವಿವಾಹದ ವಿರುದ್ಧ, ವರದಕ್ಷಿಣೆ ವಿರೋಧ, ದೇಶ ವಿಭಜನೆಯ ಬಳಿಕ, ಹಿಂದೂ-ಮುಸ್ಲಿಂ ಗಲಭೆಗಳ ನಿರಾಶ್ರಿತ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವ ತುರ್ತು ಈ ವಿಷಯಗಳನ್ನು ಹಿಡಿದು ನಿರಂತರ ಹೋರಾಟ ಮಾಡಿದರು.
2006 ರಲ್ಲಿ, ತಮ್ಮ 92 ನೆಯ ವಯಸ್ಸಿನಲ್ಲೂ ತಮ್ಮ ಕಾನ್ಪುರದ ರುಗ್ಣಾಲಯದಲ್ಲಿ ರೋಗಿಗಳ ಸೇವೆಯನ್ನು ಮಾಡುತ್ತಿದ್ದರು. ತಮ್ಮ 97 ರ ಇಳಿವಯಸ್ಸಿನಲ್ಲಿ ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ರವರು, 19 ಜುಲೈ 2012 ರ ಸಮಯದಲ್ಲಿ ಖಾಯಿಲೆಯಿಂದ ಹಾಸಿಗೆ ಹಿಡಿದರು. ಹೃದಯಾಘಾತದಿಂದ 23 ಜುಲೈ 2012 ರ ಬೆಳಿಗ್ಯೆ, 11.20ಕ್ಕೆ ಕಾನ್ಪುರದಲ್ಲಿ ನಿಧನರಾದರು. ಆಗ ಅವರಿಗೆ 97 ವರ್ಷ ವಯಸ್ಸಾಗಿತ್ತು. ‘ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್’ ನಿಧನರಾಗುವ ಮೊದಲೇ ತಮ್ಮ ಕಣ್ಣುಗಳನ್ನು ಹಾಗೂ ದೇಹವನ್ನು ಮೆಡಿಕಲ್ ಕಾಲೇಜ್ (Kanpur Medical college for medical research) ಗೆ ದಾನಮಾಡಲು ಉಯಿಲು ಬರೆದಿಟ್ಟಿದ್ದರು.
ಇವರ ವೀರ ಸಾಧನೆ, ಜೀವನಮಾರ್ಗ ಸದಾ ಪ್ರೇರಣಾದಾಯಿ ಹಾಗು ಮರೆಯಲು ಅಸಾಧ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.