ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನೀಂ|
ಬ್ರಹ್ಮ ರಾಜಶ್ರಿ ರಥ್ನಾಢ್ಯಾಂ ವಂದೇ ಭಾರತ ಮಾತರಮ್||
ಆಗಸ್ಟ್ ತಿಂಗಳು ಬಂತೆಂದರೆ ಸಾಕು ಅದೊಂದು ಸಂಭ್ರಮದ ತಿಂಗಳು. ಶ್ರಾವಣದ ಸೊಬಗು, ಸ್ವಾತಂತ್ರ್ಯತದ ಮೆಲುಕು, ಹಬ್ಬ ಹರಿದಿನಗಳ ಸಂಭ್ರಮ ಈ ತಿಂಗಳ ವಿಶೇಷ. ಒಟ್ಟಾರೆ ಪ್ರಕೃತಿಯನ್ನು, ರಾಷ್ಟ್ರವನ್ನು ಮತ್ತು ಆಧ್ಯಾತ್ಮವನ್ನು ಏಕತ್ರ ನೋಡಿ ರಾಷ್ತ್ರೀಯತೆಯ ಕಡೆಗೆ ಸಾಗಲು ಅತ್ಯಂತ ಶ್ರೇಷ್ಠ ತಿಂಗಳು. ಬನ್ನಿ ಈ ತಿಂಗಳಲ್ಲಿ ಭಾರತಾಂಬೆ ಫುಲ್ಲಕುಸುಮಿತಳಾಗಿ, ಸುಹಾಸಿನಿಯಾಗಿ ಸಸ್ಯಶ್ಯಾಮಲೆಯಾಗಿ ಶೋಭಾಯಮಾನಳಾಗಿ ಮೆರೆಯುತ್ತಿದ್ದಾಳೆ. ದುರ್ಗೆಯಾಗಿ ಜಗದ್ಗುರುವಾಗಿ ಮೆರೆದ ಆಕೆಯ ಕೀರ್ತಿ ಅಪಾರ. ಅವಳ ವೈಭವವನ್ನು ಕಂಡು ತಾವು ಕೂಡ ಇದನ್ನು ಆನಂದಿಸಬೇಕು ಎಂದು ಬಂದ ಎಲ್ಲರನ್ನು ಕೈಬೀಸಿ ಕರೆದು ಸಾಕು ಎಂದರೂ ಕೊಡುವಷ್ಟು ಸಿರಿ ಸಂಪತ್ತು ಜ್ಞಾನದ ಭಂಡಾರವಾಗಿಹ ಪರಮ ಪೂಜ್ಯ ಪುಣ್ಯಭೂಮಿ ಭಾರತ. ಜಗತ್ತಿಗೆ ದಾರಿದೀಪವಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ ಪವಿತ್ರ ಭೂಮಿ ನಮ್ಮದು.
ಸಾವಿರಾರು ವರ್ಷಗಳಿಂದ ಶೋಭಿಸುತ್ತಿದ್ದ ಭಾರತಕ್ಕೆ ನಿರಂತರ ಆಕ್ರಮಣಗಳು ತಪ್ಪಿದ್ದಲ್ಲ. ನಮ್ಮ ಇತಿಹಾಸದಲ್ಲಿ ತಮ್ಮ ಸರ್ವಸ್ವವನ್ನು ಅರ್ಪಿಸಿದ ನಾರಿರತ್ನಗಳ ಕಥಾನಕಗಳನ್ನು ಓದಿದಾಗ ಶ್ರದ್ಧಾಭಕ್ತಿಗಳಿಂದ ಅವರುಗಳಿಗೆ ನತಮಸ್ತಕರಾಗುತ್ತೇವೆ. ಇಂತಹ ಶ್ರೇಷ್ಠ ನಾರಿಮಣಿಯರ., ವೀರ ಸಾಧಕಿಯರ, ತ್ಯಾಗ ಬಲಿದಾನಗಳನ್ನು ಸ್ಮರಿಸೋಣ. ಬನ್ನಿ ಭಾರತೀಯ ಸ್ತ್ರೀಯರ ವೀರಗಾಥೆಗಳನ್ನು ಸ್ಮರಿಸುತ್ತ ಸ್ವಾತಂತ್ರ್ಯದ ಜ್ಯೋತಿಯನ್ನು ಬೆಳಗೋಣ.
ರಾಣಿ ಊರ್ಮಿಳಾದೇವಿ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸರ್ವಸ್ವವನ್ನೂ ಬಲಿದಾನ ಮಾಡಿದ ಭಾರತೀಯ ಸ್ತ್ರೀಯರ ವೀರಗಾಥೆಗಳು ನೂರಾರು ವರ್ಷಗಳಿಂದ ನಮ್ಮ ರಕ್ತದಲ್ಲಿ ಪ್ರವಹಿಸಿ ನಮ್ಮ ನರನರಗಳಲ್ಲೂ ಶಕ್ತಿಯನ್ನು ತುಂಬುತ್ತಿವೆ. ಅಂತಹ ಶ್ರೇಷ್ಠ ನಾರೀಮಣಿಯರ ಜ್ವಲಿಸುತ್ತಿರುವ ಚಿತೆಗಳ ಹಾಗು ದೇಶ ಭಕ್ತಿ ಮತ್ತು ಸತೀತ್ವದ ಕೀರ್ತಿಮಯ ಕಥೆಗಳನ್ನು ಏಕಾಗ್ರ ಚಿತ್ತದಿಂದ ಆಲಿಸುವಾಗ, ನಮ್ಮ ಹೃದಯದಲ್ಲಿ ಅಲೌಕಿಕ ಪವಿತ್ರ ಭಾವನೆ ಅಪ್ರತಿಮ ದೇಶಭಕ್ತಿ ಮನೆ ಮಾಡುತ್ತದೆ.
ಇಂತಹ ವೀರ ನಾರೀಮಣಿಯರ ಜೀವನ ಅಮರವಾದದ್ದು. ಬನ್ನಿ ಅಂತಹ ಅಂತಹ ವೀರವನಿತೆ ಒಬ್ಬಳ ಕಥೆಯನ್ನು ಆಲಿಸೋಣ.
ಅದು 1024 ರ ಕಾಲ, ಘಜ್ನಿಮೊಹಮ್ಮದನು ಅತಿಕ್ರಮಣ ಮಾಡುತ್ತಾ, ದೆವಾಲಯಗಳನ್ನು ಕೆಡವುತ್ತಾ ಮಂದಿರಗಳ ಪಾವಿತ್ರ್ಯಕ್ಕೆ ಗದಾ ಪ್ರಹಾರ ಮಾಡುತ್ತಾ ಬರುತ್ತಿದ್ದ. ಸೋಮನಾಥನ ವಿಶಾಲ ದೇವಾಲಯವೂ ನೆಲಸಮವಾಗಿತ್ತು. ಆತ ತನ್ನ ಕುಖ್ಯಾತಿಯ ಸಜೀವ ಸ್ಮಾರಕವಾಗಿ ಅದನ್ನು ಕೆಡವಿ ಇಡೀ ದೇಶದ ಹೃದಯವನ್ನೇ ಆಘಾತಿಸಿದ್ದ.
ಈ ಸಮಯದಲ್ಲಿ ಅಜ್ಮೇರದಲ್ಲಿ ರಾಜ ಧರ್ಮಗಜದೇವ ರಾಜ್ಯವನ್ನು ಆಳುತ್ತಿದ್ದ. ಈತನು ತನ್ನ ಪರಾಕ್ರಮ ಹಾಗು ನ್ಯಾಯತತ್ಪರತೆಗಾಗಿ ಭಾರತವಲ್ಲದೇ ವಿದೇಶಗಳಲ್ಲಿಯೂ ಪ್ರಸಿದ್ಧನಾಗಿದ್ದನು. ಈತನ ಪತ್ನಿಯೇ ಊರ್ಮಿಳಾ ದೇವಿ. ಆಕೆ ಪತಿ ಭಕ್ತಿ ಮತ್ತು ಸತೀತ್ವಗಳ ಸಜೀವ ಮೂರ್ತಿ; ಅತ್ಯಂತ ಸುಂದರಿಯೂ ಶೀಲವತಿಯೂ ಆಗಿದ್ದಳು. ಪತಿಯೊಡನೆ ನಿಷ್ಠೆಯಿಂದ ಧರ್ಮದಿಂದ ರಾಜ್ಯವನ್ನು ನೋಡಿಕೊಳ್ಳುತ್ತಿದ್ದಳು. ಆಕೆಯು ರಾಜ್ಯದ ಜನರನ್ನು ಬಹಳ ಪ್ರೀತಿ ಆದರದಿಂದ ಕಾಣುತ್ತಿದ್ದಳು.
ಇದ್ದಕ್ಕಿದಂತೆ ಘಜ್ನಿ ಮೊಹಮ್ಮದನು ಅಜ್ಮೇರದ ಮೇಲೆ ಆಕ್ರಮಣ ಮಾಡಿದನು. ರಾಣಿ ಊರ್ಮಿಳಾ ದೇವಿಗೆ ಮೊದಲೇ ಆತನನ್ನು ಕಂಡರೆ ಎಲ್ಲಿಲ್ಲದ ಕೋಪ, ತನ್ನ ಪವಿತ್ರ ಮಾತೃಭೂಮಿಯ ಮೇಲೆ ದಾಳಿ ಮಾಡಿದ್ದಲ್ಲದೆ ಪವಿತ್ರ ಸೋಮನಾಥ ಮಂದಿರವನ್ನು ಕೆಡವಿದ್ದ. ರಾಣಿ ಊರ್ಮಿಳಾ ದೇವಿಯಂತೂ ದುರ್ಗೆಯಂತೆ ಆದಳು. ತಾನು ಪತಿಯೊಡನೆ ಯುದ್ಧಭೂಮಿಗೆ ತೆರಳಿ ತನ್ನ ಖಡ್ಗವನ್ನು ಹಿಡಿದು ಸುಮಾರು 270 ಕ್ಕಿಂತಲು ಹೆಚ್ಚು ಸೈನಿಕರ ರುಂಡವನ್ನು ಚೆಂಡಾಡಿದಳು. ಆದರೆ ಆಕೆಯು ಆಕ್ರಮಣಕಾರರ ಹೊಡೆತಕ್ಕೆ ಗಾಯಗೊಂಡಳು. ಪತಿ ಧರ್ಮಗಜ ಪತ್ನಿಯನ್ನು ಚಿಕಿತ್ಸೆಗಾಗಿ ಅರಮನೆಗೆ ಕಳಿಸಿಕೊಟ್ಟ. ರಾಣಿ ಅರಮನೆಗೆ ಬಂದಳು. ಚಿಕಿತ್ಸೆಯೂ ನಡೆಯಿತು ಅದರ ಜೊತೆಜೊತೆಗೆ ರಾಜ್ಯವನ್ನೂ ನೋಡಿಕೊಂಡಳು. ಇತ್ತ ಯುದ್ಧಭೂಮಿಯಲ್ಲಿ ಘೋರ ಯುದ್ಧ ನಡೆಯಿತು. ರಾಜನಿಗೆ ಶತ್ರುವಿನ ಬಾಣವೊಂದು ತಗಲಿ ಆತ ಯುದ್ಧಭೂಮಿಯಲ್ಲಿಯೇ ವೀರಗತಿ ಪಡೆದನು. ಇದನ್ನು ಕಂಡು ರಾಜಪೂತ ಸೈನ್ಯದಲ್ಲಿ ಭೀಷಣ ಹಾಹಾಕಾರ ಉಂಟಾಯಿತು. ಮುಂದೇನು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ವಿಷಯ ಅರಮನೆಗೆ ಬಂದು ತಲುಪಿತು. ರಾಣಿ ಊರ್ಮಿಳೆಯು ಈ ಬಾರಿ ಕಾಳಿಯಂತೆ ಭಯಂಕರಳಾದಳು. ಪಾಪಿ ದುಷ್ಟ ಘಜ್ನಿಗೆ ಪಾಠ ಕಲಿಸಲೇಬೇಕು ಎಂದು ತನ್ನ ಕುದುರೆ ಏರಿ ಖಡ್ಗವನ್ನು ಹಿಡಿದು ಯುದ್ಧಭೂಮಿಗೆ ಹೋದಳು; ನಿರಂತರ ದಾಳಿ ಮಾಡಿದಳು. ಸಿಕ್ಕ ಸಿಕ್ಕ ಶತ್ರು ಸೈನ್ಯವನ್ನು ಹೊಡೆದುರುಳಿಸಿದಳು. ಈಕೆಯ ಪರಾಕ್ರಮ ಸಾಹಸ ಮತ್ತು ದೇಶಭಕ್ತಿಯನ್ನು ಕಂಡು ಘಜ್ನಿ ಮೊಹಮ್ಮದನು ಯುದ್ಧಭೂಮಿಯಿಂದ ಓಡಿ ಹೋದನು. ಯುದ್ಧವು ಮುಗಿಯಿತು. ಇತ್ತ ಮಹಾರಜರ ಶವವನ್ನು ಕೋಟೆಯೊಳಗೆ ತರಲಾಯಿತು. ಎಲ್ಲೆಡೆಯು ನೀರವ ಮೌನ ಆವರಿಸಿತ್ತು. ತನ್ನ ರಾಜನಿಲ್ಲದ ನೋವು ಎಲ್ಲರನ್ನು ಕಾಡಿತು. ಅಂತಃಪುರದ ಸ್ತ್ರೀಯರು, ಸೇವಕರು, ರಾಜ್ಯದ ನಾಗರೀಕರು ಮತ್ತಿತರರು ರಾಜನ ದೇಹದ ಮೇಲೆ ಪುಷ್ಪವರ್ಷವನ್ನು ಸುರಿಸಿದರು. ಎಲ್ಲರ ಕಣ್ಣಲ್ಲಿ ನೀರು ತುಂಬಿತ್ತು. ಧರ್ಮನಿಷ್ಠೆಯಿಂದ, ಅತ್ಯಂತ ಪ್ರೀತಿ ವಾತ್ಸಲ್ಯದಿಂದ ತಮ್ಮೆಲ್ಲರನ್ನು ನೋಡಿಕೊಳ್ಳುತ್ತಿದ್ದ ರಾಜನು ಇನ್ನಿಲ್ಲವೆಂದು ಎಲ್ಲರ ಮನಸ್ಸು ಬೇಸರದಿಂದಿತ್ತು. ಕೊನೆಯಲ್ಲಿ ಒಂದು ವಿಶಾಲ ಚಿತೆಯನ್ನು ನಿರ್ಮಿಸಲಾಯಿತು. ರಾಣಿಯು ತನ್ನ ಅಂತಿಮ ಕರ್ತವ್ಯ ಪಾಲಿಸಿದಳು. ಪತಿಯೊಡನೆ ಆಕೆಯೂ ಸಹಗಮನ ಮಾಡಿದಳು. ಈ ರೀತಿಯಲ್ಲಿ ಪತಿವ್ರತಾ ಧರ್ಮವನ್ನು ಪಾಲಿಸಿ, ತನ್ನ ರಾಜ್ಯವನ್ನು ರಕ್ಷಿಸಿ ಸತೀತ್ವವನ್ನೂ, ರಾಜಧರ್ಮವನ್ನೂ ಕಾಪಾಡಿ ಎಲ್ಲರ ಮನೆಮನದಲ್ಲಿ ನೆಲೆಸಿ ಜೀವಂತ ಆದರ್ಶ ಮಹಿಳೆಯಾದಳು ಊರ್ಮಿಳಾದೇವಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.