ಬೆಳ್ತಂಗಡಿ : ಕಂದಾಯ ಇಲಾಖೆಯಲ್ಲಿನ ಅನೇಕ ಲೋಪದೋಷಗಳು, ಕಡತಗಳ ನಾಪತ್ತೆ, ಅಧಿಕಾರಿಗಳ ಅನಾಸಕ್ತಿ, ಲಂಚದಲ್ಲಿ ಆಸಕ್ತಿ ಇದು ಶನಿವಾರ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ನಡೆದ ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ನಡೆಸಿದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಕಂಡು ಬಂತು.
ಅರಣ್ಯಕ್ಕೆ ಸಂಬಂಧ ಪಟ್ಟ ಜಾಗ ಹಾಗು ಕದೀಂ ಜಾಗದ ಬಗ್ಗೆ ಸಮಸ್ಯೆ ಇದ್ದು ಇದರಿಂದ ಕಂದಾಯ ಇಲಾಖೆಗೆ ಬರುವ ದೂರುಗಳನ್ನು ನೀಡಲಾಯಿತು. ಕದೀಂ ಜಾಗ ಅರಣ್ಯದ್ದೋ ಅಥವಾ ಕಂದಾಯದ್ದೋ ಎಂದು ಇತ್ಯರ್ಥವಾಗುವವರಗೆ ಏನು ಮಾಡಲು ಸಾಧ್ಯವಿರದ ಬಗ್ಗೆ ಕಾರ್ಯದರ್ಶಿಯವರು ವಿವರಿಸಿದರು. ಜಾಗ ಬಗ್ಗೆ ಏಕವ್ಯಕ್ತಿ ಪ್ರಕರಣಗಳಿದ್ದಲ್ಲಿ ಸರ್ವೇ ನಡೆಸಿ ಕೂಡಲೇ ಇತ್ಯರ್ಥಗೊಳಿಸುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದರು.
ಅಕ್ರಮ ಸಕ್ರಮದ ವಿಚಾರದಲ್ಲಿ ಶಾಸಕರ ಗಮನಕ್ಕೆ ತರದೇ ತಹಸೀಲ್ದಾರರು, ಕಂದಾಯ ನಿರೀಕ್ಷಕರೇ ಸೇರಿ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದರ ಬಗ್ಗೆ ಶಾಸಕ ವಸಂತ ಬಂಗೇರ ಗಮನ ಸೆಳೆದಾಗ, ಕಾರ್ಯದರ್ಶಿಯವರು, ರಾಜ್ಯದಲ್ಲಿ ಅಕ್ರಮ ಸಕ್ರಮ ಬೈಠಕ್ ಮಾಡದ ನನ್ನನ್ನೂ ಸೇರಿದಂತೆ ಅನೇಕ ಶಾಸಕರಿದ್ದಾರೆ. ಆದರೆ ಬೆಳ್ತಂಗಡಿಯಲ್ಲಿ ಶಾಸಕರು ಪ್ರತಿ ಶನಿವಾರ ಆಸಕ್ತಿಯಿಂದ ಬೈಠಕ್ ನಡೆಸಿದರೂ ಅಧಿಕಾರಿಗಳು ಸ್ಪಂದಿಸುವುದೇ ಇಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
94ಸಿಯ ಸಮಸ್ಯೆಗಳೇ ಹೆಚ್ಚಾಗಿ ಕಂಡು ಬಂದವು. ಇದರ ಅನುಷ್ಠಾನದ ಹಂತದಲ್ಲಿ ಅಧಿಕಾರಿಗಳು ಲಂಚ ತೆಗೆದುಕೊಳ್ಳುತ್ತಿರುವುದರ ಬಗ್ಗೆಯೂ ಕಾರ್ಯದರ್ಶಿಯವರು ತರಾಟೆಗೆ ತೆಗೆದುಕೊಂಡರಲ್ಲದೆ ಈ ಬಗ್ಗೆ ದೂರು ಬಂದರೆ ಕೂಡಲೇ ಕ್ರಮ ಕೈಗೊಳ್ಳುವಂತೆ ಎಸಿಯವರಿಗೆ ಸೂಚಿಸಿದರು. ಇನ್ನು 94ಸಿಯ ಅರ್ಜಿಗಳನ್ನು ತಿರಸ್ಕೃತಗೊಳಿಸುವುದಿದ್ದರೆ ಶಾಸಕರನ್ನು ಕೇಳಿ ಮಾಡಬೇಕು. ತಾವಾಗಿಯೇ ಮಾಡುವುದು ಸರಿಯಲ್ಲ ಎಂದು ಕಾರ್ಯದರ್ಶಿಯವರು ಸೂಚಿಸಿದರು.
ಹಕ್ಕುಪತ್ರ ನೀಡುವುದರಲ್ಲಿ ಕಂದಾಯ ಇಲಾಖೆಯ ವೈಫಲ್ಯ ಕಾರ್ಯದರ್ಶಿಯವರ ಮುಂದೆ ಬಂತು. ಉಜಿರೆಯ ದೊಂಪದಪಲ್ಕೆ ನಿವಾಸಿ ಶಾಂತ ಅವರು, ಹಕ್ಕುಪತ್ರಕ್ಕಾಗಿ ತನ್ನಿಂದ ಚಲನ್ ಕಟ್ಟಿಸಲಾಗಿದೆ. ಆದರೆ ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು. ಈ ಬಗ್ಗೆ ಅಲ್ಲೇ ತನಿಖೆ ನಡೆದಾಗ ಇದರಲ್ಲಿ ಸಮಸ್ಯೆ ಇದೆ ಎಂದು ತಹಸೀಲ್ದಾರ್ ಹೇಳಿದಾಗ ಎಡಿಸಿ ಕುಮಾರ್ ಅವರು ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಜಾಗ ಮಂಜೂರಾತಿ ಮಾಡಿದ ಮೇಲೆ, ದುಡ್ಡು ಕಟ್ಟಿಸಿಕೊಂಡ ಮೇಲೆ ತಿರಸ್ಕರಿಸುವುದು ನ್ಯಾಯವಲ್ಲ. ತಪ್ಪಾಗಿದ್ದರೆ ಮತ್ತೆ ಸುಮೊಟೊ ಚಲಾಯಿಸಬಹುದು ಎಂದರು. ಬಳಿಕ ಸ್ಥಳದಲ್ಲಿಯೇ ಹಕ್ಕುಪತ್ರ ನೀಡಲಾಯಿತು. ಸೇರಿದ್ದ ಸಾರ್ವಜನಿಕರು ಈ ಕ್ರಮವನ್ನು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಡಿಸಿದರು.
ಮನೆಗೆ ಹೋಗುವ ರಸ್ತೆಯನ್ನು ಅಕ್ರಮವಾಗಿ ಆಕ್ರಮಿಸಿರುವ ಬಗ್ಗೆ, ತಾಲೂಕು ಕಚೇರಿಯಲ್ಲಿ ಕಡತ ನಾಪತ್ತೆಯಾಗಿರುವ ಬಗ್ಗೆ, ಪಹಣಿ ಪತ್ರಗಳಲ್ಲಿ ಬೇಜವಾಬ್ದಾರಿಯುತವಾಗಿ ಸಂಬಂಧಪಡದ ವಿಷಯಗಳನ್ನು ನಮೂದಿಸಿರುವ ಬಗ್ಗೆ ದೂರುಗಳು ಕಾರ್ಯದರ್ಶಿಯವರ ಮುಂದೆ ಬಂದವು. ಈ ಸಂದರ್ಭ ಹಕ್ಕುಪತ್ರಗಳನ್ನು ಕಾರ್ಯದರ್ಶಿಯವರು ಹಾಗು ಶಾಸಕರು ಹಸ್ತಾಂತರಿಸಿದರು.
ಶಾಸಕ ಕೆ. ವಸಂತ ಬಂಗೇರ, ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಎಸಿ ಡಾ| ರಾಜೇಂದ್ರ, ಡಿಡಿಎಲ್ಆರ್ ಶ್ರೀನಿವಾಸ್, ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನಮೂರ್ತಿ ಇದ್ದರು.
ದ.ಕ.ಜಿಲ್ಲೆಯಲ್ಲಿ 1,58,000 ಎಕರೆ ಜಾಗ ಡೀಮ್ಡ್ ಅರಣ್ಯವಿದ್ದು ಅದರಲ್ಲಿ 86,000 ಎಕರೆ ಜಾಗ ಕಂದಾಯ ಇಲಾಖೆಗೆ ಸೇರುತ್ತದೆ. ಇದರಲ್ಲಿ ಅರಣ್ಯವನ್ನು ಹೊರತು ಪಡಿಸಿ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದವರಿಗೆ ಹಾಗೂ ಪಂ. ನಿವೇಶನಕ್ಕಾಗಿ ಬಳಕೆಯಾಗಲಿದೆ. ಉಳಿದ 56,000 ಎಕರೆ ಜಾಗ ಡೀಮ್ಡ್ ಅರಣ್ಯವಾಗಿರುವ ಬಗ್ಗೆ ಕಾರ್ಯದರ್ಶಿಯವರು ಮಾಹಿತಿ ನೀಡಿದರು.
ಪ್ರಾರಂಭದಲ್ಲೇ ಅಕ್ರಮ ಸಕ್ರಮದ ರಿಜಿಸ್ಟ್ರ್ನ್ನು ತರಲು ಕಾರ್ಯದರ್ಶಿಯವರು ಅಧಿಕಾರಿಗಳಿಗೆ ಸೂಚಿಸಿದ್ದರೂ ಆದರೆ ಅದು ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಪ್ರತ್ಯಕ್ಷವಾಯಿತು.
94ಸಿ ಯಲ್ಲಿ ಅರ್ಜಿ ವಿಲೇವಾರಿಗೆ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಕುಕ್ಕೇಡಿ ಗ್ರಾಮಸ್ಥರು ಮಾಡಿದ ಆರೋಪದ ಹಿನ್ನಲೆಯಲ್ಲಿ ಇಲ್ಲಿನ ಗ್ರಾಮಕರಣಿನನ್ನು ಅಮಾನತುಗೊಳಿಸಿ, ತನಿಖೆ ನಡೆಸುವಂತೆ ಪುತ್ತೂರು ಎಸಿಯವರಿಗೆ ಪ್ರಮೋದ್ ಅವರು ಸೂಚಿಸಿದರು.
ತಾಲೂಕಿನಲ್ಲಿ 94ಸಿ ಅಡಿಯಲ್ಲಿ 11,000 ಅರ್ಜಿಗಳು ಬಂದಿದ್ದು ಇದರಲ್ಲಿ ೩೦೦೦ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಯೋಜನೆ ಬಂಗಾರದಂತಹ ಅವಕಾಶವನ್ನು ಸರಕಾರ ಸಾರ್ವಜನಿಕರಿಗೆ ನೀಡಿದೆ. ಇನ್ನೆಂದು ಇಂತಹ ಅವಕಾಶ ಸಿಗದು. ಅಧಿಕಾರಿಗಳು ಇದಕ್ಕೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು- ಪ್ರಮೋದ್ ಮಧ್ವರಾಜ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.