ನವದೆಹಲಿ : ಮಳೆಗಾಲದ ಅಧಿವೇಶನ ಆರಂಭದಲ್ಲಿ ಕೆಲವೊಂದು ಗಲಾಟೆ ಗದ್ದಲಗಳನ್ನು ಕಂಡಿತ್ತಾದರೂ ಅಂತಿಮವಾಗಿ ಅದು ಆಡಳಿತ ಪಕ್ಷ, ವಿಪಕ್ಷ ಎಲ್ಲರಿಗೂ ಜಯವನ್ನೇ ತಂದುಕೊಟ್ಟಿದೆ. ಸಮಾಧಾನಕರವಾಗಿ ನಡೆದ ಕಲಾಪಗಳು ಹಲವಾರು ಜನಪರ ಮಸೂದೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ.
ಶುಕ್ರವಾರ ಅಧಿವೇಶನ ಅಂತ್ಯಗೊಂಡಿದ್ದು, ಕಳೆದ 5 ವರ್ಷಗಳಿಂದ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಕಾಯುತ್ತಿದ್ದ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ ಅಂಗೀಕಾರಗೊಂಡು ದೇಶದಲ್ಲಿ ತೆರಿಗೆ ಸುಧಾರಣೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.
ಇದಲ್ಲದೇ ಲೋಕಸಭೆಯಲ್ಲಿ 15 ಮಸೂದೆಗಳು, ರಾಜ್ಯಸಭೆಯಲ್ಲಿ 14 ಮಸೂದೆಗಳು ಅಂಗೀಕಾರಗೊಂಡಿದೆ. ಉಭಯ ಸದನಗಳು ಒಟ್ಟು 13 ಪ್ರಸ್ತಾವನೆಗಳನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿಕೊಟ್ಟಿದೆ.
ಕಳೆದ ಅಧಿವೇಶನದಲ್ಲಿ ಆಕ್ರಮಣಕಾರಿ ಧೋರಣೆ ಅನುಸರಿಸಿದ್ದ ಕಾಂಗ್ರೆಸ್ ಕೇವಲ 4 ಮಸೂದೆಗಳ ಜಾರಿಗಷ್ಟೇ ಆಸ್ಪದ ನೀಡಿತ್ತು.
ಈ ಬಾರಿ ಬಿಜೆಪಿ ಅಲ್ಪಸಂಖ್ಯಾತವಾಗಿರುವ ರಾಜ್ಯಸಭೆಯಲ್ಲೂ ಕಲಾಪಗಳು ಸಾವಧಾನದಿಂದ ನಡೆದಿದೆ. ಆದರೂ ದಲಿತರ ಮೇಲಿನ ದೌರ್ಜನ್ಯ, ಜಮ್ಮು ಕಾಶ್ಮೀರ ಹಿಂಸಾಚಾರ ವಿಷಯಗಳನ್ನು ಹಿಡಿದು ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳು ನರೇಂದ್ರ ಮೋದಿ ಸರ್ಕಾರವನ್ನು ಹಳಿಯುವ ಪ್ರಯತ್ನವನ್ನು ನಡೆಸಿತ್ತು. ಆದರೆ ಇದರಿಂದ ಮಸೂದೆಗಳ ಜಾರಿಗೆ ತೊಡಕಾಗಿಲ್ಲ ಎಂಬುದೇ ಸಮಾಧಾನ.
ದೇಶದಲ್ಲಿ ಉತ್ತಮ ಮಾನ್ಸೂನ್ ಇದೆ ಮತ್ತು ಮಾನ್ಸೂನ್ ಅಧಿವೇಶನವೂ ಉತ್ತಮವಾಗಿ ನಡೆದಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿಶ್ಲೇಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.