ಬೆಳ್ತಂಗಡಿ : ಶ್ರೀ ಸಿದ್ಧವನ ಗುರುಕುಲದ ಅಮೃತ ಮಹೋತ್ಸವ ಕಾರ್ಯಕ್ರಮ ಮೇ.7ರಂದು ಉಜಿರೆಯ ಎಸ್.ಡಿ.ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಲಿದೆ.
ಸಿದ್ಧವನದ ಸಂಸ್ಥಾಪಕರಾದ ಕೀರ್ತಿಶೇಷ ಡಿ. ಮಂಜಯ್ಯ ಹೆಗ್ಗಡೆಯವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮಂಗಳೂರಿನ ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಸಿದ್ಧವನ ಗುರುಕುಲದ ಹಳೆಯ ವಿದ್ಯಾರ್ಥಿ ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್ಸಿಂಹ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಗೋಷ್ಠಿಗಳು ನಡೆಯಲಿವೆ.
ಗುರುಕುಲ ಸ್ಥಾಪಕರು ಮತ್ತು ಮಹಾ ಪೋಷಕರ ಕುರಿತಾದ ಮೊದಲ ಗೋಷ್ಠಿಯಲ್ಲಿ ಕೀರ್ತಿಶೇಷ ಡಿ. ಮಂಜಯ್ಯ ಹೆಗ್ಗಡೆಯವರ ಬಗ್ಗೆ ಪ್ರೊ. ನಾಗರಾಜ ಪೂವಣಿ ಮಾತನಾಡಲಿದ್ದಾರೆ. ಶಿವರಾಮ ಶಿಶಿಲ ಅವರು ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಬಗ್ಗೆ, ಗಣೇಶ್ ಬಾಬು ಅವರು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ವಿಚಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಎರಡನೇ ಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲ ಪಾದೆಕಲ್ಲು ಡಾ. ವಿಷ್ಣುಭಟ್ ಅವರು ಗುರುಕುಲ ಪದ್ಧತಿಯ ಶಿಕ್ಷಣ ಕುರಿತು ಉಪನ್ಯಾಸ ನೀಡಲಿದ್ದಾರೆ. ಮೂರನೇ ಗೋಷ್ಠಿಯಲ್ಲಿ ಮೂರು ತಲೆಮಾರಿನ ಹಳೆಯ ವಿದ್ಯಾರ್ಥಿಗಳು ಗುರುಕುಲದೊಂದಿಗಿನ ಅನುಭವ ಕಥನವನ್ನು ನಿವೇದಿಸಿಕೊಳ್ಳಲಿದ್ದಾರೆ. ನಂತರ ಹಿರಿಯ ಪಾಲಕರುಗಳ ಸ್ಮರಣೆ ಗೋಷ್ಠಿಯಲ್ಲಿ ಜಿನರಾಜ ಶಾಸ್ತ್ರಿ ಹಾಗೂ ಮತ್ತಿತರರು ಸಿದ್ಧವನಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುವುದು. ಹಿರಿಯ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಇದೇ ಸಂದರ್ಭದಲ್ಲಿ ನಡೆಯಲಿದೆ. ಹಳೆಯ ವಿದ್ಯಾರ್ಥಿಗಳು ವಿವಿಧ ಆಟೋಟಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ ೬.೩೦ರಿಂದ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಲಿದೆ. ಎಸ್.ಡಿ.ಎಂ. ಸಂಸ್ಥೆಯ ಸಿಬ್ಬಂದಿ ವರ್ಗದವರು ‘ಮುದ್ದಣನ ಪ್ರಮೋಷನ್ ಪ್ರಸಂಗ’ ಎಂಬ ನಾಟಕವನ್ನು ಪ್ರದರ್ಶಿಸಲಿದ್ದಾರೆ. ರಾಜ್ಯ, ರಾಷ್ಟ್ರ ಸೇರಿದಂತೆ ವಿವಿಧೆಡೆ ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖರಾಗಿರುವ ಶ್ರೀಸಿದ್ಧವನ ಗುರುಕುಲದ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.