ಹೌದು, ದೇವರ ನಾಡಿನಲ್ಲೀಗ ಕೆಂಪು ರಕ್ಕಸರದೇ ಅಟ್ಟಹಾಸ! ದೇವರುಗಳೆಲ್ಲಾ ಈ ರಕ್ಕಸರ ಮೇರೆ ಮೀರಿದ ಅಟ್ಟಹಾಸ, ಕ್ರೌರ್ಯಗಳಿಗೆ ಮೂಕಸಾಕ್ಷಿಗಳಾಗಿ ಮೌನದ ಮೊರೆಹೋಗಿದ್ದಾರೆ. ದೇವರೇ ಮೌನದ ಮೊರೆ ಹೋಗಿರುವಾಗ ಇನ್ನು ಅಲ್ಲಿನ ಹುಲುಮಾನವರು ಇನ್ನೇನು ತಾನೆ ಮಾಡಿಯಾರು? ದೇವರ ನಾಡಿನಲ್ಲಿ ಪ್ರಜ್ಞಾವಂತ ಮನಸ್ಸುಗಳು ಹಲವು ಇದ್ದರೂ ಆ ಮನಸ್ಸುಗಳೇಕೋ ಪ್ರಜ್ಞಾವಂತಿಕೆ ಮೆರೆಯುವಷ್ಟು ಸ್ವಾಭಿಮಾನವನ್ನೇ ತೋರುತ್ತಿಲ್ಲ. ಈಗ ಅಲ್ಲುಳಿದಿರುವುದು ಎಲ್ಲೆಡೆ ಹೆಪ್ಪುಗಟ್ಟಿದ ಭಯಭೀತ ವಾತಾವರಣ.
ಒಂದು ರಾಜ್ಯದಲ್ಲಿ ಪಕ್ಷವೊಂದು ಬಹುಮತದಿಂದ ಗೆದ್ದು ಆಡಳಿತ ಚುಕ್ಕಾಣಿ ಹಿಡಿದಾಗ ಆ ಪಕ್ಷದ ಕಾರ್ಯಕರ್ತರು ಆಚರಿಸುವ ವಿಜಯೋತ್ಸವ ಹೇಗಿರುತ್ತದೆ ಎಂಬುದು ನಿಮಗೆ ತಿಳಿಯದ ವಿಷಯವಲ್ಲ. ಎಲ್ಲೆಡೆ ಉತ್ಸಾಹದ ವಾತಾವರಣ, ಪಕ್ಷದ ಧ್ವಜಗಳ ಹಾರಾಟ, ಪಕ್ಷಕ್ಕೆ ಜೈಕಾರ, ಗೆದ್ದವರನ್ನು ಹಾರಹಾಕಿ, ಕುಂಕುಮ ಹಚ್ಚಿ ಮೆರವಣಿಗೆ ನಡೆಸುವ ದೃಶ್ಯಗಳು ಸಾಮಾನ್ಯ. ಮೊನ್ನೆ ಅಸ್ಸಾಂನಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೇರಿದಾಗಲೂ ಇಂತಹದೇ ದೃಶ್ಯ ಕಂಡುಬಂದಿತ್ತು. ಎಲ್ಲೆಡೆ ಆನಂದ, ಸಡಗರ, ಸಂಭ್ರಮ ಅಲ್ಲಿ ವ್ಯಕ್ತವಾಗಿತ್ತು. ಕೇರಳದಲ್ಲಿ ಈ ಬಾರಿ ಚುನಾವಣೆಯಲ್ಲಿ ಗೆದ್ದಿದ್ದು ಎಲ್ಡಿಎಫ್ ಮೈತ್ರಿಕೂಟ. ಅದು ನಿರೀಕ್ಷಿತವೂ ಆಗಿತ್ತು. ಆದರೆ ಅನಿರೀಕ್ಷಿತವಾದದ್ದೆಂದರೆ ಗೆದ್ದ ಬಳಿಕ ಅವರ ವಿಜಯೋತ್ಸವದ ವಿಚಿತ್ರ ವೈಖರಿ. ಅಂತಹ ವಿಜಯೋತ್ಸವ ಬಹುಶಃ ಎಲ್ಲೂ ನಡೆದಿರಲಿಕ್ಕಿಲ್ಲ! ಗೆದ್ದ ಅಭ್ಯರ್ಥಿಗಳ ಮೆರವಣಿಗೆ ಜೊತೆಗೆ ತಮ್ಮನ್ನು ವಿರೋಧಿಸಿದ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಮೇಲೆ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಏಕಾಏಕಿ ಹಲ್ಲೆ ನಡೆಸಿದರು. ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಮನೆಗಳಿಗೆ ದಾಳಿ ಇಟ್ಟರು. ಕೇರಳದೆಲ್ಲೆಡೆ ನಡೆದ ಸಿಪಿಎಂ ಕಾರ್ಯಕರ್ತರ ವಿಜಯೋತ್ಸವ ಇದಕ್ಕಿಂತ ಭಿನ್ನವಾಗಿರಲಿಲ್ಲ. ಎಲ್ಲೆಡೆ ನಡೆದ ದಾಳಿ ಹಾಗೂ ಹಿಂಸಾಚಾರ ಕೃತ್ಯಗಳು ಕಮ್ಯುನಿಸ್ಟರ ಕರಾಳ ಮುಖವನ್ನು ಅನಾವರಣಗೊಳಿಸಿದೆ. ವಿಜಯೋತ್ಸವದಲ್ಲಿ ಲಾಂಗು, ಮಚ್ಚುಗಳನ್ನು ಝಳಪಿಸಲಾಗಿದೆ. ವಿರೋಧಿಗಳ ಕೈಕಾಲ ಕತ್ತರಿಸಲಾಗಿದೆ. ಒಂದಿಬ್ಬರನ್ನು ಮೃತ್ಯುಲೋಕಕ್ಕೆ ಅಟ್ಟಲಾಗಿದೆ.
ಹೀಗೆ ವಿಜಯೋತ್ಸವದಲ್ಲಿ ಹಿಂಸಾಚಾರ ಎಗ್ಗಿಲ್ಲದೆ ನಡೆದಿದ್ದಕ್ಕೆ ಈಗ ಮುಖ್ಯಮಂತ್ರಿಯಾಗಿರುವ ಪಿನರಾಯಿ ವಿಜಯನ್ ಅವರ ವರ್ತನೆಯೇ ಬಹುಮುಖ್ಯ ಕಾರಣ. ವಿರೋಧಿಗಳನ್ನು ದೈಹಿಕವಾಗಿ ಸದೆಬಡಿಯಬೇಕು ಎಂಬುದೇ ವಿಜಯನ್ ಸೂತ್ರ. ಅವರು ಹಿಂದಿನಿಂದಲೂ ಮಾಡಿದ್ದು ಇದೇ ರೀತಿ. ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜ್ಯದ ಹಲವೆಡೆ, ಅದರಲ್ಲೂ ಮುಖ್ಯವಾಗಿ ಕಮ್ಯುನಿಸ್ಟರ ಭದ್ರಕೋಟೆ ಕಣ್ಣೂರು ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಹಿಂಸಾಚಾರ ತಾಂಡವವಾಡಿತು. ಕಮ್ಯುನಿಸ್ಟರ ಭದ್ರಕೋಟೆಗಳಲ್ಲಿ ಅವರದೇ ಆದ ಸಾಕಷ್ಟು ‘ಪಾರ್ಟಿ ವಿಲೇಜ್’ಗಳಿವೆ. ಈ ವಿಲೇಜ್ಗಳಿಗೆ ಅನ್ಯ ಪಕ್ಷದವರು ಅಪ್ಪಿತಪ್ಪಿಯೂ ಕಾಲಿಡುವಂತಿಲ್ಲ. ಅಕಸ್ಮಾತ್ ಅಲ್ಲಿಗೆ ತೆರಳಿ ಇತರ ಪಕ್ಷಗಳು ತಮ್ಮ ಪ್ರಚಾರ ನಡೆಸಿದರೆ ಅವರಿಗೆ ಸಾವೇ ಗತಿ. ಆದರೆ ಇಂತಹ ‘ಪಾರ್ಟಿ ವಿಲೇಜ್’ಗಳಲ್ಲೂ ಬಿಜೆಪಿ ಧೈರ್ಯದಿಂದ ಪಕ್ಷದ ಪರವಾಗಿ ಈ ಬಾರಿ ಪ್ರಚಾರ ನಡೆಸಿತು. ಕಣ್ಣೂರಿನ ಮುಝಕುನ್ನು ಪಂಚಾಯತ್ ಅಂತಹ ಒಂದು ಕಮ್ಯುನಿಸ್ಟರ ಪಾರ್ಟಿ ವಿಲೇಜ್. ಅಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಎರಡು ಕಡೆ ಗೆದ್ದಿತ್ತು. ಅಷ್ಟೇ ಅಲ್ಲ, ಹಲವೆಡೆ ಎರಡನೇ ಪಕ್ಷವಾಗಿ ಹೊರಹೊಮ್ಮಿತ್ತು. ಇದು ಕಮ್ಯುನಿಸ್ಟರಿಗೆ ಸಹಿಸಲಾಗದ ಆಘಾತವೇ ಆಗಿತ್ತು. ಅದಕ್ಕಾಗಿಯೇ ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್ಡಿಎಫ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೇ ೩೦ರಂದು ಸಿಪಿಎಂ ಗೂಂಡಾಗಳು ಅಲ್ಲಿಗೆ ತೆರಳಿ ಬಿಜೆಪಿ ಕಾರ್ಯಕರ್ತ ರಾಹುಲ್ ಅವರ ಮನೆಯ ಮೇಲೆ ದಾಳಿ ನಡೆಸಿದರು. ರಾಹುಲ್ ಅವರ ಪತ್ನಿ ರಮ್ಯ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿ ಸಾಕಷ್ಟು ಮತಗಳನ್ನು ಪಡೆದಿದ್ದರು. ಸಿಪಿಎಂ ಗೂಂಡಾಗಳು ದಾಳಿ ನಡೆಸಿದಾಗ ರಾಹುಲ್ ಮನೆಯಲ್ಲಿರಲಿಲ್ಲ. ಅವರ ಏಳು ವರ್ಷದ ಮಗ ಕಾರ್ತಿಕ್ ಅಲ್ಲೇ ಆಟವಾಡುತ್ತಿದ್ದ. ಆತನಿನ್ನೂ 2ನೇ ತರಗತಿಯ ಪುಟ್ಟ ಬಾಲಕ. ರಾಹುಲ್ ಸಿಗಲಿಲ್ಲ ಎಂಬ ಸಿಟ್ಟಿಗೆ ಗೂಂಡಾಗಳು ಆಟವಾಡುತ್ತಿದ್ದ ಕಾರ್ತಿಕನನ್ನು ಹಿಡಿದು ಗೋಡೆಗೆ ಚಚ್ಚಿದರು ಹಾಗೂ ಆತನ ಎಡಗೈ ಮೇಲೆ ತೀವ್ರ ಹಲ್ಲೆನಡೆಸಿದರು. ಕಾರ್ತಿಕನ ಎಡಗೈ ಮುರಿದುಹೋಗಿದ್ದು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಮನೆಗೆ ಬಿಜೆಪಿಯ ಹಿರಿಯ ಶಾಸಕ ಓ ರಾಜಗೋಪಾಲನ್ ಹಾಗೂ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ತ್ರಿಶೂರ್ ಜಿಲ್ಲೆಯಲ್ಲಿ 33 ರ ಹರೆಯದ ಬಿಜೆಪಿ ಕಾರ್ಯಕರ್ತ ಪ್ರಮೋದ್ ಮೇಲೆ ಸಿಪಿಎಂ ಗೂಂಡಾಗಳು ದಾಳಿ ನಡೆಸಿ ಆತನನ್ನು ಸಾಯಿಸಿಯೇ ಬಿಟ್ಟಿದ್ದಾರೆ. ಆತ ಬಿಜೆಪಿ ಕಾರ್ಯಕರ್ತನಾಗಿದ್ದೇ ದೊಡ್ಡ ಅಪರಾಧವಾಗಿತ್ತು! ಕೈಯಪ್ಪಮಂಗಳಂ ಕ್ಷೇತ್ರದಲ್ಲಿ ಗೆದ್ದ ಎಲ್ಡಿಎಫ್ ಅಭ್ಯರ್ಥಿ ಇ.ಟಿ. ಟೈಸನ್ ವಿಜಯೋತ್ಸವದ ಸಂದರ್ಭದಲ್ಲಿ ಸಿಪಿಎಂ ಗೂಂಡಾಗಳು ಬಿಜೆಪಿ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಚೆಂಡಾಡಿದರು. ಇಡವಿಲಂಗು ಎಂಬ ಊರಿನಲ್ಲಿ ನಡೆದ ಸಿಪಿಎಂ ವಿಜಯೋತ್ಸವದಲ್ಲಿ ಇನ್ನೊಬ್ಬ ಬಿಜೆಪಿ ಕಾರ್ಯಕರ್ತನನ್ನು ಹತ್ಯೆಮಾಡಲಾಯಿತು. ನೀಲೇಶ್ವರದಲ್ಲಿ ಚುನಾವಣೆಯ ದಿನದಂದು ಇಬ್ಬರು ಬಿಜೆಪಿ ಬೂತ್ ಏಜೆಂಟ್ಗಳ ಮೇಲೆ ತೀವ್ರ ಹಲ್ಲೆ ನಡೆಯಿತು. ಉತ್ತರ ಮಲಬಾರ್ ಜಿಲ್ಲೆಯಲ್ಲಂತೂ ಸಿಪಿಎಂ ಗೂಂಡಾಗಳು ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಚುನಾವಣಾ ಪ್ರಚಾರದ ವೇಳೆ ಎಸಗಿದ ಹಲ್ಲೆಗಳಿಗೆ ಲೆಕ್ಕವೇ ಇಲ್ಲ. ಧರ್ಮದಂ ಕ್ಷೇತ್ರದಲ್ಲಿ ಬಿಜೆಪಿ ಭಿತ್ತಿ ಪತ್ರಗಳನ್ನು ಹರಿದುಹಾಕಲಾಯಿತು. ಪೊಲೀಸರು ಮಾತ್ರ ಮೂಕ ಸಾಕ್ಷಿಗಳಾಗಿಯೇ ನಿಂತಿದ್ದರು. ಮತಗಳ ಎಣಿಕೆ ಮುಗಿಯುವ ಮುನ್ನವೇ ಬಿಜೆಪಿಯ ಬಾವುಟ, ಫ್ಲೆಕ್ಸ್ ಹಾಗೂ ಫಲಕಗಳನ್ನು ಸಿಪಿಎಂ ಗೂಂಡಾಗಳು ಎಲ್ಲೆಡೆ ಹರಿದು ಹಾಕಿದರು. ಅಷ್ಟೇ ಅಲ್ಲ, ಬಿಜೆಪಿ ಕಾರ್ಯಕರ್ತರಿಗೆ ಸೇರಿದ 23 ಮನೆಗಳು ಹಾಗೂ ೧೫ ಮೋಟಾರು ಬೈಕ್ಗಳನ್ನು ನಾಶಪಡಿಸಿದರು. ಜೊತೆಗೆ ಬಿಜೆಪಿ ಕಾಯಕರ್ತರ ಮನೆಯ ಬಾವಿಗಳಿಗೆ ಸೆಲೂನ್ನಲ್ಲಿ ಸಂಗ್ರಹಿಸಿಡಲಾಗಿದ್ದ ತಲೆಕೂದಲನ್ನು ತಂದು ಸುರಿದರು. ಈಗ ಆ ಬಾವಿಗಳನ್ನು ಸ್ವಚ್ಛಗೊಳಿಸುವುದು ನಿಜಕ್ಕೂ ಹರಸಾಹಸವಾಗಿದೆ.
ಇಷ್ಟೆಲ್ಲಾ ನಡೆದಿದ್ದರೂ ಸಿಪಿಎಂನ ಹಿರಿಯ ಮುಖಂಡರು ಹೇಳುವುದೇನು ಗೊತ್ತೆ? ‘ನಮಗೆ ಹಿಂಸೆಯಲ್ಲಿ ನಂಬಿಕೆಯೇ ಇಲ್ಲ. ನಾವು ಹಿಂಸಾಚಾರವನ್ನು ತಡೆಗಟ್ಟುವುದಕ್ಕೇ ಆದ್ಯತೆ ನೀಡುತ್ತಿದ್ದೇವೆ. ಕೇರಳದಲ್ಲಿ ಹಿಂಸಾಚಾರ ನಡೆದಿದ್ದರೆ ಅದಕ್ಕೆ ಆರೆಸ್ಸೆಸ್ ಕೈವಾಡವೇ ಕಾರಣ’. ನಿಜವಾಗಿ ಹಿಂಸಾಚಾರವೆಸಗಿದವರು ಯಾರೆಂಬುದು ಸ್ಥಳೀಯರಿಗೆ ಚೆನ್ನಾಗಿ ಗೊತ್ತು. ಆರೆಸ್ಸೆಸ್ ಕೇರಳದಲ್ಲಿ ಒಂದು ಪ್ರಚಂಡ ಶಕ್ತಿಯಾಗಿ ಬೆಳೆದಿರುವುದೇನೋ ಹೌದು. ಆದರೆ ಅದು ಹಿಂಸಾಚಾರದಲ್ಲಿ ಎಳ್ಳಷ್ಟೂ ನಂಬಿಕೆ ಇಟ್ಟಿಲ್ಲ. ಎಲ್ಲರೊಂದಿಗೆ ಶಾಂತಿ, ಸಮಾಧಾನ, ಸೌಹಾರ್ದಗಳ ಮೂಲಕವೇ ಸಂಘಟನೆಯನ್ನು ಕಟ್ಟಿ ಬೆಳೆಸಿದೆ. ಆದರೆ ಇದೇವೇಳೆ ಸಿಪಿಎಂ ಗೂಂಡಾಗಳ ಹಿಂಸಾಚಾರವನ್ನು ಸಹಿಸಿ ಸುಮ್ಮನೆಯೂ ಕುಳಿತಿಲ್ಲ. ಅಂತಹ ಗೂಂಡಾಗಳಿಗೆ ತಕ್ಕ ಶಾಸ್ತಿಯನ್ನು ಮಾಡಿದೆ. ಕೇರಳದಲ್ಲಿ ಇದುವರೆಗೂ ಸಂಘಪರಿವಾರದ 267 ಕ್ಕೂ ಹೆಚ್ಚು ಕಾರ್ಯಕರ್ತರು ಕೊಲೆಗೀಡಾಗಿದ್ದು, ಈ ಪೈಕಿ 232 ಮಂದಿ ಸಿಪಿಎಂ ಗೂಂಡಾಗಳಿಂದಲೇ ಹತ್ಯೆಗೀಡಾದವರು. ಹಲವರ ಕೈಗಳನ್ನು ಕತ್ತರಿಸಿಹಾಕಲಾಗಿದೆ, ಹಲವರ ಕಣ್ಣನ್ನು ಕೀಳಲಾಗಿದೆ, ಇನ್ನು ಕೆಲವರು ಶಾಶ್ವತ ಅಂಗವಿಕಲರಾಗಿದ್ದು ಈಗಲೂ ನರಳಾಡುತ್ತಿದ್ದಾರೆ. ಕಳೆದ ೫೦ ವರ್ಷಗಳ ಅವಧಿಯಲ್ಲಿ ಸಿಪಿಎಂ ಗೂಂಡಾಗಳು ನಡೆಸಿದ ಹಿಂಸಾಚಾರಕ್ಕೆ ಇವೆಲ್ಲ ಉಜ್ವಲ ನಿದರ್ಶನ.
ಸಿಪಿಎಂ ಅಧಿಕಾರಕ್ಕೆ ಬಂದರೆ ಯಾರೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಸಿಪಿಎಂ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ಎಳ್ಳಷ್ಟೂ ನಂಬಿಕೆಯಿಲ್ಲ. ಅದು ಹೇಳಿದ್ದೇ ಶಾಸನ, ಯಾರೊಂದಿಗೂ ಸಮಾಲೋಚಿಸುವ, ಸ್ನೇಹದಿಂದ ವರ್ತಿಸುವ ವ್ಯವಧಾನ ಅದಕ್ಕಿಲ್ಲ. ತನಗಾಗದವರನ್ನು ಮುಗಿಸುವುದೇ ಅದರ ಸರಳ ಸೂತ್ರ. ಇದಕ್ಕೊಂದು ನಿದರ್ಶನ ಇಲ್ಲಿದೆ. ಇತ್ತೀಚೆಗೆ ಭಾರತದ ಖ್ಯಾತ ಅಥ್ಲೀಟ್ ಅಂಜೂಬಾಬಿ ಜರ್ಜ್ ಈಗಿನ ಕೇರಳದ ಕ್ರೀಡಾ ಸಚಿವ ಇ.ಪಿ. ಜಯರಾಜನ್ ವಿರುದ್ಧ ದೂರೊಂದನ್ನು ನೀಡಿದ್ದಾರೆ. ತನಗೆ ಸಚಿವ ಜಯರಾಜನ್ ಅಪಮಾನ ಹಾಗೂ ಕಿರುಕುಳ ನೀಡಿದ್ದಾರೆ ಎಂದು ಆಕೆ ಮಾಧ್ಯಮಗಳೆದುರು ಅಳಲು ತೋಡಿಕೊಂಡಿದ್ದಾರೆ. ನಡೆದದ್ದಿಷ್ಟು: ಕೇರಳ ಕ್ರೀಡಾ ಕೌನ್ಸಿಲ್ ಅಧ್ಯಕ್ಷರಾಗಿರುವ ಅಂಜೂಬಾಬಿ, ಇಲಾಖೆಯ ಸದಸ್ಯರೊಂದಿಗೆ ನೂತನವಾಗಿ ನೇಮಕವಾಗಿರುವ ಕ್ರೀಡಾಸಚಿವ ಜಯರಾಜನ್ ಅವರನ್ನು ಭೇಟಿ ಮಾಡಿ ಅಭಿನಂದಿಸಲು ತೆರಳಿದ್ದರು. ಆಗ ಜಯರಾಜನ್, ‘ನೀವೆಲ್ಲಾ ಈ ಹಿಂದಿನ ಸರ್ಕಾರ ನೇಮಿಸಿದ ಸದಸ್ಯರು. ಹಾಗಾಗಿ ಬೇರೊಂದು ಪಕ್ಷದ ಬೆಂಬಲಿಗರು. ನಿಮ್ಮಿಂದ ಕ್ರೀಡಾವಲಯಕ್ಕೆ ಪ್ರಯೋಜನವಿಲ್ಲ’ ಎಂದು ಬೈದಾಡಿದರು. ಅಷ್ಟೇ ಅಲ್ಲ, ‘ಕೇರಳ ಕ್ರೀಡಾ ಕೌನ್ಸಿಲ್ನಲ್ಲಿರುವವರೆಲ್ಲರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೀರಿ’ ಎಂದು ಸುಖಾಸುಮ್ಮನೆ ಆರೋಪಿಸಿದರು. ಕ್ರೀಡಾ ಕೌನ್ಸಿಲ್ ಅಧ್ಯಕ್ಷೆಯಾಗಿ ನಾನು ಭ್ರಷ್ಟಾಚಾರ ಎಸಗಿದ್ದರೆ ಸಚಿವರು ಪರಿಶೀಲಿಸಲಿ ಎಂದು ಅಂಜೂಬಾಬಿ ಸವಾಲು ಹಾಕಿದ್ದಾರೆ.
ಕೇರಳದಲ್ಲಿ ಅಧಿಕಾರಾರೂಢ ಎಡರಂಗದ ಹಿಂಸಾಚಾರದ ಕುರಿತು ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಬಿಜೆಪಿ ನಿಯೋಗ ಇತ್ತೀಚೆಗೆ ರಾಷ್ಟ್ರಪತಿಗಳಿಗೆ ದೂರನ್ನು ಸಲ್ಲಿಸಿದೆ. ರಾಜ್ಯದಲ್ಲೀಗ ಶಾಂತಿ, ಸಮಾಧಾನ ಮರೀಚಿಕೆಯಾಗಿದೆ ಎಂದು ನಿಯೋಗ ಸ್ಪಷ್ಟಪಡಿಸಿದೆ. ಕಣ್ಣೂರು ಜಿಲ್ಲೆಯೊಂದರಲ್ಲೇ ವಿಧಾನಸಭೆ ಚುನಾವಣೆ ಬಳಿಕ ಸಿಪಿಎಂ ಕಾರ್ಯಕರ್ತರ ವಿರುದ್ಧ 55 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬುದು ಸಿಪಿಎಂನ ಬರ್ಬರತೆಗೆ ಸಾಕ್ಷಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಬಳಿಕ ಸಿಪಿಎಂ ಪಕ್ಷ ಸಭ್ಯ ನಡತೆ ತೋರಬಹುದೆಂದು ಪ್ರಜ್ಞಾವಂತರ ನಿರೀಕ್ಷೆಯಾಗಿತ್ತು. ಆದರೆ ಅದು ಸಂಪೂರ್ಣ ಹುಸಿಯಾಗಿರುವುದು ಈಗ ಕಂಡುಬಂದಿದೆ. ಸಿಪಿಎಂ ಇಂತಹ ಹಿಂಸಾಚಾರಕ್ಕೆ ಅಂತ್ಯ ಹಾಡದಿದ್ದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದು ಅನಿವಾರ್ಯವಾಗಲಿದೆ ಎಂದು ಕೇರಳದ ಆರೆಸ್ಸೆಸ್ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಯನ್ನು ಸಿಪಿಎಂ ಎಷ್ಟರಮಟ್ಟಿಗೆ ಗಂಭೀರವಾಗಿ ಪರಿಗಣಿಸಲಿದೆ ಎಂಬುದೇ ಈಗ ಉಳಿದಿರುವ ಪ್ರಶ್ನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.