ಮಂಗಳೂರು : ರಾಜ್ಯದ ಜನರಿಗೆ ಬರ ನೀರಿನ ಸಮಸ್ಯೆ ಸೇರಿದಂತೆ ಮುಂದಿನ ಕೆಲವು ದಿನಗಳಲ್ಲಿ ಪೆಟ್ರೋಲ್ ಸಮಸ್ಯೆ ತಲೆದೋರಬಹುದು. ಕರ್ನಾಟಕಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುತ್ತಿರುವ ಮಂಗಳೂರಿನ ಎಂಆರ್ಪಿಎಲ್ಗೆ ನೀರಿಲ್ಲದೆ ಶಟ್ಡೌನ್ ಆಗುವ ಹಂತಕ್ಕೆ ತಲುಪಿದೆ.
ಮಂಗಳೂರಿನಲ್ಲಿರುವ ಎಂಆರ್ಪಿಎಲ್ ಕಾರ್ಖಾನೆ ಕಾರ್ಯಗಳಿಗಾಗಿ ನೇತ್ರಾವತಿಯಿಂದ ನೀರು ಸರಬರಾಜು ಆಗುತ್ತಿತ್ತು. ಆದರೆ ಕರಾವಳಿಯಲ್ಲಿ ಈಗ ನೀರಿಗೆ ತಾತ್ವಾರವಾಗಿದ್ದು, ನೇತ್ರಾವತಿಯಲ್ಲಿ ನೀರಿಲ್ಲದೆ ನೀರು ಎಲ್ಲೆಡೆ ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ. ಜನರಿಗೆ 3-5 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಕೆಲವು ಕಾರ್ಖಾನೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಮಂಗಳೂರು ನಗರದಲ್ಲಿ ಸಿಗುತ್ತಿರುವ ಯುಜಿಡಿಯ ನೀರನ್ನು ಸಂಸ್ಕರಿಸಿ ಅದಕ್ಕೆ ಸಂಗ್ರಹದಲ್ಲಿರುವ ಶುದ್ಧ ನೀರನ್ನು ಬೆರೆಸಿ ಎಂಆರ್ಪಿಎಲ್ ಕಾರ್ಯನಿರ್ವಸುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯವಾಗಿದ್ದು, ಭಾಗಶಃ ಚಾಲನೆಯಲ್ಲಿರುವ ಸ್ಥಾವರ ನೀರಿನ ಕೊರತೆಯಿಂದಾಗಿ ಸಂಪೂರ್ಣವಾಗಿ ಕಾರ್ಯ ನಿಲ್ಲಿಸುವ ಹಂತಕ್ಕೆ ತಲುಪಿದೆ. ಕಚ್ಚಾತೈಲವನ್ನು ಅತ್ಯಧಿಕ ಉಷ್ಣತೆಯಲ್ಲಿ ಬಿಸಿಮಾಡಿ ಅದನ್ನು ತಣಿಸಲು ಹೆಚ್ಚು ನೀರಿನ ಅವಶ್ಯಕತೆಯಿದ್ದು ಅದು ಸಾಕಷ್ಟು ಮಟ್ಟದಲ್ಲಿ ಎಂಆರ್ಪಿಎಲ್ಗೆ ದೊರೆಯುತ್ತಿಲ್ಲ. ಆದುದರಿಂದ ಭಾಗಶಃ ಶಟ್ಡೌನ್ ಆಗುವ ಸಾಧ್ಯತೆಯಿದೆ.
ಈ ಹಿಂದೆ 2012 ರಲ್ಲೂ ಒಂದು ಬಾರಿ ಶಟ್ಡೌನ್ ಆಗಿತ್ತು. ಈಗ ಎಂಆರ್ಪಿಎಲ್ ಶಟ್ಡೌನ್ ಆಗುವುದರಿಂದರಿಂದ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಸಮಸ್ಯೆ ತಲೆದೋರಲಿದೆ ಎನ್ನಲಾಗುತ್ತಿದೆ. ಇಲ್ಲಿ ಉತ್ಪಾದನೆಯಾಗುವ ಪೆಟ್ರೋಲಿಯಂ ಇಂಡಿಯನ್ ಆಯಿಲ್, ಎಚ್ಪಿಸಿಎಲ್, ಸೇರಿದಂತೆ ವಿವಿಧ ಕಂಪನಿಗಳಿಗೆ ಪೂರೈಕೆಯಾಗುತ್ತದೆ. ಪ್ರಸ್ತುತ ಇಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಸಂಗ್ರಹದಲ್ಲಿದ್ದು ಅದರಿಂದ ಪೂರೈಕೆಯಾಗುತ್ತಿದೆ. ಇನ್ನು ಶಟ್ಡೌನ್ ಆದರೆ ಪೂರೈಕೆಯೂ ಸ್ಥಗಿತಗೊಳ್ಳಬಹುದು ಎನ್ನಲಾಗುತ್ತಿದೆ.
ಈ ನಡುವೆ ಸರಕಾರ ನೇತ್ರಾವತಿ ತಿರುವು, ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು ಇದರಿಂದ ಕರಾವಳಿಗರ ಜನ ಜೀವನ ಅಸ್ಥವ್ಯಸ್ಥವಾಗಲಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಯೋಜನೆಗಳನ್ನು ನಿಲ್ಲಿಸಿದರೆ ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.