ಬೆಳ್ತಂಗಡಿ : ಸುಮಾರು 450 ವರ್ಷಗಳ ಹಿಂದೆ ವೇಣೂರಿನ ಬಾಹುಬಲಿ ಮೂರ್ತಿಯನ್ನು ಕೆತ್ತಿರುವ ಐತಿಹಾಸಿಕ ಸ್ಥಳ ನಿಟ್ಟಡೆ ಗ್ರಾಮದ ಪೆರ್ಮುಡ-ಪಂಡಿಜೆ ಸನಿಹದ ಕಲ್ಲಾಣಿಯಲ್ಲಿ ಕೊಡಮಣಿತ್ತಾಯ, ಕಲ್ಕುಡ ಕಲ್ಲುರ್ಟಿ, ನಾಗ ಸನ್ನಿಧಿಯ ಕ್ಷೇತ್ರವು ನವೀಕರಣ ಕಾರ್ಯ ಪೂರ್ಣವಾಗುತ್ತಲಿದ್ದು ಮೇ 10 ಮತ್ತು 11 ರಂದು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೆರವೇರಲಿದೆ.
ತ್ರವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ಆರೂಢ ಪ್ರಶ್ನೆಯಲ್ಲಿ ಕಂಡುಬಂದಿದೆ. ದೈವಸ್ಥಾನವು ನಾಲ್ಕೂ ದಿಕ್ಕಿನಲ್ಲೂ ಅರಣ್ಯದ ಮಧ್ಯೆ, ಕರಿಕಲ್ಲಿನ ಮೇಲೆ, ಫಲ್ಗುಣಿ ನದಿಯ ತಟದಲ್ಲಿ ನೆಲೆ ನಿಂತಿದೆ. ವೀರಶಂಭು ಕಲ್ಕುಡ ತನ್ನ ಒಂದು ಕೈ ಹಾಗೂ ಕಾಲನ್ನು ಕಳೆದುಕೊಂಡಿದ್ದರೂ ಗೋಮಟೇಶ್ವರನ ಮೂರ್ತಿಯನ್ನು ಕೆತ್ತಿದ ವಿಶಿಷ್ಟ ಸ್ಥಳ ಸನಿಹದಲ್ಲಿದೆ.
ಅಲ್ಲದೆ ಆತ ನೀರಿನ ಅವಶ್ಯಕತೆಗಾಗಿ ತೋಡಿದ ಕೆರೆಯೊಂದು ಅನತಿದೂರದಲ್ಲೇ ಕಾಣಸಿಗುತ್ತದೆ. ಇಲ್ಲಿ ದೈವಕ್ಕೆ ಸಂಬಂದಿಸಿದ ಹುಲಿಗಳ ಸಂಚಾರ ಈಗಲೂ ಇದೆ ಎಂಬ ನಂಬಿಕೆ ಇದೆ. ಮದುವೆ ಸಂಬಂಧ, ಮನುಷ್ಯ, ಜಾನುವಾರು ಆರೋಗ್ಯ, ಸಂತಾನ ಭಾಗ್ಯ ಮೊದಲಾದ ಸಮಸ್ಯೆಗಳಿದ್ದಲ್ಲಿ ಹರಕೆ ಸಲ್ಲಿಸಿದಲ್ಲಿ ಇಲ್ಲಿನ ದೈವಗಳು ಅಭಯ ನೀಡಿ ಪರಿಹರಿಸುತ್ತವೆ ಎಂಬ ವಿಶ್ವಾಸವಿದೆ. ಇಲ್ಲಿಗೆ ಬ್ರಾಹ್ಮಣ ಮತ್ತು ಜೈನ ಮನೆತನದ ಗುತ್ತುಗಳಿಂದ ದೈವಗಳ ಭಂಡಾರವು ಆಗಮಿಸಿ ಪ್ರತಿವರ್ಷ ಮಾರ್ಚ 19 ರಂದು ನೇಮೋತ್ಸವ ನಡೆಯುತ್ತದೆ.
ಅಜಿಲ ಸೀಮೆಯ ವ್ಯಾಪ್ತಿಯಲ್ಲಿರುವ ದೈವಸ್ಥಾನವು ಅಳದಂಗಡಿ-ವೇಣೂರು ದಾರಿಯ ಮಧ್ಯದಲ್ಲಿದೆ. ಅಜಿಲ ಅರಸರ ಕಾಲದಲ್ಲಿ ವೇಣೂರಿನ ಶ್ರೀ ಮಹಾಲಿಂಗೇಶ್ವರನ ರಥೋತ್ಸವ ಮತ್ತು ಗೋಮೆಟೇಶ್ವರ ರಥೋತ್ಸವ ಸಂದರ್ಭದಲ್ಲಿ ಅರಸರು ಪಲ್ಲಕಿಯಲ್ಲಿ ಹೋಗುತ್ತಿರುವ ಇಲ್ಲಿ ವಿಶ್ರಾಂತಿ ಪಡೆದು ಮುಂದೆ ಹೋಗುತ್ತಿದ್ದರು. ಈಗಲೂ ಅರಸರು ಕುಳಿತುಕೊಳ್ಳುತ್ತಿದ್ದ ಕಲ್ಲಿನ ಆಸನವನ್ನು ವೀಕ್ಷಿಸಬಹುದಾಗಿದೆ.
ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಕೊಡಮಣಿತ್ತಾಯ, ಕಲ್ಲುಡ, ಕಲ್ಲುರ್ಟಿ ದೈವಸ್ಥಾನ, ನಾಗಸನ್ನಿಧಿಯನ್ನು ಸುಮಾರು ರೂ. 17 ಲಕ್ಷ ವೆಚ್ಚದಲ್ಲಿ ಊರಿನ ಗುತ್ತು ಬರ್ಕೆಯವರು ಹಾಗೂ ನಿಟ್ಟಡೆ ಗ್ರಾಮದ ಸರ್ವ ದೈವಾರಾಧಕರು ನವೀಕರಿಸಿದ್ದು ಇದೀಗ ಬ್ರಹ್ಮಕಲಶೋತ್ಸವದ ತಯಾರಿಯನ್ನು ನಡೆಸುತ್ತಿದ್ದಾರೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಅಳದಂಗಡಿ ಅರಸರಾದ ಡಾ| ಪದ್ಮಪ್ರಸಾದ ಅಜಿಲ ಅವರ ಮಾರ್ಗದರ್ಶನದಲ್ಲಿ, ಸೀಮೆಯ ಅಸ್ರಣ್ಣ ಟಿ. ವಿಷ್ಣುಮೂರ್ತಿ ಭಟ್ ಅವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೆರವೇರಲಿದೆ. ಮೇ 10 ರಂದು ಬೆಳಿಗ್ಗೆ ವಾಸ್ತು ಪೂಜೆ, ಹೋಮ, ಬಲಿ, ರಾಕ್ಷೆಘ್ನ ಹೋಮ ಇತ್ಯಾದಿಗಳು ನಡೆಯಲಿವೆ. ಬಳಿಕ ಸಂಜೆ ೭ ಗಂಟೆಗೆ ನೇಮಿರಾಜ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಲಿದೆ. ಧಾರ್ಮಿಕ ಉಪನ್ಯಾಸವನ್ನು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ನೀಡಲಿದ್ದಾರೆ.
ಅತಿಥಿಗಳಾಗಿ ಎಸ್ಕೆಡಿಆರ್ಡಿಪಿ ಯೋಜನಾಧಿಕಾರಿ ರೂಪಾ ಜಿ. ಜೈನ್, ಜಿ.ಪಂ. ಸದಸ್ಯರಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ತಾ.ಪಂ. ಸದಸ್ಯ ವಿಜಯ ಗೌಡ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ ಭಾಗವಹಿಸಲಿದ್ದಾರೆ. ಬಳಿಕ ಫಲ್ಗುಣಿ ಕಲಾ ತಂಡ ವೇಣೂರು ಇವರಿಂದ ಪುರ್ಸಗ್ ಪುರ್ಸೋತ್ತಿಜ್ಜಿ ನಾಟಕ ನಡೆಯಲಿದೆ. ಮೇ 11 ರಂದು ಬೆಳಿಗ್ಗೆ ದೈವಗಳ ಪ್ರತಿಷ್ಠಾಪನೆ, ಬ್ರಹ್ಮಕಲಶ, ಚಂಡಿಕಾ ಹೋಮದ ಪೂರ್ಣಾಹುತಿ, ಭಂಡಾರ ಬರುವುದು ಇತ್ಯಾದಿಗಳು ನಡೆಯಲಿದೆ. ಸಂಜೆ ಗಂಟೆ 7-30ಕ್ಕೆ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಮೂಡಬಿದ್ರೆ ಧನಲಕ್ಷ್ಮೀ ಗ್ರೂಪ್ಸ್ನ ಶ್ರೀಪತಿ ಭಟ್, ಶಾಸಕ ಕೆ. ವಸಂತ ಬಂಗೇರ, ವಕೀಲರಾದ ಪ್ರತಾಪಸಿಂಹ ನಾಯಕ್, ಹರೀಶ್ ಪೂಂಜ ಭಾಗವಹಿಸಲಿದ್ದಾರೆ. ಬಳಿಕ ಬಲೇ ತೆಲಿಪಾಲೆ ತಂಡದವರಿಂದ ತೆಲಿಕೆದ ಗೊಂಚಿಲ್ ಪ್ರದರ್ಶನಗೊಳ್ಳಲಿದೆ. ರಾತ್ರಿ ಗಂಟೆ 12 ರಿಂದ ದೈವಗಳ ನೇಮೋತ್ಸವ ಜರುಗಲಿದೆ.
ಮಂಗಳವಾರ ನಡೆದ ಕಲ್ಲಾಣಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರರಾದ ಪಿ. ಲಕ್ಷ್ಮಣ ಹೆಬ್ಬಾರ್, ಪ್ರವೀಣಚಂದ್ರ ಜೈನ್, ಅಧ್ಯಕ್ಷ ಅಶೋಕ್ ಪಾಣೂರು, ಉಪಾಧ್ಯಕ್ಷರುಗಳಾದ ಗೋಪಾಲ ಪೂಜಾರಿ, ಪ್ರಭಾಕರ ಪೆರ್ಮುಡ, ಕಾರ್ಯದರ್ಶಿ ರತ್ನಾಕರ ಅಂಕರ್ಜಾಲು, ಕೋಶಾಧಿಕಾರಿ ಪ್ರಶಾಂತ ಹೆಬ್ಬಾರ್, ಸ್ವಾಗತ ಸಮಿತಿ ಸಂಚಾಲಕ ಪ್ರಸನ್ನ ಹೆಬ್ಬಾರ್ ಮತ್ತಿತರರು ಇದ್ದರು.
ಸುಮಾರು ನಾಲ್ಕೂವರೆ ಶತಮಾನಗಳ ಹಿಂದೆ ಯಾವುದೇ ಆಧುನಿಕ ವ್ಯವಸ್ಥೆಗಳು ಇಲ್ಲದ ಸಂದರ್ಭದಲ್ಲಿ ವೇಣೂರಿನ ಐತಿಹಾಸಿಕ ಭಗವಾನ್ ಬಾಹುಬಲಿಯ ಮೂರ್ತಿಯನ್ನು ವೀರ ಶಂಭು ಕಲ್ಕುಡ ಎಂಬ ಶಿಲ್ಪಿ ಒಂದೇ ಕೈಯಲ್ಲಿ ನಿರ್ಮಾಣ ಮಾಡಿ ಸಮಾಜಕ್ಕೆ ಅರ್ಪಿಸಿದ ಸ್ಥಳ ಕಲ್ಲಾಣಿ. ಕರಿ ಬೃಹತ್ ಬಂಡೆಗಳಿಂದ ತುಂಬಿರುವ ಸ್ಥಳ ಇದು. ಕಲ್ಕುಡ ಗೋಮಟೇಶ್ವರನನ್ನು ಕೆತ್ತಿರುವ ಜಾಗದ ಕುರುಹು ಇಂದಿಗೂ ಇದೆ. ಅಲ್ಲದೆ ಸನಿಹದಲ್ಲೇ ಆತ ನಿರ್ಮಿಸಿದ ಕೊಳವೊಂದೂ ಇದೆ. ಐತಿಹಾಸಿಕವಾಗಿರುವ ಮತ್ತು ಪ್ರವಾಸಿ ಸ್ಥಾನವಾಗಿ ರೂಪುಗೊಳ್ಳಬೇಕಾಗಿದ್ದ ಈ ಸ್ಥಳವು ಸಂಪೂರ್ಣ ನಿರ್ಲಕ್ಷಕ್ಕೊಳಗಾಗಿರುವುದು ದುರಂತ.
ವೇಣೂರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕಲ್ಲುಡ ನಿರ್ಮಿಸಿದ ಬಾಹುಬಲಿ ಮೂರ್ತಿಗೆ ಹಲವಾರು ಬಾರಿ ಮಹಾಮಸ್ತಕಾಭೀಷೇಕ ನಡೆದಿವೆ. ಇದಕ್ಕಾಗಿ ಲಕ್ಷ, ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಆದರೆ ಮೂರ್ತಿ ನಿರ್ಮಿಸಿರುವ ಸ್ಥಳದ ಬಗ್ಗೆ ಗಮನಹರಿಸದಿರುವುದು ಬೇಸರದ ಸಂಗತಿಯಾಗಿದೆ. ೨೦೧೨ರಲ್ಲಿನ ಮಹಾಮಸ್ತಕಾಭಿಷೇಕ ಸಂದರ್ಭ ಮಾಧ್ಯಮಗಳು ಕಲ್ಲಾಣಿಯ ಬಗ್ಗೆ ಗಮನ ಸೆಳೆದಿದ್ದವು. ಕಲ್ಲಾಣಿಯ ಬಗ್ಗೆ ವೇಣೂರಿನ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯವರ ಗಮನಕ್ಕೂ ತರಲಾಗಿತ್ತು. ಅಂದಿನ ಯಡಿಯೂರಪ್ಪ ಸರಕಾರ ಮಸ್ತಕಾಭೀಷೇಕ ಸಂದರ್ಭ ಅಭಿವೃದ್ಧಿಗಾಗಿ ಸಾಕಷ್ಟು ಹಣವನ್ನು ಬಿಡುಗಡೆ ಮಾಡಿತ್ತು.
ಮಸ್ತಕಾಭೀಷೇಕ ಸಂದರ್ಭ ಸಾಕಷ್ಟು ದೇಣಿಗೆಯೂ ಸಂಗ್ರಹವಾಗಿದ್ದರೂ ಸಮಿತಿ ಕಲ್ಲಾಣಿಯ ಬಗ್ಗೆ ಯಾವುದೇ ಸ್ಪಂದನೆ ತೋರದಿರುವುದು ಸ್ಥಳೀಯರಿಗೆ ನೋವನ್ನುಂಟು ಮಾಡಿರುವುದು ಸತ್ಯ. ನಿಟ್ಟಡೆ ಗ್ರಾಮಸ್ಥರು ಈ ಕ್ಷೇತ್ರವನ್ನು ಅಭಿವೃದ್ದಿ ಮಾಡಿ ಎಂದು ಸಮಿತಿಗೆ ಸಾಕಷ್ಟು ಬಾರಿ, ಈಚಿನವರೆಗೂ ಮನವಿ ಮಾಡಿದ್ದರೂ ಗಮನವೇ ಕೊಡದಿರುವುದರಿಂದ ಸ್ಥಳೀಯರೇ ಸೇರಿ ಕ್ಷೇತ್ರವನ್ನು ನವೀಕರಣಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.