‘ಯಶವಂತಪುರ’ ಕರ್ನಾಟಕದ ಮೊದಲ ‘ಡಿಜಿಟಲ್ ವಿಲೇಜ್’ ಗ್ರಾಮದ ಯಶೋಗಾಥೆ ಬರೆದ ಎಸ್ಬಿಐ
ಬೆಂಗಳೂರು : ಕರ್ನಾಟಕದ ‘ಯಶವಂತಪುರ’ ಗ್ರಾಮರಾಜ್ಯದ ಮೊದಲ ‘ಡಿಜಿಟಲ್ ವಿಲೇಜ್’ ಎಂಬ ಹೆಮ್ಮೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪುಗೊಂಡಿರುವ ರಾಜ್ಯದ ಮೊದಲ ‘ಡಿಜಿಟಲ್ ವಿಲೇಜ್’ ಅನ್ನು ಮಾಲೂರು ಶಾಸಕ ಎಸ್.ಮಂಜುನಾಥ್ಗೌಡ ಲೋಕಾರ್ಪಣೆಗೊಳಿಸಿದರು.
‘ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ..’ ಇದು ಗಾಂಧಿ ಕನಸಿನ ಗ್ರಾಮ ಸ್ವರಾಜ್ಯದ ಪರಿಕಲ್ಪನೆ. ಈ ಪರಿಕಲ್ಪನೆಯ ಮೊದಲ ಹೆಜ್ಜೆಯಾಗಿ ಕೋಲಾರ ಜಿಲ್ಲೆ, ಮಾಲೂರು ತಾಲೂಕಿನಲ್ಲಿರುವ ‘ಯಶವಂತಪುರ’ ಗ್ರಾಮ ಡಿಜಿಟಲ್ ವಿಲೇಜ್ ಆಗಿ ಇತರ ಹಳ್ಳಿಗಳಿಗೂ ಮಾದರಿಯಾಗುವತ್ತ ಹೆಜ್ಜೆ ಇಟ್ಟಿದೆ.
ಇದೇ ವೇಳೆ ಬ್ಯಾಂಕಿನ ವತಿಯಿಂದ ಸ್ಥಾಪಿಸಲಾಗಿರುವ ಸೌರವಿದ್ಯುತ್ ಚಾಲಿತ ಶುದ್ಧ ಕುಡಿಯುವ ನೀರಿ ನಘಟಕ ಮತ್ತು ಸೌರವಿದ್ಯುತ್ ಚಾಲಿತ ಗ್ರಾಹಕರ ಸೇವಾ ಕೇಂದ್ರವನ್ನು ಬಲೂನ್ ಹಾರಿಬಿಡುವ ಮೂಲಕ ಉದ್ಘಾಟಿಸಲಾಯಿತು. ಈ ವೇಳೆ ಎಸ್ಬಿಐನ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಎಸ್. ದಿನೇಶ್, ಮಾಲೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರಾದ ರಮೇಶ್ ಉಪಸ್ಥಿತರಿದ್ದರು.
ಡಿಜಿಟಲ್ ವಿಲೇಜ್ನ ವಿಶೇಷತೆಗಳು:
ಇನ್ನುಂದೆ ಯಶವಂತಪುರದ ಗ್ರಾಮಸ್ಥರು ತಮ್ಮ ಗ್ರಾಮದಲ್ಲೇ ಪೇಪರ್ಲೆಸ್, ನಗದುರಹಿತ ವಹಿವಾಟು ನಡೆಸಬಹುದು. ಇಷ್ಟು ದಿನ ನೇಗಿಲು ಹಿಡಿಯುತ್ತಿದ್ದ ಯಶವಂತಪುರ ಗ್ರಾಮದ ರೈತರ ಕೈಗಳಿಗೆ ಇದೀಗ ಕಂಪ್ಯೂಟರ್, ಸ್ಮಾರ್ಟ್ಫೋನ್ ಬಂದಿದೆ. ಇಷ್ಟೇ ಅಲ್ಲ, ಇವುಗಳನ್ನು ಪರಿಣಾಮಕಾರಿಯಾಗಿ ಬಳಸುವ ತರಬೇತಿಯನ್ನೂ ಗ್ರಾಮಸ್ಥರಿಗೆ ನೀಡಲಾಗಿದೆ. 450 ಮನೆಗಳಿರುವ ಯಶವಂತಪುರದಲ್ಲಿ ಸಂಪೂರ್ಣ ಡಿಜಿಟಲ್ ಕ್ರಾಂತಿಯಾಗಿದ್ದು, ಗ್ರಾಮದಲ್ಲಿರೋ ಒಟ್ಟು 2500 ಮಂದಿ ವರ್ಷದ 365 ದಿನವೂ ಉಚಿತ ವೈ-ಫೈ ಸೌಲಭ್ಯ ಬಳಸಬಹುದಾಗಿದೆ.
ಯಶವಂತಪುರ ಗ್ರಾಮದ ಯಾವೊಬ್ಬ ರೈತನೂ ಬ್ಯಾಂಕಿಂಗ್ ವಹಿವಾಟು ನಡೆಸುವುದಕ್ಕೆ ದೂರದ ನಗರಕ್ಕೆ ಹೋಗಬೇಕಿಲ್ಲ. ಸ್ಟೇಟ್ ಬ್ಯಾಂಕ್ ಇಂಡಿಯಾ ವತಿಯಿಂದ ಗ್ರಾಮದಲ್ಲಿ ಎಟಿಎಂ ಕೇಂದ್ರ ಮತ್ತು ಕಮ್ಯುನಿಟಿ ಸರ್ವಿಸ್ ಪಾಯಿಂಟ್ (ಸಿಎಸ್ಪಿ) ಸ್ಥಾಪಿಸಲಾಗಿದೆ. ಇದರಿಂದ ಕೃಷಿ ಉತ್ಪನ್ನ ಮಾರಾಟ ಸೇರಿದಂತೆ ಯಾವುದೇ ವಹಿವಾಟನ್ನೂ ರೈತರು ಆನ್ಲೈನ್ ಮೂಲಕವೇ ನಗದು ವರ್ಗಾವಣೆ ಮಾಡಬಹುದು. ಬ್ಯಾಂಕ್ನಲ್ಲಿ ಮಾಡಿದ ಸಾಲವನ್ನು ರೈತರು ಬೆರಳ ತುದಿಯಲ್ಲೇ ಮರುಪಾವತಿ ಮಾಡಬಹುದು.
ಇದರಿಂದ ಯಶವಂತಪುರ ಗ್ರಾಮಸ್ಥರು ತಮ್ಮ ಹಳ್ಳಿಯ ಅಂಗಡಿಯಿಂದ ಯಾವುದೇ ಸಾಮಾನು ಕೊಂಡರೂ ಸ್ಮಾರ್ಟ್ಫೋನ್ನಿಂದಲೇ ಅಂಗಡಿ ಮಾಲೀಕನಿಗೆ ಸುಲಭವಾಗಿ ಹಣ ವರ್ಗಾವಣೆ ಮಾಡುವಷ್ಟು ಸ್ವಾವಲಂಬನೆ ಸಾಧಿಸಿದ್ದಾರೆ ಎನ್ನಲು ಯಾವುದೇ ಅಡ್ಡಿ ಇಲ್ಲ.
ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮದಲ್ಲಿ ಸ್ಥಾಪಿಸಿರುವ ಕಮ್ಯುನಿಟಿ ಸರ್ವಿಸ್ ಪಾಯಿಂಟ್ (ಸಿಎಸ್ಪಿ) ಮೂಲಕವೂ ರೈತರುತಮ್ಮ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದು. ಬ್ಯಾಂಕ್ನಲ್ಲಿ ಹೊಸ ಖಾತೆ ತೆರೆಯುವುದರಿಂದ ಹಿಡಿದು ನೀರು, ವಿದ್ಯುತ್, ದೂರವಾಣಿ ಬಿಲ್ ಪಾವತಿ ಸೇರಿದಂತೆ ಹಲವು ಸೇವೆಗಳನ್ನು ಈ ಕೇಂದ್ರದಿಂದ ನಿರ್ವಹಿಸಲಾಗುತ್ತದೆ. ಒಟ್ಟಾರೆ ಆಧಾರ್ಗೆ ಲಿಂಕ್ಆಗಿರೋ ಸರ್ಕಾರದ ಎಲ್ಲ ಸೌಲಭ್ಯಗಳನ್ನೂ ಈ ಕಮ್ಯುನಿಟಿ ಸರ್ವಿಸ್ ಪಾಯಿಂಟ್ನಿಂದ ಪಡೆಯಬಹುದಾಗಿದೆ.
ಗ್ರಾಮದಲ್ಲಿ ಕಲ್ಪಿಸಿರುವ ಡಿಜಿಟಲ್ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಸ್ಬಿಐ ವತಿಯಿಂದ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ. ಇಲ್ಲಿ ರೈತರು, ಯುವಕರಿಗೆ, ಮೊಬೈಲ್ ಬ್ಯಾಂಕಿಂಗ್, ಸ್ಮಾರ್ಟ್ಫೋನ್ ಬಳಕೆ ಬಗ್ಗೆ ಶಿಕ್ಷಣವನ್ನೂ ನೀಡಲಾಗಿದೆ. ಡಿಜಿಟಲ್ ಕ್ರಾಂತಿಯ ಮೂಲಕ ಸ್ವಾವಲಂಬಿ ಗ್ರಾಮದ ಮಂತ್ರ ಜಪಿಸಿರೋ ಈ ಹಳ್ಳಿಯಲ್ಲಿ ಎಸ್ಬಿಐ ವತಿಯಿಂದ 25 ಸೋಲಾರ್ ಬೀದಿದೀಪಗಳನ್ನು ಅಳವಡಿಸುವ ಕೆಲಸವೂ ಕಾರ್ಯಗತಗೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.