ಮಂಗಳೂರು : ಶ್ರೀ ಕಾಶೀ ಮಠ ಸಂಸ್ಥಾನದ ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ೯೧ನೇ ಜಯಂತಿ, ನವತಿ ಪೂರ್ತಿ ಸಂದರ್ಭದಲ್ಲಿ ಶ್ರೀಗಳವರ ಜನ್ಮ ನಕ್ಷತ್ರ ಸ್ವಾತಿ ನಕ್ಷತ್ರದ ಶುಭ ದಿನದ ಸಂದರ್ಭದಲ್ಲಿ ಸುಧಾ ಸೇವಾ ಸಮ್ಮೇಳನ ಎಂಬ ವಿಶ್ವ ಜಿ.ಎಸ್.ಬಿ. ಸಮ್ಮೇಳನವು ಇದೇ ಬರುವ ಎ 22 ಮತ್ತು 23ರಂದು ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಶೇಷ ತೀರ್ಥ ಕೆರೆಯ ಬಳಿ ಸುಧೀಂದ್ರ ನಗರದಲ್ಲಿ ನಡೆಯಲಿದೆ.
ಸಮ್ಮೇಳನದ ಆಶಯ: ಶ್ರೇಷ್ಠ ಪಾರಂಪರಿಕ ಹಿನ್ನೆಲೆ ಮತ್ತು ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಗೌಡ ಸಾರಸ್ವ ಬ್ರಾಹ್ಮಣ ಸಮಾಜದ ಜನತೆ ಸಂಘಟಿತರಾಗಿ, ಸ್ವಾವಲಂಬಿಗಳಾಗಿ, ಸಮಾಜದಲ್ಲಿ ಶ್ರೇಷ್ಠ ಸಾಧನೆಯಿಂದ ಗುರುತಿಸಿಕೊಳ್ಳುವಂತಾಗಬೇಕು ಎನ್ನುವುದು ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮತ್ ಸುಧೀಂಧ್ರ ತೀರ್ಥ ಸ್ವಾಮೀಜಿಯವರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಅವರ ಆಶೀರ್ವಾದದ ಬಲದಲ್ಲಿ ಮುನ್ನಡೆದ ಸಮಾಜವನ್ನು ಸಂಘಟಿಸಿ ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂಬಂತೆ ಶ್ರೀಗಳವರ ಉತ್ತರಾಧಿಕಾರಿಯಾಗಿರುವ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸುಧಾ ಸೇವಾ ಪ್ರತಿಷ್ಠಾನ ರೂಪಿಸಲಾಗಿತ್ತು. ಇದೀಗ ಸುಧಾ ಸೇವಾ ಸಮ್ಮೇಳ ಎನ್ನುವು ವಿಶ್ವ ಜಿ.ಎಸ್.ಬಿ. ಸಮ್ಮೇಳನದ ಮೂಲಕ ಸಮಾಜದಲ್ಲಿ ಜಾಗತಿಕ ಮಟ್ಟದಲ್ಲಿ ಹಂಚಿ ಹೋಗಿರುವ ಜಿ.ಎಸ್.ಬಿ. ಸಮಾಜ ಬಾಂಧವರು ಮತ್ತು ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಸಂಘಟಿತರಾಗಿ ಮುನ್ನಡೆಯಲು ಅವಕಾಶ ಕಲ್ಪಿಸಲಾಗಿದೆ. ಶ್ರೀಮತ್ ಸುಧೀಂಧ್ರ ತೀರ್ಥ ಸ್ವಾಮೀಜಿಯವರ ಆಶಯವನ್ನು ನನಸಾಗಿಸಬೇಕೆಂಬ ಸಂಕಲ್ಪದಿಂದ ಅವರ ನವತಿ ಪೂರ್ಣ ಜಯಂತಿಯ ಸದವಸರದಲ್ಲೇ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸುಧಾ ಸೇವಾ ವಿಶ್ವ ಸಮ್ಮೇಳನ : ಸಮಸ್ತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಹೃದಯ ಮತ್ತು ಮನಸ್ಸುಗಳ ಸಂಗಮದ ಆಶಯದೊಂದಿಗೆ ನಡೆಯುವ ಸುಧಾ ಸೇವಾ ವಿಶ್ವ ಸಮ್ಮೇಳನವನ್ನು ಇನ್ಫೋಸಿಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಯು.ರಾಮದಾಸ್ ಕಾಮತ್ ಸಮ್ಮೇಳನವನ್ನು ಎ.22 ರಂದು ಸಂಜೆ 4 ರಿಂದ ನಡೆಯುವ ಸಮಾರಂಭದಲ್ಲಿ ಉದ್ಘಾಟಿಸಲಿದ್ದಾರೆ.
ಮುಂಬೈ ಜ್ಯೋತಿ ಲ್ಯಾಬೋರೇಟರೀಸ್ನ ಜೆ.ಎಂ.ಡಿ ಉಲ್ಲಾಸ್ ಕಾಮತ್ ಅವರು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಒಂದನೇ ಮೊಕ್ತೇಸರ ಜಯರಾಮ ಪ್ರಭು ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಣಿಪಾಲದ ತರಂಗ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಶ್ರೀಮತಿ ಸಂಧ್ಯಾ ಪೈ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ೬.೩೦ ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಎ 23 ರಂದು ಸಮ್ಮೇಳನದ ಪ್ರಧಾನ ಪರಿಕಲ್ಪನೆಗಳ ಕುರಿತು ವಿವಿಧ ಆಯಾಮಗಳಲ್ಲಿ ಚಿಂತನ, ವಿಚಾರ ಗೋಷ್ಠಿ, ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮಗಳು ನಡೆಯಲಿವೆ.
ಸಂಘಟನೆ : ವಿವಿಧ ಜಿ.ಎಸ್.ಬಿ. ಸೇವಾ ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ಪ್ರದರ್ಶನ,ಜಿ.ಎಸ್.ಬಿ. ಸಮಾಜದ ಎಲ್ಲ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಮಾಜದ ಅಭಿವೃದ್ಧಿಯ ಕುರಿತು ಚಿಂತಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೈವಾಹಿಕ ವೇದಿಕೆಯೂ ಸಮ್ಮೇಳನದ ಪ್ರಮುಖ ಅಂಗವಾಗಿದ್ದು ವಿವಿಧ ವೈವಾಹಿಕ ಸಂಸ್ಥೆಗಳು ಪಾಲ್ಗೊಂಡು ಸಮಾಜದ ಜನತೆಗೆ ಅಗತ್ಯವಿರುವ ನೆರವು ನೀಡಲು ವೇದಿಕೆ ಕಲ್ಪಿಸಲಾಗಿದೆ.
ಅಧ್ಯಯನ : ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನಕ್ಕೆ ಗಮನ ಹರಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಸಮಾಜದ ಯುವ ಸಮೂಹವನ್ನು ಉದ್ದೇಶಿಸಿ ಗಣ್ಯ ಸಾಧಕರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಮಂಗಳೂರಿನ ಅನಂತ ಪ್ರಭು, ಆರ್ಕಿಟೆಕ್ಟ್ ದೇವದಾಸ ಕಾಮತ್, ಬಸ್ತಿ ಆನಂದ ಶೆಣೈ, ಸಿ.ಎ. ಸಂಕೇತ್ ನಾಯಕ್,ಗೊವಾ ಸರ್ಕಾರದ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ತುಲಸೀದಾಸ್ ಪೈ ಈ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಹ್ಲಾದ; ಕಲೆ, ನಾಟಕ, ಕ್ರೀಡೆ, ಇತ್ಯಾದಿ ಸೃಜನಶೀಲ ವಿಷಯಗಳ ಕುರಿತು ಚಿಂತನೆ ಕಾರ್ಯಕ್ರಮದಲ್ಲಿ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಭಾವಚಿತ್ರಗಳ ಪ್ರದರ್ಶನ, ಡಾ.ಕೃಷ್ಣ ಮೋಹನಪ್ರಭು ಅವರಿಂದ ಛಾಯಾಗ್ರಹಣ ಕಾರ್ಯಾಗಾರ ನಡೆಯಲಿದೆ. ಆರೋಗ್ಯ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೬ರಿಂದ ೭ರವರೆಗೆ ಶ್ರೀನಿವಾಸ ಕಲಾ ಮಂದಿರದಲ್ಲಿಮೈಸೂರಿನ ರಾಘವೇಂದ್ರ ಪೈಯವರಿಂದ ಯೋಗ,ಮಂಗಳೂರಿನ ಶ್ರೀ ವೀರವೆಂಕಟೇಶ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಮಣಿಪಾಲ್ ಹೆಲ್ತ್ ಕಾರ್ಡ್ ನೋಂದಾವಣೆ, ಶ್ರೀ ಭುವನೇಂದ್ರ ಚ್ಯಾರಿಟೇಬಲ್ ಟ್ರಸ್ಟ್ ಕುಂದಾಪುರ ವತಿಯಿಂದ ಮೆಡಿಕಲ್ ಕ್ಯಾಂಪ್, ನಡೆಯಲಿದೆ. ಸ್ತ್ರೀ ಪ್ರಗತಿ ಕಾರ್ಯಾಗಾರದಲ್ಲಿ ಸ್ವ ಉದ್ಯೋಗದ ಬಗ್ಗೆ ಮಂಗಳೂರಿನ ಶ್ರೀಮತಿ ಚಂದ್ರಮತಿ, ಶಿಶು ಮತ್ತು ತಾಯಂದಿರ ಆರೋಗ್ಯದ ಬಗ್ಗೆ ಡಾ.ಪುಷ್ಪಾ ಕಿಣಿ, ಕೌಟುಂಬಿಕ ಸಾಮರಸ್ಯದ ಬಗ್ಗೆ ಮೈಸೂರಿನ ಮಮತಾ ಪ್ರಿಯಾ ಕಾಮತ್, ಲಕ್ಷ್ಮೀ ಪೈಯವರಿಂದ ಯುವತಿಯರಿಗೆ ರಸಪ್ರಶ್ನೆ ನಡೆಯಲಿದೆ.
ಸಂಸ್ಕೃತಿ ಕುರಿತ ಕಾರ್ಯಕ್ರಮದಲ್ಲಿ ಚೇಂಪಿ ಪ್ರಕಾಶ್ ಭಟ್ ಅವರಿಂದ ಬಾಲ ಶಿಬಿರ, ನೀಲೇಶ್ ಪೈಯವರಿಂದ ನಮ್ಮ ಸಂಸ್ಕೃತಿ, ಪರಂಪರೆ ಕುರಿತ ಕಾರ್ಯಾಗಾರ, ರವೀಂದ್ರ ಶೆಣೈ ಅವರಿಂದ ರಾಮಾಯಣ, ಮಹಾಭಾರತ,ಪುರಾಣ ತಿಳುವಳಿಕೆ, ಗಿರೀಶ್ ಪ್ರಭು ಮತ್ತು ಹರಿಪ್ರಸಾದ್ ಭಂಡಾರ್ಕರ್ ಅವರಿಂದ ಸಂಧ್ಯಾವಂದನೆಯ ಮಹತ್ವ, ಉಪಯುಕ್ತತೆ ಕುರಿತು ಮಾಹಿತಿ, ಶಿವರಾಮ ಭಟ್ ಅವರಿಂದ ವಿಷ್ಣು ಸಹಸ್ರನಾಮ ಮಹತ್ವ ಕುರಿತು ಮಾಹಿತಿ, ಸಂದ ಮೋಹನ್ ಶೆಣೈ ಅವರಿಂದ ಸಂಸ್ಕೃತ ಕಲಿಕೆ,ಬುದ್ಧಿವಂತಿಕೆಯ ಮಾಹಿತಿ, ಗಿರೀಶ್ ಪ್ರಭು ಅವರಿಂದ ಸಂಸ್ಕೃತಿ ರಸಪ್ರಶ್ನೆ, ಕೊಂಕಣಿ ಭಾಷೆ, ಇತಿಹಾಸ ಮತ್ತು ಭವಿಷ್ಯದ ಕುರಿತು ಎಂ. ಮಾಧವ ಪೈಅವರಿಂದ ಉಪನ್ಯಾಸ ನಡೆಯಲಿದೆ.
ಉದ್ಯೋಗ ಕುರಿತ ಕಾರ್ಯಕ್ರಮದಲ್ಲಿ ವೃತ್ತಿ ರಂಗದ ಸಾಧಕರುಗಳಾದ ಸಂದೀಪ್ ಶೆಣೈ ( ಪಯನೀರ್ ರಿಸರ್ಚ್ ಕಾರ್ಪ್ ಇಡಿ) ವೆಂಚರ್ ಕ್ಯಾಪಿಟಲಿಸ್ಟ್ನ ಸುಭಾಶ್ ಬಾಳಿಗಾ ಅವರಿಂದ ಉದ್ಯೋಗ ಮಾಹಿತಿ, ಮಂಗಳೂರು ಇನ್ಫೋಟೆಕ್ನ ಪ್ರಶಾಂತ್ ಶೆಣೈ, ಸಿ.ಎ. ನಂದ ಗೋಪಾಲ್ ಶೆಣೈ, ಕೌಟುಂಬಿಕ ಉದ್ಯೋಗ ವೃದ್ಧೀಕರಣದ ಬಗ್ಗೆ ಭಾರತ್ ಅಟೋ ಕಾರ್ಸ್ನ ಸುಧೀರ್ ಎಂ.ಪೈ, ಗೌತಮ್ ಪೈಯವರಿಂದ ಉದ್ಯಮದಲ್ಲಿ ತಂತ್ರಜ್ಞಾನದ ಬಳಕೆ, ಸಿ.ಎ ಎ.ಕೆ. ಶ್ಯಾಮಲಾ ಶೆಣೈ, ಹೊಟೆಲ್ ಉದ್ಯಮಿಕೋಮಲ್ ಪ್ರಭು ಅವರಿಂದ ಮಹಿಳಾ ಉದ್ಯಮ ಸಾಧನೆಯ ಕುರಿತು ಮಾಹಿತಿ, ವಿವಿಧ ಕಂಪನಿಗಳ ಕೂಡುವಿಕೆಯಲ್ಲಿ ಉದ್ಯೋಗ ಮೇಳ, ಉದ್ಯೋಗಾವಕಾಶ ಕಲ್ಪಿಸಲಾಗಿದೆ.
ಎ 23 ರಂದು ಸಂಜೆ ೬ರಿಂದ ನಡೆಯಲಿರುವ ಸಮಾರೋಪ ಸಮಾಂಭದಲ್ಲಿ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಮಾಜ ಬಾಂಧವರಿಗಾಗಿ ಊಟೋಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕಾರ್ಕಳದಲ್ಲಿ ಸಂಭ್ರಮವೋ ಸಂಭ್ರಮ..ಪಡುತಿರುಪತಿಯೆಂದು ಖ್ಯಾತಿವೆತ್ತ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದ ಪರಿಸರದಲ್ಲಿ ಇದೀಗ ಎರಡು ದಿನಗಳ ವಿಶ್ವ ಜಿ.ಎಸ್.ಬಿ ಸಮ್ಮೇಳನ ಸುಧಾ ಸೇವಾ ಸಮ್ಮೇಳನದ ಸಂಭ್ರಮ ಎದ್ದು ಕಾಣುತ್ತಿದೆ. ಸಮ್ಮೇಳನದ ಯಶಸ್ಸಿಗೆ ಭರದ ಸಿದ್ಧತೆ ನಡೆದಿದೆ. ಇಲ್ಲಿನ ದೇವಾಲಯವು ಸಂಪೂರ್ಣ ನವೀಕರಣಗೊಂಡಿದ್ದು ಮೇ 1 ರಂದು ಪುನಃಪ್ರತಿಷ್ಠಾ ಮಹೋತ್ಸವ ಸಂಬಂಧೀ ಕಾರ್ಯ ಚಟುವಟಿಕೆಗಳೂ ಇಲ್ಲಿ ನಡೆದಿವೆ.
ಇಲ್ಲಿನ ಶ್ರೀ ಕಾಶೀ ಮಠವನ್ನು ಆಕರ್ಷಕವಾಗಿ ನವೀಕರಣಗೊಳಿಸಲಾಗಿದ್ದು ಶ್ರೀ ಕಾಶೀ ಮಠಾಧೀಶರಾಗಿ ಪೀಠಾರೋಹಣಗೈದಿರುವ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ವಸಂತೋತ್ಸವ ಮೊಕ್ಕಾಂ ಕೂಡಾ ಕಾರ್ಕಳ ಶ್ರೀ ಕಾಶೀ ಮಠದಲ್ಲಿ ನಡೆದಿದೆ.
ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಶಿಲಾಮಯ ವೃಂದಾವನ ನಿರ್ಮಾಣ ಕಾರ್ಯವೂ ಆರಂಭಗೊಂಡಿದ್ದು ಸಮಾಧಿಯ ಮೇಲ್ಭಾಗದಲ್ಲಿ ಪೂಜೆಗೊಳ್ಳಲಿರುವ ಮುಖ್ಯಪ್ರಾಣ ದೇವರ ವಿಗ್ರಹವನ್ನೂ ಕಾರ್ಕಳದಲ್ಲಿ ಕೆತ್ತಲಾಗುತ್ತಿದೆ. ಹೀಗೆ ಕಾರ್ಕಳದ ಗೌಡ ಸಾರಸ್ವತ ಸಮಾಜ ತಮ್ಮ ಪಾಲಿಗೆ ಒದಗಿ ಬಂದಿರುವ ಈ ಸುವರ್ಣಾವಕಾಶವನ್ನು ಅವಿಸ್ಮರಣೀಯವಾಗಿಸುವಲ್ಲಿ ಹರಿಗುರು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.