ಉಡುಪಿ : ಅಹಂ ಬದಿಗಿರಿಸಿ ನಿತ್ಯ ಅರ್ಧ ಗಂಟೆಯಾದರೂ ದೇವರಿಗೆ ಕೃತಜ್ಞತಾಪೂರ್ವಕ ಪೂಜೆ ಸಲ್ಲಿಸಿದರೆ ಉತ್ತಮ ಎಂದು ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಭಿಪ್ರಾಯಪಟ್ಟರು.
ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ನಡೆದ ಮಹಾರುದ್ರ ಯಾಗದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಾಧನೆಗೆ ಮತ್ತು ನಮಗೇನಾದರೂ ಕೀರ್ತಿ ಬಂದಿದ್ದರೆ ದೇವರದಯೆಯೇ ಕಾರಣ ಎಂದು ಕೃತಜ್ಞತೆ ಯಿಂದ ಸ್ಮರಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ, ಉದ್ಯಮಿಗಳಾದ ಉಡುಪಿಯ ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು, ಮುಂಬಯಿಯ ರಿತೇಶ್ಶೆಟ್ಟಿ, ಪರ್ವತ್ ಶೆಟ್ಟಿ, ಉದಯ ಕುಮಾರ ಶೆಟ್ಟಿ ಮುನಿ ಯಾಲು, ಕಟೀಲು ದೇವಳದ ವಿ| ಕಮಲಾದೇವಿ ಪ್ರಸಾದ ಆಸ್ರಣ್ಣ, ದೇವಸ್ಥಾನದ ತಂತ್ರಿ ವಿ| ಹೆರ್ಗ ರಾಘವೇಂದ್ರ ತಂತ್ರಿ, ನಗರಸಭೆ ಮಾಜಿ ಅಧ್ಯಕ್ಷ ಹೆರ್ಗ ದಿನಕರ ಶೆಟ್ಟಿ, ಚೇರ್ಕಾಡಿ ವಿದ್ಯಾಪ್ರಸಾರಕ ಮಂಡಲದ ಅಧ್ಯಕ್ಷ ಸತೀಶ್ ಪಾಟೀಲ್ ಅಭ್ಯಾಗತರಾಗಿದ್ದರು.ಯಾಗ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ ಸಾಮಂತ್ ಪ್ರಸ್ತಾವನೆಗೈದರು. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿ ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಸಂಜಯ ಪ್ರಭು ವಂದಿಸಿದರು.
ಆಡಳಿತೆ ಮೊಕ್ತೇಸರ ಪುರು ಷೋತ್ತಮ ಪ್ರಭು, ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಠಾಕೂರ್, ಪದಾಧಿಕಾರಿಗಳಾದ ಎಸ್.ಕೆ. ಸಾಮಂತ್, ಅಶೋಕ್ ಪ್ರಭು, ಎಂ. ಸುಧಾಕರ ಸಾಮಂತ್, ಜಿ.ಕೃಷ್ಣರಾಯ ಪಾಟೀಲ್, ಡಾ| ಕೆ.ಪೂರ್ಣಾನಂದ ಪ್ರಭು ಉಪಸ್ಥಿತರಿದ್ದರು. ಬೆಳಗ್ಗೆ ಸೂರಾಲು ಲಕ್ಷ್ಮೀನಾರಾಯಣ ಅಡಿಗರ ನೇತೃತ್ವ ದಲ್ಲಿ ಮಹಾರುದ್ರ ಯಾಗ ಸಂಪನ್ನಗೊಂಡಿತು. ಮಧ್ಯಾಹ್ನ ಶಿವಧಾರಾ ಗೋಶಾಲೆಯನ್ನು ಮಣಿಪಾಲ ವಿ.ವಿ. ಕುಲಾಧಿಪತಿ ಡಾ| ರಾಮದಾಸ್ ಪೈ, ವಸಂತಿ ಪೈ ಅವರು ಉದ್ಘಾಟಿಸಿದರು.
ಆದರ್ಶ ಮರೆತುಬಿಟ್ಟ ಸ್ತ್ರೀಸ್ವಾತಂತ್ರ್ಯ!…. : ಎಸಿ ಕೋಣೆಯಲ್ಲಿ ಕುಳಿತು ಮೇಕಪ್ ಮಾಡಿಕೊಂಡು “ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ’ ಎಂಬ ವಾಕ್ಯ ಹಿಡಿದು ಭಾರತದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ ಎಂದು ಟಿವಿಯಲ್ಲಿ ಚರ್ಚೆ ಮಾಡುತ್ತಾರೆ. ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲವೆ? ಶಿವಾಜಿಗೆ ಪ್ರೇರಕ ಶಕ್ತಿ ಯಾರು? ತಾಯಿ ಜೀಜಾಬಾಯಿ ಅಲ್ಲವೆ? ಗಾರ್ಗಿ- ಮೈತ್ರೇಯಿ ವೈದಿಕ ವಿದ್ಯೆ ಕಲಿಯಲಿಲ್ಲವೆ? ಶಂಕರಾಚಾರ್ಯರು- ಮಂಡನಮಿಶ್ರರ ನಡುವೆ ವಾದ ನಡೆಯುವಾಗ ತೀರ್ಪುಗಾರರಾಗಿ ಇದ್ದದ್ದು ಮಹಿಳೆಯಲ್ಲವೆ? ಹಿಂದೆ ಆಕ್ರಮಣಕಾರರ ಅತ್ಯಾಚಾರಗಳನ್ನು ಕಂಡು “ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ’ ಎಂದು ಬರೆದಿರಬಹುದು. ನಮಗೆ ಹೆಣ್ಣು ಮಕ್ಕಳ ಮಾನ, ಶೀಲ ಮುಖ್ಯ. ಈಗ ಮಹಿಳೆಯರಿಗೆ ಶಿಕ್ಷಣದ ಅವಕಾಶಗಳಿವೆ, ಸ್ವಾತಂತ್ರ್ಯವಿದೆ. ವಿದ್ಯೆ ಓದಲು ಹೋದ ನಮ್ಮ ಹೆಣ್ಮಕ್ಕಳ ಸ್ಥಿತಿ ಹೇಗಿದೆ? ಅವರು ಓದಿದ ಬಳಿಕ ಮನೆಗೆ ಬರುವ ಖಾತ್ರಿ ಇಲ್ಲ…
ಇದು ಕಾರ್ಕಳದ ಉಪನ್ಯಾಸಕಿ ಅಕ್ಷಯ ಗೋಖಲೆ ಯವರ ಪುಂಖಾನುಪುಂಖ ಉಪನ್ಯಾಸದ ಆಯ್ದ ಅಂಶಗಳು, ವಿಷಯ: “ಹಿಂದೂ ಸಂಪ್ರದಾಯದಲ್ಲಿ ಸ್ತ್ರೀ ಸ್ವಾತಂತ್ರ್ಯ’. ತಾಯಿ ಮೊದಲ ಗುರು, ಮನೆಯೆ ಮೊದಲ ಪಾಠ ಶಾಲೆ ಎನ್ನುತ್ತಿದ್ದ ನಾವೀಗ ಏನಾಗಿದ್ದೇವೆ? ನಾವು ಶಿಕ್ಷಣದ ಜತೆ ಆದರ್ಶವನ್ನು ಕೊಡಬೇಕು. ಹಿರಿಯರನ್ನು ವೃದ್ಧಾ ಶ್ರಮಕ್ಕೆ ಸೇರಿಸಿ, ಮಕ್ಕಳಿಗೂ ಸಂಸ್ಕಾರ ಕೊಡದೆ ಟಿವಿ ಮುಂದೆ ಕುಳಿತು ಶಾರುಖ್ ಖಾನ್, ಕರೀನಾ ಕಪೂರ್ ವೈಭವ ನೋಡುತ್ತಿದ್ದೇವೆ ಎಂದು ಅಕ್ಷಯ ಗೋಖಲೆ ವಿಷಾದಿಸಿದರು. ಗೀತಾ ರಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.