ಏನಾಗಿದೆ ಕರ್ನಾಟಕಕ್ಕೆ? ಏನಾಗಿದೆ ನಮ್ಮ ಆಡಳಿತ ಸೂತ್ರ ಹಿಡಿದ ವ್ಯಕ್ತಿಗಳಿಗೆ? ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ವಿದ್ಯಮಾನಗಳನ್ನು ಗಮನಿಸಿದ, ಕೊಂಚವಾದರೂ ವಿವೇಕ ಇಟ್ಟುಕೊಂಡ ಸೂಕ್ಷ್ಮಮತಿಗಳಿಗೆ ಈ ಪ್ರಶ್ನೆಗಳು ಕಾಡದೇ ಇರದು.
ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ನಡುಗಿಸಿತ್ತು. ಎಂ.ಕೆ. ಗಣಪತಿ ಎಂಬ ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಖಾಸಗಿ ಟಿವಿ ವಾಹಿನಿಗೆ ಸಂದರ್ಶನ ನೀಡಿ, ತಾನೇನಾದರೂ ಆತ್ಮಹತ್ಯೆಮಾಡಿಕೊಂಡರೆ ಅದಕ್ಕೆ ಯಾರು ಕಾರಣಕರ್ತರು ಎಂದು ಬಹಿರಂಗವಾಗಿ ಹೇಳಿಕೆ ನೀಡಿಯೇ ಆತ್ಮಹತ್ಯೆಮಾಡಿಕೊಂಡಿದ್ದರು. ಇದಾದ ಬಳಿಕ ಇನ್ನೂ ಕೆಲವು ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆಯ ಬೆದರಿಕೆ ಒಡ್ಡಿದ್ದುಂಟು. ಅದಕ್ಕೆ ನಾನಾ ಕಾರಣಗಳೂ ಇದ್ದವು. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ಪಾತ್ರ ಇತ್ತೆಂದು ಗಣಪತಿ ಸಾವಿಗೆ ಮುನ್ನ ನೀಡಿದ ಹೇಳಿಕೆಯಲ್ಲಿ ವ್ಯಕ್ತವಾಗಿತ್ತು. ಹಾಗಾಗಿಯೇ ಜಾರ್ಜ್ ಇದೀಗ ಈ ಪ್ರಕರಣದ ಮೊದಲ ಆರೋಪಿಯಾಗಿ ಕಾಣಿಸಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ತಡೆಯಬಹುದಿತ್ತು. ಆದರೆ ಹಾಗೆ ತಡೆಯಲು ಅದು ಪ್ರಬಲ ಇಚ್ಛಾಶಕ್ತಿ ತೋರಬೇಕಿತ್ತು. ಇಡೀ ಪೊಲೀಸ್ ಇಲಾಖೆಗೆ ಬಹುದೊಡ್ಡ ಕಾಯಕಲ್ಪ ಮಾಡಬೇಕಿತ್ತು. ಮಧ್ಯಮಗಳು, ಸಾರ್ವಜನಿಕರು ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಅಪಸವ್ಯಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರೂ ಅದು ಮಾತ್ರ ಅದಕ್ಕೆ ಕಿವಿಗೊಡಲೇ ಇಲ್ಲ. ಕೆಳಗಿನ ಅಧಿಕಾರಿಗಳಿಗೆ ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದ ಮೇಲಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲೇ ಇಲ್ಲ. ಪರಿಣಾಮವಾಗಿ ಹತಾಶೆ, ಆಕ್ರೋಶ ಇಲಾಖೆಯಲ್ಲಿ ಹೆಪ್ಪುಗಟ್ಟಿ ಅದು ಪರಾಕಾಷ್ಠೆಗೆ ತಲುಪಿದ್ದೇ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಕಾರಣವಾಯಿತೆನ್ನಬಹುದು. ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತು ನ್ಯಾಯಾಂಗ ತನಿಖೆಯೇನೋ ಈಗ ನಡೆಯುತ್ತಿದೆ. ಅದು ಬೇರೆ. ಆದರೆ ಈ ಆತ್ಮಹತ್ಯೆ ಪ್ರಕರಣಕ್ಕೆ ಸರ್ಕಾರ ಪರೋಕ್ಷವಾಗಿ ಕಾರಣವಲ್ಲವೇ?
ಗಣಪತಿ ಆತ್ಮಹತ್ಯೆ ಪ್ರಕರಣದ ಕಾವು ಇಳಿಯುವ ಮುನ್ನವೇ ಸರ್ಕಾರಿ ಸಾರಿಗೆ ಇಲಾಖೆಯ ನೌಕರರು ಮುಷ್ಕರ ಆರಂಭಿಸಿದರು. ತಮ್ಮ ವೇತನ ಏರಿಕೆಯನ್ನು ಶೇ. 30 ರಷ್ಟು ಹೆಚ್ಚಿಸಬೇಕೆಂಬುದು ಅವರ ಬೇಡಿಕೆಯಾಗಿತ್ತು. ಈ ಮುಷ್ಕರ ನಡೆಯುವ ಕುರಿತು ಮಾಹಿತಿ ಸರ್ಕಾರಕ್ಕೆ ಸಾಕಷ್ಟು ಮೊದಲೇ ಗೊತ್ತಿತ್ತು. ಸಾರಿಗೆ ಇಲಾಖೆಯ ಕಾರ್ಮಿಕ ಮುಖಂಡರನ್ನು ಕರೆದು, ಒಟ್ಟಿಗೆ ಕುಳಿತು ಚರ್ಚಿಸಿ ಸೂಕ್ತವಾದ ಪರಿಹಾರವೊಂದನ್ನು ಮುಷ್ಕರಕ್ಕೆ ಮುನ್ನವೇ ಕೈಗೊಳ್ಳುವ ಎಲ್ಲ ಸಾಧ್ಯತೆಗಳು ಇತ್ತು. ಆದರೆ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಮುಷ್ಕರ ಆರಂಭವಾಗುತ್ತಿದ್ದಂತೆ ಇಲಾಖೆಯ ವಾಹನಗಳು ರಸ್ತೆಗಿಳಿಯದೆ ಪ್ರಯಾಣಿಕರು ತೀವ್ರ ಪರದಾಟ ಅನುಭವಿಸಿದರು. ಮುಷ್ಕರ ಇನ್ನೇನು 3 ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಸಾರ್ವಜನಿಕರಲ್ಲಿ ಎದ್ದ ಆಕ್ರೋಶ ಕಂಡು ಸರ್ಕಾರ ಆಗಷ್ಟೇ ಗಂಭೀರವಾಗಿ ಮಾತುಕತೆಗೆ ಮುಂದಾಯಿತು. ಕೊನೆಗೂ ಶೇ. 12.5 ರಷ್ಟು ವೇತನ ಏರಿಕೆಯ ನಿರ್ಧಾರಕ್ಕೆ ಸಾರಿಗೆ ಇಲಾಖೆಯ ನೌಕರರೂ ಒಪ್ಪಿಕೊಂಡರು. ಆದರೆ ಇದೇ ನಿರ್ಧಾರವನ್ನು ಮುಷ್ಕರಕ್ಕೆ ಮುನ್ನವೇ ಕೈಗೊಂಡಿದ್ದರೆ ಸಾರ್ವಜನಿಕರಿಗೆ ಉಂಟಾದ ಪರದಾಟ, ಇಲಾಖೆಗೆ ಸಂಭವಿಸಿದ ಕೋಟಿಗಟ್ಟಲೆ ನಷ್ಟವನ್ನು, ಜೊತೆಗೆ ಸರ್ಕಾರದ ಮೇಲುಂಟಾದ ಕಪ್ಪುಚುಕ್ಕಿಯನ್ನು ನಿವಾರಿಸಬಹುದಿತ್ತು. ಈ ಬಗ್ಗೆ ಮಾತ್ರ ಸಾರಿಗೆ ಸಚಿವರಾಗಲಿ ಮುಖ್ಯಮಂತ್ರಿಗಳಾಗಲಿ ಯೋಚಿಸುವ ಗೊಡವೆಗೇ ಹೋಗಲಿಲ್ಲ.
ಸಾರಿಗೆ ಇಲಾಖೆಯ ನೌಕರರ ಮುಷ್ಕರ ಮುಗಿದು ಬಸ್ಸುಗಳು ರಸ್ತೆಗೆ ಇಳಿಯುತ್ತಿದ್ದಂತೆಯೇ ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಹೊರಬಿತ್ತು. ಆ ತೀರ್ಪು ಕರ್ನಾಟಕದ ಪಾಲಿಗೆ ಕಹಿಯಾಗಿತ್ತು. ಸಹಜವಾಗಿಯೇ ಉತ್ತರ ಕರ್ನಾಟಕದ ಜಿಲ್ಲೆಯ ಜನರು ತೀರ್ಪು ವಿರೋಧಿಸಿ ಭಾರೀ ಪ್ರತಿಭಟನೆಗೆ ಮುಂದಾದರು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದರು. ಉತ್ತರ ಕರ್ನಾಟಕ ಜಿಲ್ಲೆಯ ಸಂಸದರು ಹಾಗೂ ಶಾಸಕರು ಈ ತೀರ್ಪು ವಿರೋಧಿಸಿ ತಕ್ಷಣ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು. ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಹೊತ್ತಿಸಿದ ಭುಗಿಲು ಇನ್ನೂ ಆರಿಲ್ಲ.
ಮಹದಾಯಿ ಮಧ್ಯಂತರ ತೀರ್ಪಿನ ಕುರಿತು ಪರ-ಹಾಗೂ ವಿರೋಧದ ಜಿಜ್ಞಾಸೆಗಳು ಸಾಕಷ್ಟು ಕೇಳಿಬರುತ್ತಿವೆ. ಈ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಪಡೆಯದೆ ಕರ್ನಾಟಕ ನೀರು ಕೇಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು ರಾಜ್ಯಸರ್ಕಾರದ ಮಧ್ಯಂತರ ಅರ್ಜಿ ತಿರಸ್ಕರಿಸಲು ಪ್ರಮುಖ ಕಾರಣವಾಗಿ ನೀಡಿದ್ದರು. ಮಹದಾಯಿಯಿಂದ ಮಲಪ್ರಭಾ ನದಿಗೆ ನೀರು ಹರಿಸಲು ಬಂಡೂರಿ ನಾಲಾ ಯೋಜನೆ ವ್ಯಾಪ್ತಿಯಲ್ಲಿ 243 ಹೆಕ್ಟೇರ್ ಅರಣ್ಯಪ್ರದೇಶ ಬರುವುದರಿಂದ ಯೋಜನೆಗೆ ಅನುಮತಿ ನೀಡುವಂತೆ ರಾಜ್ಯಸರ್ಕಾರ 2001 ರಲ್ಲಿ ಕೇಂದ್ರ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿತ್ತು. ಆದರೆ ಅರಣ್ಯ ಇಲಾಖೆ ಎರಡು ರಾಜ್ಯಗಳ ನಡುವಿನ ನೀರು ಹಂಚಿಕೆ ಸಮಸ್ಯೆ ಬಗೆಹರಿಸಿಕೊಂಡು ಬಂದ ನಂತರ ಅನುಮತಿ ನೀಡಲಾಗುವುದೆಂದು ರಾಜ್ಯಸರ್ಕಾರಕ್ಕೆ ೨೦೦೩ರಲ್ಲಿ ಪತ್ರ ಬರೆದಿತ್ತು. ಹೀಗಿದ್ದರೂ ಈಗ ರಾಜ್ಯದ ಮಧ್ಯಂತರ ಅರ್ಜಿ ವಜಾಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅರಣ್ಯ ಇಲಾಖೆ ಅನುಮತಿ ಇಲ್ಲದೆ ನೀರು ಹಂಚಿಕೆ ಇಲ್ಲ ಎನ್ನುವುದು ನ್ಯಾಯಮಂಡಳಿ ಅಭಿಮತ. ನೀರಿನ ಪಾಲು ಪಡೆದುಕೊಳ್ಳದೆ ಅರಣ್ಯ ಇಲಾಖೆ ಅನುಮತಿ ಇಲ್ಲ ಎಂಬುದು ಕೇಂದ್ರ ಪರಿಸರ ಇಲಾಖೆಯ ಅಭಿಪ್ರಾಯ. ಈಗ ಆಗಿರುವ ಗೊಂದಲಕ್ಕೆ ಇದೇ ಕಾರಣ.
ಗೋವಾ ಸರ್ಕಾರವೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಮಾಂಡೋವಿ (ಮಹದಾಯಿ) ನದಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ 108 ಟಿಎಂಸಿ. 2050ರ ಹೊತ್ತಿಗೆ ಗೋವಾ ರಾಜ್ಯಕ್ಕೆ 94 ಟಿಎಂಸಿ ಅಗತ್ಯವಿದೆ ಎನ್ನಲಾಗಿದೆ. ಗೋವಾದ ಲೆಕ್ಕಾಚಾರವನ್ನೇ ಇಟ್ಟುಕೊಂಡರೂ 14 ಟಿಎಂಸಿ ನೀರು ಹೆಚ್ಚುವರಿಯಾಗಿ ಉಳಿಯುತ್ತದೆ. ಅದೂ ಅಲ್ಲದೆ ಈ ನೀರು ಬೇಕಾಗಿರುವುದು 2050 ನೇ ಇಸವಿಗೆ. ಇಷ್ಟೊಂದು ನೀರು ವ್ಯರ್ಥವಾಗಿ ಸಮುದ್ರ ಸೇರುವ ಬದಲು ನೆರೆಯ ಕರ್ನಾಟಕಕ್ಕೆ ಕುಡಿಯುವುದಕ್ಕಾಗಿ ಕೊಟ್ಟರೆ ಗೋವಾಕ್ಕೆ ಆಗುವ ನಷ್ಟವಾದರೂ ಏನು? ನದಿ ನೀರು ಯಾವುದೇ ಒಂದು ರಾಜ್ಯದ ಸೊತ್ತಲ್ಲ. ಅದು ರಾಷ್ಟ್ರೀಯ ಸಂಪತ್ತು. ಇಡೀ ದೇಶದ ಬಳಕೆಗಾಗಿ ನದಿ ನೀರು ಉಪಯೋಗವಾಗಬೇಕೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪೊಂದರಲ್ಲಿ ಹೇಳಿದೆ. ಹಾಗಿರುವಾಗ ಮಹದಾಯಿಯ ಹೆಚ್ಚುವರಿ ನೀರು ಕರ್ನಾಟಕಕ್ಕೆ ಬಿಡುವುದಿಲ್ಲ ಎನ್ನುವುದರಲ್ಲಿ ಯಾವ ಅರ್ಥವೂ ಕಾಣುವುದಿಲ್ಲ.
ಕರ್ನಾಟಕ ಮಹದಾಯಿ ನ್ಯಾಯಾಧಿಕರಣ ಸ್ಥಾಪನೆಯಾದಾಗಿನಿಂದ ತನ್ನ ಪರವಾಗಿ ತೀರ್ಪು ಬರಲು ಸಾಕಷ್ಟು ಹಣ ಹಾಗೂ ಶ್ರಮ ವೆಚ್ಚಮಾಡಿರುವುದು ನಿಜ. ರಾಜ್ಯದ ಪರ ವಾದಕ್ಕೆ ಹಾಜರಾದ 12 ವಕೀಲರಿಗೆ ರಾಜ್ಯಸರ್ಕಾರ ಬರೋಬ್ಬರಿ 8.22 ಕೋಟಿ ರೂ. ಖರ್ಚು ಮಾಡಿದೆ. ಇಷ್ಟೆಲ್ಲಾ ಖರ್ಚುಮಾಡಿದರೂ ಕರ್ನಾಟಕಕ್ಕೆ ಏಕೆ ನ್ಯಾಯ ದೊರಕಲಿಲ್ಲ ಎಂಬ ಪ್ರಶ್ನೆ ಸ್ವಾಭಾವಿಕ. ಎಲ್ಲೋ ಏನೋ ಎಡವಟ್ಟಾಗಿದೆ ಎಂಬುದು ಸಾಮಾನ್ಯರಿಗೂ ಹೊಳೆಯುವ ಸಂಗತಿ. ಒಟ್ಟಾರೆ ಪ್ರಮುಖ ಪಕ್ಷಗಳು ಒಟ್ಟಿಗೇ ಕುಳಿತು ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಮುಕ್ತವಾಗಿತ್ತು. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗಲೂ ಮಹದಾಯಿ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ಕಂಡುಕೊಳ್ಳಲು ಪ್ರಯತ್ನಿಸಲೇ ಇಲ್ಲ. ಆಗ ಯುಪಿಎ ಅಧಿದೇವತೆಯಾಗಿದ್ದ ಸೋನಿಯಾಗಾಂಧಿ ಕರ್ನಾಟಕಕ್ಕೆ ಒಂದು ತೊಟ್ಟು ನೀರನ್ನೂ ಬಿಟ್ಟುಕೊಡುವುದಿಲ್ಲ ಎಂದು ಘೋಷಿಸಿದ್ದರು. ಈಗ ಇದೇ ಕಾಂಗ್ರೆಸ್ ಮುಖಂಡರು ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು ಎಂದು ಬೊಬ್ಬೆ ಹೊಡೆಯುತ್ತಿರುವುದು ಆಶ್ಚರ್ಯಕರ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಆಗಿನ ಪ್ರಧಾನಿ ಈ ಸಮಸ್ಯೆಯನ್ನು ಏಕೆ ಬಗೆಹರಿಸಲಿಲ್ಲ? ನದಿ ನೀರಿನ ವಿಷಯದಲ್ಲೂ ಮೊದಲು ರಾಜಕೀಯ ಮಾಡಿದ್ದು ಯಾರು? ಕಾವೇರಿ ನದಿ ನೀರಿನ ವಿವಾದ ಲಾಗಾಯ್ತಿನಿಂದ ಬಗೆಹರಿಯದೇ ಮುಂದುವರೆಯುವುದಕ್ಕೂ ಇದೇ ರಾಜಕೀಯವೇ ಕಾರಣ. ಮಹದಾಯಿ ವಿವಾದದಲ್ಲೂ ಮತ್ತೆ ಅದೇ ರಾಜಕೀಯ! ಸಮಸ್ಯೆ ಬಗೆಹರಿಸಬೇಕೆಂಬ ಇಚ್ಛಾಶಕ್ತಿ ಮಾತ್ರ ಯಾವ ಪಕ್ಷದವರಿಗೂ ಇಲ್ಲ.
ಕಳೆದ ವಾರ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಅನೇಕ ಬಡಾವಣೆಗಳು, ಸಾವಿರಾರು ಮನೆಗಳು ಜಲಾವೃತಗೊಂಡು ಜನರನ್ನು ಸ್ಥಳಾಂತರಿಸಲು ದೋಣಿಗಳನ್ನು ಬಳಸುವಷ್ಟರ ಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ನಮ್ಮ ವ್ಯವಸ್ಥೆಯ ದೌರ್ಬಲ್ಯಕ್ಕೆ ಹಿಡಿದ ಕನ್ನಡಿ. 7 ದಶಕಗಳ ಬಳಿಕ ಇಂತಹದೊಂದು ಮಳೆ ಬೆಂಗಳೂರಿನಲ್ಲಿ ಸುರಿದಿದ್ದು ಎನ್ನುತ್ತಾರೆ ತಜ್ಞರು. ಅದೇನೋ ಸರಿ, ಆದರೆ ಸಾಮಾನ್ಯ ಮಳೆ ಸುರಿದರೂ ಬೆಂಗಳೂರಿನ ಜನಜೀವನ ಅಸ್ತವ್ಯಸ್ತವಾಗುತ್ತಿರುವುದಕ್ಕೆ ಯಾರು ಕಾರಣ? ಮಳೆಗಾಲದ ಮುನ್ಸೂಚನೆ ಮೊದಲೇ ಇರುತ್ತದೆ. ಮಳೆ ಬಂದಾಗ ಏನೆಲ್ಲಾ ಅನಾಹುತಗಳು ನಡೆಯಬಹುದು ಎಂಬ ಅರಿವು ಸಂಬಂಧಪಟ್ಟ ಇಲಾಖೆಗಳಿಗೆ ಇದ್ದರೂ ಮಳೆ ಅನಾಹುತ ಆದಬಳಿಕವೇ ತುರ್ತುಪರಿಹಾರ ಕಾರ್ಯಗಳಿಗೆ ಮುಂದಾಗುವ ಅಧಿಕಾರಿಗಳಿಗೆ ಏನು ಹೇಳೋಣ?
ಕಳೆದ ವಾರ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಾಗ ಬನ್ನೇರುಘಟ್ಟದ ಸಮೀಪದ ಕೋಡಿಚಿಕ್ಕನ ಹಳ್ಳಿ ಕೆರೆ ಒಡೆದುಹೋಯಿತು. ಸಮೀಪವೇ ಇದ್ದ ಎರಡು ಬಡಾವಣೆಗಳ ನಿವಾಸಿಗಳು ಪಡಬಾರದ ಪಡಿಪಾಟಿಲು ಅನುಭವಿಸಿದರು. ಇದಕ್ಕೆ ಮಳೆ ಬಂದಿದ್ದೇ ಕಾರಣವಲ್ಲ. ಅಲ್ಲಿನ ನಿವಾಸಿಗಳೇ ತಾವಾಗಿ ತಂದುಕೊಂಡ ಗಂಡಾಂತರ ಇದು. ಕೆರೆ ನೀರು ಸುಗಮವಾಗಿ ಹರಿದು ಹೋಗಲೆಂದು ಅಲ್ಲೊಂದು ರಾಜಕಾಲುವೆ ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿತ್ತು. ಆದರೆ ಪಾಲಿಕೆಯ ಕ್ರಮ ಪ್ರಶ್ನಿಸಿದ್ದ ಲೇಔಟ್ನ ನಿವಾಸಿಗಳು ಕಾಮಗಾರಿಗೆ ತಡೆಯಾಜ್ಞೆ ತಂದಿದ್ದರು. ಹಾಗಾಗಿ ಅಲ್ಲಿನ ರಾಜಕಾಲುವೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಮೊನ್ನೆ ರಾತ್ರಿ ಧಾರಾಕಾರ ಮಳೆಗೆ ಕೆರೆನೀರು ಹರಿದುಹೋಗಲು ಜಾಗವಿಲ್ಲದೆ ಕಟ್ಟೆಯೊಡೆದು ಬಡಾವಣೆಗೆ ನೀರು ನುಗ್ಗಿ ಮನೆಗಳೆಲ್ಲವೂ ಜಲಾವೃತಗೊಂಡಿದ್ದವು. ಕೆರೆಯಿದ್ದ ಜಾಗಗಳಲ್ಲಿ ಈಗ ಅಪಾರ್ಟ್ಮೆಂಟ್ಗಳು ತಲೆಯೆತ್ತಿವೆ. ಇವೆಲ್ಲ ಗೊತ್ತಿದ್ದರೂ ಬಿಡಿಎ, ಬಿಬಿಎಂಪಿ ಕಣ್ಮುಚ್ಚಿ ಕುಳಿತಿವೆ.
ಪರಿಹಾರವಿಲ್ಲದ ಸಮಸ್ಯೆಗಳು ಯಾವುದೂ ಇಲ್ಲ. ಅದರಲ್ಲೂ ಮಾನವ ನಿರ್ಮಿತ ಸಮಸ್ಯೆಗಳಿಗೆ ಪರಿಹಾರ ಇದ್ದೇಇರುತ್ತದೆ. ಆದರೆ ಈಗ ಕೊರತೆಯಾಗಿರುವುದು ಪರಿಹರಿಸಲು ಬೇಕಾಗಿರುವ ಪ್ರಬಲ ಇಚ್ಛಾಶಕ್ತಿ. ಆ ಕೊರತೆ ನೀಗುವವರೆಗೆ ಇಂತಹ ಇನ್ನೊಂದಿಷ್ಟು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.