ಹುಟ್ಟು ಆಕಸ್ಮಿಕ. ಆದರೆ ಸಾವು ನಿಶ್ಚಿತ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಯಾರ ಬದುಕು ಕೂಡ ಶಾಶ್ವತವಲ್ಲ. ದೊರೆಗಳಿರಲಿ, ವಿವಿಐಪಿಗಳಿರಲಿ, ಇತರರ ಭವಿಷ್ಯ ಹೇಳುವ ಜ್ಯೋತಿಷಿಗಳೇ ಇರಲಿ ಒಂದಲ್ಲ ಒಂದು ದಿನ ಈ ಲೋಕದಿಂದ ದೂರವಾಗಲೇ ಬೇಕು. ಅದು ವಿಧಿ ನಿಯಮ. ಈ ನಿಯಮವನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಹಿಂದೆಲ್ಲ ಚಿರಂಜೀವಿಗಳಿದ್ದರು. ಹನುಮಂತ, ಅಶ್ವತ್ಥಾಮ ಮೊದಲಾದವರು ಚಿರಂಜೀವಿಗಳಾಗಿದ್ದರೆಂದು ಪುರಾಣ ಕಥೆಗಳು ಹೇಳುತ್ತವೆ. ಆದರೆ ಈ ಕಲಿಗಾಲದಲ್ಲಿ ಚಿರಂಜೀವಿಗಳಾಗಲು ಸಾಧ್ಯವಿಲ್ಲ. ಅದೇನೋ ನಿಜ. ಆದರೆ ಸತ್ತ ನಂತರವೂ ಜೀವಂತವಾಗಿ ಮುಂದುವರಿಯಬಹುದು ಎಂಬುದನ್ನು ವೈದ್ಯಕೀಯ ವಿಜ್ಞಾನ ಸಾಬೀತು ಪಡಿಸಿದೆ. ರೂಪ, ವ್ಯಕ್ತಿ ಮಾತ್ರ ಬೇರೆ ಆಗಬಹುದು. ಹೀಗೆ ಒಗಟಾಗಿ ಹೇಳಿದರೆ ಯಾರಿಗೂ ಇದರ ತಲೆಬುಡ ಅರ್ಥವಾಗಲಿಕ್ಕಿಲ್ಲ. ಕಳೆದ ವಾರವಷ್ಟೇ ನಡೆದ ಅಚ್ಚರಿಯ, ಆದರೆ ವಾಸ್ತವದ ವಿದ್ಯಮಾನವನ್ನು ಗಮನಿಸಿದರೆ ನಿಮಗೆ ಇದರ ಯಥಾರ್ಥತೆ ಮನವರಿಕೆಯಾಗಬಹುದು.
ಅದು ನಡೆದಿದ್ದು ಬೆಂಗಳೂರಿನಲ್ಲಿ. ತಮಿಳುನಾಡಿನ ಹೊಸೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ 32 ವರ್ಷದ ಮಹಿಳೆಯೊಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಆಕೆಯನ್ನು ಬೆಂಗಳೂರಿನ ಪ್ರತಿಷ್ಠಿತ ಬಿಜಿಎಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಹಿಳೆಗೆ ಪ್ರಜ್ಞೆ ಮರಳುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆಗ ಕುಟುಂಬದವರು ಆಕೆಯ ಅಂಗಾಂಗ ದಾನ ಮಾಡುವ ಮಹತ್ವದ ನಿರ್ಧಾರ ಕೈಗೊಂಡರು. ವೈದ್ಯರು ಕೂಡ ಇದಕ್ಕೆ ಸಹಕರಿಸಿದರು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಚೆನ್ನೈನ ಫೋರ್ಟಿಸ್ ಮಲಾರ್ ಆಸ್ಪತ್ರೆಗೆ ನಿಷ್ಕ್ರಿಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆ ಮಹಿಳೆಯ ಜೀವಂತ ಹೃದಯವನ್ನು ಸಾಗಿಸಿ ರೋಗಿಯೊಬ್ಬರಿಗೆ ಜೋಡಿಸಿ ವೈದ್ಯ ಲೋಕದಲ್ಲಿ ಅಚ್ಚರಿ ಮೂಡಿಸುವ ಅಂಗಾಂಗ ಕಸಿಯ ಪ್ರಯೋಗ ಯಶಸ್ವಿಯಾಗಿ ನಡೆಯಿತು. ಸಿನಿಮೀಯ ರೀತಿಯಲ್ಲೆ ನಡೆದ ಕಾರ್ಯಾಚರಣೆಯಲ್ಲಿ ಕೇವಲ ಎರಡೂವರೆ ಗಂಟೆಗಳಲ್ಲಿ ಕೆಂಗೇರಿಯಿಂದ ಚೆನ್ನೈಗೆ ಜೀವಂತ ಹೃದಯವನ್ನು ಕೊಂಡೊಯ್ಯಲಾಯಿತು. ಹೃದಯವನ್ನು ಸಾಗಿಸಲು ಬೆಂಗಳೂರಿನ ಸಂಚಾರಿ ಪೊಲೀಸರು ಸಿಗ್ನಲ್‌ರಹಿತ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ತಲೆಗೆ ಪೆಟ್ಟು ಬಿದ್ದ ಮಹಿಳೆಯ ಹೃದಯವನ್ನು ಚೆನ್ನೈನ ಯುವಕನೊಬ್ಬನಿಗೆ ಕಸಿ ಮಾಡಿ ಜೋಡಿಸಲಾಗಿದೆ. ಆ ಮಹಿಳೆ ಈಗ ಆ ಯುವಕನ ದೇಹದಲ್ಲಿ ಜೀವಂತವಾಗಿ ನಗುತ್ತಿದ್ದಾಳೆ. ಸತ್ತ ನಂತರವೂ ಆ ಮಹಿಳೆ ಜೀವಂತವಾಗಿದ್ದಾಳೆ. ಆ ಮಹಿಳೆ ಹೃದಯವನ್ನಷ್ಟೇ ದಾನ ಮಾಡಲಿಲ್ಲ. ಎರಡು ಮೂತ್ರಪಿಂಡ, ಎರಡು ಕಣ್ಣು ಹಾಗೂ ಯಕೃತ್ (ಲಿವರ್) ಕೂಡ ದಾನ ಮಾಡಿದ್ದಾರೆ. ಹೀಗಾಗಿ ಆ ಮಹಿಳೆ ಸತ್ತ ಬಳಿಕವೂ ನಾಲ್ವರ ಶರೀರದಲ್ಲಿ ಜೀವಂತವಾಗಿದ್ದಾರೆ. ವೈದ್ಯಲೋಕದ ಈ ಪವಾಡಕ್ಕೆ ನಾವೆಲ್ಲರೂ ನಮೋ ನಮಃ ಎನ್ನಬೇಕಾಗಿದೆ.
ಹೃದಯದ ಕಸಿಯ ನಿದರ್ಶನ ಇದೇ ಹೊಸತಲ್ಲ. ರಾಜ್ಯದಲ್ಲಿ ಇದುವರೆಗೆ 10 ಹೃದಯಗಳನ್ನು ಕಸಿ ಮಾಡಲಾಗಿದೆ. ಎಂಟು ವರ್ಷಗಳಲ್ಲಿ 88 ಅಂಗಾಂಗ ದಾನಗಳು ನಡೆದಿವೆ. ಅಷ್ಟೇ ಅಲ್ಲ, ಅಂಗದಾನ ಥೀಮ್ ಇರುವ ಅನೇಕ ಸಿನಿಮಾಗಳು ಕೂಡ ಬಂದಿವೆ. `ನೆವರ್ ಲೆಟ್ ಮಿ ಗೋ’, `ದಿ ಮಿನೀಂಗ್ ಆಫ್ ಲೈಫ್’, `ಟ್ರಾಫಿಕ್’, `ಹೃದಯ ಹೃದಯ’, `ಸವಿಸವಿ ನೆನಪು’… ಮುಂತಾದ ಸಿನಿಮಾಗಳು ಇದಕ್ಕೆ ನಿದರ್ಶನ. ಸತ್ತ ಬಳಿಕ ನೇತ್ರದಾನ ಮಾಡಬಹುದೆಂದು ಪ್ರಮುಖ ಆಸ್ಪತ್ರೆಗಳು, ನೇತ್ರ ತಜ್ಞರು ಹೇಳುತ್ತಲೇ ಬಂದಿದ್ದರೂ ನೇತ್ರದಾನ ಮಾಡುವವರ ಸಂಖ್ಯೆಯಲ್ಲಿ ಅಷ್ಟೇನೂ ಏರಿಕೆ ಕಂಡು ಬಂದಿಲ್ಲ. ಇನ್ನು ಲಿವರ್, ಮೂತ್ರಪಿಂಡಗಳ ದಾನದ ಬಗ್ಗೆ ನಮ್ಮ ಜನರಲ್ಲಿ ಈಗಲೂ ಅಂತಹ ಜಾಗೃತಿ ಮೂಡಿಲ್ಲ. ಹೀಗಿರುವಾಗ ಇನ್ನು ಹೃದಯವನ್ನು ಬೇರೊಬ್ಬರಿಗೆ ದಾನ ಮಾಡಿ ಅವರನ್ನು ಬದುಕಿಸಬಹುದೆಂಬ ಕಲ್ಪನೆ ಎಲ್ಲರ ಮನಸ್ಸಿನಲ್ಲಿ ರಿಜಿಸ್ಟರ್ ಆಗಲು ಇನ್ನೆಷ್ಟು ಕಾಲ ಬೇಕಾಗುತ್ತದೋ ಹೇಳಲಾಗದು.
ಜನರಲ್ಲಿ ಅಂಗಾಂಗ ದಾನ ಕುರಿತು ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಕಾರಣ. ಸತ್ತ ಬಳಿಕ ಶವವನ್ನು ಹೂಳುವ ಇಲ್ಲವೇ ಅಗ್ನಿಗರ್ಪಿಸಿ ಅಂತ್ಯಕ್ರಿಯೆ ನೆರವೇರಿಸುವುದೇ ಯೋಗ್ಯ ರೀತಿ, ಅದೇ ಶ್ರೇಷ್ಠ ರಿವಾಜು, ಹಾಗೆ ಮಾಡದಿದ್ದರೆ ಸತ್ತವರ ಆತ್ಮಕ್ಕೆ ಮೋಕ್ಷ ದೊರಕದು, ಅವರಿಗೆ ಸ್ವರ್ಗಪ್ರಾಪ್ತಿ ಸಾಧ್ಯವಾಗದು… ಇಂತಹ ನಂಬಿಕೆಗಳು ಜನಮನದಾಳದಲ್ಲಿ ಭದ್ರವಾಗಿ ನೆಲೆಯೂರಿವೆ. ಸತ್ತ ಬಳಿಕ ಶರೀರವನ್ನು ಯಾವುದೇ ಕಾರಣಕ್ಕೂ ಛಿದ್ರಗೊಳಿಸಬಾರದೆಂಬ ಬಲವಾದ ನಂಬಿಕೆ (ಅದೆಂತಹ ಮೂಢನಂಬಿಕೆ!) ಅದು ಹೇಗೋ ಬೆಳೆದು ಬಂದು ಬಿಟ್ಟಿದೆ. ಇದಕ್ಕೆ ಯಾವ ಶಾಸ್ತ್ರಾಧಾರಗಳೂ ಇಲ್ಲ. ಪುರೋಹಿತರು ಇದಕ್ಕೆ ಆಧಾರವಾಗಿ ಹೇಳುವ ಶಾಸ್ತ್ರ, ಸಂಪ್ರದಾಯಕ್ಕೆ ಅರ್ಥವಿಲ್ಲ. ದಧೀಚಿ ಎಂಬ ಮಹರ್ಷಿ ತನ್ನ ಬೆನ್ನೆಲುಬಿನಿಂದಲೇ ದೇವತೆಗಳಿಗೆ ವಜ್ರಾಯುಧ ಮಾಡಿ ಕೊಟ್ಟಿದ್ದ ಕಥೆ ಪುರಾಣದಲ್ಲಿದೆ. ಶಿಬಿ ಮಹಾರಾಜ ಪ್ರಾಣಿಗಳ ನಡುವಿನ ವಿವಾದವೊಂದನ್ನು ಬಗೆಹರಿಸಲು ತನ್ನ ದೇಹದ ಮಾಂಸವನ್ನೇ ಬಗೆದು ಕೊಟ್ಟಿದ್ದ ಕಥೆಯೂ ಇದೆ. ತನ್ನ ದೇಹ ಛಿದ್ರವಾಗುತ್ತದೆಂದು ಇವರ್‍ಯಾರೂ ಚಿಂತಿಸಲಿಲ್ಲ. ಲೋಕಕ್ಕೆ ಒಳಿತಾಗಲೆಂದೇ ಇಂತಹ ದೃಢ ನಿರ್ಧಾರವನ್ನು ಈ ಮಹನೀಯರು ಕೈಗೊಂಡಿದ್ದರು. ಆದರೆ ಪುರಾಣಗಳ ಈ ಕಥೆಯ ಸಂದೇಶವನ್ನು ಮಾತ್ರ ನಾವು ಅಷ್ಟಾಗಿ ಗಮನಿಸಲೇ ಇಲ್ಲ.
ಚುಟುಕು ಕವಿಯೆಂದೇ ಖ್ಯಾತರಾಗಿದ್ದ ಉತ್ತರಕನ್ನಡ ಜಿಲ್ಲೆಯ ದಿನಕರ ದೇಸಾಯಿ ಅವರದೊಂದು ಚುಟುಕು ಹೀಗಿದೆ:
ನನ್ನ ದೇಹದ ಬೂದಿಯನು ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಆ ಭತ್ತದಿಂದ ನಾಲ್ಕು ತೆನೆ ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ದಿನಕರ ದೇಸಾಯಿ ಅವರ ಈ ಚುಟುಕು ಪದ್ಯದಲ್ಲಿ ತನ್ನ ದೇಹದ ಬೂದಿಯನ್ನು ಯಾವುದೋ ಗಂಗಾ ನದಿ ಅಥವಾ ಕಾವೇರಿ ನದಿಗೆ ಸುರಿದು ವ್ಯರ್ಥಗೊಳಿಸಬೇಡಿ. ಅದರಿಂದ ನೀರು ಮಲಿನವಾಗುತ್ತದೆ. ಆದರ ಬದಲು ಭತ್ತ ಬೆಳೆಯುವ ಜಾಗದಲ್ಲಿ ಆ ಬೂದಿಯನ್ನು ಸುರಿದರೆ ಪ್ರಯೋಜನವಾಗಬಹುದು. ಆ ಬೂದಿಯ ಸತ್ವ ಹೀರಿ ಭತ್ತದ ತೆನೆಯಿಂದ ನಾಲ್ಕು ಕಾಳು ಭತ್ತ ಅರಳಬಹುದು ಎಂಬ ಆಶಯ ವ್ಯಕ್ತವಾಗಿದೆ. ದೇಸಾಯಿಯವರು ಈ ಚುಟುಕು ಬರೆದಿದ್ದು ಬಹಳಷ್ಟು ಹಿಂದೆ. ಆಗ ಅಂಗಾಂಗ ದಾನ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿರಲಿಲ್ಲ. ಆಕಸ್ಮಾತ್ ಅಂಗಾಂಗ ದಾನ ವಿದ್ಯಮಾನ ಅಗಲೇ ಶುರುವಾಗಿದ್ದಿದ್ದರೆ ಅವರು ತಮ್ಮ ಮೇಲಿನ ಚುಟುಕನ್ನು ಹೀಗೆ ಬದಲಾಯಿಸುತ್ತಿದ್ದರೇನೋ:
ನನ್ನ ದೇಹದ ಅಂಗಾಂಗಗಳನು
ಕೊಟ್ಟು ಬಿಡಿ ಅಗತ್ಯವಿದ್ದೆಡೆಯಲ್ಲಿ
ಅದರಿಂದ ನಾಲ್ಕು ಜೀವ ಬದುಕಿದರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ಎರಡು ಅಂತ್ಯ ಸಂಸ್ಕಾರಗಳು
ಇತ್ತೀಚೆಗೆ ಅಗಲಿದ ಎರಡು ಹಿರಿಯ ಚೇತನಗಳ ಅಂತ್ಯಸಂಸ್ಕಾರ ಕಾರ್ಯಕ್ರಮ ಹಲವು ಬಗೆಯ ಚರ್ಚೆಗೆ ಗ್ರಾಸವಾಗಿರುವುದು ನಿಜ. ಅವರಿಬ್ಬರೂ ಅಸಾಧಾರಣ ವ್ಯಕ್ತಿಗಳು. ಇಬ್ಬರೂ ಅವರವರ ಕ್ಷೇತ್ರದಲ್ಲಿ ಸೆಲೆಬ್ರಿಟಿಗಳೇ. ಬದುಕಿದ್ದಾಗ ಇಬ್ಬರೂ ಅನುಸರಿಸಿದ್ದು ಮಾತ್ರ ವಿಭಿನ್ನ ಸಿದ್ಧಾಂತಗಳನ್ನು. ಒಬ್ಬರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಜ್ಞಾನಪೀಠ ಪುರಸ್ಕೃತರೆನಿಸಿಕೊಂಡಿದ್ದರು. ಇನ್ನೊಬ್ಬರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜೋನ್ನತಿಗಾಗಿಯೇ ಬದುಕು ಅರ್ಪಿಸಿದ್ದರು. ಇಷ್ಟು ಹೇಳಿದ ಬಳಿಕ ನಿಮಗೆ ಅವರು ಯಾರೆಂದು ಬಿಡಿಸಿ ಹೇಳುವ ಅಗತ್ಯವಿರಲಿಕ್ಕಿಲ್ಲ. ಒಬ್ಬರು ಯು. ಆರ್. ಅನಂತಮೂರ್ತಿ. ಇನ್ನೊಬ್ಬರು ವಿಶ್ವ ಹಿಂದು ಪರಿಷತ್ತಿನ ನಾಯಕರಾಗಿದ್ದ ಆಚಾರ್ಯ ಗಿರಿರಾಜ್ ಕಿಶೋರ್ ಅವರು.
ಅನಂತ ಮೂರ್ತಿಯವರ ಅಗಲಿಕೆಗಿಂತ ಹೆಚ್ಚು ಚರ್ಚೆಗೊಳಗಾಗಿದ್ದು ಅವರ ಅಂತ್ಯಸಂಸ್ಕಾರದ ಬಗ್ಗೆ. ಅನಂತಮೂರ್ತಿಯವರು ಪ್ರಗತಿಪರ ಚಿಂತಕ, ಹಿಂದು ಸಂಪ್ರದಾಯಗಳ ವಿರೋಧಿ. ಬದುಕಿದ್ದಷ್ಟೂ ದಿನ ಅವರು ಹಿಂದುತ್ವ, ವೈದಿಕ ಪರಂಪರೆಗಳನ್ನು ವಿರೋಧಿಸುತ್ತಲೇ ಬಂದವರು. ಆದರೆ ಅವರ ಅಂತ್ಯಸಂಸ್ಕಾರ ನಡೆದಿದ್ದು ಅಪ್ಪಟ ವೈದಿಕ ಸಂಪ್ರದಾಯದ ಪ್ರಕಾರ. ಪುರೋಹಿತರ ಮಂತ್ರ ಪಠಣದೊಂದಿಗೆ ಅಪಾರ ಪ್ರಮಾಣದ ಶ್ರೀಗಂಧದ ಮರ, ಲೀಟರ್‌ಗಟ್ಟಲೆ ಆಕಳ ತುಪ್ಪ ಬಳಸಿ ಅವರ ಅಂತ್ಯಸಂಸ್ಕಾರವನ್ನು 15 ಮಂದಿ ಬ್ರಾಹ್ಮಣ ಪುರೋಹಿತರು ನೆರವೇರಿಸಿದರು. ಇವೆಲ್ಲವೂ ಅವರ ಕುಟುಂಬದ ಇಚ್ಛೆಯ ಪ್ರಕಾರವೇ ನಡೆಯಿತು. ಅವರ ಅನುಯಾಯಿಗಳಿಗೆ, ಅಭಿಮಾನಿಗಳಿಗೆ ಅಂತ್ಯಸಂಸ್ಕಾರದ ಈ ಪರಿ ಅತೀವ ಸಂಕಟ ಉಂಟುಮಾಡಿದ್ದು ಸುಳ್ಳಲ್ಲ.
ಆಚಾರ್ಯ ಗಿರಿರಾಜ ಕಿಶೋರ್ ಕೂಡ ಇತ್ತೀಚೆಗೆ ನಿಧನರಾದರು. ಗೋಹತ್ಯಾ ನಿಷೇಧ ಅಂದೋಲನ, ಕ್ರೈಸ್ತ ಮತಾಂತರ ತಡೆಗಟ್ಟುವಿಕೆ, ಅಯೋಧ್ಯ ಅಂದೋಲನ ಮುಂತಾದ ಚಟುವಟಿಕೆಗಳಲ್ಲಿ ಕೊನೆತನಕ ವ್ಯಸ್ತರಾಗಿದ್ದ ಅವರು ಜೀವನಪೂರ್ತಿ ಬ್ರಹ್ಮಚಾರಿಯಾಗಿಯೇ ಉಳಿದಿದ್ದರು. ತನ್ನ ಸಾವಿನ ಬಳಿಕ ತನ್ನ ದೇಹವನ್ನು ಅಗ್ನಿಗರ್ಪಿಸದೆ, ಸಮಾಜ ಸೇವೆಗೆ ಉಪಯೋಗಿಸಬೇಕೆಂದು ಅವರು ಮೊದಲೇ ಉಯಿಲು ಬರೆದಿಟ್ಟು ದಾಖಲಿಸಿದ್ದರು. ಅವರ ನಿಧನದ ಬಳಿಕ, ಅವರ ಇಚ್ಛೆಯಂತೆಯೇ ಅವರ ಮೃತ ದೇಹವನ್ನು ದೆಹಲಿಯ ಆರ್ಮಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್‌ಗೆ ನೀಡಲಾಯಿತು. ಕಣ್ಣುಗಳನ್ನೂ ದಾನ ಮಾಡಲಾಯಿತು. ಗಿರಿರಾಜ ಕಿಶೋರ್ ಸಾವಿನ ಬಳಿಕವೂ ಜೀವಂತವಾಗಿ ಉಳಿದಿದ್ದು ಹೀಗೆ! ಅನಂತಮೂರ್ತಿ ಸಾವಿನ ಬಳಿಕ ಬೂದಿಯಾಗಿ ಹೋಗಿದ್ದು ಹೇಗೆ ಎಂದು ವಿವರಿಸುವ ಅಗತ್ಯವಿಲ್ಲ.
ಈ ಬಗ್ಗೆ ಇಲ್ಲಿ ನಾನು ಯಾವುದೇ ವಿಶ್ಲೇಷಣೆ ಅಥವಾ ವ್ಯಾಖ್ಯಾನ ಮಂಡಿಸಲು ಇಚ್ಛಿಸುವುದಿಲ್ಲ. ಆದರೆ ಒಂದು ಮಾತನ್ನಂತೂ ಖಚಿತವಾಗಿ ಹೇಳಬಹುದು. ಅದೇನೆಂದರೆ, ಯಾರನ್ನು ಬುದ್ದಿ ಜೀವಿಗಳು ಕೋಮುವಾದಿಗಳು, ಸಂಪ್ರದಾಯವಾದಿಗಳು, ಸಂಕುಚಿತವಾದಿಗಳು ಎಂದು ಹೀಗಳೆಯುತ್ತಾರೋ ಅವರು ಸಾವಿನ ಬಳಿಕವೂ ತಮ್ಮ ದೇಹ ಇತತರಿಗೆ ಉಪಯೋಗವಾಗಲಿ ಎಂಬ ಔದಾರ್ಯಭಾವ ವ್ಯಕ್ತಪಡಿಸಿದರು. ಯಾರನ್ನು ಪ್ರಗತಿಪರ ಚಿಂತಕ, ಮೂಢನಂಬಿಕೆಗಳ ವಿರೋಧಿ, ಜಾತ್ಯತೀತ ಇತ್ಯಾದಿ ವಿಶೇಷಣಗಳಿಂದ ಸ್ತುತಿಸುತ್ತಿದ್ದರೋ ಅವರು ಮಾತ್ರ ಅಪ್ಪಟ ಸಂಪ್ರದಾಯದ ಪ್ರಕಾರವೇ ಅಂತ್ಯಸಂಸ್ಕಾರಕ್ಕೀಡಾದರು. ಮನಸ್ಸು ಮಾಡಿದ್ದರೆ ಅವರೂ ಕೂಡ ತಮ್ಮ ದೇಹವನ್ನು ಯಾವುದಾದರೂ ವೈದ್ಯಕೀಯ ಆಸ್ಪತ್ರೆಗೆ ದಾನ ಮಾಡಬಹುದಿತ್ತು. ಕೊನೇ ಪಕ್ಷ ಅಂಗಗಳನ್ನಾದರೂ ಅಗತ್ಯವಿರುವವರಿಗೆ ಕೊಡಬಹುದಿತ್ತು. ಆದರೆ…? ಶರಣರ ಗುಣವನ್ನು ಮರಣದಲ್ಲಿ ನೋಡು ಎಂದು ಹಿರಿಯರು ಹೇಳಿದ್ದು ಅದೆಷ್ಟು ಸತ್ಯ!
ವೈದ್ಯಕೀಯ ವಿಜ್ಞಾನ ಸಾಕಷ್ಟು ವಿಕಾಸವಾಗಿದೆ. ದೇಹದ ಅತ್ಯಮೂಲ್ಯ ಅಂಗವಾಗಿರುವ ಹೃದಯವನ್ನೇ ಇನ್ನೊಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಬಹುದಾಗಿದೆ. ಬಿಜಿಎಸ್ ಆಸ್ಪತ್ರೆಯ ಘಟನೆಯೇ ಇದಕ್ಕೆ ಉಜ್ವಲ ನಿದರ್ಶನ.
ನಾವು ಸತ್ತ ಬಳಿಕ ನಮ್ಮ ನಮ್ಮ ಪಾಪ ಪುಣ್ಯ ಕರ್ಮಗಳಿಗನುಸಾರವಾಗಿ ನರಕವನ್ನೋ ಅಥವಾ ಸ್ವರ್ಗವನ್ನೋ ಸೇರುತ್ತೇವೆಯೋ ಇಲ್ಲವೋ ಬಲ್ಲವರಾರು? ಏಕೆಂದರೆ ಸತ್ತವರು ಆನಂತರ ತಾವು ಎಲ್ಲಿಗೆ ಹೋದೆವು, ಏನಾದೆವು ಎಂದು ತಿಳಿಸುವುದಿಲ್ಲವಲ್ಲ! ಯಾರೇ ಆಗಲಿ, ಪ್ರಾಣ ಹೋದ ಬಳಿಕ ಒಂದು ನಿರ್ಜೀವ ಶವ. ಆ ಕ್ಷಣಕ್ಕೆ ಆ ಶವಕ್ಕೆ ಎಲ್ಲರೂ ಗೌರವ ಸಮರ್ಪಿಸಬಹುದು. ಆದರೆ ಆ ಕ್ಷಣ ಮುಗಿದ ಮೇಲೆ ಆ ಶವಕ್ಕೆ ಯಾರ ಗೌರವವೂ ದೊರಕದು. ಆದರೆ ಆ ಶವ ಬರಿದೇ ಬೂದಿಯಾಗುವುದಕ್ಕಿಂತ ಇನ್ನಾರದೋ ಶರೀರಕ್ಕೆ ಜೀವ ತುಂಬುವ ಸಾಧನವಾದರೆ ಅದಕ್ಕಿಂತ ಮಿಗಿಲಾದುದು ಯಾವುದು? ಸಾವಿನ ನಂತರವೂ ಜೀವಂತವಾಗಿರುವುದೆಂದರೆ ಹೀಗೆ. ಸಾವನ್ನು ಗೆಲ್ಲುವುದೆಂದರೂ ಹೀಗೇ ಅಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.