ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ ದಿವ್ಯಜ್ಯೊತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಲೀಲಾವತಿ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಬಾರಿಯ ತಾಲೂಕು ಪಂಚಾಯತಿನಲ್ಲಿ 26 ಸ್ಥಾನಗಳಿದ್ದು ಬಿಜೆಪಿ 14 ಸ್ಥಾನ ಹಾಗೂ ೧೨ ಸ್ಥಾನ ಕಾಂಗ್ರೇಸ್ ಪಡೆದುಕೊಂಡಿತ್ತು. ಬಿಜೆಪಿ ಬಹುಮತ ಗಳಿಸಿದ್ದರೂ ಮೀಸಲಾತಿಯ ಕಾರಣದಿಂದ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆಗೆ ಸ್ಪರ್ಧಿಸಲು ಅವಕಾಶವಿದ್ದ ಕಾರಣ ಏಕೈಕ ಸದಸ್ಯೆಯಾದ ಅರಸಿನಮಕ್ಕಿ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಸದಸ್ಯೆ ದಿವ್ಯಜ್ಯೋತಿ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿದ್ದು ಬಿಜೆಪಿಗೆ ಬಹುಮತ ಇದ್ದ ಕಾರಣ ನಡ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಸದಸ್ಯೆ ಲೀಲಾವತಿ ನಾಮಪತ್ರ ಸಲ್ಲಿಸಿದ್ದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ| ರಾಜೇಂದ್ರ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೆ ನಾಮಪತ್ರಗಳು ಸಲ್ಲಿಕೆಯಾಗಿದ್ದ ಕಾರಣ ಅಧ್ಯಕ್ಷೆಯಾಗಿ ದಿವ್ಯಜ್ಯೋತಿ ಹಾಗೂ ಉಪಾಧ್ಯಕ್ಷೆಯಾಗಿ ಲೀಲಾವತಿ ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು. ಈ ಸಂದರ್ಭ ತಹಶೀಲ್ದಾರ್ ಪ್ರಸನ್ನಮೂರ್ತಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಸೂರ್ಯನಾರಾಯಣ ಭಟ್ ಇದ್ದರು.
ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ. ವಸಂತ ಬಂಗೇರ ಅವರು, ಯಾವುದೇ ಪಕ್ಷ ಆದರೂ ಅಧಿಕಾರ ಸ್ವೀಕರಿಸಿದ ಬಳಿಕ ರಾಜಕೀಯ ಮಾಡುವುದು ಸರಿಯಲ್ಲ. ಅಭಿವೃದ್ದಿಯಲ್ಲಿ ರಾಜಕೀಯ ಬೇಡ. ಸಮಾನ ಮನಸ್ಕರಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಬೇಕು. ಅಧಿಕಾರ ಸ್ವೀಕರಿಸಿದ ಆಡಳಿತಕ್ಕೆ ಈಗ ನೀರಿನ ಸಮಸ್ಯೆಯನ್ನು ಬಗೆಹರಿಸುವಯತ್ತ ಗಮನ ಹರಿಸಬೇಕು. ತಾಲೂಕಿನ ಅಭಿವೃದ್ದಿಯಲ್ಲಿ ಎಲ್ಲರೂ ಕೈಜೋಡಿಸಿ ಎಂದರು. ನೂತನವಾಗಿ ೫ ವರ್ಷಗಳ ಅವಧಿಗೆ ಆಯ್ಕೆಯಾದ ಅಧ್ಯಕ್ಷೆ ದಿವ್ಯಜ್ಯೋತಿ ಹಾಗೂ ಉಪಾಧ್ಯಕ್ಷೆ ಲೀಲಾವತಿ ಅವರು ಸದಸ್ಯರ ಸಹಕಾರವನ್ನು ಕೋರಿದರು.
1995 ರಲ್ಲಿ 21 ತಾಪಂ ಕ್ಷೇತ್ರಗಳ ಚುನಾವಣೆಯಲ್ಲಿ 19 ಸ್ಥಾನ ಜ್ಯಾ. ಜನತಾದಳ, 2 ಸ್ಥಾನ ಬಿಜೆಪಿ ಪಡೆದಿತ್ತು. 2000ನೇ ಇಸವಿಯಲ್ಲಿ 23 ಸ್ಥಾನಗಳಲ್ಲಿ ಕಾಂಗ್ರೇಸ್ 16 ಸ್ಥಾನ, ಬಿಜೆಪಿ 4 ಸ್ಥಾನ, ಜನತಾದಳ 3 ಸ್ಥಾನ ಪಡೆದಿತ್ತು. 2005ರಲ್ಲಿ 24 ಸ್ಥಾನಗಳಲ್ಲಿ ಜನತಾದಳ 12 ಸ್ಥಾನ, ಬಿಜೆಪಿ 8 ಸ್ಥಾನ ಹಾಗೂ ಕಾಂಗ್ರೇಸ್ 4 ಸ್ಥಾನ ಪಡೆದಿತ್ತು. 2010 ರಲ್ಲಿ 24 ಸ್ಥಾನಗಳಲ್ಲಿ ಬಿಜೆಪಿ 19 ಸ್ಥಾನ ಹಾಗೂ ಕಾಂಗ್ರೇಸ್ 5 ಸ್ಥಾನ ಪಡೆದಿತ್ತು. ಈ ಬಾರಿ ಬಿಜೆಪಿ 14 ಸ್ಥಾನ ಹಾಗೂ 12 ಸ್ಥಾನ ಕಾಂಗ್ರೇಸ್ ಪಡೆದುಕೊಂಡಿದೆ.
20 ವರ್ಷದಲ್ಲಿ 2 ಮಂದಿ ಪ್ರಭಾರ ಅಧ್ಯಕ್ಷರು ಸೇರಿದಂತೆ 17 ಮಂದಿ ಅಧ್ಯಕ್ಷರಾಗಿದ್ದು ಅವರಲ್ಲಿ 7 ಮಂದಿ ಮಹಿಳೆಯರು. ಮೊದಲ ಅವಧಿಯಲ್ಲಿ ರಾಜಶ್ರೀ ಹೆಗ್ಡೆ, ಎರಡನೇ ಅವಧಿಯಲ್ಲಿ ವಾರಿಜ, ಲೀಲಾವತಿ, ಮೂರನೇ ಅವಧಿಯಲ್ಲಿ ತುಳಸಿ ಪೂಜಾರಿ, ತನುಜಾ ಶೇಖರ್, ನಾಲ್ಕನೇ ಅವಧಿಯಲ್ಲಿ ಮಮತಾ ಶೆಟ್ಟಿ, ಜಯಂತಿ ಪಾಲೇದು ಅಧ್ಯಕ್ಷರಾಗಿ ಆಳ್ವಿಕೆ ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.