ಬೆಳ್ತಂಗಡಿ : ಶಸ್ತ್ರ ಹಿಡಿದು ಯುದ್ದಕಿಳಿಯುವ ಯಾವ ಕವಿ-ಸಾಹಿತಿಯೂ ಋಷಿಯಾಗಲು ಸಾಧ್ಯವಿಲ್ಲ. ಕೃಷಿತನವನ್ನು ಮತ್ತು ಋಷಿತನವನ್ನು ಬೆಸೆಯುವ ಸಾಹಿತ್ಯ ನಮಗಿಂದು ಬೇಕಾಗಿದೆ ಎಂದು ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ|ವಸಂತ ಕುಮಾರ್ ಪೆರ್ಲ ಆಶಿಸಿದರು.ಅವರು ಶನಿವಾರ ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ನಡೆದ ಬೆಳ್ತಂಗಡಿ ತಾಲೂಕು ೧೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತಿಗಳು ಜಾತಿಮುಖಂಡರಂತೆ ವರ್ತಿಸಿದರೆ ಸಾಹಿತ್ಯಕ್ಕೆ ನಷ್ಟ. ಜಾತಿಗೆ ಅಪಾಯ ಮತ್ತು ಅದರಿಂದ ಸಮಾಜದಲ್ಲಿ ವೈಷಮ್ಯ ಹೊಗೆಯಾಡತೊಡಗುತ್ತದೆ. ಹೀಗೆ ಜಾತಿ ಮುಖಂಡರಂತೆ ವರ್ತಿಸಿದಾಗ ಅವರಿಗೆ ಭಗವದ್ಗೀತೆಯಲ್ಲಿ ಹುಳುಕು ಕಾಣುತ್ತದೆ. ಅದನ್ನು ಸುಟ್ಟು ಹಾಕಬೇಕೆಂದು ತೋರುತ್ತದೆ. ಯೋಗದಂತಹ ಲೋಕಮಾನ್ಯ ವಿದ್ಯೆಯೂ ಅಪಥ್ಯವಾಗಿಬಿಡುತ್ತದೆ. ಆಚರಣೆ ಮತ್ತು ಭಗವತ್ಸೇವೆಗಳು ಮೌಢ್ಯವಾಗಿ ಕಾಣುತ್ತವೆ. ಇಂತಹ ಒಂದೇ ಬದಿಯ ನೋಟಗಳು ಸಾಹಿತಿಯೊಬ್ಬನ ಪೂರ್ಣದೃಷ್ಟಿಯನ್ನು ಮಸಕು ಮಾಡುತ್ತವೆ. ಸಮಾಜದಲ್ಲಿ ವಿಷಮಯ ವಾತಾವರಣವನ್ನಷ್ಟೇ ನಿರ್ಮಾಣ ಮಾಡುತ್ತದೆ ಎಂದು ಅವರು ವಿಷದೀಕರಿಸಿದರು.
ಇಂದು ಸಾಹಿತ್ಯವು ಒಡೆಯುವುದಕ್ಕಾಗಿ ಇದೆಯೋ, ಕೂಡಿಸುವುದಕ್ಕಾಗಿ ಇದೆಯೋ ಎಂದು ಚಿಂತಿಸಿಬೇಕಾಗಿದೆ. ಇತ್ತೀಚೆಗೆ ಸಾಹಿತಿಗಳ ಅಭಿಪ್ರಾಯ ಭೇಧಗಳು ಜಗಳದ ಮಟ್ಟಕ್ಕೆ ಹೋಗಿ ವಾತಾವರಣ ಕಲುಷಿತವಾಗುತ್ತಿರುವುದನ್ನು ನೋಡಿದರೆ ಅವರಿಗೆ ಸದ್ಯದ ಅಸಾಹಿತ್ಯಿಕ ಉದ್ದೇಶಗಳೇ ಮುಖ್ಯವಾಗಿರುವಂತೆ ಕಂಡು ಬರುತ್ತದೆ. ಸಾಹಿತ್ಯವು ಅವ್ಯಾಪ್ತಿದೋಷಕ್ಕೆ ಈಡಾದರೆ ಹೀಗಾಗುತ್ತದೆ. ಸಾಹಿತ್ಯದ ಗಮ್ಯವು ರಾಜಕೀಯದ ಕಡೆಗಿದ್ದಾಗ ಸದ್ಯದ ಅಸೆಬುರುಕುತನ ಮತ್ತು ಹಪಾಪಿತನಗಳೊಂದಿಗೆ ಇಂತಹ ಹುಳುಕುಗಳು ಎದ್ದುಕಾಣುತ್ತದೆ. ಅಂತಹ ವಿಶೇಷ ಆಸಕ್ತಿಗಳಿದ್ದಾಗ ಸಾಹಿತ್ಯ ಮುಸುಕು ಹಾಕಿಕೊಳ್ಳುವುದಕ್ಕಿಂತ ನೇರವಾಗಿ ರಾಜಕೀಯಕ್ಕೆ ಇಳಿದು ಬಿಡಬಹುದು ಎಂದು ಅವರು ಸ್ಪಷ್ಟಪಡಿಸಿದರು.
ಜನರನ್ನು ಜಾತಿ ಮತ ಪಂಥ ಪಂಗಡ ಮತ್ತು ವರ್ಗದ ಮೂಲಕ ನೋಡುತ್ತ, ಸಮಾಜವನ್ನು ಮತ್ತಷ್ಟು ಒಡೆದು ಹಾಕುವ ಪ್ರವೃತ್ತಿಯನ್ನು ಬಿಟ್ಟು ಇಡೀ ಸಮುದಾಯವನ್ನು ಒಂದಾಗಿ ನೋಡುವ ಚಿಂತನೆಯ ಹೊಳಹುಗಳನ್ನು ಇಂದಿನ ಯುವ ಬರೆಹಗಾರರು ತೋರಿಸುತ್ತಿದ್ದಾರೆ ಮತ್ತು ಸಾಹಿತ್ಯವು ಜನರ ಹಿತವನ್ನು ಕಾಯಬೇಕಾಗಿರುವುದು ಅಗತ್ಯ ಎಂದು ಅವರಿಗೆ ಅನ್ನಿಸುತ್ತಿರುವುದರ ಬಗ್ಗೆ ಪೆರ್ಲ ಸಂತಸ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೋ.ಎಸ್.ಪ್ರಭಾಕರ್ ಅವರು ವಿಶ್ವದ ಇತರ ದೇಶಗಳೊಂದಿಗೆ ವ್ಯವಹರಿಸಲು ಇಂಗ್ಲೀಷ್ ಅಗತ್ಯ. ತ್ರಿಭಾಷಾ ಸೂತ್ರವೇ ನಮಗೆ ಉತ್ತಮ. ಆದರೆ ನಮ್ಮ ಆಲೋಚನೆಗಳು ಬರುವುದು, ಸರಿಯಾಗಿ ಹರಿಯುವುದು ಮಾತೃಭಾಷೆಯಲ್ಲೇ. ಆದ್ದರಿಂದ ಪ್ರಾಥಮಿಕ ಶಿಕ್ಷಣವಾದರೂ ಮಾತೃ ಭಾಷೆಯಲ್ಲಿಯೇ ಆಗಬೇಕು. ಹಾಗೂ ಕರ್ನಾಟಕದಲ್ಲಿರುವ ಪ್ರತಿಯೊಬ್ಬನೂ ಕನ್ನಡ ಭಾಷೆ ಕಲಿಯಲೇ ಬೇಕು. ಸರ್ಕಾರವು ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಧೋರಣೆ ಒಪ್ಪಿಕೊಳ್ಳುವಂತಹದು ಎಂದರು.
ಸಾಹಿತ್ಯವು ಒಂದು ರೀತಿಯಲ್ಲಿ ಮನೋರಂಜನೆಯೂ ಹೌದು. ಓದು ಕೊಡುವಷ್ಟು ಸಂತೋಷ ಬೇರಾವುದರಲ್ಲಿಯೂ ಇಲ್ಲ. ಎರಡನೆಯದಾಗಿ ಸಾಹಿತಿಗಳು ಹೇಳುವ ಅನೇಕ ವಿಷಯಗಳು ನಮ್ಮ ಮೇಲೆ ಗಾಢವಾದ ಪ್ರಭಾವ ಬೀಳುವುದುಂಟು. ಸಮಾಜವನ್ನು ತಿದ್ದುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ ಎಂದರು.
ಕಲೆ, ಸಾಹಿತ್ಯ, ಸಂಗೀತ ಇತ್ಯಾದಿಗಳೆಲ್ಲೆಲ್ಲಾ ಒಂದು ಸೊಬಗಿದೆ. ವೈಶಿಷ್ಟ್ಯತೆ ಇದೆ. ಸಮಾನತೆ ಇದೆ. ಅವು ಯಾವ ಒತ್ತಾಯಕ್ಕೂ, ಪ್ರಭಾವಕ್ಕೂ ಬರುವುದಿಲ್ಲ. ಒತ್ತಾಸೆ ಮಾಡಿದರೆ ಅವು ಮುದುಡಿ ಕರಿಗೆ ಹೋಗುತ್ತವೆ. ತನ್ನಿಂತಾನೆ ಅವು ಮನಸ್ಸಿನಲ್ಲೇ ಸ್ಪುರಿಸಿ ಆ ವ್ಯಕ್ತಿಯ ಆಸಕ್ತಿಯನ್ನೆಲ್ಲಾ ಅದರಲ್ಲೇ ಕೇಂದ್ರೀಕರಿಸಿ ತಲ್ಲೀನಾಗವಂತೆ ಮಾಡುತ್ತದೆ ಎಂದು ಪ್ರಭಾಕರ್ ವಿಶ್ಲೇಷಿಸಿದರು.
ಸಮ್ಮೇಳನ ಸಂಚಿಕೆ ಚಾರುಮುಡಿ ಹಾಗೂ ಯಕ್ಷಗಾನ ಪುರಾಣ ಜ್ಞಾನವೆಂಬ ಹೊತ್ತಗೆಗಳನ್ನು ಬಿಡುಗಡೆಗೊಳಿಸಿದ ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರು ಸ್ವಾತಂತ್ರ್ಯವೆಂಬುದು ಸ್ವೇಚ್ಛಾಚಾರವಾದಾಗ ಸಾಹಿತಿಗಳಲ್ಲಿ, ಬುದ್ದಿಜೀವಿಗಳಲ್ಲಿ ಭಿಭತ್ಸ ಚಿಂತನೆಗಳು ಹುಟ್ಟಿಕೊಳ್ಳುತ್ತವೆ. ಜಾಗೃತ ಸಮಾಜವಿದ್ದಲ್ಲಿ ಇಂತಹವು ನಾಶಹೊಂದುತ್ತಾರೆ. ಕೃಷಿ ಜೀವನದ ನಡುವೆ ಋಷಿ ಸಂಸ್ಕೃತಿ ಬೆಳೆಯಬೇಕು. ಮನಸ್ಸು ಅರಳುವ ಪ್ರಕ್ರಿಯೆ ನಡೆಯಬೇಕು. ಸಾರಸತ್ವದ ಸಾತ್ವಿಕ ಶಕ್ತಿಯ ಚಿಂತನೆ ಆಗಬೇಕು. ಯಾಂತ್ರೀಕೃತ ವ್ಯವಸ್ಥೆಯ ಮಧ್ಯೆ ನಾವು ಬರೆಯುವ ಶಕ್ತಿಯನ್ನು ಕಳೆದುಕೊಳ್ಳಬಾರದು ಎಂಬ ಅಪೇಕ್ಷೆಯನ್ನಿಟ್ಟರು.ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಕೊಕ್ಕಡ ಶ್ರೀ ಅನಂತಪದ್ಮನಾಭ ಶಾಸ್ತ್ರಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಬಿ.ಐತಪ್ಪ ನಾಯ್ಕ, ಡಾ|ಎಂ.ಪಿ.ಶ್ರೀನಾಥ್, ತಾಲೂಕು ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಅಶ್ರಫ್ ಆಲಿಕುಂಞ ಉಪಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ರಾಜಾರಾಮ ಶರ್ಮ ಬೆಳಾಲು ಸ್ವಾಗತಿಸಿದರು. ಕಸಾಪ ತಾಲೂಕು ಅಧ್ಯಕ್ಷ ಡಾ.ಬಿ.ಯಶೋವರ್ಮ ಪ್ರಸ್ತಾವಿಸಿದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಿಜಯ್ ವಂದಿಸಿದರು. ಸಲಹಾ ಸಮಿತಿ ಸದಸ್ಯ ಕೆ.ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.ಇದಕ್ಕೂ ಮೊದಲು ಬೆಳಾಲು ಗ್ರಾ.ಪಂ.ಅಧ್ಯಕ್ಷೆ ಲಲಿತ ಪರಿಷತ್ ಧ್ವಜಾರೋಹಣ ಮಾಡುವುದರ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಸಮ್ಮೇಳನದಲ್ಲಿ ಪ್ರೊ.ಎನ್.ಜಿ.ಪಟವರ್ಧನ್ ಅವರು ಕವಿ,ಸಾಹಿತಿ ರಾಮಚಂದ್ರ ಭಟ್ಟ ಮುಂಡಾಜೆ ಅವರ ಶತಮಾನದ ನನಪನ್ನು ಬಿಚ್ಚಿಟ್ಟರು. ಬಳಿಕ ಅರವಿಂದ ಚೊಕ್ಕಾಡಿ ಅವರ ಸಂಯೋಜನೆಯಲ್ಲಿ ನಡೆದ ಚಿಂತನ ಮಂಥನ ಗೋಷ್ಠಿಯಲ್ಲಿ ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ|ಶ್ರೀಶ ಕುಮಾರ್ ಎಂ.ಕೆ.ಇಳಂತಿಲ ಅವರು ಪರಿಸರ-ಕೃಷಿಯ ಬಗ್ಗೆ, ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಯದುಪತಿ ಗೌಡ ಸಾಹಿತ್ಯ-ಸಂಸ್ಕೃತಿಯ ಕುರಿತು ಮತ್ತು ಬೆಳಾಲು ಶ್ರೀ ಧ.ಮಂ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಅವರು ಭಾಷೆ-ಶಿಕ್ಷಣದ ವಿಚಾರವಾಗಿ ಮಾತನಾಡಿದರು. ಬಳಿಕ ಹಿರಿಯ ಪತ್ರಕರ್ತ ಶ್ರೀಕರ ಭಟ್ ಮರಾಠೆ ಮುಂಡಾಜೆ ಅವರು ದೇರಾಜೆ ಸೀತಾರಾಮಯ್ಯ ಅವರ ಶತಮಾನದ ನೆನಪನ್ನು ಮುಂದಿಟ್ಟರು.
ಮಧ್ಯಾಹ್ನದ ಬಳಿಕ ರವಿಚಂದ್ರ ಕನ್ನಡಿ ಕಟ್ಟೆ ಅವರಿಂದ ಯಕ್ಷಗಾನ ವೈಭವ ಪ್ರಸ್ತುತಗೊಂಡಿತು. ನಂತರ ವಾಮದಪದವು ಸ.ಪ್ರ.ದರ್ಜೆ ಮಹಾವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಡಾ|ಕೆ.ಟಿ.ಶರತ್ ಕುಮಾರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.
ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿ ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಬೇಕು. ಒಟ್ಟಾರೆ ರಾಜ್ಯದ ಕೃಷಿ ಹಸನಾಗಬೇಕು, ನಗರ ಜೀವನ ಸುಲಲಿತವಾಗಿ ಸಾಗಬೇಕು-ಕಲ್ಕೂರ
ಕನ್ನಡ ಶಾಲೆಗಳ ಅಳಿವಿಗೆ ಪೋಷಕರೇ ಕಾರಣ. ಬೀಸುತ್ತಿರುವ ಆಂಗ್ಲಭಾಷೆಯ ಮಾಯೆಯಿಂದ ಹೊರಬರಬೇಕು. ಕನ್ನಡಿಗರು ಅಭಿಮಾನ ಹೀನರಾಗಬಾರದು– ಅನಂತಪದ್ಮನಾಭ ಶಾಸ್ತ್ರಿ
ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಲಿ, ಸಮ್ಮೇಳನಾಧ್ಯಕ್ಷರಾಗಲಿ, ಇನ್ನಿತರ ಅತಿಥಿಗಳೇ ಆಗಲಿ ಪ್ರಸ್ತುತ ಜ್ವಲಂತ ಸಮಸ್ಯೆಯಾಗಿರುವ ನೇತ್ರಾವತಿ ನದಿ ತಿರುವಿನ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿದ್ದುದು ವಿಪರ್ಯಾಸವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.