ಇತ್ತ ಭಾರತ ಒಂದೊಂದೇ ಬೆಟ್ಟವನ್ನು ವಶಪಡಿಸಿ ಗೆಲುವಿನ ಮೆಟ್ಟಿಲು ಹತ್ತುತ್ತಿದ್ದರೆ ಅತ್ತ ಪಾಕಿಸ್ಥಾನ ಒಂಟಿಯಾಯಿತು. ಪಾಕಿಸ್ಥಾನದ ಪ್ರಧಾನಿ ಜಿ-8 ರಾಷ್ಟ್ರಗಳಿಗೆ ಭಾರತಕ್ಕೆ ಬುದ್ಧಿ ಹೇಳಲು ಕೇಳಿದರೆ ಅವರೂ ಭಾರತದ ಕಡೆ ವಾಲುತ್ತರೆ. ಇದು ಪಾಕೀ ಪ್ರಧಾನಿಯಲ್ಲಿ ಮುಜುಗರ ಮೂಡಿಸುತ್ತದೆ. ಭಾರತ ಮುಂದೆ ಟೈಗರ್ ಪಾಯಿಂಟ್ ಮರುವಶಕ್ಕೆ ಮುಂದಾಗುತ್ತದೆ. ಈ ಸಾಹಸದಲ್ಲಿ ಸಾವನ್ನೇ ಗೆದ್ದು ಗ್ರೆನೆಡಿಯರ್ ಯೋಗೇಂದ್ರ ಯಾದವ್ರವರು ಮಿಂಚುತ್ತಾರೆ.
ಕದನಕಲಿ ‘ಗ್ರೇನೇಡಿಯರ್ ಯೋಗೇಂದ್ರ ಸಿಂಗ್ ಯಾದವ್’ ನೇತೃತ್ವದಲ್ಲಿ 25 ಜನ ಸೈನಿಕರೊಂದಿಗೆ ಟೈಗರ್ ಹಿಲ್ ಗುಡ್ಡಕ್ಕೆ ಹಗ್ಗ ಬಿಗಿದು ನಿಧಾನವಾಗಿ ಮೇಲೇರಿದರು. ಒಬ್ಬೊಬ್ಬರಾಗಿ ಮೇಲೆ ಬರುವುದಕ್ಕೆ ಸಹಾಯವನ್ನು ಮಾಡಿದರು ಏಳು ಜನ ಮೇಲೆ ಬಂದು ನಿಂತಿದ್ದರಷ್ಟೇ. ತಕ್ಷಣ ಬಂಡೆಯೊಂದು ಜಾರಿ ಪಾಕೀ ಸೈನಿಕರ ಗಮನವನ್ನು ಅತ್ತ ಸೆಳೆಯಿತು. ಅಲ್ಲಿಯವರೆಗೂ ಇತ್ತ ಸೈನಿಕರಿದ್ದಾರೆ ಎಂಬ ಸುಳಿವೂ ಆ ಶತ್ರುಗಳಿಗಿರಲಿಲ್ಲ. ಈಗ ತಕ್ಷಣ ಮೇಲಿಂದ ಗುಂಡಿನ ಸುರಿಮಳೆ ಶುರುವಾಯ್ತು. 18 ಜನ ಕಮಾಂಡೋಗಳು ಮೇಲೆ ಬರಲಾಗದೆ ಅಲ್ಲಿಯೇ ಉಳಿದರು. ಮೇಲೆ ಬಂದ ಏಳು ಜನ ಮುಂದಡಿ ಇಡಲಾಗದೇ ಹಿಂದೆಯೂ ಹೋಗಲಾಗದೆ ಶತ್ರುಗಳಿಂದ ಹತ್ತು ಮೀಟರ್ ದೂರದಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟರು.
ಹೌದು ಹತ್ತೇ ಮೀಟರ್ ದೂರದಲ್ಲಿ ಪಾಕಿಸ್ಥಾನಿ ಬಂಕರ್ಗಳಿದ್ದವು. ಒಟ್ಟಾರೆ ಟೈಗರ್ ಹಿಲ್ನ ತುದಿಗೆ 40 ಮೀಟರ್ ದೂರವಷ್ಟೇ. ಅದಾಗಲೇ ತುದಿಯ ಮೇಲೆ 135 ಸೈನಿಕರ ಒಂದಿಡೀ ಕಂಪನಿಯನ್ನು ಪಾಕಿಸ್ಥಾನ ಸನ್ನದ್ದುಗೊಳಿಸಿತ್ತು. ಬಹಳ ಕಾಲ ನಡೆದ ಗುಂಡಿನ ದಾಳಿ ಶಾಂತವಾಯ್ತು. ಭಾರತೀಯರು ಓಡಿಹೋಗಿರಬೇಕೆಂದು ಭಾವಿಸಿ ಪಾಕಿಸೇನೆ ಸುಮ್ಮನಾಯ್ತು. ಈ ಅವಕಾಶವನ್ನು ಬಳಸಿಕೊಂಡ ಗ್ರೇನೆಡಿಯರ್ ಯಾದವ್ ಮತ್ತು ಗೆಳೆಯರು ಸುಮಾರು ಬೆಳಗ್ಗೆ 11.30 ರ ವೇಳೆಗೆ ಪಾಕೀ ಬಂಕರಿನ ಮೇಲೆ ಗುಂಡಿನ ಸುರಿಮಳೆಗೈದು ನಾಲ್ವರನ್ನು ಕೊಂದು ಬಿಸಾಡಿ, ಪಾಕೀ ಬಂಕರನ್ನು ವಶಪಡಿಸಿಕೊಂಡರು.
ಮೇಲಿದ್ದ ಪಾಕಿ ಸೇನೆಗೆ ಇದು ನಂಬಲಸಾದ್ಯವಾಗಿತ್ತು. ಅವರಿಗೆ ಈ ಬಂಕರನ್ನು ವಶಪಡಿಸಿಕೊಂಡವರೆಷ್ಟು ಜನರೆಂಬ ಮಾಹಿತಿ ಬೇಕಿತ್ತು. ಅದರ ಆದಾರದ ಮೇಲೆ ಮುಂದಿನ ದಾಳಿ ಸಂಘಟಿಸುವ ಯೋಜನೆ ಅವರದ್ದು. ಹತ್ತು ಜನ ಸೈನಿಕರು ಬಂಕರಿನತ್ತ ಬಂದರು. ಅವರು ಸಮೀಪಿಸುವವರೆಗೂ ಕಾದಿದ್ದ ಯೋಗೇಂದ್ರ ಯಾದವರ ತಂಡ ಏಕಾಏಕಿ ದಾಳಿಗೈದು 8 ಜನರನ್ನು ಗುಡ್ಡದ ಮೇಲೆ ಮಲಗಿಸಿದರು. ತಪ್ಪಿಸಿಕೊಂಡ ಇಬ್ಬರು ತಮ್ಮ ಕಂಪನಿಯ ಕಮಾಂಡರನಿಗೆ ಸುದ್ದಿ ಮುಟ್ಟಿಸಿದರು. ’ಅಲ್ಲಿರುವವರು ಏಳು ಜನ ಮಾತ್ರ’ ಅಂತ.
ಶತ್ರುಗಳಿಗೆ ಇದು ನುಂಗಲಸಾಧ್ಯವಾದ ತುತ್ತು. ಸತ್ತ ನಮ್ಮ ಗೆಳೆಯರ ಸಾವಿಗೆ ಪ್ರತಿಕಾರ ಪಡೆಯಲೆಂದೇ ನೂರು ಜನ ಬಂಕರಿನತ್ತ ಧಾವಿಸಿದರು. ಒಟ್ಟಾರೆ ಮೂವತ್ತು ಮೀಟರ್ಗಳ ಅಂತರವಷ್ಟೇ, ನೂರು ಜನರೆದುರು ಏಳು ಜನ ಘಾತಕ್ ಕಮಾಂಡೋಗಳು. ಬಲವಾದ ಕದನವೇ ನಡೆಯಿತು.ಶತ್ರು ಸೇನೆಯ ೩೫ ಜನ ಶವವಾದರು. ಇತ್ತ ನಮ್ಮ ಏಳರಲ್ಲಿ ಆರು ಜನ ತಾಯಿ ಭಾರತೀಯ ಋಣ ತೀರಿಸಿ ಹುತಾತ್ಮರಾಗಿದ್ದರು.
25 ಕೆಜಿಯಷ್ಟು ಮದ್ದು ಗುಂಡುಗಳನ್ನು ತುಂಬಿ ತಂದಿದ್ದರೂ ಈಗ ಎಲ್ಲವೂ ಖಾಲಿಯಾಗಿತ್ತು. ದಾಳಿ ಮುಂದುವರೆಸುವ ಸಾಧ್ಯತೆಯೇ ಕಮರಿಹೊಗಿತ್ತು. ಪಾಕೀಪಡೆ ‘ಅಲ್ಲಾ ಹೋ ಅಕ್ಬರ್’ ಘೋಷಣೆಯೊಂದಿಗೆ ಒಳನುಗ್ಗುವಾಗ ಯೋಗೇಂದ್ರ ಸತ್ತಂತೆ ಮಲಗಿಬಿಟ್ಟರು. ಸೈನ್ಯದಲ್ಲಿ ಸತ್ತಂತೆನಿಸಿದರೂ ಸುಮ್ಮನೆ ಬಿಡುವುದಿಲ್ಲ. ಹುಚ್ಚಾಪಟ್ಟೆ ಗುಂಡು ಹಾರಿಸಿ ಮತ್ತೊಮ್ಮೆ ಕೊಂದೇ ಮುಂದುವರೆಯುವುದು. ಹೀಗೆ ಅರ್ಧ ಸತ್ತವರು ಯುದ್ದದ ದಿಕ್ಕನ್ನೇ ಬದಲಿಸಿದ ಅನೇಕ ಉದಾಹರಣೆಗಳಿವೆ. ಇಲ್ಲಿಯೂ ಹಾಗೆ ಪಾಕೀಗಳು ಮನಸೋ ಇಚ್ಛೆ ಗುಂಡು ಹಾರಿಸಿದರು. ಅದಾಗಲೇ ಸತ್ತಿದ್ದ ಆರೂ ಜನ ಮತ್ತೆ ಸತ್ತರು. ಗ್ರೇನೆಡಿಯರ್ ಯೋಗೇಂದ್ರ ಯಾದವರ ಕೈಕಾಲು ತೊಡೆ ಎಲ್ಲೆಂದರಲ್ಲಿ, ಕನಿಷ್ಠ 15 ಗುಂಡುಗಳು ಹೊಕ್ಕಿದ್ದವು. ಪಾಕೀ ಸೈನಿಕರ ದೃಷ್ಟಿಯಲ್ಲಿ ಎಲ್ಲಾ ಭಾರತೀಯ ಸೈನಿಕರೂ ಸತ್ತಾಗಿತ್ತು. ಎಲ್ಲರ ಶಸ್ತ್ರಗಳನ್ನು ಕಸಿದುಕೊಂಡು ಹೊರಟರು. ಆದರೆ ಯೋಗೇಂದ್ರರ ಜೇಬಿನಲ್ಲಿ ಗ್ರೆನೇಡುಗಳಿದ್ದುದು ಅವರಿಗೆ ತಿಳಿದೇ ಇರಲಿಲ್ಲ.
ಯೋಗೇಂದ್ರ ಸಿಂಗ್ ಕಷ್ಟಪಟ್ಟು ಎದ್ದು ನಿಂತು. ಒಂದೊಂದೇ ಹೆಜ್ಜೆ ಇಡುತ್ತಾ ಬಂಕರಿನಿಂದ ಹೊರಬಂದರು. ಭಾರತೀಯರನ್ನು ಕೊಂದು ಹಾಕಿರುವ ಆನಂದದಲ್ಲಿ ಬೀಗುತ್ತಾ ಮೇಲ್ಮುಖವಾಗಿ ಹೆಜ್ಜೆ ಇಡುತ್ತಾ ಸಾಗುತ್ತಿದ್ದ ಪಾಕಿಸ್ತಾನಿಯರೆಡೆಗೆ ಗ್ರೆನೇಡನ್ನು ಎಸೆದರು. ಈ ಗ್ರೆನೇಡು ಪಾಕೀ ಸೈನಿಕ ಕತ್ತಿಗೆ ಇಳಿಬಿಟ್ಟಿದ್ದ ಟೋಪಿಯೊಳಗೆ ಹೋಗಿ ಬಿತ್ತು. ಆತ ಅದೇನೆಂದು ಯೋಚಿಸುವ ವೇಳೆಗಾಗಲೇ ಅವನ ದೇಹ ಸಿಡಿದು ಚೂರು ಚೂರಾಗಿಬಿಟ್ಟಿತ್ತು. ಪಾಕೀ ಸೇನೆ ಕಕ್ಕಾಬಿಕ್ಕಿಯಾಯ್ತು. ಭಾರತೀಯರ ದೊಡ್ಡ ತುಕಡಿ ಗುಡ್ಡ ಹತ್ತಿದೆಯೆಂದು ಅವರು ನಂಬಿಬಿಟ್ಟರು. ಆಗಿಂದಾಗೆ ಟೈಗರ್ ಹಿಲ್ನಿಂದ ತಪ್ಪಿಸಿಕೊಳ್ಳುವ ಸೂಚನೆ ಅವರಿಗೆ ದೊರೆಯಿತು. ಹಾಗೆ ಹೋಗುವ ಮುನ್ನ ಆ ದಿಕ್ಕಿನಿಂದ ಹಾರಿದ ಗುಂಡು ಯೋಗೇಂದ್ರ ಸಿಂಗರ ತೋಳಿಗೆ ಬಡಿಯಿತು. ಅದು ಅವರ ತೋಳಿನ ಮೂಳೆಯನ್ನೇ ಮುರಿದು ಹಾಕಿತು. ಸಹಿಸಲಸಾದ್ಯವಾದ ನೋವು ಅವರದ್ದು. ಯೋಗೇಂದ್ರ ಸಿಂಗ್ ಬಂಡೆಯೊಂದಕ್ಕೆ ಆತುಕೊಂಡು ಸೊಂಟಕ್ಕೆ ಸುತ್ತಿದ್ದ ಬೆಲ್ಟನ್ನು ತೆಗೆದು ಎದೆಗೆ ಸುತ್ತಿಕೊಂಡು ಕೈಯನ್ನೂ ಸೇರಿಸಿ ಕಟ್ಟಿಕೊಂಡರು.
ಈ ಹೊತ್ತಿನಲ್ಲಿಯೇ ಪಾಕಿಸ್ತಾನದ ಕಮಾಂಡರ್ ತನ್ನ ಸೈನಿಕರಿಗೆ ಟೈಗರ್ ಹಿಲ್ ತೊರೆದು 500 ಮೀಟರ್ ದೂರದಲ್ಲಿ ಬೀಡುಬಿಟ್ಟಿರುವ ಗ್ರೆನೇಡಿಯರ್ನ ತಂಡದ ಮೇಲೆ ಅನಿರೀಕ್ಷಿತ ದಾಳಿ ನಡೆಸಲು ಆಜ್ಞೆ ಕೊಡುತ್ತಿದ್ದ. ಆತನ ಮಾತುಗಳು ಉರ್ದುವಿನಲ್ಲಿದ್ದವು. ಒಂದೂವರೆ ವರ್ಷ ಕಾಶ್ಮೀರದಲ್ಲಿ ಸೈನಿಕನಾಗಿ ದುಡಿದು ಅನುಭವವಿದ್ದುದ್ದರಿಂದ ಆತನಿಗೆ ತಕ್ಕಮಟ್ಟಿಗೆ ಅರ್ಥವಾಗುತ್ತಿತ್ತು. ಯೋಗೇಂದ್ರ ಚಡಪಡಿಸಲಾರಂಭಿಸಿದ. ಈ ವಿಚಾರವನ್ನು ತುಕಡಿಯ ಕಮಾಂಡರ್ ಬಲವಾನ್ ಸಿಂಗರಿಗೆ ಹೇಳದಿದ್ದರೆ ಅನಾಹುತ ನಡೆದುಬಿಡುತ್ತದೆಂದು ಅವನಿಗೆ ಗೊತ್ತಿತ್ತು. ಒಂದು ಹೆಜ್ಜೆ ಇಡಲೂ ಸಾಧ್ಯವಾಗದೇ ನರಳುತ್ತಿದ್ದ. ನರಳಾಟವು ಮೌನವಾಗಿಯೇ, ಸದ್ದು ಬಂದರೆ ಯಾರಾದರೂ ಗುಂಡು ಹಾರಿಸಿಯಾರು ನೆಲದ ಮೇಲೆ ಬಿದ್ದುಕೊಂಡ ಯೋಗೇಂದ್ರ ಬಂಡೆಯ ಬಳಿಗೆ ಉರುಳುತ್ತಾ ಹೋದ. ಸಾವು ಖಾತ್ರಿ. ಆದರೆ ಸಾಯುವ ಮುನ್ನ ಒಂದಷ್ಟು ಗೆಳೆಯರನ್ನು ಉಳಿಸಬೇಕೆಂಬ ಹಠ ಅವನದ್ದು. ನೀರು ಹರಿಯುತ್ತಿದ್ದ ಕಾಲುವೆಯೊಂದರ ಮೂಲಕ ಹರ ಸಾಹಸದಲ್ಲಿ ಲೆಫ್ಟಿನೆಂಟ್ ಬಲವಾನ್ರ ತುಕಡಿಯೊಂದಿಗೆ ಸೇರಿಕೊಂಡಿದ್ದ ಜಾಗಕ್ಕೆ ಬಂದ. ಟೈಗರ್ ಹಿಲ್ ಖಾಲಿಯಾಗಿದೆ, ಇನ್ನು ಕೆಲವೇ ಕ್ಷಣಗಳಲ್ಲಿ ಅಷ್ಟೂ ಸೈನಿಕರು ಮರುದಾಳಿಗೆಂದು ಎಂ.ಎಂ.ಜಿ. ಘಟಕದತ್ತ ಬರುತ್ತಾರೆಂಬ ಮಾಹಿತಿ ಕೊಟ್ಟ. ಆಗಲೇ ಅವನಿಗೆ ಸಾಮಾಧಾನವಾಗಿದ್ದು.
‘ಹೇಗಿದ್ದೀಯಾ ?’ ಕರ್ನಲ್ ಕುಶಾಲ್ ಠಾಗೂರ್ ಕೇಳಿದರು.
‘ಚೆನ್ನಾಗಿದ್ದೀನಿ ಸಾಬ್’ ಎಂದ ಅಷ್ಟೇ. ಯೋಗೇಂದ್ರನ ದೇಹ ರಕ್ತದಲ್ಲಿ ಸ್ನಾನ ಮಾಡಿದಂತಿತ್ತು, ದೇಹದ ಬೇರೆ ಬೇರೆ ಭಾಗಗಳಿಂದ ರಕ್ತ ಬರುತ್ತಲೇ ಇತ್ತು. ಮೂಗನ್ನು ಸವರಿಕೊಂಡು ಹೋಗಿದ್ದ ಸೀಸದ ಗುಂಡೊಂದು ಮುಖದ ಕೆಡಿಸಿತ್ತು. ಒಂದು ಗುಂಡು ಸೊಂಟದ ಭಾಗಕ್ಕೆ ತಾಕಿಕೊಂಡು ಒಳಹೋಗದೇ ಉಳಿದುಬಿಟ್ಟಿತ್ತು. ಇಷ್ಟೊಂದು ಗುಂಡೇಟಿನ ಬಳಿಕವೂ ಯೋಗಿಂದ್ರ ಉಳಿದಿರುವುದು ಮಾಂತ್ರಿಕವೇ. ಕುಶಾಲ್ ಠಾಕೂರ್ ಅವಾಕ್ಕಾದರು. ಆದಷ್ಟು ಬೇಗ ಯೋಗಿಂದ್ರನನ್ನು ಮುಖ್ಯಾಲಯಕ್ಕೆ ಚಿಕಿತ್ಸೆಗಾಗಿ ಕಳಿಸಲಾಯ್ತು. ಯೋಗೇಂದ್ರ ಕಣ್ಣುಮುಚ್ಚಿದ. ಎದ್ದಾಗ ಆಸ್ಪತ್ರೆಯಲ್ಲಿ ಅಂಗಾತ ಮಲಗಿದ್ದ. ಮೈ-ಕೈ ಎಲ್ಲ ಬ್ಯಾಂಡೇಜುಗಳಿಂದ ಕೂಡಿತ್ತು.
ಕೊನೆಗೆ ಇವರಿಗೆ ‘ಪರಮವೀರ ಚಕ್ರ’ ಪ್ರಶಸ್ತಿ ಕೂಡ ದೊರೆಯಿತು, ಬದುಕಿರುವಾಗಲೇ ಪರಮವೀರ ಪ್ರಶಸ್ತಿ ಪಡೆದ ಮೂವರಲ್ಲಿ ಇವರೂ ಒಬ್ಬರು.
ಇಂತಹ ಸಾಹಸಿ ಯೋಗೆಂದರ್ ಸಿಂಗ್ ಇಷ್ಟೆಲ್ಲಾ ಗುಂಡೇಟು ಬಿದ್ದಿದ್ದರೂ ಸಾವನ್ನೇ ಗೆದ್ದು, ಈಗ ಆರ್ಮಿಯಲ್ಲೇ ಇನ್ಸ್ಟ್ರಕ್ಟರ್ ಆಗಿ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.