ಮುಸ್ಲಿಮರಿಗೆ ರಂಝಾನ್ ಎಂಬುದು ಸುಖ, ಶಾಂತಿ ಮತ್ತು ನೆಮ್ಮದಿಗಾಗಿ ನಿತ್ಯ ಪ್ರಾರ್ಥಿಸುವ ಅತೀ ಪವಿತ್ರ ತಿಂಗಳು ಎಂದೇ ಅರ್ಥ. ರಂಝಾನ್ ಮಾಸ ಮುಕ್ತಾಯವಾಗಿದೆ. ಸುಖ, ಶಾಂತಿ ಮತ್ತು ನೆಮ್ಮದಿಯೂ ಮರೀಚಿಕೆಯಾಗಿದೆ. ಏಕೆಂದರೆ ಜಗತ್ತಿನಾದ್ಯಂತ ಈ ಬಾರಿ ರಂಝಾನ್ ಮಾಸದ ಪವಿತ್ರ ತಿಂಗಳಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ರಕ್ತಪಾತ ನಡೆದಿದೆ. ನೋವು, ದುಃಖ, ದುಮ್ಮಾನಗಳು ಎದೆಯಾಳದಲ್ಲಿ ಧುಮ್ಮಿಕ್ಕಿವೆ. ಟೆಲ್ ಅವೀವ್, ಒರ್ಲ್ಯಾಂಡೋ, ಪ್ಯಾರಿಸ್, ಜೋರ್ಡಾನ್, ಮುಕಾಲ್ಲ, ಕ್ವಾ, ಇಸ್ತಾನ್ಬುಲ್, ಕಾಬೂಲ್, ಢಾಕಾ, ಬಾಗ್ದಾದ್, ಸೌದಿ ಅರೇಬಿಯಾ… ಹೀಗೆ ಸಿರಿಯಾದಿಂದ ಬಾಂಗ್ಲಾದ ವರೆಗೆ, ಫಿಲಿಫೈನ್ಸ್ನಿಂದ ಅಮೆರಿಕದವರೆಗೆ ನಡೆದ ರಕ್ತಪಿಪಾಸುಗಳ ಅಮಾನುಷ ದಾಳಿಯಲ್ಲಿ ಹತರಾದವರು 330 ಕ್ಕೂ ಹೆಚ್ಚು. ಗಾಯಗೊಂಡವರು 612. ವಿಪರ್ಯಾಸವೆಂದರೆ ಈ ಅಮಾನುಷ ದಾಳಿಯಲ್ಲಿ ಸಾವು, ನೋವು ಕಂಡವರು ಬಹುತೇಕ ಉಪವಾಸ ಮತ್ತು ಪ್ರಾರ್ಥನೆಯಲ್ಲಿ ನಿರತ ಮುಸ್ಲಿಮರೇ. ದೇವರ ಮುಂದೆ ಮಂಡಿಯೂರಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ದಾಳಿ ಮಾಡಿದವರೂ ಕೂಡ ಅದೇ ಇಸ್ಲಾಂ ಹೆಸರಿನಲ್ಲೇ ಸಾಮ್ರಾಜ್ಯ ಕಟ್ಟುವ ಶಪಥ ಮಾಡಿರುವ ಕಟ್ಟರ್ ಇಸ್ಲಾಮಿಯರೇ!
ಕಳೆದ ಮೇ ತಿಂಗಳಿನಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ವಕ್ತಾರ ಅಬು ಮೊಹಮ್ಮದ್ ಅಲ್ ಅದ್ನಾನಿ ಕರೆಯೊಂದನ್ನು ನೀಡಿದ್ದ: ‘ರಂಝಾನ್ ಮಾಸವು ವಿಶ್ವಾದ್ಯಂತ ನಂಬಿಕೆದ್ರೋಹ ಬಗೆದವರ ಪಾಲಿಗೆ ನರಕಯಾತನೆಯ ತಿಂಗಳಾಗುವಂತೆ ಮಾಡಿ’. ಆತನ ಈ ಕರೆ ಅಕ್ಷರಶಃ ಜಾರಿಯಾಗಿದೆ ಎನ್ನಬಹುದು! ಕಳೆದ ವಾರ ಢಾಕಾ ದಾಳಿಯಿಂದ ಹಿಡಿದು ಟರ್ಕಿ, ಸೌದಿ ಅರೇಬಿಯಾ, ಯೆಮೆನ್, ಇರಾಕ್, ಸಿರಿಯಾ ಜೋರ್ಡಾನ್, ಫ್ರಾನ್ಸ್, ಲೆಬೆನಾನ್, ಫಿಲಿಫೈನ್ಸ್ ದಾಳಿಗಳವರೆಗೆ ಯೂರೋಪ್, ಮದ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಆಫ್ರಿಕಾ ಸೇರಿದಂತೆ ಜಗತ್ತಿನುದ್ದಗಲಕ್ಕೂ ಬಹುತೇಕ ಮುಸ್ಲಿಮರನ್ನೇ ಗುರಿಯಾಗಿರಿಸಿಕೊಂಡು ಈ ದಾಳಿಗಳು ನಡೆದಿವೆ ಎನ್ನುವುದು ವಿಶೇಷ. ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿರುವ ಈ ದಾಳಿಗಳ ಹಿಂದೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಐಎಸ್ಐಎಸ್ ಕೈವಾಡವಿರುವುದು ರಹಸ್ಯವಲ್ಲ.
ಐಎಸ್ಐಎಸ್ ಜೊತೆಗೆ ಅಲ್ಖೈದಾ, ಅಲ್ಶಬಾಬ್ನಂತಹ ಇತರ ಉಗ್ರ ಸಂಘಟನೆಗಳೂ ಈ ಕೃತ್ಯಗಳಲ್ಲಿ ಕೈಜೊಡಿಸಿವೆ. ಜೊತೆಗೆ ಢಾಕಾ ದಾಳಿಯಲ್ಲಾದಂತೆ ಕೆಲವು ಸ್ಥಳೀಯ ಮುಸ್ಲಿಂ ಉಗ್ರ ಸಂಘಟನೆಗಳೂ ಕೂಡ ಐಎಸ್ಐಎಸ್ ಕಾರ್ಯಯೋಜನೆಯನ್ನು ಜಾರಿಗೆ ತಂದಿವೆ. ಆತ್ಮಾಹುತಿ ಬಾಂಬ್, ಗುಂಡುಹಾರಾಟ, ಸ್ಫೋಟ ಮುಂತಾದ ವಿವಿಧ ಬಗೆಯ ದಾಳಿಗಳು ಕೇವಲ ಜನಸಮುದಾಯಕ್ಕಷ್ಟೇ ಸೀಮಿತವಾಗಿರಲಿಲ್ಲ. ಮುಸ್ಲಿಮರ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಮದೀನ ಕೂಡ ಈ ದಾಳಿಗೆ ಒಳಪಟ್ಟಿತ್ತು. ಸೌದಿ ಅರೇಬಿಯಾದಲ್ಲಿರುವ ಇಸ್ಲಾಂ ಮತಸ್ಥಾಪಕ ಮೊಹಮದ್ ಪೈಗಂಬರ್ ಅವರ ಗೋರಿ ಇದೆ ಎನ್ನಲಾಗಿರುವ ಮದೀನ ಪಟ್ಟಣದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಪೈಗಂಬರರ ಆ ಗೋರಿ ಉಗ್ರರ ದಾಳಿಗೆ ನಾಶವಾಗಿ ಹೋಗುತ್ತಿತ್ತು.
ಪವಿತ್ರ ರಂಝಾನ್ ಮಾಸದಲ್ಲೇ ಐಎಸ್ಐಎಸ್ ಏಕೆ ಈ ದಾಳಿಗಳನ್ನು ಸಂಘಟಿಸಿದೆ? ಸಾವಿರಾರು ಮಂದಿಯ ರಕ್ತದ ಕೋಡಿಯನ್ನು ಈ ಸಮಯದಲ್ಲೇ ಏಕೆ ಹರಿಸುತ್ತಿದೆ? ಅಲ್ಲದೆ ಮುಸ್ಲಿಂ ದೇಶಗಳಲ್ಲೇ ಏಕೆ ಈ ದಾಳಿಗಳು ನಡೆದಿವೆ? ಅದೂ ಅಲ್ಲದೆ ಮುಸ್ಲಿಮರ ಪವಿತ್ರ ಹಬ್ಬದ ಸಂದರ್ಭದಲ್ಲೇ ತಮ್ಮ ಸಮುದಾಯದವರನ್ನೇ ಏಕೆ ಕೊಲ್ಲುತ್ತಿದ್ದಾರೆ? ಇಂತಹ ಪ್ರಶ್ನೆಗಳು ಈಗ ಪ್ರಸ್ತುತ. ಕಳೆದ ವರ್ಷ ರಂಝಾನ್ ಸಂದರ್ಭದಲ್ಲಿ ಐಎಸ್ಐಎಸ್ನ ಮುಖವಾಣಿ ‘ಡಬಿಖ್’ ಪತ್ರಿಕೆಯಲ್ಲಿ ವಕ್ತಾರ ಈ ಬಗ್ಗೆ ನೀಡಿದ ಹೇಳಿಕೆ ಹೀಗಿತ್ತು: ‘ರಂಝಾನ್ ಮುಸ್ಲಿಮರ ಪಾಲಿಗೆ ಪವಿತ್ರ ಹಬ್ಬ. ಅಲ್ಲಾಹು ಈ ಸಂದರ್ಭದಲ್ಲೇ ಮುಸ್ಲಿಮರಿಗೆ ಸ್ವರ್ಗದ ಬಾಗಿಲುಗಳನ್ನು ತೆರೆದಿರುತ್ತಾನೆ ಹಾಗಾಗಿ ಈ ತಿಂಗಳು ಶ್ರೇಷ್ಠವಾದ ದಿನಗಳು. ನರಕದ ಬಾಗಿಲುಗಳನ್ನು ಸಂಪೂರ್ಣ ಮುಚ್ಚಲಾಗಿರುತ್ತದೆ ಹಾಗಾಗಿ ನಂಬಿಕೆದ್ರೋಹ ಬಗೆದವರ ಪಾಲಿಗೆ ರಂಝಾನ್ ನರಕಯಾತನೆಯ ತಿಂಗಳಾಗುವಂತೆ ಮಾಡಿ’. ಐಎಸ್ಐಎಸ್ ಪಾಲಿಗೆ ರಂಝಾನ್ ಅಟ್ಟಹಾಸ ಮೆರೆಯಲು ಒಂದು ಪ್ರಶಸ್ತವಾದ ತಿಂಗಳು. ಏಕೆಂದರೆ ಆಗ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲದವರನ್ನು ಬಂಧಿಸಲಾಗಿರುತ್ತದೆ. ಹಾಗೂ ಸ್ವರ್ಗದ ಬಾಗಿಲನ್ನು ತೆಗೆದಿರಲಾಗಿರುತ್ತದೆ.
ರಂಝಾನ್ ಸಂದರ್ಭದಲ್ಲೇ ಇಂತಹ ಹಿಂಸಾತ್ಮಕ ದಾಳಿಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ಕ್ರಿ.ಶ. 624ರಲ್ಲಿ ನಡೆದ ಬದ್ರ್ ಯುದ್ಧ ನಡೆದಿದ್ದೂ ಕೂಡ ರಂಝಾನ್ ತಿಂಗಳಿನಲ್ಲೇ. ಇದನ್ನು ಸಂಘಟಿಸಿದ್ದು ಪೈಗಂಬರ್ ಮೊಹಮ್ಮದ್ ಹಾಗೂ ಆತನ ಅನುಯಾಯಿಗಳು. ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲದವರನ್ನು ಮುಗಿಸಲೆಂದೇ ಇಂತಹ ಪವಿತ್ರ ಯುದ್ಧವನ್ನು ಸಾರಲಾಯಿತಂತೆ. 1973ರ ಯೋಮ್ಕಿಪ್ಪುರ್ ಯುದ್ಧ ಇನ್ನೊಂದು ನಿದರ್ಶನ. ಈಜಿಪ್ಟ್ ಮತ್ತು ಸಿರಿಯಾ ಆಗ ಇಸ್ಲೇಲ್ ವಿರುದ್ದ ರಂಝಾನ್ ಮಾಸದಲ್ಲಿ ಯುದ್ಧ ಸಾರಿದ್ದವು. ಈಗ ಐಎಸ್ಐಎಸ್ ಕೂಡ ಅಂತಹುದೇ ಯುದ್ಧವನ್ನು ಮತ್ತೆ ಸಾರಿದೆ. ರಂಝಾನ್ ಮಾಸದಲ್ಲಿ ಮನಸ್ಸು ಮತ್ತು ದೇಹದ ನಿಗ್ರಹದ ಮೂಲಕ ಸಾತ್ವಿಕತೆಯನ್ನು ಪಡೆಯುವ, ಒಳಿತನ್ನು ಬೇಡುವಷ್ಟೇ ಇಸ್ಲಾಂ ಕಾರಣಕ್ಕಾಗಿ ಯುದ್ಧದಲ್ಲಿ ಸಾಯುವುದೂ ಕೂಡ ಅಷ್ಟೇ ಮಹತ್ವದ್ದು ಎಂಬುದು ಇಸ್ಲಾಮಿಕ್ ಉಗ್ರರ ವಾದ. ಈ ವಾದವನ್ನು ಅದೆಷ್ಟು ಮಂದಿ ಒಪ್ಪುತ್ತಾರೋ ಬಿಡುತ್ತಾರೋ… ಆದರೆ ಧರ್ಮಾಂಧ ಉಗ್ರರು ಹರಿಸುವ ರಕ್ತದೋಕುಳಿಯಲ್ಲಿ ಮುಗ್ಧ, ಅಮಾಯಕ, ಅಸಲಿ ಮುಸ್ಲಿಂ ಧರ್ಮನಿಷ್ಠರು ಬಲಿಯಾಗುತ್ತಿದ್ದಾರೆ ಎನ್ನುವುದ ವಿಪರ್ಯಾಸ.
ಇಸ್ಲಾಮಿಕ್ ಉಗ್ರರು ಢಾಕಾದಲ್ಲಿ ನಡೆಸಿದ ದಾಳಿಯನ್ನು ಅಲ್ಲಿನ ಪ್ರಧಾನಿ ಶೇಕ್ ಹಸೀನಾ ಉಗ್ರವಾಗಿ ಖಂಡಿಸಿದ್ದಾರೆ. ಉಗ್ರರಿಗೆ ಯಾವುದೇ ಧರ್ಮವಿಲ್ಲ. ಮಾನವೀಯತೆಯೂ ಇಲ್ಲ. ಬಾಂಗ್ಲಾದೇಶದಿಂದ ಉಗ್ರರು ಮತ್ತು ಹಿಂಸಾವಾದಿಗಳನ್ನು ನಿರ್ಮೂಲನೆ ಮಾಡಲು ಸಂಪೂರ್ಣವಾಗಿ ಪ್ರಯತ್ನಿಸುತ್ತೇನೆ ಎಂದು ಅವರು ಆಶ್ವಾಸನೆ ನೀಡಿದ್ದಾರೆ. ಸೌದಿ ಅರೇಬಿಯಾದ ಮುಖ್ಯ ಆಡಳಿತಗಾರರೂ ಭಯೋತ್ಪಾದನೆಯನ್ನು ಖಂಡಿಸಿದ್ದಾರೆ. ಆದರೆ ಇಂತಹ ಕೈಬೆರಳೆಣಿಕೆಯಷ್ಟು ಪ್ರಮುಖರನ್ನು ಹೊರತುಪಡಿಸಿದರೆ ಇಡೀ ಮುಸ್ಲಿಂ ಜಗತ್ತು ಒಂದಾಗಿ ಇಂತಹ ಭಯೋತ್ಪಾದನೆ ವಿರುದ್ಧ ಏಕೆ ಸೆಟೆದು ನಿಂತಿಲ್ಲ ಎಂಬುದು ಅತ್ಯಂತ ಕಳವಳಕರ ಅಂಶ. ಮುಸ್ಲಿಂ ಜಗತ್ತಿಗೆ ಉಗ್ರರ ಈ ಅಟ್ಟಹಾಸದ ದುಷ್ಪರಿಣಾಮದ ಅರಿವು ಇನ್ನೂ ಆಗಿಲ್ಲವೆ? ಉಗ್ರರ ಬಂದೂಕುಗಳಿಗೆ ಇನ್ನೆಷ್ಟು ಮಂದಿ ಅಮಾಯಕರು ಬಲಿಯಾಗಬೇಕು?
ಉಗ್ರರಿಗೆ ತನ್ನ ಭಾಷಣದ ಮೂಲಕ ಪ್ರಚೋದನೆ ನೀಡುತ್ತಿರುವ ವಿವಾದಿತ ಇಸ್ಲಾಂ ಬೋಧಕ ಝಕೀರ್ ನಾಯ್ಕ್ ಮೇಲೆ ಈಗ ಎಲ್ಲರ ಕೆಂಗಣ್ಣು ಹರಿದಿದೆ. ತಮ್ಮ ಪೀಸ್ ಟಿವಿ ವಾಹಿನಿಯ ಮೂಲಕ ಪ್ರತಿನಿತ್ಯ ೨೦ಕೋಟಿಗೂ ಹೆಚ್ಚು ಜನರನ್ನು ತಲುಪುವ ಈ ಧರ್ಮಬೋಧಕ ಸುನ್ನಿ ಪಂಗಡದ ಸಲಾಫಿ ಮತ್ತು ವಹಾಬಿ ಪಂಥಗಳ ಕಟ್ಟಾ ಮೂಲಭೂತವಾದಿ ಇಸ್ಲಾಂ ಪ್ರಚಾರಕ. ಫೇಸ್ಬುಕ್ ಮತ್ತು ಟ್ವಿಟರ್ ಜಾಲತಾಣದಲ್ಲಿ ಝಕೀರ್ಗೆ ಕೋಟ್ಯಂತರ ಮಂದಿ ಅನುಯಾಯಿಗಳಿದ್ದು ಆ ಪೈಕಿ ಬಹುತೇಕ ಮಂದಿ ಬಾಂಗ್ಲಾವಾಸಿಗಳು. ಮೊನ್ನೆ ಢಾಕಾದಲ್ಲಿ ಸ್ಫೋಟ ನಡೆಸಿದ ಉಗ್ರರಲ್ಲಿ ಒಬ್ಬ ತಾನು ಝಕೀರ್ ಭಾಷಣದಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿರುವುದು ಈಗ ಝಕೀರ್ಗೆ ಕುತ್ತಾಗಿ ಪರಿಣಮಿಸಿದೆ. 7/11ರ ಮುಂಬೈ ಸರಣಿ ರೈಲುಸ್ಫೋಟದ ಆರೋಪಿ ರಹೀಲ್ಶೇಕ್, ಬ್ರಿಟನ್ನ ಗ್ಲಾಸ್ಗೋ ವಿಮಾನ ನಿಲ್ದಾಣ ಸ್ಫೋಟಯತ್ನದ ಡಾ. ಕಫೀಲ್ ಅಹ್ಮದ್, ನ್ಯೂಯಾರ್ಕ್ ಸಬ್ವೇ ಸ್ಫೋಟ ಸಂಚಿನ ಆರೋಪಿ ನಜೀಬುಲ್ಲಾ ಝಜಿ ಮುಂತಾದವರು ಕೂಡ ತಾವು ಝಕೀರ್ ಅಭಿಮಾನಿಗಳು ಎಂದಿದ್ದರು. ಸ್ವತಃ ಝಕೀರ್ ಉಗ್ರಸಂಘಟನೆಗಳು ಮತ್ತು ಉಗ್ರರ ವಿಷಯದಲ್ಲಿ ಆಗಾಗ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇರುತ್ತಾರೆ. ಎಲ್ಲ ಮುಸ್ಲಿಮರು ಉಗ್ರರಾಗಬೇಕು ಎಂಬ ಕರೆ, ಒಸಾಮಾಬಿನ್ ಲ್ಯಾಡೆನ್ನನ್ನು ಭಯೋತ್ಪಾದಕನಲ್ಲ ಎಂದು ಹೇಳಿದ್ದು, ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದು… ಇವೆಲ್ಲಾ ಝಕೀರ್ ಮೇಲೆ ಇನ್ನಷ್ಟು ಸಂಶಯ ಮೂಡುವಂತೆ ಮಾಡಿದೆ. ಬ್ರಿಟನ್, ಕೆನಡಾ, ಮಲೇಷ್ಯಾಗಳಲ್ಲಿ ಝಕೀರ್ ಈಗ ಧಾರ್ಮಿಕ ಭಾಷಣ ಮಾಡುವಂತಿಲ್ಲ. ಮಂಗಳೂರಿಗೆ ಇತ್ತೀಚೆಗೆ ಅವರು ಬರದಂತೆ ನಿಷೇಧ ಹೇರಲಾಗಿತ್ತು. ಅಲ್ಲಿ ಏರ್ಪಾಡಾಗಿದ್ದ ಅವರ ಧರ್ಮ ಬೋಧನೆ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಝಕೀರ್ ಕಾರ್ಯಕ್ರಮಕ್ಕೆ ನಿಷೇಧ ಹೇರಲಾಗಿತ್ತು. ಇಂತಹ ಝಕೀರ್ ಈಗ ಮಾತ್ರ ಢಾಕಾದಲ್ಲಿ ನಡೆದ ದಾಳಿಯ ಹಿಂದಿರುವವರು ತನಗೆ ಗೊತ್ತಿಲ್ಲ. ಅವರೆಲ್ಲಾ ಇಸ್ಲಾಂ ವಿರಧಿಗಳು ಎಂದು ಕ್ಯಾತೆ ತೆಗೆದಿರುವುದು ಅಚ್ಚರಿ ಮೂಡಿಸಿದೆ.
ಐಎಸ್ಐಎಸ್ ಉಗ್ರರ ದಾಳಿ ಇಲ್ಲಿಗೇ ನಿಂತಿಲ್ಲ. ರಂಝಾನ್ ಮಾಸದಲ್ಲಿ ನಡೆದಿದ್ದು ಕೇವಲ ಒಂದು ಟ್ರಯಲ್ ಅಷ್ಟೆ. ಮುಂದೆ ಹಜ್ ಯಾತ್ರೆ ಸಂದರ್ಭದಲ್ಲಿ ಇನ್ನಷ್ಟು ದಾಳಿಗಳು ನಡೆಯಲಿವೆ ಎಂದು ಐಎಸ್ಐಎಸ್ ವಕ್ತಾರರು ಸ್ಪಷ್ಟಪಡಿಸಿರುವುದು ಮುಂದಿನ ಕರಾಳ ದಿನಗಳಿಗೆ ಒಂದು ಮುನ್ನೆಚ್ಚರಿಕೆ. ಇದು ಐಎಸ್ಐಎಸ್ನ ಹೆಚ್ಚುತ್ತಿರುವ ಪ್ರಭಾವದ ಸಂಕೇತವೋ ಅಥವಾ ಹತಾಶೆಯ ಪ್ರತೀಕವೋ ಗೊತ್ತಿಲ್ಲ.
ಐಎಸ್ಐಎಸ್ ಮತ್ತಿತರ ಉಗ್ರ ಇಸ್ಲಾಮಿಕ್ ಸಂಘಟನೆಗಳ ಅಟ್ಟಹಾಸವನ್ನು ಕೊನೆಗಾಣಿಸಲು ಭಾರತವಂತೂ ವಿಶ್ವಸಂಸ್ಥೆಗೆ ಈಗಾಗಲೇ ಆಗ್ರಹಿಸಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಸಂಬಂಧಿಸಿದ ಸಮಗ್ರ ಒಪ್ಪಂದ (ಸಿಸಿಐಟಿ)ವನ್ನು ಆದಷ್ಟು ಬೇಗ ಜಾರಿ ಮಾಡುವಂತೆ ಅದು ಒತ್ತಡ ಹೇರಿದೆ. ಜೊತೆಗೆ ಭಯೋತ್ಪಾದನಾ ದಾಳಿ ಸಂಚುಕೋರರು ಮತ್ತು ಉಗ್ರರಿಗೆ ಆಶ್ರಯಕೊಡುವ ರಾಷ್ಟ್ರಗಳನ್ನೇ ಭಯೋತ್ಪಾದನೆಗೆ ಹೊಣೆಯಾಗಿಸಬೇಕು ಎಂದೂ ಭಾರತ ಆಗ್ರಹಿಸಿದೆ. ಸಿಸಿಐಟಿ ಜಾರಿಯಾದರೆ ಉಗ್ರರು, ಅವರಿಗೆ ಹಣಕಾಸು ನೀಡುವವರು ಹಾಗೂ ಬೆಂಬಲಿಗರ ಎಲ್ಲ ನಿಧಿಗಳು, ಅಸ್ತ್ರಗಳು ಮತ್ತು ಆಶ್ರಯ ತಾಣಗಳಿಗೆ ನಿರ್ಬಂಧ ಹೇರಲಾಗುತ್ತದೆ. ಉಗ್ರರಿಗೆ ತಮ್ಮ ದುಷ್ಕೃತ್ಯಗಳಿಗೆ ಹಣ ಹರಿದು ಬರುತ್ತಿರುವುದು ಮುಖ್ಯವಾಗಿ ಸೌದಿ ಅರೇಬಿಯಾದಿಂದಲೇ ಎಂಬುದು ಗುಟ್ಟಲ್ಲ. ಉಗ್ರರಿಗೆ ಹೀಗೆ ಹಣ ಒದಗಿಸುವ ಮೂಲಗಳ ಮೇಲೆ ಮೊದಲು ನಿರ್ಬಂಧ ಹೇರಬೇಕು. ಮೂಗು ಹಿಡಿದರೆ ಬಾಯಿ ತಾನಾಗಿ ತೆರೆಯುತ್ತದೆ.
‘ಪವಿತ್ರ ಜಿಹಾದ್’ನಿಂದಲೇ ಇಸ್ಲಾಮಿನ ಉಳಿವು ಎಂಬುದು ಮತಾಂಧ ಉಗ್ರರ ಸಂದೇಶ. ಆದರೆ ಯುದ್ಧವೆಂಬುದೇ ಭಯೋತ್ಪಾದನೆಯ ಪ್ರತೀಕವಾಗಿರುವಾಗ ಯುದ್ಧದಿಂದ ಭಯೋತ್ಪಾದನೆ ನಿಗ್ರಹ ಹೇಗೆ ಸಾಧ್ಯ? ಶಾಂತಿ, ನೆಮ್ಮದಿ ಕರುಣಿಸುತ್ತದೆ ಎನ್ನಲಾಗುವ ಇಸ್ಲಾಂ ಮತದ ಮುಖಂಡರು, ಭಯೋತ್ಪಾದನೆಯ ವಿರುದ್ಧ ಒಂದಾಗಿ ಎದ್ದುನಿಲ್ಲುವುದು ಯಾವಾಗ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.