ಪುತ್ತೂರು : ತಾಲೂಕಿನ ಮುಡಿಪಿನಡ್ಕ-ಬಡಗನ್ನೂರು -ಸುಳ್ಯಪದವು ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕಳೆದ ಒಂದು ವಾರದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು.ಆದರೆ ಇದಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿರಲಿಲ್ಲ.ಹೀಗಾಗಿ ಸೋಮವಾರ ಪುತ್ತೂರು ತಾಪಂ ಆವರಣದಲ್ಲಿರುವ ಶಾಸಕಿಯವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪುತ್ತೂರು ತಾಲೂಕಿನ ಬಡಗನ್ನೂರು ರಸ್ತೆ ದುರಸ್ತಿಗೆ ಕಳೆದ 30 ವರ್ಷಗಳಿಂದ ರಸ್ತೆ ಅವ್ಯವಸ್ಥೆ ಬಗ್ಗೆ ಜನತೆ ಹೇಳುತ್ತಲೇ ಬಂದಿದ್ದರು.ಪ್ರತೀ ಚುನಾವಣೆ ಸಂದರ್ಭದಲ್ಲೂ ಜನನಾಯಕರು ರಸ್ತೆ ದುರಸ್ತಿ ಮಾಡಿಸುವುದಾಗಿ ಭರವಸೆ ನೀಡುತ್ತಲೇ ಬಂದರು.ಆದರೆ ರಸ್ತೆ ಮಾತ್ರಾ ದುರಸ್ತಿಯಾಗಲೇ ಇಲ್ಲ.ಹೀಗಾಗಿ ಕಳೆದ ವರ್ಷ ಬಡಗನ್ನೂರಿನಲ್ಲಿ, ಸುಳ್ಯಪದವಿನಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು.ಆದರೆ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ.
ತಿಂಗಳ ಹಿಂದೆ ಪ್ರತಿಭಟನೆ ನಡೆಸಿ ಎಚ್ಚರಿಸಿದರು ಆದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಅದಾದ ಬಳಿಕ ಸತತ ಒಂದು ವಾರಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಪ್ರತಿಭಟನೆ ನಡೆಸಿದರು.ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರೇ ಹೊರತು ರಸ್ತೆ ದುರಸ್ತಿಯ ಬಗ್ಗೆ ಭರವಸೆ ಸಿಕ್ಕಿಲ್ಲ, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಲೇ ಇಲ್ಲ.ಶಾಸಕಿ ಶಕುಂತಳಾ ಶೆಟ್ಟಿ ಅವರು ರಾಜಕೀಯ ಉದ್ದೇಶಕ್ಕಾಗಿ ನಡೆಯುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಾರೆ ಎಂದೂ ಹೇಳಿಕೆ ನೀಡಿದರು.ಹೀಗಾಗಿ ಪ್ರತೀ ಬಾರಿಯೂ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸೋಮವಾರ ಜನತೆ ಶಾಸಕಿ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸಬೇಕಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಿಕ ಹಿತರಕ್ಷಣಾ ವೇದಿಕೆಯ ಚಂದ್ರಶೇಖರ ಆಳ್ವ,ಕಳೆದ 30 ವರ್ಷಗಳಿಂದ ರಸ್ತೆಗಾಗಿ ಬೇಡಿಕೆ ಸಲ್ಲಿಸುತ್ತಲೇ ಇದ್ದೇವೆ.ಹಾಗಿದ್ದರೂ ಸ್ಪಂದನೆ ಸಿಕ್ಕಿಲ್ಲ.ಈಗ ಶಾಸಕರು ಈ ರಸ್ತೆ ದುರಸ್ತಿ ಬಗ್ಗೆ ಭರವಸೆ ಕೂಡಾ ನೀಡಿಲ್ಲ, ಅಧಿಕಾರಿಗಳು ನಮ್ಮ ಕೂಗಿಗೆ ಸ್ಪಂದಿಸುತ್ತಿಲ್ಲ, ಹೀಗಾಗಿ ಇಲ್ಲಿಗೆ ಆಗಮಿಸಬೇಕಾಯಿತು.ಒಂದು ವಾರದೊಳಗೆ ಸೂಕ್ತ ಸ್ಪಂದನೆ ದೊರೆಯದೇ ಇದ್ದಲ್ಲಿ ಸುಳ್ಯಪದವು, ಬಡಗನ್ನೂರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ತಹಶೀಲ್ದಾರ್ ಕುಳ್ಳೇ ಗೌಡ ಮನವಿ ಸ್ವೀಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.