ಅದು ಜನವರಿ 2ನೇ ವಾರ. ಅಸ್ಸಾಂನ ಲಖಿಮ್ಪುರ ಜಿಲ್ಲೆಯ ಧಕುಖಾನ ಗ್ರಾಮದ ಪೆಗು ಕುಟುಂಬದಲ್ಲಿ ಎಲ್ಲರಿಗೂ ಸಂಭ್ರಮದ ದಿನ ಎಲ್ಲರೂ ಖುಷಿಯಾಗಿದ್ದರು. ಮನೆಯ ಯಜಮಾನ ಪಬಿತ್ರಕುಮಾರ್ ಪೆಗು ಅವರಂತೂ ಸಂತಸದಿಂದ ಆ ಕಡೆ ಈ ಕಡೆ ಓಡಾಡುತ್ತಿದ್ದರು. ಆ ಸಂತಸಕ್ಕೆ ಕಾರಣವೂ ಇತ್ತು.
ಹರಿಯಾಣದ ಪಂಚ್ಕುಲ ಸೇನಾತರಬೇತಿ ಶಿಬಿರದಿಂದ ಆ ಕುಟುಂಬದ ಎರಡನೇ ಮಗಳು ಪಪ್ಪಿ ಫೋನ್ ಕರೆ ಮಾಡಿದ್ದಳು. ತನ್ನ ತರಬೇತಿ ಕೊನೆಗೂ ಮುಗಿದಿದೆ, ಸದ್ಯದಲ್ಲೇ ಮನೆಗೆ ಬರುತ್ತಿದ್ದೇನೆ ಎಂದು ಹೇಳಿದ್ದಳು. ಪಪ್ಪಿ ಮೊಟ್ಟಮೊದಲಬಾರಿಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಪಡೆಗೆ ಸೇರ್ಪಡೆಯಾಗಿದ್ದಳು. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಆಕೆ ಐಟಿಬಿಪಿಗೆ ಆಯ್ಕೆಯಾಗುತ್ತಾಳೆಂದು ಯಾರೂ ಕೂಡ ಎಣಿಸಿರಲಿಲ್ಲ. ಪಬಿತ್ರಕುಮಾರ್ ಅವರ ನಾಲ್ಕು ಮಂದಿ ಹೆಣ್ಣುಮಕ್ಕಳಲ್ಲಿ ಪಪ್ಪಿ ಇಂಡೋ-ಚೈನಾ ಗಡಿ ಕಾಯುವ ಪಡೆಗೆ ಸೇರಿದ್ದು ಆ ಇಡೀ ಕುಟುಂಬಕ್ಕೆ ಸಂತಸದ ವಿಷಯವಾಗಿತ್ತು.
ಅದು 44 ವಾರಗಳ ದೀರ್ಘ ತರಬೇತಿ. ಹರಿಯಾಣದ ಪಂಚ್ಕುಲದಲ್ಲಿ 500 ಮಂದಿ ಯುವತಿಯರು ಈ ತರಬೇತಿಯನ್ನು ಮುಗಿಸಿ ಐಟಿಬಿಪಿಗೆ ಆಯ್ಕೆಯಾಗಿದ್ದರು. ಐಟಿಬಿಪಿಯ ಮೊಟ್ಟ ಮೊದಲ ಮಹಿಳಾ ಕಮಾಂಡೋ ಘಟಕ ಇದು. ಇದುವರೆಗೆ ಪುರುಷರು ಮಾತ್ರ ಐಟಿಬಿಪಿ ಪಡೆಯಲ್ಲಿ ಇರುತ್ತಿದ್ದರು. ಮೊದಲಬಾರಿಗೆ ಮಹಿಳಾ ಘಟಕ ಕೂಡ ಸೇರಿರುವುದು ಮಹಿಳೆಯರು ಅಬಲೆಯರಲ್ಲ, ಅವರು ಕೇವಲ ತೊಟ್ಟಿಲು ತೂಗುವುದಕ್ಕಷ್ಟೇ ಸೀಮಿತರಲ್ಲ. ಮನಸ್ಸು ಮಾಡಿದರೆ ತೊಟ್ಟಿಲು ತೂಗುವ ಕೈ ಗನ್ ಕೂಡ ಹಿಡಿಯಬಲ್ಲದು ಎಂಬುದಕ್ಕೆ ನಿದರ್ಶನ. ಈ ಮಹಿಳೆಯರು ಕ್ಲಿಷ್ಟಕರವಾದ ಐಟಿಬಿಪಿ ಸೈನಿಕವೃತ್ತಿಯನ್ನೇ ಏಕೆ ಆರಿಸಿಕೊಂಡರು? ಮನಸ್ಸು ಮಾಡಿದ್ದರೆ ಅವರಿಗೆ ಬೇರೆ ಯಾವುದಾದರೂ ಉದ್ಯೋಗ ಸಿಗುತ್ತಿತ್ತು. ನೋಡಲು ಸುಂದರ ವದನೆಯರಾದ ಈ ಯುವತಿಯರು ಎಲ್ಲಾ ಬಿಟ್ಟು ಅತ್ಯಂತ ಕಡಿಮೆ ಶೂನ್ಯ ಉಷ್ಣತೆಯಿರುವ, ಬಿಸಿಲು ಚಳಿ ಮಳೆ ಗಾಳಿಯೆನ್ನದೆ ಎಲ್ಲ ಬಗೆಯ ಹವಾಮಾನಕ್ಕೂ ಒಗ್ಗಿಕೊಳ್ಳುವ, ಯಾವುದೇ ಆಕರ್ಷಣೆಯಿರದ ಈ ಹುದ್ದೆಯನ್ನೇ ಏಕೆ ಅರಿಸಿಕೊಂಡರು? ಅದಕ್ಕೆ ಒಂದೇ ಉತ್ತರ – ಮಾತೃಭೂಮಿಯ ಬಗ್ಗೆ ಅವರಿಗಿರುವ ಅಸೀಮ ನಿಷ್ಠೆ ಹಾಗೂಬದ್ಧತೆ. ತರಬೇತಿ ಪಡೆದ 500 ಮಂದಿಯ ಪೈಕಿ 300 ಯುವತಿಯರನ್ನು 3488 ಕಿ.ಮೀ. ವ್ಯಾಪ್ತಿಯ ಇಂಡೋ-ಚೈನಾ ಗಡಿ ಪ್ರದೇಶದಲ್ಲಿ ಅಹರ್ನಿಶಿ ಕಾವಲು ಕಾಯುವ ಕೆಲಸಕ್ಕೆ ನೇಮಿಸಲಾಗಿದೆ. ಇದೇನೂ ಸಣ್ಣ ಕೆಲಸವಲ್ಲ. ಸ್ವಲ್ಪ ಹೆಚ್ಚುಕಡಿಮೆಯಾದರೂ ಪ್ರಾಣಕ್ಕೆ ಕುತ್ತು ಖಚಿತ. ಆಯ್ಕೆಯಾಗಿರುವ ಈ 300 ಮಂದಿ ಯುವತಿಯರಿಗಂತೂ ಅತೀವ ಹೆಮ್ಮೆ. ಐಟಿಬಿಪಿ ಸಮವಸ್ತ್ರ ಧರಿಸುವುದೇ ನಮಗೊಂದು ಹೆಮ್ಮೆಯ, ಗೌರವದ ವಿಷಯ. ದೈತ್ಯಾಕಾರದ ಹಿಮಾಲಯ ಪರ್ವತಗಳು ನಮ್ಮ ಧೈರ್ಯ ಮತ್ತು ಬದ್ಧತೆಯನ್ನು ಖಂಡಿತ ಅಲುಗಾಡಿಸಲಾರವು ಎಂದು ಧೈರ್ಯದಿಂದ ಹೇಳುತ್ತಾರೆ.
ಇಂಡೋ-ಚೈನಾ ಗಡಿಯಲ್ಲಿ ಕಾವಲು ಕಾಯುವುದು ಅತ್ಯಂತ ಕಠಿಣ ಕೆಲಸ. ಹಿಮಾಲಯದ ಗಡಿಯಲ್ಲಿ ಕೆಲವು ಕಡೆ 8,000 ದಿಂದ 14,000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ. ಉಸಿರಾಟ ತುಂಬಾ ಕಷ್ಟ. ಆಮ್ಲಜನಕದ ಕೊರತೆ ಹೇಳತೀರದು. ಇವೆಲ್ಲಾ ಗೊತ್ತಿದ್ದರೂ ಈಗ ಆಯ್ಕೆಯಾಗಿರುವ ಈ ಯುವತಿಯರ ಮೊಗದಲ್ಲಿ ಸಂತಸ ಉಕ್ಕಿಹರಿದಿದೆ. ಹಾಪುರದ ದೀಪಿಕಾ ತ್ಯಾಗಿಗೆ ಶೂನ್ಯ ಡಿಗ್ರಿ ಉಷ್ಣತೆಯಿರುವ ಪ್ರದೇಶದಲ್ಲಿ ಕೆಲಸ ಮಾಡಲು ಕಷ್ಟವಲ್ಲವೆ ಎಂದು ಪ್ರಶ್ನಿಸಿದರೆ ಆಕೆ ಹೇಳುವುದೇನು ಗೊತ್ತೆ: ‘ನಮಗದರ ಚಿಂತೆಯಿಲ್ಲ. ನಾವೇನೂ ದುರ್ಬಲ ವ್ಯಕ್ತಿಗಳಲ್ಲ. ದೇಶಕ್ಕಾಗಿ ಎಂತಹದೇ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬಲ್ಲೆವು. ಹಿಮಾಚ್ಛಾದಿತ ಪರ್ವತಗಳು ನಮ್ಮ ಧೈರ್ಯ ಹಾಗು ಬದ್ಧತೆಯನ್ನು ಎಂದಿಗೂ ಕಸಿಯಲಾರವು.’ ದೀಪಿಕಾಳ ಜೊತೆಗಾರರು ಬೇರೆ ಬೇರೆ ಉದ್ಯೋಗಕ್ಕೆ ಸೇರಿದ್ದಾರೆ. ಸಂತೋಷವಾಗಿದ್ದಾರೆ. ಆದರೆ ದೀಪಿಕಾಗೆ ಇದರಿಂದೇನೂ ಚಿಂತೆಯಿಲ್ಲ. ಐಟಿಬಿಪಿ ತರಬೇತಿಗೆ ಕರೆಬಂದ ಕೂಡಲೇ ಆಕೆ ತನ್ನ ತಂದೆತಾಯಿಗಳ ಆಶೀರ್ವಾದ ಪಡೆದು ಹೊರಟೇ ಬಿಟ್ಟಳು. ಆಕೆಯ ಗ್ರಾಮದಲ್ಲಿ ಸೈನ್ಯಕ್ಕೆ ಸೇರಿದ ಮೊದಲ ಮಹಿಳೆ ಎಂಬ ಮೆಚ್ಚುಗೆ ಈಗ ಎಲ್ಲರಿಂದ ವ್ಯಕ್ತವಾಗಿದೆ. ದೀಪಿಕಾಳ ತಂದೆಗೆ ಸಂತೋಷವಾಗಿದ್ದರೂ ತಾಯಿಗೆ ಕಂಚ ಬೇಸರ. ಮಗಳು ಮನೆಯಿಂದ ಬಲುದೂರ ಹೋಗುತ್ತಿದ್ದಾಳಲ್ಲ ಎಂಬ ಚಿಂತೆ. ಆದರೆ ತನ್ನ ತಾಯಿ ನಿಧಾನವಾಗಿ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲಳು ಎನ್ನುತ್ತಾಳೆ ದೀಪಿಕಾ.
ತರಬೇತಿಯ ಅವಧಿಯಲ್ಲಿ ಈ ಯುವತಿಯರು ಪಟ್ಟ ಪಾಡು ಅಷ್ಟಿಷ್ಟಲ್ಲ. ಅಸಹನೀಯ ವಾತಾವರಣ, ಸುತ್ತಲೂ ದೈತ್ಯಾಕಾರದ ಪರ್ವತಗಳು, ಅತ್ಯಂತ ಕಡಿಮೆ ಉಷ್ಣತೆ, ಆಮ್ಲಜನಕದ ಕೊರತೆಯಂತೂ ಹೇಳತೀರದು. ಚೈನಾ ಗಡಿಪ್ರದೇಶದಲ್ಲೇ ಇವರಿಗೆ ತರಬೇತಿ. ಕೆಲವು ಬಾರಿ ಗಂಟೆಗಟ್ಟಲೆ ಮಳೆಯಲ್ಲೇ ನೆನೆಯಬೇಕಾದ ಸ್ಥಿತಿ. ಬಾಯಾರಿಕೆಯಾದರೆ ಕುಡಿಯಲು ಅಪ್ಪಿತಪ್ಪಿಯೂ ಬಿಸ್ಲೇರಿ ನೀರು ಸಿಗುತ್ತಿರಲಿಲ್ಲ. ಅವರಿಗೆ ಸಿಗುತ್ತಿದ್ದುದು ಕೊಳಚೆ ನೀರು! ಹೀಗೇಕೆಂದು ಪ್ರಶ್ನಿಸುವಂತಿಲ್ಲ. ಅದು ತರಬೇತಿ ಅವಧಿಯಲ್ಲಿರುವ ನಿಯಮಗಳು. ಗಡಿ ಭದ್ರತಾ ಪಡೆಗೆ ಆಯ್ಕೆಯಾಗುವ ಯುವಕರು ಅಥವಾ ಯುವತಿಯರು ಎಂತಹದೇ ಕಠಿಣ ಪರಿಸ್ಥಿತಿ ಎದುರಿಸಲು ಸಜ್ಜಾಗಿರಬೇಕು ಎಂಬುದಕ್ಕಾಗಿ ಇಂತಹ ಅತ್ಯಂತ ಕಠಿಣ ತರಬೇತಿ ನೀಡಲಾಗುತ್ತದೆ.
ಉತ್ತರಾಖಂಡಕ್ಕೆ ಸಮೀಪವಿರುವ ಮಾನಾ ಎಂಬ ಚೈನಾ ಗಡಿಪ್ರದೇಶ ಕಾಯುವುದು ಸುಲಭದ ಕೆಲಸವೇನಲ್ಲ. ಮಾನಾ ಭಾರತದ ಕೊನೆಯ ಹಾಗೂ ಚೀನಾಕ್ಕೆ ತಾಗಿರುವ ಒಂದು ಹಳ್ಳಿ. ಉತ್ತರಾಖಂಡದ ಕೊಟ್ಟಕೊನೆಯ ಹಳ್ಳಿಯೂ ಹೌದು. ಇಲ್ಲಿ ಐಟಿಬಿಪಿಗೆ ಆಯ್ಕೆಯಾದ 500 ಮಂದಿ ಯುವತಿಯರನ್ನು ಗಡಿಕಾವಲಿಗೆ ನೇಮಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಕಳೆದ ಜನವರಿ ತಿಂಗಳಿನಲ್ಲಿ ತರಬೇತಿ ಮುಗಿಸಿ ಆಯ್ಕೆಯಾಗಿರುವವರು. ಈ ಪೈಕಿ ಉತ್ತರಾಖಂಡದಿಂದಲೇ 97 ಮಂದಿ ಇದ್ದಾರೆ. ಹಿಮಾಚಲ ಪ್ರದೇಶದಿಂದ 10, ಬಿಹಾರದಿಂದ 51, ಹರಿಯಾಣಾದಿಂದ 11. ರಾಜಸ್ಥಾನದಿಂದ 22, ಉತ್ತರಪ್ರದೇಶದಿಂದ 63 ಹಾಗು ಮಹಾರಾಷ್ಟ್ರದಿಂದ 35 ಮಂದಿ ಐಟಿಬಿಪಿ ಪಡೆಯಲ್ಲಿದ್ದಾರೆ. ಇದಲ್ಲದೆ ಪಂಜಾಬ್ನಿಂದ 11, ದೆಹಲಿ ಹಾಗು ಆಂಧ್ರದಿಂದ ತಲಾ 1, ಅಸ್ಸಾಂನಿಂದ 35, ಛತ್ತೀಸ್ಗಡದಿಂದ 6, ಗುಜರಾತ್ನಿಂದ 21, ಜಾರ್ಖಡ್ನಿಂದ 26, ಜಮ್ಮು ಮತ್ತು ಕಾಶ್ಮೀರದಿಂದ 3. ಆದರೆ ನಮ್ಮ ಕರ್ನಾಟಕದಿಂದ ಒಬ್ಬರೂ ಇಲ್ಲ. ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ ಮುಂತಾದ ವೀರ ವನಿತೆಯರು ಹುಟ್ಟಿದ ನಾಡಿನಲ್ಲಿ ಆ ಪರಂಪರೆಯನ್ನು ಮುಂದುವರೆಸುವ, ಕೈಯಲ್ಲಿ ಗನ್ಹಿಡಿಯುವ ನಾರಿಯರೇ ಇಲ್ಲವೆಂದರೆ ಏನೆನ್ನೋಣ.
ಐಟಿಬಿಪಿಗೆ ಆಯ್ಕೆಯಾಗಿರುವ ಈ ಎಲ್ಲ ಯುವತಿಯರು ಸಾಮಾನ್ಯ ಕುಟುಂಬಕ್ಕೆ ಸೇರಿದವರು. ಅವರು ಯಾರೂ ಕೂಡ ಶ್ರೀಮಂತರಲ್ಲ. ಪಂಜಾಬ್ನ ಮೋಗಾದಿಂದ ಆಯ್ಕೆಯಾಗಿರುವ ಅಮನ್ದೀಪ್ ಕೌರ್ ಸಾಮಾನ್ಯ ಕುಟುಂಬಕ್ಕೆ ಸೇರಿದವಳು. ಆಕೆಯ ತಂದೆ ಸಣ್ಣದೊಂದು ಮೋಟಾರು ವಾಹನ ಗ್ಯಾರೇಜ್ ನಡೆಸುತ್ತಿದ್ದಾರೆ. ಆಕೆ ಬಾಲ್ಯದಿಂದಲೇ ಸೈನಿಕ ಸಮವಸ್ತ್ರಕ್ಕೆ ಆಕರ್ಷಿತಳಾಗಿದ್ದಳು. ಆಕೆಯ ಕುಟುಂಬದಲ್ಲಿ ಈ ಹಿಂದೆ ಯಾರೊಬ್ಬರೂ ಮಿಲಿಟರಿಗೆ ಸೇರಿರಲಿಲ್ಲ. ಆದರೂ ಆಕೆ ಧೈರ್ಯ ಮಾಡಿ ಸೈನ್ಯಕ್ಕೆ ಸೇರಿದ್ದಾಳೆ. ಈಗ ಆಕೆಯನ್ನು ದೂರದ ಲಡಾಖ್ ಗಡಿ ಪ್ರದೇಶಕ್ಕೆ ನಿಯುಕ್ತಿಗೊಳಿಸಲಾಗಿದೆ. ಅಲ್ಲಿ ಉಸಿರಾಟ ಬಲು ಕಷ್ಟ. ಅದು ಅವರ ತಂದೆತಾಯಿಯರಿಗೂ ಗೊತ್ತು. ಸ್ವಲ್ಪ ಮಟ್ಟಿಗೆ ಈ ಬಗ್ಗೆ ಅವರಿಗೆ ಚಿಂತೆಯೂ ಇದೆ. ಆದರೆ ಅಮನ್ದೀಪ್ಗೆ ಮಾತ್ರ ಯಾವ ಚಿಂತೆಯೂ ಕಾಡುತ್ತಿಲ್ಲ. ‘ನಮಗೆಲ್ಲಾ ಅತ್ಯುತ್ತಮ ತರಬೇತಿ ದೊರಕಿರುವಾಗ ಕೆಲಸ ಮಾಡಲು ಯಾವ ಪ್ರದೇಶವಾದರೇನು? ನಾವು ಯಾವುದಕ್ಕೂ ಹೆದರುವುದಿಲ್ಲ. ಹೆದರಿಕೆ ಎನ್ನುವುದು ನನ್ನ ಜಾಯಮಾನದಲ್ಲೇ ಇಲ್ಲ. ದೇಶದ ರಕ್ಷಣೆಗಾಗಿ ನಿರಂತರ ಜಾಗರೂಕತೆಯಿಂದ ಪಹರೆ ಕಾಯುತ್ತಿರುವಾಗ ಯಾವುದೇ ಹೆದರಿಕೆ ನನಗಾಗದು’ ಎಂದು ಧೈರ್ಯದಿಂದ ಆಕೆ ಹೇಳುತ್ತಾಳೆ. ಭಾರತಮಾತೆಯ ಪುತ್ರಿಯರಿಗೇ ಇಷ್ಟೊಂದು ಧೈರ್ಯವಿರುವಾಗ ಗಡಿಯಲ್ಲಿ ಶತ್ರುಗಳು ಭಾರತದ ವಿರುದ್ಧ ಒಳಸಂಚು ನಡೆಸುವ ಸಾಹಸ ಹೇಗೆ ಮಾಡಿಯಾರು?
ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಿಂದ ಆಯ್ಕೆಯಾಗಿರುವ ಅನುಶ್ರೀ ಸಾಮಾನ್ಯ ಕುಟುಂಬಕ್ಕೆ ಸೇರಿದ ಹೆಣ್ಣುಮಗಳು. ಶ್ರೀನಿವಾಸ್ ಮತ್ತು ಮಮತಾ ಪಾಠಕ್ ದಂಪತಿಗಳ ಮುದ್ದಿನ ಮಗಳು. ಆಕೆಯನ್ನು ನೋಡಿದರೆ ಈಕೆ ಅತ್ಯಂತ ಕಠಿಣ ಸೈನಿಕ ತರಬೇತಿ ಪಡೆದಿದ್ದಾಳೆ ಎಂದೆನಿಸುವುದೇ ಇಲ್ಲ. ಆಧುನಿಕ ಯುದ್ಧೋಪಕರಣಗಳನ್ನು ಬಳಸುವುದರಲ್ಲಿ ನಿಷ್ಣಾತಳು. ಜೊತೆಗೆ ಶತ್ರುಗಳನ್ನು ನಿಯಂತ್ರಿಸುವಲ್ಲಿ ಪರಿಣತಿ ಪಡೆದಿದ್ದಾಳೆ. ಸೈನಿಕ ತರಬೇತಿ ಪಡೆಯುವುದಕ್ಕೆ ಮುನ್ನ ಅನುಶ್ರೀಗೆ ಆಯುಧಗಳನ್ನು ಕಂಡರೆ ತುಂಬಾ ಭಯ ಇತ್ತು. ಆದರೆ ತರಬೇತಿ ಪಡೆದ ಬಳಿಕ ಈಗ ಆಕೆಗೆ ಆ ಆಯುಧಗಳೆಂದರೆ ಆಟಿಕೆ ಇದ್ದಂತೆ. ಅವುಗಳನ್ನು ಹೇಗೆ ಬಳಸಬೇಕು ಎಂಬುದು ಕರತಲಾಮಲಕ. ಯಾವುದೇ ಗಡಿಪ್ರದೇಶಕ್ಕೆ ನನ್ನನ್ನು ನಿಯೋಜಿಸಿದರೂ ನಾನು ಹೆದರುವುದಿಲ್ಲ ಎನ್ನುತ್ತಾಳೆ ಅನುಶ್ರೀ.
ಐಟಿಬಿಪಿಯ ಮೊದಲ ಮಹಿಳಾ ಕಮಾಂಡೋ ಘಟಕ ಪುರುಷ ಕಮಾಂಡೋ ಘಟಕದಷ್ಟೇ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಈಗ ತರಬೇತಿ ಪಡೆದಿರುವ ಎಲ್ಲ ಮಹಿಳಾ ಕಮಾಂಡೋಗಳು ಅಂತಹ ಗುಣಗಳನ್ನು ಹೊಂದಿದ್ದಾರೆ. ಪುರುಷ ಕಮಾಂಡೋಗಳಿಗೆ ಸರಿಸಾಟಿಯಾಗಿ ಅವರು ಎದ್ದು ನಿಂತಿದ್ದಾರೆ. ‘ಶೌರ್ಯ, ಬದ್ಧತೆ ಹಾಗೂ ಕರ್ತವ್ಯದಲ್ಲಿ ನಂಬಿಕೆ’ – ಇದು ಐಟಿಬಿಪಿಯ ಘೋಷಣೆ. ಈ ಘೋಷಣೆಗೆ ಅನ್ವರ್ಥವಾಗಿ ಈಗ ತರಬೇತಿ ಪಡೆದಿರುವ ಮಹಿಳಾ ಕಮಾಂಡೋ ಘಟಕ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ಹಿರಿಯ ಸೈನ್ಯಾಧಿಕಾರಿಗಳದು. ಐಟಿಬಿಪಿಯ ಈ ದಿಟ್ಟ ಮಹಿಳಾ ಕಮಾಂಡೋ ಪಡೆಗೆ ನಾವೆಲ್ಲರೂ ಒಂದು ಸೆಲ್ಯೂಟ್ ಹೊಡೆಯೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.