ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾಗಿರುವುದು ನರ್ಮ್ ಬಸ್ಸುಗಳು ೩೫. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಗುರುತಿಸಿರುವ ಮಾರ್ಗಗಳು 5. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜನರಿಂದ ಅಹವಾಲು ಕರೆದು ನಿಮ್ಮ ಬೇಡಿಕೆ ಸಲ್ಲಿಸಿ ಎಂದು ಕೊಟ್ಟ ಕೊನೆಯ ದಿನಾಂಕ ಎಪ್ರಿಲ್ 20. ಆದರೆ ಬಂದ ಪತ್ರಗಳು 1573. ಇಷ್ಟು ಮಾಹಿತಿ ಸಾಕು.
ಇದು ಕರ್ನಾಟಕದಲ್ಲಿಯೇ ಅತ್ಯಂತ ವ್ಯವಸ್ಥಿತ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ಬೆಂಗಳೂರಿನ ನಂತರದ ಸ್ಥಾನ ಇರುವ ಮಂಗಳೂರಿನ ಸಿಟಿ ಬಸ್ಸು ವ್ಯವಸ್ಥೆಯ ಪಕ್ಷಿ ನೋಟ. 1573 ಪತ್ರಗಳನ್ನು ನೋಡಿಯೇ ಜಿಲ್ಲಾಡಳಿತ ದಂಗಾಗಿದೆ. ಇದನ್ನು ಪರೀಶೀಲಿಸಿ ನಂತರ ಆ ಬಗ್ಗೆ ಚರ್ಚೆ ನಡೆದು ಬಳಿಕ ಯಾವ ರೂಟ್ಗೆ ಎಷ್ಟೆಷ್ಟು ಬಸ್ಸುಗಳನ್ನು ಹಾಕಬೇಕು ಎಂದು ನಿರ್ಧಾರವಾಗಲು ಇನ್ನು ಸಾಕಷ್ಟು ದಿನಗಳು ಬೇಕಾಗಲಿವೆ. ಬಹುಶ: ಇಂತಹುದೊಂದು ಸ್ಪಂದನೆಯನ್ನು ನಾಗರಿಕರಿಂದ ಜಿಲ್ಲಾಡಳಿತ ನಿರೀಕ್ಷಿಸಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದುದರಿಂದ ಎಪ್ರಿಲ್ 20 ರಂದು ನಿಗದಿಯಾಗಿದ್ದ ಆರ್ಟಿಎ ಸಭೆಯನ್ನು 22ಕ್ಕೆ ಮುಂದೂಡಲಾಗಿದೆ.
ಮಂಗಳೂರು ಮಹಾನಗರದ 20 ಕಿ.ಲೋ ಮೀಟರ್ ಅಂತರದಲ್ಲಿ ಕೆಲವು ರೂಟ್ಗಳಿಗೆ ಸಾಕಷ್ಟು ಬಸ್ ಸಂಚಾರದ ವ್ಯವಸ್ಥೆ ಇದೆ. ಇನ್ನು ಅನೇಕ ರೂಟ್ಗಳಲ್ಲಿ ಕಾಲಕಾಲಕ್ಕೆ ಬಸ್ ಸಂಚಾರ ಇರುವುದಿಲ್ಲ. ಈಗ ಸಾರಿಗೆ ಪ್ರಾಧಿಕಾರ ಗುರುತಿಸಬೇಕಾಗಿರುವುದು ಅಂತಹ ರೂಟ್ಗಳನ್ನು. ಸಾರಿಗೆ ವ್ಯವಸ್ಥೆಯನ್ನು ಪ್ರಾಧಿಕಾರ ಕಮರ್ಶಿಯಲ್ ದೃಷ್ಟಿಯಿಂದ ನೋಡಬಾರದು. ಇದು ಜನರ ಮೂಲಭೂತ ಅಗತ್ಯಗಳಲ್ಲಿ ಒಂದು. ಹಾಗಾದರೆ ಬಂದಿರುವ ಇಷ್ಟು ಅರ್ಜಿಗಳಲ್ಲಿ ಯಾರಿಗೆ ನ್ಯಾಯ ಕೊಡುವುದು ಎನ್ನುವ ಪ್ರಶ್ನೆ ಜಿಲ್ಲಾಡಳಿತದ ಮುಂದೆ ಇದೆ. ಉದಾಹರಣೆಗೆ ಮಂಗಳೂರಿನ ಹೊರವಲಯದ ಸುರತ್ಕಲ್ನ ಕಾನ, ತಡಂಬೈಲು, ಕಾಟಿಪಳ್ಳ, ಕೃಷ್ಣಾಪುರ ಹೀಗೆ ಅಷ್ಟು ಪ್ರದೇಶಗಳಿಂದ ಒಂದು ನೂರು ಅರ್ಜಿ ಬಂದಿದೆ ಅಂದುಕೊಳ್ಳಿ. ಆಗ ಸಾರಿಗೆ ಪ್ರಾಧಿಕಾರ ಅಲ್ಲಿನ ಜನ ದಿನಕ್ಕೆ ತಮ್ಮ ರೂಟ್ಗೆ 5 ಬಸ್ಸುಗಳನ್ನು ಕೇಳಿದರೆ ಆಗ ಅಳೆದು ತೂಗಿ ಒಂದು ಬಸ್ಸು ಕೊಡುವ ವ್ಯವಸ್ಥೆ ನಡೆಯಬಹುದು. ಅದೇ ರೀತಿಯಲ್ಲಿ ಮಂಗಳೂರಿನ ಮಂಗಳಾದೇವಿಯಿಂದ ಕಾರ್ಸ್ಟ್ರೀಟ್ ಮೂಲಕ ಹಾದು ಹೋಗಿ ಪಣಂಬೂರು ಬೀಚ್ ತನಕ ಸಾಕಷ್ಟು ಅರ್ಜಿಗಳು ಬಂದರೆ ಪ್ರವಾಸೋದ್ಯಮವನ್ನು ದೃಷ್ಟಿಯಲ್ಲಿಟ್ಟು ಒಂದು ಬಸ್ಸು ಸಿಗಬಹುದು. ಇನ್ನೂ ಶಕ್ತಿನಗರದ ಹೊರವಲಯದಿಂದ ಪಿ.ವಿಎಸ್, ಬಳ್ಳಾಲ್ಭಾಗ್ ಮೂಲಕ ಲೇಡಿಹಿಲ್ ತನಕ ಒಂದು ಬಸ್ಸಿನ ವ್ಯವಸ್ಥೆ ಮಾಡಿದರೆ ಆಗ ವಸತಿ ಹಾಗೂ ವಾಣಿಜ್ಯ ಎರಡು ಭಾಗದ ಜನರಿಗೆ ಅನುಕೂಲವಾಗುತ್ತದೆ. ಇಲ್ಲದೆ ಹೋದರೆ ಬಿಕರ್ನಕಟ್ಟೆ, ನಂತೂರು, ಜಯಶ್ರೀ ಗೇಟ್, ಕುಲಶೇಖರ, ಶಕ್ತಿನಗರದ ನಾಗರಿಕರು ಮತ್ತು ವಿದ್ಯಾರ್ಥಿಗಳು ಕೆನರಾ ಕಾಲೇಜು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಬರಲು ಎರಡು ಬಸ್ಸುಗಳನ್ನು ಬದಲಾಯಿಸಬೇಕಾಗುತ್ತದೆ.
ಮಂಗಳೂರು ಕಳೆದ ೨೦ ವರ್ಷಗಳಲ್ಲಿ ಸಾಕಷ್ಟು ಬೆಳೆದಿದೆ. ಹಾಗೇ ಜನರ ಜೀವನ ಗುಟಮಟ್ಟ ಕೂಡ ಬೆಳೆದಿದೆ. ಕಡಿಮೆ ಬಡ್ಡಿದರದಲ್ಲಿ ಸಿಗುತ್ತಿರುವ ದ್ವಿಚಕ್ರ ಮತ್ತು ಕಾರು ಲೋನ್ಗಳು ಮಂಗಳೂರಿನ ವಾಹನ ದಟ್ಟಣೆಯನ್ನು ಹೆಚ್ಚು ಮಾಡಿರಬಹುದು. ಆದರೆ ಜನರು ಸಿಟಿ ಬಸ್ಸುಗಳ ಮೇಲಿನ ತಮ್ಮ ಅವಲಂಬನೆಯನ್ನು ಕಡಿಮೆ ಮಾಡಿಲ್ಲ ಎನ್ನುವುದಕ್ಕೆ ಸಾರಿಗೆ ಪ್ರಾಧಿಕಾರಕ್ಕೆ ಬಂದಿರುವ ಅಹವಾಲುಗಳೇ ಸಾಕ್ಷಿ. ಎಪ್ರಿಲ್ 22 ರ ಸಭೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಆರ್ಟಿಎ ಸಭೆ ಈ ಗೋಜಲನ್ನು ಪರಿಹರಿಸಿ ಹೇಗೆ ಜನರಿಗೆ ನ್ಯಾಯ ಒದಗಿಸುತ್ತದೆ ಎನ್ನುವುದೇ ಕುತೂಹಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.