ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಮಂಗಳೂರು ಮಹಾನಗರಿ ಸಿದ್ಧಗೊಳ್ಳುತ್ತಿದೆ. ಎಪ್ರಿಲ್ 30 ರಿಂದ ಮೇ 4 ರ ತನಕ ನಡೆಯುವ ಈ ರಾಷ್ಟ್ರಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಲು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ಅದಕ್ಕಾಗಿ ಒಟ್ಟು 18ವಿವಿಧ ಸಮಿತಿಗಳನ್ನು ರಚಿಸಿದ್ದು, ಪಾಲಿಕೆಯ ಸದಸ್ಯರಿಂದ ಹಿಡಿದು ಜಿಲ್ಲಾಡಳಿತದ ಅಧಿಕಾರಿಗಳ ತನಕ ಪ್ರತಿಯೊಬ್ಬರನ್ನು ವಿವಿಧ ಸಮಿತಿಗಳಲ್ಲಿ ಸೇರಿಸಿ ಕಾರ್ಯಕ್ರಮದ ಯಶಸ್ಸಿಗೆ ಕಂಕಣಬದ್ಧರಾಗುವಂತೆ ಸೂಚಿಸಲಾಗಿದೆ. ವಸತಿ ಸಮಿತಿಯಿಂದ ಆಹಾರ ಸಮಿತಿಯ ತನಕ ಪ್ರತಿಯೊಂದು ಸಮಿತಿಯು ಬೇರೆ ಬೇರೆ ರಾಜ್ಯಗಳಿಂದ ಬರುವ ಕ್ರೀಡಾಪಟುಗಳಿಗೆ ಇಲ್ಲಿ ಯಾವುದೇ ರೀತಿಯ ಕೊರತೆ ಆಗದಂತೆ ಗಮನವಹಿಸಲಿದೆ. ಅಷ್ಟಕ್ಕೂ ಈ ಕ್ರೀಡಾಕೂಟದ ಮಹತ್ವದ ಬಗ್ಗೆ ನಮಗೆ ತಿಳಿದಿರುವುದೇ ಕಡಿಮೆ.
ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೇಟಿಕ್ ಕ್ರೀಡಾಕೂಟ ಈ ಬಾರಿ ಮಂಗಳೂರಿನಲ್ಲಿ ನಡೆಯುತ್ತಿರುವುದರ ಹಿಂದೆ ನಮ್ಮ ಅನೇಕ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಶ್ರಮ ಇದ್ದೇ ಇದೆ. ಕಾರಣ ಈ ಕ್ರೀಡಾಕೂಟ ರಾಷ್ಟ್ರಮಟ್ಟದಲ್ಲಿ ನಡೆಯುವಂತಹುದು. ಸಾಮಾನ್ಯವಾಗಿ ರಾಷ್ಟ್ರದ ಮಹಾ ನಗರಗಳಾದ ಚೆನೈ, ಹೈದ್ರಾಬಾದ್, ದೆಹಲಿ. ಕೋಲ್ಕತ್ತಾದಂತಹ ನಗರಗಳಲ್ಲಿ ಈ ಕ್ರೀಡಾಕೂಟವನ್ನು ಸಾಮಾನ್ಯವಾಗಿ ಆಯೋಜಿಸಿಕೊಂಡು ಬರಲಾಗುತ್ತದೆ. ಅದಕ್ಕೆ ಕಾರಣ ಆ ನಗರಗಳಲ್ಲಿರುವ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ಮತ್ತು ಕ್ರೀಡೆಗೆ ಬೇಕಾಗುವ ಪರಿಕರಗಳ ಗುಣಮಟ್ಟತೆ. ಆದ್ದರಿಂದ ರಾಷ್ಟ್ರೀಯ ಅಥ್ಲೆಟಿಕ್ ಫೆಡರೇಶನ್ ಎನ್ನುವ ಸರ್ಕಾರೇತರ ಕ್ರೀಡಾ ಸಂಸ್ಥೆ ಈ ಕ್ರೀಡಾಕೂಟಗಳನ್ನು ನಡೆಸುವ ಆ ನಗರದಲ್ಲಿ ಎಷ್ಟೆಲ್ಲಾ ಮೂಲಭೂತ ಸೌಲಭ್ಯಗಳು ಇದೆ ಎಂದು ಪರೀಕ್ಷಿಸುತ್ತದೆ. ಆ ನಿಟ್ಟಿನಲ್ಲಿ ಈ ಬಾರಿ ಕರ್ನಾಟಕದ ಬಂದರು ನಗರಿ ಮಂಗಳೂರಿಗೆ ಸಿಕ್ಕಿರುವ ಸ್ಥಾನಮಾನ ಎನೂ ಚಿಕ್ಕದಲ್ಲ. ಹೇಗೆ ಬಿಸಿಸಿಐ ಯಾವುದಾದರೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುವ ಮೊದಲು ಆ ಪಂದ್ಯ ನಡೆಸಲು ಆ ನಗರದಲ್ಲಿ ಎಲ್ಲ ವ್ಯವಸ್ಥೆಗಳು ಇದೆಯೋ ಎಂದು ಪರೀಕ್ಷಿಸಿ ನಂತರ ಗ್ರೀನ್ ಸಿಗ್ನಲ್ ಕೊಡುವಂತೆ ಈ ಕ್ರೀಡಾ ಸಂಸ್ಥೆ ಕೂಡ ತನ್ನದೇ ಆದ ಕೆಲವು ಮಾನದಂಡವನ್ನು ಇಟ್ಟುಕೊಂಡು ಕ್ರೀಡಾಕೂಟ ನಡೆಸಲು ರಾಜ್ಯ ಅಥ್ಲೆಟಿಕ್ ಫೆಡರೇಶನ್ಗೆ ಅನುಮತಿ ನೀಡುತ್ತದೆ. ಅದರ ಪ್ರಕಾರ ಜಿಲ್ಲಾ ಅಥ್ಲೆಟಿಕ್ ಫೆಡರೇಶನ್ ಘಟಕವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.
ಈ ಅವಕಾಶ ಸಿಕ್ಕಿದರ ಪ್ರಯೋಜನವೇನು? ಇಲ್ಲಿಯ ತನಕ ಅನೇಕ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಕಾಲಕಾಲಕ್ಕೆ ಮಂಗಳೂರಿನಿಂದ ಬೇರೆ ಬೇರೆ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಮಿಂಚುತ್ತಾ ಬರುತ್ತಿದ್ದಾರೆ. ವಂದನಾ ರಾವ್, ಆನಂದ ಶೆಟ್ಟಿಯವರಿಂದ ಹಿಡಿದು ಅನೇಕಭರವಸೆಯ ಕ್ರೀಡಾಪಟುಗಳನ್ನು ಮಂಗಳೂರು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿದೆ. ಆದರೆ ಕಾಲಕ್ರಮೇಣ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿರುವ ಮೂಲಭೂತ ವ್ಯವಸ್ಥೆಗಳು ನಮ್ಮ ಕ್ರೀಡಾಪಟುಗಳ ಸರ್ವಾಂಗೀಣ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದವು. ನಮ್ಮ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯ ಕಾರಣಕ್ಕೆ ಉನ್ನತ ಮಟ್ಟದ ಕ್ರೀಡಾಕೂಟಕ್ಕೆ ತಯಾರಾಗುವ ಕ್ರೀಡಾಪಟುಗಳಿಗೆ ಮಂಗಳೂರು ಗುಣಮಟ್ಟದ ಪರಿಕರಗಳನ್ನು ಮತ್ತು ಶ್ರೇಷ್ಟಮಟ್ಟದ ಸವಲತ್ತುಗಳನ್ನು ಕೊಡುವಲ್ಲಿ ಹಿಂದೇಟು ಹಾಕಿತ್ತು. ಆದರೆ ನಮ್ಮ ಕ್ರೀಡಾಪಟುಗಳ ಅದೃಷ್ಟವೋ ಎನೋ, ಈ ರಾಷ್ಟ್ರಮಟ್ಟದ ಕ್ರೀಡಾಕೂಟದ ಕಾರಣಕ್ಕಾದರೂ ಎನೋ ಮಂಗಳೂರಿನ ಕ್ರೀಡಾಂಗಣ ನಿಧಾನವಾಗಿ ಆದರೂ ನಮ್ಮ ಕ್ರೀಡಾಪಟುಗಳಿಗೆ ವರದಾನವಾಗಿ ಪರಿಣಮಿಸುತ್ತಿದೆ. ಸಿಂಥೆಟಿಕ್ ಟ್ರಾಕ್ನಿಂದ ಹಿಡಿದು ಹಚ್ಚ ಹಸಿರಿನ ಕ್ರೀಡಾಂಗಣ, ಮೂಲಭೂತ ಸೌಲಭ್ಯವನ್ನು ಹೊಂಂದಿರುವ ಪೆವಿಲಿಯನ್ ಮತ್ತು ಎಲ್ಲಾ ಕ್ರೀಡೆಗಳಿಗೆ ಬೇಕಾಗುವ ಸವಲತ್ತುಗಳನ್ನು ಈಗಾಗಲೇ ಕ್ರೋಢಿಕರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಇದರಿಂದ ಭವಿಷ್ಯದಲ್ಲಿ ಕನಿಷ್ಟ 15 ವರ್ಷ ಯಾವುದೇ ರೀತಿಯ ಕ್ರೀಡಾಕೂಟ ನಡೆಸಲು ನಮ್ಮ ಜಿಲ್ಲೆ ಸಜ್ಜಾಗಿದೆ ಎನ್ನುವುದು ಕ್ರೀಡಾಪ್ರೇಮಿಗಳ ನಂಬಿಕೆ.
ಈ ಕ್ರೀಡಾಕೂಟ ನಡೆಸಲು ಸುಮಾರು ಎರಡು ಕೋಟಿಗಳಷ್ಟು ಖರ್ಚು ತಗಲುತ್ತದೆ. ಕರ್ನಾಟಕ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿಯಷ್ಟು ಅನುದಾನವನ್ನು ನೀಡಿ ಕ್ರೀಡೆಗೆ ತನ್ನ ಪ್ರೋತ್ಸಾಹವನ್ನು ಪ್ರದರ್ಶಿಸಿದೆ. ಸುಮಾರು 700 ಕ್ರೀಡಾಪಟುಗಳು ರಾಷ್ಟ್ರದ ವಿವಿಧ ಭಾಗಗಳಿಂದ ಬರುವುದರಿಂದ ಈಗಾಗಲೇ ಮಂಗಳೂರಿನ ವಿವಿಧ ಹೊಟೇಲಿನ ಸುಮಾರು 600ರಷ್ಟು ಕೋಣೆಗಳನ್ನು ಜಿಲ್ಲಾಡಳಿತ ಬುಕ್ ಮಾಡಿದೆ. ಆಯಾ ಕ್ರೀಡಾಪಟುಗಳ ಅರ್ಹತೆಗೆ ತಕ್ಕಂತೆ ಎಸಿ, ನಾನ್ ಎ.ಸಿ. ಕೋಣೆಗಳನ್ನು ನೀಡಲು ಯೋಜಿಸಲಾಗಿದೆ. ಇನ್ನೂ ಕ್ರೀಡಾಪಟುಗಳು ಕೆಲವು ದಿನಗಳ ಮೊದಲೇ ಬರುವುದರಿಂದ ಅವರ ತರಬೇತಿ, ಆಹಾರ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಕ್ರೀಡಾಪಟುಗಳು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅದರ ವ್ಯವಸ್ಥೆಯನ್ನು ಕ್ರೀಡಾಂಗಣದ ಸುತ್ತಲೂ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.