ಪೂಂಛ್ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ. ಒಬ್ಬ ಭಾರತೀಯ ಸೈನಿಕನ ಸಾವು. ಆದರೂ ನಮ್ಮ ವೀರ ಯೋಧರು 350 ಭಯೋತ್ಪಾದಕರನ್ನು ಅಡಗುದಾಣಗಳಿಂದ ಹೊಡೆದೋಡಿಸುವುದರಲ್ಲಿ ಯಶಸ್ವಿಯಾದರು. ಶ್ರೀನಗರದ 15 ಸೇನಾ ತುಕಡಿಗಳನ್ನು ಕಾರ್ಗಿಲ್ಗೆ ರವಾನಿಸಲಾಯಿತು. ಪಾಕಿಸ್ಥಾನ ಗಡಿ ಉಲ್ಲಂಘನೆ ಮಾಡಿ ಭಾರತದೊಳಗೆ ನುಗ್ಗಿದೆ ಎಂಬ ವಿಷಯ ಭಾರತೀಯ ಸೈನ್ಯಕ್ಕೆ ಮನದಟ್ಟಾಯಿತು. ಅಷ್ಟೊತ್ತಿಗೆ ಮೇ 26 ಆಗಿತ್ತು, ಕಾರ್ಗಿಲ್, ದ್ರಾಸ್ ಬಟಾಲಿಕ್ ವಲಯಗಳಲ್ಲಿ 600 ರಿಂದ 800 ರಷ್ಟು ನುಸುಳುಕೋರರು ನುಗ್ಗಿರುವ ಸಂಗತಿ ಭಾರತೀಯ ಸೇನಾಧಿಕಾರಿಗಳು ಮನಗೊಂಡರು. ಇಷ್ಟು ಪ್ರಮಾಣದಲ್ಲಿ ನುಸುಳುಕೋರರು ಒಳಪ್ರವೇಶಿಸಿರುವುದು ನಮ್ಮ ಸೈನಿಕರಿಗೆ ಆಶ್ಚರ್ಯದ ಸಂಗತಿ ಆಗಿತ್ತು.
ಶತ್ರುಗಳ ನಿಗ್ರಹಕ್ಕೆ ಪಣತೊಟ್ಟು ನಿಂತಿದ್ದ ವಾಯುಪಡೆ ಅಂದೇ ನಸುಕಿನಲ್ಲಿ ತಮ್ಮ ದಾಳಿಯನ್ನು ಪ್ರಾರಂಭಿಸಿದರು. 160 ಮಂದಿ ಪಾಕ್ ಬೆಂಬಲಿತ ಉಗ್ರಗಾಮಿಗಳು ಬಲಿಯಾದರು. 17 ಮಂದಿ ಭಾರತೀಯ ಯೋಧರೂ ಮೃತ ಪಟ್ಟರು. ಮೇ 27, ನಮ್ಮ ಪಾಲಿಗೆ ದುರ್ದಿನ. ಪಾಪಿಗಳು ಅವರ ಸೋಲಿನ ಕಹಿಯನ್ನು ನುಂಗಲಾರದೆ ಸಂಕಟದಿಂದ ಭಾರತೀಯ ವಾಯುಪಡೆಯ ಎರಡು ಮಿಗ್-27 ವಿಮಾನಗಳನ್ನು ನಾಶಮಾಡಿದರು. ಪಾಕಿಸ್ಥಾನದ ಕ್ಷಿಪಣಿ ಒಂದು ವಿಮಾನವನ್ನು ಹೊಡೆದುಹಾಕಿತು. ಇನ್ನೊಂದು ವಿಮಾನ ತಾಂತ್ರಿಕ ದೋಷದಿಂದ ದುರಂತಕ್ಕೀಡಾಯಿತು. ಈ ವಿಮಾನದಲ್ಲಿದ್ದ ಲೆಫ್ಟಿನೆಂಟ್ ಕೆ. ನಚಿಕೇತ ಅವರನ್ನು ಬಂಧಿಸಿ ‘ಯುದ್ಧಕೈದಿ’ ಎಂದು ಅವರನ್ನು ಪಾಕಿಸ್ಥಾನ ಸರ್ಕಾರ ಪರಿಗಣಿಸಿತು. ಕ್ಷಿಪಣಿಯಿಂದ ಹೊಡೆದುರುಳಿಸಿದ್ದ ವಿಮಾನದ ಚಾಲಕ ಸ್ವ್ಕಾಡ್ರನ್ ಲೀಡರ್ ಅಜಯ್ ಅಹುಜಾರನ್ನು ಸೆರೆಹಿಡಿದು ಕೊಲ್ಲಲಾಯಿತು. ವಾಸ್ತವವಾಗಿ ಆ ಎರಡೂ ವಿಮಾನಗಳು ಗಡಿರೇಖೆಯೊಳಗೇ ಕಾರ್ಯಾಚರಣೆ ನಡೆಸಿದ್ದವು.
ಉಗ್ರಗಾಮಿಗಳ ವಿರುದ್ಧ ಮುಂದುವರಿದ ಕಾರ್ಯಾಚರಣೆಯಲ್ಲಿ ಮೇ 28 ರಂದು ಪಾಲ್ಗೊಂಡಿದ್ದ ಭಾರತೀಯ ವಾಯುಪಡೆಯ ಎಮ್ ಐ-17 ಹೆಲಿಕಾಪ್ಟರನ್ನು ಉಗ್ರಗಾಮಿಗಳು ಕ್ಷಿಪಣಿ ಉಡಾಯಿಸಿ ಹೊಡೆದುರುಳಿಸಿದರು. ಈ ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟರು. ಹೆಲಿಕಾಪ್ಟರ್ ಉಡಾಯಿಸಿದ್ದು ತಾನೆ ಎಂದು ಮುಜಾಹಿದ್ದಿನ್ ಜಿಹಾದಿ ಕೌನ್ಸಿಲ್ ಹೇಳಿಕೊಂಡಿತು. ಸೋಲಿನ ಭಯದಲ್ಲಿದ್ದ ಭಾರತೀಯ ಸೈನ್ಯ ಶತ್ರುಗಳನ್ನು ಸರ್ವನಾಶ ಮಾಡಲೇಬೇಕೆಂದು ನಿರ್ಧರಿಸಿತು. ಅತಿಕ್ರಮಣಕಾರರನ್ನು, ಭಯೋತ್ಪಾದಕರನ್ನು ಸಂಪೂರ್ಣ ತೊಲಗಿಸುವ ತನಕ “ಆಪರೇಷನ್ ವಿಜಯ್” ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಏರ್ ವೈಸ್ ಮಾರ್ಷಲ್ ಎಸ್.ಕೆ.ಮಲಿಕ್ ಹೇಳಿದರು.
ಈ ಮಾತಿನಿಂದ ಭಾರತಿಯ ಸೈನ್ಯಕ್ಕೆ ಆನೆ ಬಲ ಸಿಕ್ಕಂತೆ ಆಯಿತು. ಪ್ರತಿ ಏಟಿಗೂ ಎದುರೇಟು ಕೊಡುತ್ತಾ ಹೋದರು. ಸತತ ನಾಲ್ಕು ದಿನಗಳ ಕಾರ್ಯಾಚರಣೆಯಲ್ಲಿ ಪಾಪಿ ಉಗ್ರಗಾಮಿಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಸಫಲವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.