ನವದೆಹಲಿ : ದೆಹಲಿಯ ಲುಟ್ಯೆನ್ಸ್ನಲ್ಲಿ ದಶಕಗಳಿಂದ ಇದ್ದ ಬಿಜೆಪಿ ಪ್ರಧಾನ ಕಛೇರಿ ಇದೀಗ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಜ್ಜಾಗುತ್ತಿದೆ. ಲುಟ್ಯೆನ್ಸ್ನಿಂದ 5 ಕಿ.ಮೀ. ದೂರದಲ್ಲಿರುವ ದೀನ್ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಬಿಜೆಪಿ ಇನ್ನು ಪ್ರಧಾನ ಕಛೇರಿಯನ್ನು ಹೊಂದಲಿದೆ. ಮುಂದಿನ ಲೋಕಸಭೆ ಚುನಾವಣೆಯೊಳಗೆ ಅಲ್ಲಿಗೆ ಸ್ಥಳಾಂತರಗೊಳ್ಳುವ ಕಾರ್ಯ ನಡೆಯಲಿದೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಕಛೇರಿ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಿದ್ದು, ಅಮಿತ್ ಶಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
8000 ಸ್ಕೇರ್ ಮೀಟರ್ ವಿಸ್ತೀರ್ಣದಲ್ಲಿ ಈ ಕಛೇರಿ ಇರಲಿದ್ದು, ಅತ್ಯಂತ ದುಬಾರಿಯಾಗಿ ಇದನ್ನು ನಿರ್ಮಿಸಲಾಗುತ್ತಿದೆ. 2019 ರ ವೇಳೆಗೆ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ. ಪರಿಸರ ಸ್ನೇಹಿ ಮತ್ತು ಹೈಟೆಕ್ ಆಗಿ ಇದನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ. ದೇಶದ ಎಲ್ಲಾ ಭಾಗಗಳನ್ನೂ ಕಛೇರಿ ಪ್ರತಿಬಿಂಬಿಸಲಿದೆ.
ಇದರ ಒಳಾಂಗಣ ಸಾಂಪ್ರದಾಯಿಕ ಶೈಲಿಯಲ್ಲಿ ಇರಲಿದೆ. ಬಣ್ಣ ಹಸಿರು ಇರಲಿದ್ದು, ಎಲ್ಲಾ ಹೈಟೆಕ್ ಸೌಲಭ್ಯವನ್ನೂ ಇದು ಒಳಗೊಳ್ಳಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ.
ಶೇ. 70 ರಷ್ಟು ಇದರ ಆವರಣ ಹಸಿರಿನಿಂದ ಕಂಗೊಳಿಸಲಿದ್ದು, ಸೋಲಾರ್ ಪ್ಯಾನಲ್, ತ್ಯಾಜ್ಯ ಮರುಸಂಸ್ಕರಣಾ ವ್ಯವಸ್ಥೆಯನ್ನು ಹೊಂದಿರುವ ಬಯೋ ಟಾಯ್ಲೆಟ್, ಪ್ರಾಕೃತಿಕ ಬೆಳಕಿನ ಕೋಣೆ ಈ ಕೇಂದ್ರ ಕಛೇರಿಯಲ್ಲಿ ಇರಲಿದೆ.
ಹಿಂಬದಿಯಲ್ಲಿ ಏಳು ಮಳಿಗೆಗಳಿದ್ದರೆ, ಮುಂಭಾಗದಲ್ಲಿ 3 ಮಳಿಗೆಗಳು ಇರಲಿದೆ. ಇದರಲ್ಲಿ ಒಟ್ಟು 20 ಕೋಣೆ, 2 ಕಾನ್ಫರೆನ್ಸ್ ಹಾಲ್, 1 ಡಿಜಿಟಲ್ ಲೈಬ್ರರಿ, ರೀಡಿಂಗ್ ರೂಂ, ವೈ-ಫೈ ಸೌಲಭ್ಯ, ಸ್ಟೂಡಿಯೋ ಇರಲಿದೆ. ಇದರ ಆವರಣದಲ್ಲಿ ನಿರ್ಮಿತವಾಗಲಿರುವ ಎರಡು ಕೆಫಟೆರೀಸ್ಗಳು ದೇಶದ ಎಲ್ಲಾ ಭಾಗಗಳ ಆಹಾರವನ್ನು ಒದಗಿಸಲಿದೆ.
ಇದಕ್ಕೆ ಭದ್ರತೆಯು ಉನ್ನತ ಮಟ್ಟದಲ್ಲಿ ಇರಲಿದ್ದು, ಆರ್ಎಫ್ ಟ್ಯಾಗ್ಸ್ಗಳನ್ನು ಅಳವಡಿಸಲಾಗುತ್ತದೆ.
ದೀನದಯಾಳ್ ಉಪಾಧ್ಯಾಯ ಅವರ ಮೂರ್ತಿ ಇದರ ಮುಂಭಾಗದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.
ಒಟ್ಟಿನಲ್ಲಿ ಬಿಜೆಪಿ ನೂತನ ಪ್ರಧಾನ ಕಛೇರಿ ಹೈಟೆಕ್ ತಂತ್ರಜ್ಞಾನ ಮತ್ತು ಇಕೋ ಫ್ರೆಂಡ್ಲಿ ಆಗಿ ಕಂಗೊಳಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.